ಉತ್ಥಾನ ದ್ವಾದಶಿ

SANTOSH KULKARNI
By -
0

 *ಒಲ್ಲನೋ ಹರಿ ಕೊಳ್ಳನೋ*

*ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ*

ಉತ್ತಿಷ್ಟೋತ್ತಿಷ್ಠ ಗೋವಿಂದ ತ್ಯಜನಿದ್ರಾಂ ಜಗತ್ಪತೇ ತ್ವಯಿ ಸುಪ್ತೇ ಜಗತ್- ಸುಪ್ತಂ ಉತ್ಥಿತೇ ಜೋತ್ಥಿತಂ ಜಗತ್ ॥ ಗತಾಮೇಘಾ ವಿಯಚ್ಚೈವ ನಿರ್ಮಲಂ ನಿರ್ಮಲಾ ದಿಶಃ ಶಾರದಾನಿಚ ಪುಷ್ಪಾಣಿ ಗ್ರಹಣಾ ಮಮ ಕೇಶವ ॥

ಅಂದರೆ ‘‘ಹೇ ಗೋವಿಂದ ! ನಿದ್ರೆಯನ್ನು ಬಿಟ್ಟು ಏಳು; ನೀನು ಮಲಗಿದೆಯೆಂದರೆ ಜಗತ್ತೇ ಮಲಗಿದಂತೆ; ನೀನು ಎದ್ದೆಯೆಂದರೆ ಜಗತ್ತೇ ಎದ್ದಂತೆ. ವರ್ಷಕಾಲದ ಕಾರ್ಮೋಡ ಕರಗಿ ಆಕಾಶ ಹಾಗೂ ದಶದಿಕ್ಕುಗಳೆಲ್ಲಾ ನಿರ್ಮಲವಾಗಿವೆ. ಶರತ್ಕಾಲದ ಈ ಸುಗಂಧಭರಿತ ಪುಷ್ಪಗಳನ್ನು ನಿನಗೆ ಅರ್ಪಿಸುತ್ತಿದ್ದೇನೆ; ಸ್ವೀಕರಿಸು.’’

ಉತ್ಥಾನ ದ್ವಾದಶೀ ಅಂದರೆ ತುಳಸಿ ಮದುವೆ. ಬಹಳ ಪ್ರಸಿದ್ಧವಾದ ದ್ವಾದಶಿ ಹಬ್ಬಗಳಲ್ಲಿ ‘ ಉತ್ಥಾನ ದ್ವಾದಶಿ ಕೂಡ ಒಂದು. ಉತ್ಥಾನ ಎಂದರೆ ಏಳುವುದು ಎಂದರ್ಥ. ತುಳಸಿ ಎಂದರೆ ಪಾವಿತ್ರ್ಯ ಮತ್ತು ಸಾತ್ವಿಕತೆಯ ಪ್ರತೀಕ.

ಲಕ್ಷ್ಮೀದೇವಿ ಏಳುವ ದಿನ ದೀಪಾವಳಿಯಾದರೆ, ನಾರಾಯಣನು ಏಳುವ ದಿನ ಉತ್ಥಾನ ದ್ವಾದಶಿ. ನಮ್ಮ ಪುರಾಣಗಳ ಪ್ರಕಾರ ಮಹಾವಿಷ್ಣು ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿದರೆ ಕಾರ್ತಿಕ ಶುದ್ಧ ದ್ವಾದಶಿಯಂದು ಉತ್ಥಾನ ಎಂದರೆ ಏಳುತ್ತಾನೆ. ಲಕ್ಷ್ಮೀನಾರಾಯಣರು ಜಾಗೃತಾವಸ್ಥೆಯಲ್ಲಿದ್ದರೆ ಜಗದ ಹೃದಯವೇ ಆನಂದಮಯವಾಗಿ, ಮಂಗಳ ವಾತಾವರಣ ನೆಲೆಸಿರುತ್ತದೆ. ಆದ್ದರಿಂದ ಕಾರ್ತಿಕ ಶುದ್ಧ ದ್ವಾದಶಿಯಂದು ‘ಪ್ರಬೋಧೋತ್ಸವ’ದ ಮೂಲಕ ನಾರಾಯಣನನ್ನು ಎಬ್ಬಿಸಿ ತುಳಸಿಯೊಂದಿಗೆ ವಿವಾಹವನ್ನು ಮಾಡುವ ಪದ್ಧತಿ ಬೆಳೆದು ಬಂದಿದೆ.

