Episode (ಸಂಚಿಕೆ) – 13

SANTOSH KULKARNI
By -
0

     ವ್ಯಾಸರ ಮುಖಾಂತರ ಕಥನಗೊಂಡು ಗಣಪತಿ ಮುಖೇನ ಲಿಖಿತಗೊಂಡ ಕಥಾರಂಭ ಪುರಾಣ ಪರ್ವವೆಂದಾಯಿತು. ಈ ವರೆಗೆ ಈಗಾಗಲೇ ವಿವರಿಸಿರುವ ಕಥಾಯಾನಕ್ಕೆ ಪೂರಕವಾದ ಕಥೆಯ ಭಾಗ ಪ್ರಸ್ತಾವನಾ ಪರ್ವವೆಂದು ಹೆಸರಿಸಲ್ಪಟ್ಟಿದೆ.

    (ಪುರಾಣ ಪರ್ವದಲ್ಲಿ ಸುದೀರ್ಘ ಕಥೆಗಳಿವೆ. ಆದಷ್ಟು ಸಂಕ್ಷಿಪ್ತಗೊಳಿಸಿ ವಿವರಿಸುವ ಪ್ರಯತ್ನ ಮಾಡುವೆ) ಆದಿ – ಅನಾದಿಯ ಕಥನಗಳು – ತ್ರಿಮೂರ್ತಿಗಳ ಸೃಷ್ಟಿ, – ಅವರಿಗೆ ಅಧಿಕಾರವಾಗಿ ಸೃಷ್ಟಿ – ಸ್ಥಿತಿ – ಲಯಾಧಿಕಾರದ ಪ್ರಾಪ್ತಿ. ವಿಷ್ಣುವಿನ ಯೋಗ ನಿದ್ರೆಯೊಳಗೆ ಕಿವಿಯ ಕಲ್ಮಶದಿಂದ ಮಧು – ಕೈಟಭರ ಜನನ, ವಿಷ್ಣು ಮುಖೇನ ದೈತ್ಯರೀರ್ವರ ವಧೆಯಾಗಿ ಮೇದಿನಿ (ಅಖಂಡ ಜಲರಾಶಿಯ ಮಧ್ಯೆ ರಾಕ್ಷಸರ ಶರೀರ ಮೇದಸ್ಸು ವ್ಯಾಪಿಸಿದಷ್ಟು ಭೂಮಿ ಮತ್ತು ಪರ್ವತ) ನಿರ್ಮಾಣವಾಯಿತು.


    ಅಂತಹ ಭೂಮಿಯಲ್ಲಿ ಬ್ರಹ್ಮನಿಂದ ಸೃಷ್ಟಿಯ ಆರಂಭ. ಮೊದಲಾಗಿ ಬ್ರಹ್ಮ ಮಾನಸ ಪುತ್ರರಾದ ಅತ್ರಿ, ಅಂಗೀರಸ, ಕರ್ದಮ, ಮರೀಚಿ, ಪುಲಸ್ತ್ಯ, ಪುಲಹ, ಕ್ರತು, ಭೃಗು, ನಾರದ, ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ ಮುಂತಾದ ಮಹಿಮಾನ್ವಿತರು ಸಂಕಲ್ಪ ಮಾತ್ರದಿಂದ ಹುಟ್ಟಿದರು. ಬಲದ ಹೆಬ್ಬೆಟ್ಟಿನಿಂದ ದಕ್ಷನು ಹುಟ್ಟಿದರೆ ಬ್ರಹ್ಮ ದೇವರ ಎಡದ ಹೆಬ್ಬೆಟ್ಟಿನಿಂದ ಹುಟ್ಟಿದ ಓರ್ವಳನ್ನು ದಕ್ಷ ಮದುವೆಯಾಗುತ್ತಾನೆ.

