Episode (ಸಂಚಿಕೆ) – 1

SANTOSH KULKARNI
By -
0



ಮಹಾಭಾರತ ಮಹಾಕಾವ್ಯ ನಾಲ್ಕು ವೇದಗಳ ಸಮತೂಕದ ಜ್ಞಾನ ಸಾಗರವುಳ್ಳ ಕಥಾನಕ. ಭರತವರ್ಷದಲ್ಲಿ ಚಂದ್ರವಂಶ ಅತ್ಯುನ್ನತವಾದ ರಾಜವಂಶ. ಅಂತಹ ಮೇರುಕುಲ ಸಂಜಾತರಲ್ಲಿ ರಾಜಕುಮಾರರ ಮಧ್ಯೆ ಸಾಗಿದ ಮಹಾಯುದ್ದದ ನಂತರ ಚಂದ್ರವಂಶವನ್ನು ಆಳಿ ಬೆಳಗಿದವನು ಪರೀಕ್ಷಿತ ರಾಜ. ಆತನ ಬಳಿಕ ಸಿಂಹಾಸನವೇರಿದವನು ಜನಮೇಜಯ.

ಒಂದು ದಿನ ರಾಜ ಜನಮೇಜಯನ ಆಸ್ಥಾನಕ್ಕೆ ಬ್ರಾಹ್ಮಣ ಸ್ನಾತಕನೊಬ್ಬನು ಬಂದು ಅರಸನಿಗೂ – ರಾಜ್ಯಕ್ಕೂ ಸನ್ಮಂಗಲವನ್ನು ಹಾರೈಸಿ ಆಶೀರ್ವಾದ ಮಾಡುತ್ತಾನೆ. ಮಹಾರಾಜ ಜನಮೇಜಯ ವಿದ್ಯುಕ್ತವಾಗಿ ಸತ್ಕರಿಸುತ್ತಾನೆ. ಬಳಿಕ ಪೂಜ್ಯರ ಪರಿಚಯ, ಬಂದಿರುವ ಕಾರ್ಯ ಕಾರಣ ಕೇಳುತ್ತಾನೆ.


ನಾನೊಬ್ಬ ಬಡ ಬ್ರಾಹ್ಮಣ, ಉತ್ತಂಕನೆಂದು ನನ್ನ ಹೆಸರು. ವೇದನ ಎಂಬ ಶ್ರೋತ್ರಿ ಗುರುಗಳ ಬಳಿ ವಿದ್ಯಾಭ್ಯಾಸ ಪೂರೈಸಿದವನಿದ್ದನು. ಜ್ಞಾನಾರ್ಜನೆಗೈದ ಬಳಿಕ ಗುರುದಕ್ಷಿಣೆಯಾಗಿ ಏನು ಕೊಡಲಿ ಗುರುದೇವ ಎಂದು ಕೇಳಿದ್ದನು. ನಿಸ್ವಾರ್ಥಿ ಗುರು ನನಗೇನೂ ಬೇಡ ನನ್ನ ಸತಿಗೇನಾದರೂ ಬೇಕಿದ್ದರೆ ಕೇಳುವವನಾಗು. ಆಕೆ ಏನಾದರೂ ಬಯಸಿದರೆ ಅದನ್ನು ಒದಗಿಸುವವನಾಗು. ನಾನು ಸಂತೃಪ್ತನು ಮಗನೇ ಎಂದು ನುಡಿದಿದ್ದನು. ಹಾಗೆ ಗುರು ಪತ್ನಿಯ ಬಳಿ ಬಂದು ವಿದ್ಯಾರ್ಥಿಯಾಗಿದ್ದ ಬ್ರಾಹ್ಮಣ ಸ್ನಾತಕ ಆಕೆಗೇನಾದರು ಅಪೇಕ್ಷೆ ಇದೆಯೇ ಎಂದು ಕೇಳಿದಾಗ “ವತ್ಸಾ ಪೌಷ್ಯರಾಜನ ಮಡದಿಯ ಬಳಿ ಮಹಿಮಾನ್ವಿತವಾದ ಕಿವಿಗೆ ಧರಿಸುವ ವಿಶೇಷ ಓಲೆಗಳಿವೆ ಎಂದು ಕೇಳಿ ತಿಳಿದಿದ್ದೇನೆ. ಅವುಗಳನ್ನು ನನಗೆ ಧರಿಸಬೇಕೆಂಬ ಆಶೆಯಿದೆ. ಸಾಧ್ಯವಾದರೆ ಅವುಗಳನ್ನು ತಂದು ನನಗೊಪ್ಪಿಸಲು ಪ್ರಯತ್ನಿಸು.” ಎಂದು ತನ್ನ ಬಯಕೆಯನ್ನು ಹೇಳಿಕೊಂಡಿದ್ದಳು.


