ಅವಿನಾಶ್

SANTOSH KULKARNI
By -
0

 
ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಅವಿನಾಶ್ ಒಬ್ಬರು.  ಬಹುಶಃ ಅವರು ಇಲ್ಲದ ಚಿತ್ರಗಳೇ ಇಲ್ಲ ಎನ್ನುವಷ್ಟು ಅವರು ಪ್ರಮುಖರು.  ಪೋಷಕ ಪಾತ್ರಗಳು, ಖಳ ನಟ ಪಾತ್ರಗಳಲ್ಲಿ ಒಂದು ರೀತಿಯ ಹೊಸ ಭಾಷ್ಯ ಬರೆದು ತಮ್ಮ ಹೊಸ ರೀತಿಯ ಅಭಿನಯ, ಶಿಸ್ತು, ಸೌಜನ್ಯ, ಅತ್ಮೀಯತೆಗಳಿಂದ ಚಿತ್ರರಂಗದಲ್ಲಿನ ಉದ್ಯಮಿಗಳು, ಸಹೋದ್ಯೋಗಿಗಳು, ಜೊತೆಗೆ ಪ್ರೇಕ್ಷಕರು ಎಲ್ಲರಿಗೂ ಮೆಚ್ಚಿನವರಾಗಿ ಚಿತ್ರರಂಗದಲ್ಲಿ ಅಪಾರ ಬೇಡಿಕೆಯ ನಟರಾಗಿದ್ದಾರೆ.  ವ್ಯಾಪಾರೀ ಮತ್ತು ಕಲಾತ್ಮಕ ಚಿತ್ರಗಳೆರಡೂ ವಿಭಾಗಗಳಲ್ಲೂ ಅವರು ಗಣನೀಯ ಸಾಧನೆ ಮಾಡಿದ್ದಾರೆ. 

ಅವಿನಾಶ್ 1959ರ ಡಿಸೆಂಬರ್ 22ರಂದು ಮೈಸೂರು ಜಿಲ್ಲೆಯ ಯಳಂದೂರಿನಲ್ಲಿ  ಜನಿಸಿದರು.   ತಂದೆ ಬಿ.ಕೆ ನಾರಾಯಣ ರಾವ್ ಅವರು  ವಕೀಲರಾಗಿದ್ದರು.  ತಾಯಿ ಇಂದಿರಾ ಅವರು.  ಮೈಸೂರಿನ ಹಾರ್ಡ್ವಿಕ್ ಶಾಲೆಯಲ್ಲಿ ಓದಿದ ಅವಿನಾಶ್ ಮುಂದೆ ಮಾನಸ ಗಂಗೋತ್ರಿಯಲ್ಲಿ  ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಅವರು ಓದುತ್ತಿದ್ದ ದಿನಗಳಲ್ಲಿ ಡಾ. ಯು. ಆರ್. ಅನಂತಮೂರ್ತಿ ಮುಂತಾದ ಗಣ್ಯರು ಅವರ ಗುರುಗಳಾಗಿದ್ದರು.  ಓದಿನ ನಂತರದಲ್ಲಿ ಹಲವು ಕಾಲ ಮೈಸೂರಿನ ಶಾರದಾ ವಿಲಾಸ್ ಕಾಲೇಜು, ಬೆಂಗಳೂರಿನ ಬಿ.ಇ.ಎಸ್ ಕಾಲೇಜು, ಬಿ.ಇ.ಎಲ್ ಕಾಲೇಜು, ಎಂ.ಇ.ಎಸ್ ಕಾಲೇಜು ಮುಂತಾದೆಡೆ ಅಧ್ಯಾಪಕ ವೃತ್ತಿ ನಡೆಸಿದರು. 

ತಾವು ವ್ಯಾಸಂಗದಲ್ಲಿದ್ದ ಯುವ ವಯಸ್ಸಿನಲ್ಲೇ ಮೈಸೂರಿನಲ್ಲಿ  ರಂಗ ಚಟುವಟಿಕೆಗಳಿಂದ  ಆಕರ್ಷಿತರಾಗಿದ್ದ ಅವಿನಾಶ್ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಅದಕ್ಕೆ ಮತ್ತಷ್ಟು ವ್ಯಾಪಕತೆ ಕಂಡುಕೊಂಡರು.  ಹೀಗೆ ಹೆಚ್ಚು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ಅವರು ತಮ್ಮ ಅಧ್ಯಾಪಕ ವೃತ್ತಿಗೇ ವಿದಾಯ ಹೇಳಬೇಕಾಗಿ ಬಂತು.  ಬಿ. ಜಯಶ್ರೀ ಅವರ ಸ್ಪಂದನ, ಶಂಕರನಾಗ್ ಅವರ ಸಂಕೇತ್, ಪ್ರಸನ್ನರ ಜನಪದ ಮುಂತಾದ ಪ್ರಖ್ಯಾತ ನಾಟಕ ತಂಡಗಳಲ್ಲಿ ಅವರು ಸಕ್ರಿಯರಾಗಿ ಭಾಗವಹಿಸಿದ್ದರು. 