    ಅವರೀರ್ವರ ದಾಂಪತ್ಯದಲ್ಲಿ ಇಪ್ಪತ್ತನಾಲ್ಕು ಹೆಣ್ಮಕ್ಕಳನ್ನು ಪಡೆದು ಬ್ರಹ್ಮ ಮಾನಸ ಪುತ್ರರಿಗೆ ಮತ್ತು ಓರ್ವಳನ್ನು ಪರಮೇಶ್ವರನಿಗೆ ವಿವಾಹ ಮಾಡಿಸಿ ಕೊಟ್ಟು ಶ್ರೇಷ್ಟನೆನಿಸಿಕೊಳ್ಳುತ್ತಾನೆ. ಲೋಕ ಪರಿಪಾಲನೆಗೆ ಅಷ್ಟ ದಿಕ್ಪತಿಗಳು, ದೇವಲೋಕ, ನರಕ, ದಿವ್ಯಲೋಕಗಳೆಲ್ಲವೂ ರೂಪುಗೊಳ್ಳಲ್ಪಡುತ್ತದೆ. ಸೃಷ್ಟಿ – ಸ್ಥಿತಿ – ಲಯಕ್ಕೆ ಪೂರಕವಾಗಿ ಈ ಲೋಕ – ದೇವತೆಗಳು ಕಾರ್ಯ ನಿರ್ವಹಿಸುವ ವ್ಯವಸ್ಥೆಯಾಗುತ್ತದೆ.

    ದೇವತೆಗಳೊಳಗೆ ಬೇಕು ಬೇಕಾದ ಕಾರ್ಯ ವಿಭಜನೆಗಳು, ಅಧಿಕಾರಗಳೂ ವಹಿಸಲ್ಪಡುತ್ತದೆ. ಹೀಗೊಂದು ಸುವ್ಯವಸ್ಥೆಯಾಗಿ ದೇವಲೋಕ – ಅವರ ಒಡೆಯನಿಗೆ ದೇವೇಂದ್ರ ಪದವಿ ನಿಯೋಜಿತವಾಗುತ್ತದೆ. ಹೀಗಿರಲು ಬಹುಕಾಲ ಕಳೆದಾಗ ದೇವೇಂದ್ರನ ಆಶಯದಂತೆ ತ್ರಿವೇಣಿ ಸಂಗಮಸ್ಥಾನದಲ್ಲಿ ಮರೀಚಿಬ್ರಹ್ಮರ ಅಧ್ವರ್ಯುತನದಲ್ಲಿ “ಜ್ಞಾನಸತ್ರ” ವಿಶೇಷ ಯಾಗ ವಿರಚಿಸಲ್ಪಡುತ್ತದೆ. ಕೈಲಾಸಪತಿ ಶಿವ ಪರಮೇಶ್ವರ ಯಾಗಾಧ್ಯಕ್ಷನಾಗಿ ದೇವಾದಿ ದೇವತೆಗಳು, ಋಷಿ ಮುನಿಗಳೂ, ಬ್ರಹ್ಮ ವಿಷ್ಣು ಸಹಿತ ಉಪಸ್ಥಿತರಿದ್ದು ಯಾಗಾರಂಭಗೊಂಡು ಸಾಂಗವಾಗಿ ನೆರವೇರುತ್ತಿತ್ತು. ಅಂತಹ ಧರ್ಮ ಸಭೆಗೆ ತಡವಾಗಿ ದಕ್ಷ ಬರುತ್ತಾನೆ.

    ಆತನಿಗೆ ಉಚಿತಾಸನದ ವ್ಯವಸ್ಥೆ ಸ್ವಾಗತಗಳು ನೀಡಲ್ಪಡುತ್ತದೆ. ಶಿವ ಅಧ್ಯಕ್ಷ ಪೀಠದಿಂದ ಎದ್ದು ಬಂದು ಆ ಸಮಯ ಗೌರವಿಸಲಿಲ್ಲ. ಕಾರಣ ಸಭೆಯ ಅಧ್ಯಕ್ಷನಾದವ ಪೀಠ ಗೌರವದಂತೆ ಪೂರ್ಣಾಹುತಿಗೆ ಅಥವಾ ಮುಕ್ತಾಯಕ್ಕೆ ಏಳಬೇಕು. ಆದರೆ ದಕ್ಷ ಸಂಬಂಧದಲ್ಲಿ ಈಶ್ವರನಿಗೆ ಹೆಣ್ಣು ಕೊಟ್ಟ ಮಾವ. ತಾನು ಬಂದಾಗ ಗೌರವ ಸೂಚಕವಾಗಿ ಎದ್ದು ನಿಂತು ಗೌರವ ಸೂಚಿಸಲಿಲ್ಲ, ಇದು ಶಿವನ ಅಹಂಕಾರ.