*ಆಚರಣೆಯ ವಿಧಾನ*: ‌ ‌
‌ 'ಪ್ರಬೋಧೋತ್ಸವ-ತುಳಸೀ ವಿವಾಹೌ ದ್ವದಶ್ಯಾಂರೇವತ್ಯಂತ ಪಾದಯೋಗೇ ರಾತ್ರಿ ಪ್ರಥಮ ಭಾಗೇ ಪ್ರಶಸ್ತಃ ’ ಅಂದರೆ ಪ್ರಬೋಧೋತ್ಸವ ಆಚರಣೆಗೆ ರೇವತೀ ನಕ್ಷತ್ರದಿಂದ ಕೂಡಿದ ದ್ವಾದಶಿ ತಿಥಿ ಶ್ರೇಷ್ಠ. ರಾತ್ರಿಯ ಮೊದಲ ಯಾಮದಲ್ಲಿ ಪ್ರಬೋಧೋತ್ಸವ ತುಳಸಿ ವಿವಾಹವನ್ನು ನಡೆಸಬೇಕು. ಮೊದಲು ತುಳಸಿ ಕಟ್ಟೆಯನ್ನು ಶುಚಿಗೊಳಿಸಿ, ಮಂಟಪ ತಯಾರಿಸಿ, ರಂಗವಲ್ಲಿ, ಸಿಂಧೂರ, ನೆಲ್ಲಿಯ ಟೊಂಗೆ, ಮಾವಿನ ತಳಿರು ಮುಂತಾದ ವಿವಿಧ ಫಲ-ಪುಷ್ಪಗಳಿಂದ ಅಲಂಕರಿಸಬೇಕು. ತುಳಸಿಯ ಸನ್ನಿಧಿಯಲ್ಲಿ ಶ್ರೀ ಕೃಷ್ಣನ ಪ್ರತಿಮೆಯನ್ನು ಇಡಬೇಕು. ಅರಿಶಿಣ ಕುಂಕುಮ ಕಂಠಸೂತ್ರ ಮುಂತಾದ ಮಂಗಲಾಲಂಕಾರ ಮಾಡಬೇಕು. ವಿಷ್ಣು ಸೂಕ್ತವನ್ನು ಹೇಳುತ್ತಾ ಘಂಟಾನಾದವನ್ನು ಮಾಡಿ, ಭಗವಂತನನ್ನು ಎಬ್ಬಿಸಿ, ಎಲ್ಲೆಡೆ ದೀಪ ಹಚ್ಚಿ ದೀಪೋತ್ಸವ ಆಚರಿಸಿ, ಭಗವಂತನನ್ನು ಪ್ರಾರ್ಥಿಸಬೇಕು. ನಂತರ ಮಂಗಲಾಷ್ಟಕ ಹೇಳಿ, ‘ದೇವೀಂ ಕನಕಸಂಪನ್ನಾಂ ಕನಕಾಭರಣೈರ್ಯತಾಂ ದಾಸ್ಯಾಮಿ ವಿಷ್ಣವೇ ತುಭ್ಯಂ ಬ್ರಹ್ಮಲೋಕ ಜಿಗೀಷಯಾ’ ಎಂದು ಹೇಳಿ ತುಳಸೀ ವಿವಾಹವನ್ನು ಮಾಡುವುದು. ಅವಲಕ್ಕಿ ಹಾಗೂ ನಾನಾವಿಧ ಭಕ್ಷ್ಯ-ಭೋಜ್ಯಗಳನ್ನು ನೈವೇದ್ಯ ಮಾಡುವರು. ನಂತರ ದಾನ-ದಕ್ಷಿಣೆ, ಪ್ರಸಾದ ವಿತರಣೆ ನಡೆಸುವರು. ಮಕ್ಕಳು ಪಟಾಕಿ ಸಿಡಿಸಿ ಆನಂದ ಪಡುವರು.