ಶಂಕರನಾಗ್ ಅವರ ಸಂಕೇತ್ ತಂಡದಲ್ಲಿದ್ದಾಗ ಒಮ್ಮೆ ತ್ರಿಶೂಲ ಎಂಬ ಚಿತ್ರದಲ್ಲಿ ಒಂದು ಪಾತ್ರ ವಹಿಸಿದರು.  ಆ ಚಿತ್ರ ಬಿಡುಗಡೆ ಕಾಣದಿದ್ದರೂ ಕೆ.ವಿ. ರಾಜು ಅವರು ತಮ್ಮ ಹಲವಾರು ಚಿತ್ರಗಳಲ್ಲಿ ಅವಿನಾಶ್ ಅವರಿಗೆ ಅವಕಾಶಗಳನ್ನು ನೀಡಿದರು.  ನಂತರದಲ್ಲಿ ನಿರಂತರವಾಗಿ ಅವರಿಗೆ ಅವಕಾಶಗಳು ಹರಿದು ಬರಲಾರಂಭಿಸಿದವು.  ಅವರ ಪ್ರಾರಂಭಿಕ ಚಿತ್ರಗಳಲ್ಲಿ ಜಿ.ವಿ. ಅಯ್ಯರ್ ಅವರ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಹೆಸರು ಮಾಡಿದ  ಮಧ್ವಾಚಾರ್ಯ ಚಿತ್ರವೂ ಒಂದು.  

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಗಿರೀಶ್ ಕಾಸರವಳ್ಳಿ ಅವರ, ಸ್ವರ್ಣಕಮಲ ಪ್ರಶಸ್ತಿ ವಿಜೇತ ‘ದ್ವೀಪ’ ಮತ್ತು ಟಿ. ಎಸ್. ನಾಗಾಭರಣ ಅವರ 'ಸಿಂಗಾರೆವ್ವ' ಚಿತ್ರಗಳಲ್ಲಿನ ಅವಿನಾಶ್ ಅಭಿನಯ ರಾಷ್ಟ್ರೀಯ ಚಲನಚಿತ್ರ ಆಯ್ಕೆ ಜ್ಯೂರಿಯ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.  ಟಿ. ಎನ್. ಸೀತಾರಾಮ್ ಅವರ 'ಮತದಾನ' ಚಿತ್ರದಲ್ಲಿನ ಅಭಿನಯಕ್ಕಾಗಿ ಕರ್ನಾಟಕ  ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟ  ಪ್ರಶಸ್ತಿ ಅವರಿಗೆ  ಸಂದಿತು.  ಆಪ್ತರಕ್ಷಕ ಚಿತ್ರದಲ್ಲಿನ ಪಾತ್ರ ಅವರಿಗೆ ಫಿಲಂ ಫೇರ್  ಶ್ರೇಷ್ಠ ಪೋಷಕ ನಟ ಪ್ರಶಸ್ತಿ ತಂದುಕೊಟ್ಟಿತು.   ಈ ಪ್ರಶಸ್ತಿಗಳೇ ಅಲ್ಲದೆ ತಮ್ಮ ವಿವಿಧ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹಲವು ಮಾಧ್ಯಮ, ಸಂಘಟನೆಗಳ ವಿವಿಧ ಪ್ರಶಸ್ತಿ ಪಡೆದಿರುವ  ಅವಿನಾಶ್ ಅವರಿಗೆ  ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳೂ ಸಂದಿವೆ.  