    ಇದರಿಂದ ತನಗೆ ಅವಮಾನವಾಯಿತು ಎಂಬ ಭಾವದಿಂದ ದಕ್ಷ ವಿಪರೀತ ಸಿಟ್ಟುಗೊಳ್ಳುತ್ತಾನೆ. ಶಿವನನ್ನು ಹೀನಾಯವಾಗಿ ನಿಂದಿಸಿ ಸಭಾತ್ಯಾಗ ಮಾಡುತ್ತಾನೆ. ಈ ಕಾರಣವೇ ದ್ವೇಷ ಪ್ರತಿಕಾರವಾಗಿ ದಕ್ಷನ ಮನದೊಳಗೆ ಪ್ರತ್ಯೇಕ ಯಾಗ ಸಂಕಲ್ಪಕ್ಕೆ ನಾಂದಿಯಾಗುತ್ತದೆ. ತನ್ನ ಮಗಳ ಗಂಡ ಈಶ್ವರನನ್ನು ಹೊರತು ಪಡಿಸಿ ನಿರೀಶ್ವರ ಯಾಗಕ್ಕೆ ಪ್ರೇರಣೆಯಾಯಿತು.

    ಹೀಗೆ ದಕ್ಷನ ಯಾಗ ಈಶ್ವರ ರಹಿತವಾಗಿ ಉಳಿದೆಲ್ಲರೂ ಆಹ್ವಾನಿತರಾಗಿ ಅಖಿಲ ವೈಭವದಿಂದ ಆರಂಭಗೊಳ್ಳುತ್ತದೆ. ಯಾಗಕ್ಕೆ ಹೋಗುವ ಋಷಿ ಋತ್ವಿಜರ ಮುಖೇನ ಸುದ್ದಿ ತಿಳಿದ ದಕ್ಷ ಪುತ್ರಿ ಶಿವ ಸತಿ ತಾನು ತವರುಮನೆ ಪ್ರಾಚೀನ ಬರ್ಹಿಯಲ್ಲಿ ಸಾಗುತ್ತಿರುವ ಯಾಗಕ್ಕೆ ಹೋಗಲು ಪತಿಯಲ್ಲಿ ಅನುಮತಿ ಬೇಡುತ್ತಾಳೆ. ಆಮಂತ್ರಣವಿಲ್ಲದೆ ಹೋಗಲಾಗದು – ಹೋಗಕೂಡದು ಎಂದು ಪತಿ ಪರಮೇಶ್ವರ ಹೇಳುತ್ತಾನೆ.

    ಅಪ್ಪ ನಡೆಸುವ ಯಾಗಕ್ಕೆ ಮಗಳಿಗೆ ಆಮಂತ್ರಣವೇಕೆ ಎಂಬ ಹಠವಾದದಿಂದ ಪತಿಯ ಪೂರ್ಣಾನುಮತಿಗೂ ಕಾಯದೇ ಆತನ ಮೌನವೇ ಸಮ್ಮತಿಯೆಂದು ಬಗೆದು, ದಕ್ಷನ ಯಾಗ ಮಂಟಪಕ್ಕೆ ಹೋಗುತ್ತಾಳೆ. ಅಲ್ಲಿ ತನ್ನವರಿಂದ ಕಡೆಗಣಿಸಲ್ಪಟ್ಟಾಗ ನೊಂದು, ಪತಿ ವಚನ ಧಿಕ್ಕರಿಸದ್ದಕ್ಕೆ ಮರುಗಿ, ಅನಾದರ ತೋರಿದ ತನ್ನ ತಂದೆಯನ್ನೇ ಶಪಿಸುತ್ತಾಳೆ. “ತಂದೆಯಾಗಿ ಮಗಳ ಮೇಲೆ ಪ್ರೀತಿ ತೋರದೆ ತಾರತಮ್ಯ ಮಾಡಿದೆ. ದೇವನಾದ ಸದಾಶಿವನನ್ನೂ ನಗಣ್ಯನೆಂದು ಭಾವಿಸಿ ಮಹಾಪರಾಧವೆಸಗಿದೆ.

