ಭಗವಾನ್ ವ್ಯಾಸರು ನಿರರ್ಗಳವಾಗಿ ಶ್ಲೋಕರೂಪದಲ್ಲಿ ಮಹಾಕಾವ್ಯ ನಿರೂಪಿಸಿದರೆ, ಇತ್ತ ಗಣಪತಿ ದೇವರು ನಿರಂತರವಾಗಿ ಅದನ್ನು ಅರ್ಥೈಸಿ ಬರೆಯುತ್ತಿದ್ದರು.. ಹೀಗೆ ಒಂದು ಲಕ್ಷ ಶ್ಲೋಕಗಳ “ಜಯ” ಎಂಬ ಬೃಹತ್ ಗ್ರಂಥ ಸೃಷ್ಟಿಯಾಯಿತು.
ಗ್ರಂಥ ಪೂರ್ತಿಯಾದಾಗ ಸಂತೃಪ್ತನಾದ ಗಣಪತಿ ದೇವರೇ ಮನಸಾರೆ ಅರ್ಚಿಸಿ ಅಭಿವಾದನ ಮಾಡಿದರು. ವ್ಯಾಸ ಭಗವಾನರೂ ಈ ಗ್ರಂಥವನ್ನು ಪೂಜಿಸಿದರು. ಇವರಿಬ್ಬರೂ ಕೃತಕೃತ್ಯರಾದೆವೆಂದು ಸಂತೋಷಪಟ್ಟರು.
ಕೆಲಕಾಲದ ಬಳಿಕ ಗುರು ವ್ಯಾಸ ಭಗವಾನರ ಶಿಷ್ಯರಾದ ನನಗೂ (ವೈಶಂಪಾಯನರಿಗೆ) ಹಾಗೂ ಶುಕ ಯೋಗಿಗಳಿಗೂ ಉಪದೇಶ ಮಾಡಿದರು. ಸಕಲ ವಿಘ್ನ ನಿವಾರಕ ಗಣಪತಿ ದೇವರೇ ಶ್ಲೋಕಾರ್ಥವನ್ನು ಅರ್ಥೈಸಿಕೊಂಡು ಬರೆದು ಗ್ರಂಥಪೂಜೆಯನ್ನೂ ಮಾಡಿರುವುದರಿಂದ ಅದರಲ್ಲಿ ಅಡಕವಾಗಿರುವ ಸಕಲ ವಿಚಾರಗಳೂ ದೋಷರಹಿತವಾಗಿ ದೇವತಾ ಪ್ರೀತಿಗೆ ಪಾತ್ರವಾಗಿಯೇ ಇದೆ. ಕಥಿತ ವಿಚಾರಗಳೆಲ್ಲವೂ ಸತ್ಯವೂ, ಸಹಜವೂ ಆಗಿದೆ. ಈ ಕಥನ ಸರ್ವ ಸಂಗತಿಗಳನ್ನೂ ಒಳಗೊಂಡಿದೆ.
ರಾಜಾ ಜನಮೇಜಯ ನಿನ್ನ ವಂಶದ ಹಿರಿಯರ ನೈಜ ಕಥನವನ್ನು ನಾನು ಗುರು ವ್ಯಾಸ ಭಗವಾನರ ಉಪದೇಶದಿಂದಾಗಿ ನಿಮಗೆಲ್ಲರಿಗೂ ಉಪದೇಶಿಸುತ್ತೇನೆ. ( ವೈಶಾಂಪಾಯನರು ಉಪದೇಶಿಸಿದ ಕಥನ ಮುಂದೆ ಮಹಾಭಾರತ ವೆಂದು ಪ್ರಸಿದ್ದವಾಯಿತು). ವ್ಯಾಸ ಭಗವಾನರು ಧರ್ಮಕ್ಕೆ ಶಾಶ್ವತ ಜಯ ಎಂಬ ಸತ್ಯವರಿತು ಗ್ರಂಥಕ್ಕೆ “ಜಯ” ಎಂಬ ಹೆಸರಿಟ್ಟಿದ್ದರು.