ಯಶಸ್ವೀ ಚಿತ್ರಗಳಾದ ‘ಆಪ್ತಮಿತ್ರ’ ಮತ್ತು ‘ಆಪ್ತರಕ್ಷಕ’ ಪಾತ್ರಗಳಲ್ಲಿ ಅವಿನಾಶ್ ಅವರು ಅಭಿನಯಿಸಿದ ರಾಮಚಂದ್ರ ಆಚಾರ್ಯರ ಪಾತ್ರ ಬಹಳಷ್ಟು ಜನಪ್ರಿಯತೆ ಗಳಿಸಿತು.  ಇವರ ‘ಆಪ್ತಮಿತ್ರ’ ಚಿತ್ರದಲ್ಲಿನ ಅಭಿನಯ ಕಂಡ ರಜನೀಕಾಂತ್ ಅವರು ಆ ಚಿತ್ರದ ತಮಿಳು ಅವತರಣಿಕೆಯಾದ ‘ಚಂದ್ರಮುಖಿ’ಯಲ್ಲೂ ಅವರೇ ಇರಬೇಕೆಂದು ಬಯಸಿದರು.  ಅವಿನಾಶ್ ಅವರು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕರುಗಳಾದ  ಗಿರೀಶ್ ಕಾಸರವಳ್ಳಿ, ನಾಗಾಭರಣ, ಸೀತಾರಾಂ ಅವರುಗಳ ಜೊತೆಗೆ,   ಕೆ.ಬಾಲಚಂದರ್, ಎ. ಆರ್. ಮುರುಗದಾಸ್, ಪುರಿ ಜಗನ್ನಾಥ್, ಪಿ. ವಾಸು, ವೆಟ್ರೀ ಮಾರನ್, ಯೋಗರಾಜ್ ಭಟ್, ಸೂರಿ, ಗೌತಮ್ ಮೆನನ್ ಮುಂತಾದ  ಅನೇಕ  ಪ್ರಖ್ಯಾತ ನಿರ್ದೇಶಕರ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.  ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಕೆಲವೊಂದು ಹಿಂದಿ,  ಇಂಗ್ಲಿಷ್ ಭಾಷೆಗಳಲ್ಲಿ ಸೇರಿ  500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ದೂರದರ್ಶನದಲ್ಲಿ ಟಿ.ಎನ್.  ಸೀತಾರಾಂ ಅವರ ಪ್ರಖ್ಯಾತ ಧಾರವಾಹಿ ‘ಮಾಯಾಮೃಗ’ದಲ್ಲಿ ನಟಿಸಿದ್ದ ಅವಿನಾಶ್, ಆ ಧಾರವಾಹಿಯಲ್ಲಿ ತಮ್ಮ ಪತ್ನಿ ಪಾತ್ರ ವಹಿಸಿದ್ದ ಮಾಳವಿಕ ಅವರನ್ನು ನಿಜ ಜೀವನದಲ್ಲೂ ವರಿಸಿದ್ದಾರೆ.  ಮಾಳವಿಕ ಕೂಡ ಕನ್ನಡ ಚಿತ್ರರಂಗ ಮತ್ತು  ಕನ್ನಡ ಕಿರುತೆರೆಗಳಲ್ಲಲ್ಲದೆ ದಕ್ಷಿಣ ಭಾರತದ ವಿವಿಧ ಭಾಷೆಯ ಪ್ರಖ್ಯಾತ ಧಾರವಾಹಿಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ  ನಟಿಸಿ  ಹೆಸರು ಮಾಡಿದ್ದಾರೆ.

ಸಿನಿಮಾದಲ್ಲಿ ಖಳ ಪಾತ್ರ, ಪೋಷಕ ಪಾತ್ರ ಅಂದರೆ ಹೇಗಿದ್ದರೂ ನಡೆಯುತ್ತದೆ ಎಂಬ ಕಾಲವಲ್ಲ ಇದು.  ಅವಿನಾಶ್ ಅಂಗಸೌಷ್ಟವ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಿಸಲು ದಿನಕ್ಕೆ ಐದಾರು ಕಿಲೋ ಮೀಟರ್ ಓಡುವುದಲ್ಲದೆ ಸಾಕಷ್ಟು ದೈಹಿಕ ವ್ಯಾಯಾಮ ಮಾಡುತ್ತಾರೆ. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ರಜನೀಕಾಂತ್, ಮಮ್ಮೂಟಿ, ನಾಗಾರ್ಜುನ, ವೆಂಕಟೇಶ್ ಅಂತಹ ಪ್ರಸಿದ್ಧರ ಜೊತೆಯಲ್ಲಷ್ಟೇ ಅಲ್ಲದೆ  ನಂತರದ ವಿವಿಧ ಪೀಳಿಗೆಗಳ ನಟರುಗಳೊಡನೆಯೂ ನಿರಂತರವಾಗಿ ನಟಿಸುತ್ತಾ ಮುಂದೆ ಸಾಗುತ್ತಿದ್ದಾರೆ. 

ಅವಿನಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  

ಕೃಪೆ : ಕನ್ನಡ ಸಂಪದ  Kannada Sampada facebook post

Post a Comment

0Comments

Post a Comment (0)