ಅಂತೆಯೇ ಬ್ರಾಹ್ಮಣ ಸ್ನಾತಕನಾದ ಉತ್ತಂಕ ತನ್ನ ಗುರು ಪತ್ನಿಯ ಆಸೆಯ ಈಡೇರಿಕೆಗಾಗಿ ಅಲ್ಲಿಂದ ಹೊರಟು ಪೌಷ್ಯರಾಜನ ಆಸ್ಥಾನ ಸೇರಿದನು. ಪೌಷ್ಯ ಮಹಾರಾಜನನ್ನು ಕಂಡು ಪ್ರಣಾಮಗಳನ್ನು ಸಲ್ಲಿಸಿದನು. ಗುರುದಕ್ಷಿಣೆಯ ವೃತ್ತಾಂತವನ್ನು ಸವಿವರವಾಗಿ ತಿಳಿಸಿದನು.ಆಗ ರಾಜನು “ನಿನಗೆ ಬೇಕಾಗಿರುವ ಕಿವಿಯೋಲೆ ಮಹಾರಾಣಿಯ ವಶದಲ್ಲಿದೆ. ನೀನು ರಾಣಿಯಲ್ಲೇ ನೇರವಾಗಿ ಕೇಳಿ ಪಡೆದುಕೊಳ್ಳಬೇಕು” ಎಂದು ಉತ್ತರಿಸಿದನು. ಹಾಗೆಯೇ ಆಗಲಿ ಎಂದು ಮಹಾರಾಣಿಯವರನ್ನು ಕಾಣಲು ಅಂತಃಪುರ ಕಾವಲು ಭಟರ ಅಪ್ಪಣೆ ಪಡೆದು ಉತ್ತಂಕನು ಬಂದು ನೋಡಿದರೆ ಆಶ್ಚರ್ಯ! ಪರಿಚಾರಕಿಯರು ಸೇವೆ ಮಾಡುತ್ತಿದ್ದಾರೆ… ಬೀಸಣಿಗೆಯಲ್ಲಿ ಗಾಳಿ ಬೀಸುತ್ತಿದ್ದಾರೆ… ಕಾಲು ಒತ್ತುತ್ತಿದ್ದಾರೆ ಆದರೆ ರಾಣಿ ಕಾಣಿಸುತ್ತಿಲ್ಲ. ಉತ್ತಂಕನು ಜಾಣ್ಮೆಯಿಂದ ಅಲ್ಲಾಗುತ್ತಿರುವ ವಿಸ್ಮಯವನ್ನು ಅರ್ಥೈಸಿಕೊಂಡನು. ರಾಣಿ ಅದೃಶ್ಯವಾಗಿರುವುದು ಓಲೆಯ ಮಹಾತ್ಮೆಯಿಂದಲೆ ಇರಬಹುದೆಂದು ತರ್ಕಿಸಿದನು. 


ಬಹಳ ಹೊತ್ತು ಕಾದರೂ ರಾಣಿಯವರನ್ನು ಕಾಣಲಾಗದೆ ಪರಿತಪಿಸಿ ಕೊನೆಗೆ ಕಾಣದ ರಾಣಿಯನ್ನು ಉದ್ದೇಶಿಸಿ.. “ಮಹಾರಾಣಿಯವರಿಗೆ ಪ್ರಣಾಮಗಳು” ಎಂದು ಹೇಳಿ ವಂದಿಸಿದನು. ತನ್ನ ಆಗಮನದ ಕಾರಣ ಉದ್ದೇಶಗಳನ್ನು ವಿವರಿಸಿ, ಮಹಾರಾಜರ ಅಪ್ಪಣೆಯ ಸಂಗತಿಯನ್ನು ಬಿನ್ನವಿಸಿದನು. ತನಗೆ ಮಹಾರಾಣಿಯವರ ಓಲೆಗಳನ್ನು ನೀಡಿ ಗುರುದಕ್ಷಿಣೆ ಅರ್ಪಿಸುವ ಔದಾರ್ಯ ತೋರಬೇಕೆಂದು ಬೇಡಿಕೊಂಡನು. ಆಗ ಮಹಾರಾಣಿ ಅಗೋಚರಳಾಗಿಯೇ ಇರುತ್ತಾ, “ನಿನ್ನ ಗುರುದಕ್ಷಿಣೆಯನ್ನು ನಿನ್ನ ಸಾಧನೆಯಿಂದ ಸಾಧಿಸಿ ಪಡೆದು ಕೊಳ್ಳುವವನಾಗು” ಎಂದು ಹೇಳಿದಳು.

Post a Comment

0Comments

Post a Comment (0)