    ಸಂಬಂಧದ ಬೆಲೆ ಅರಿಯದ ನೀನು ಹತ್ತು ಮಂದಿಗೆ ಒಬ್ಬ ಮಗನಾಗಿ ಹುಟ್ಟು” ಎಂದು ಶಾಪ ವಾಕ್ಯ ನುಡಿದು ಪತಿವಾಕ್ಯ ಮೀರಿ ಬಂದ ಸತಿಯಾದ ತನಗಿನ್ನು ಮರಳಿ ಕೈಲಾಸ ಸೇರುವ ಯೋಗ್ಯತೆಯಿಲ್ಲವೆಂದು ನಿರ್ಣಯಿಸಿ, ತನ್ನ ದೇಹದಿಂದ ಯೋಗಾಗ್ನಿ ಪ್ರವಹಿಸಿಕೊಂಡು ದಕ್ಷನ ಯಾಗ ಮಂಟಪದಲ್ಲೇ ದಹಿಸಲ್ಪಡುತ್ತಾಳೆ.

    ನಾರದ ಮುಖೇನ ಈ ಸುದ್ದಿ ತಿಳಿದ ಈಶ ವೀರಭದ್ರನನ್ನು ಸೃಷ್ಟಿಸಿ ದಕ್ಷನ ಶಿರಚ್ಛೇದನ ಮಾಡಿಸಿದನು. ಆಗ ಯಾಗ ಅರ್ಧಕ್ಕೇ ನಿಂತರೆ ಅಮಂಗಲವೆಂದು ದೇವತೆಗಳು ಶಿವನನ್ನು ಸ್ತುತಿಸಿ ಪ್ರಾರ್ಥಿಸುತ್ತಾರೆ. ಒಲಿದ ಶಿವಕಾರುಣ್ಯದಿಂದ ಆಡೊಂದರ ಶಿರವನ್ನು ದಕ್ಷನಿಗಿತ್ತು ಮರು ಜೀವ ನೀಡಿ ಯಾಗ ಸಮಾಪ್ತಿಯಾಗುತ್ತದೆ. ಯಾಗ ಬಳಿಕ ತನ್ನ ತಪ್ಪಿನ ಅರಿವಾದ ದಕ್ಷ “ಚಮಕ” ಎಂಬ ಸ್ತೋತ್ರದಿಂದ ಶಿವನನ್ನು ಮೆಚ್ಚಿಸುತ್ತಾನೆ.

    ಹೀಗಿರಲು ಕಾಲಗಳು ಕಳೆದು ಹೋಗಲು ಮುಂದೆ ಮಗಳು ದಾಕ್ಷಾಯಣಿಯ ಶಾಪದಂತೆ ದಕ್ಷ “ಮಾರೀಷೆ” ಎಂಬ ವೃಕ್ಷ ಕನ್ಯೆಯಲ್ಲಿ ಹತ್ತು ಮಂದಿ ಪ್ರಚೇತಸರೆಂಬ ಋಷಿಗಳಿಗೆ ಒಬ್ಬ ಮಗನಾಗಿ ಹುಟ್ಟುತ್ತಾನೆ. ಪ್ರಚೇತಸ ಋಷಿಗಳ ಅಭೀಷ್ಟವೂ ಸೃಷ್ಟಿ ಕಾರ್ಯದ ಬ್ರಹ್ಮನನ್ನು ಮಗನಾಗಿ ಪಡೆಯಬೇಕೆಂಬುವುದಾಗಿತ್ತು. ಮುಂದೆ ಪ್ರಚೇತಸರ ಅನುಗ್ರಹದಿಂದ ದಕ್ಷ ಪ್ರಜಾಪತಿಯಾಗುತ್ತಾನೆ.

Post a Comment

0Comments

Please Select Embedded Mode To show the Comment System.*