*ತುಳಸಿಯ ಕಥೆ* ‌ ‌ ‌ ‌ ‌

ತುಳಸಿಗೆ ವೃಂದಾ ಎಂದು ಇನ್ನೊಂದು ಹೆಸರು. ವೃಂದಾ ಜಲಂಧರನೆಂಬ ರಾಕ್ಷಸನ ಪತ್ನಿ. ಆಕೆಯ ಪಾತಿವ್ರತ್ಯ ಪ್ರಭಾವದಿಂದ ಉಬ್ಬಿ-ಕೊಬ್ಬಿ ಲೋಕಕಂಟಕನಾಗಿ ಮೆರೆಯುವ ಜಲಂಧರನನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆಗ ದೇವತೆಗಳೆಲ್ಲ ಸೇರಿ ಇತ್ತೀಚಿನ ಮೊರೆ ಹೋಗುತ್ತಾರೆ. ಅತ್ತ ಜಲಂಧರ ದೇವತೆಗಳೊಡನೆ ಹೋರಾಡುತ್ತಿರುವಾಗ, ಇತ್ತ ವಿಷ್ಣು ಜಲಂಧರ ರೂಪದಿಂದ ಬಂದಾಗ, ಅವಳು ಪತಿಯೆಂದೇ ಭಾವಿಸಿ ತಬ್ಬಿಕೊಂಡು ಬಿಡುತ್ತಾಳೆ. ಅಲ್ಲಿಗೆ ಅವಳ ಪಾತಿವ್ರತ್ಯ ಭಂಗವಾಗಿ ಇತ್ತ ಜಲಂಧರ ಯುದ್ಧದಲ್ಲಿ ಮಡಿಯುತ್ತಾನೆ. ವೃಂದೆ ವಿಷ್ಣುವಿಗೆ ‘‘ಮುಂದೊಮ್ಮೆ ನಿನಗೂ ಪತ್ನಿಯ ವಿಯೋಗವಾಗಲಿ,’’ ಎಂದು ಶಪಿಸಿ ಚಿತೆಯೇರುತ್ತಾಳೆ. ಪಾರ್ವತಿ ಚಿತೆಯ ಸುತ್ತ ತುಳಸಿ -ನೆಲ್ಲಿ ನಿರ್ಮಿಸಿ ವೃಂದಾವನ ರಚಿಸಿದಾಗ, ವಿಷ್ಣು ನಳ-ನಳಿಸಿ ಬೆಳೆದ ತುಳಸಿಯನ್ನು ಮನಸಾ ವರಿಸುತ್ತಾನೆ. ಆ ತುಳಸಿಯೇ ಮುಂದೆ ರುಕ್ಷ್ಮಿಣಿಯಾಗಿ ಹುಟ್ಟಿ ಕಾರ್ತಿಕ ಶುದ್ಧ ದ್ವಾದಶಿಯ ದಿನ ಶ್ರೀ ಕೃಷ್ಣನನ್ನು ವರಿಸುತ್ತಾಳೆ. ಆ ವಿವಾಹೋತ್ಸವ ಸ್ಮರಣೆಯೇ ‘ಉತ್ಥಾನ ದ್ವಾದಶಿ-ತುಳಸೀ ವಿವಾಹ’.

*ತುಳಸಿ ವೈಶಿಷ್ಟ್ಯ*: ‌ ‌ ‌ ‌

ತುಲಸೀ ಕಾನನಂ ಚೈವ ಗೃಹೇ ಯಸ್ಯಾವತಿಷ್ಠತಿ
ತದ್ಗೃಹಂ ತೀರ್ಥಭೂತಂ ಹಿ ನಾಯಾಂತಿ ಯಮಕಿಂಕರಃ ॥

ಅಂದರೆ ‘ಯಾವ ಮನೆಯಲ್ಲಿ ತುಳಸೀ ಬೃಂದಾವನವಿರುವುದೋ ಆ ಮನೆ ತೀರ್ಥಕ್ಷೇತ್ರದಂತೆ. ಆ ಮನೆಯಲ್ಲಿ ಅಕಾಲ ಮೃತ್ಯು ಅಶುಭವಾರ್ತೆ ಸುಳಿಯುವುದಿಲ್ಲ. ‘ಲಕ್ಶ್ಮೀರ್ಭವತಿ ನಿಶ್ಚಲಾ’ ಎಂಬ ಶಾಸ್ತ್ರೋಕ್ತಿಯಂತೆ ಆ ಮನೆಯಲ್ಲಿ ಸಂಪತ್ತು ಸದಾ ನೆಲೆಸುತ್ತದೆ. ತುಳಸಿಯಲ್ಲಿ ನಮ್ಮ ಪಾಪ ತಾಪಗಳನ್ನು ದೂರೀಕರಿಸಬಲ್ಲ ಸಮಸ್ತ ದೇವತೆಗಳ ಪೂಜೆ ಮಾಡಿದಂತೆ. ಔಷಧ ಗುಣಗಳಿಂದ ಕೂಡಿದ ತುಳಸಿ ವಾಯು, ಪರಿಸರವನ್ನು ಪರಿಶುದ್ಧಗೊಳಿಸುವುದಲ್ಲದೇ, ಅಸ್ತಮಾವನ್ನು ಅಸ್ತಗೊಳಿಸುತ್ತದೆ. ಕ್ಷಯವನ್ನು ಕ್ಷಯಿಸುತ್ತದೆ. ಸಿದ್ಧೌಷಧವಾದ ತುಳಸಿ ಆಯುರ್ವೇದದ ಆಪ್ತಮಿತ್ರ.

ಹೀಗೆ ತುಳಸಿ ನಮಗೆ ಹುಟ್ಟಿನಿಂದ ಸಾಯುವತನಕ ಸಂಗಾತಿ. ವೈದ್ಯಕೀಯ ವೈಜ್ಞಾನಿಕ ಅದ್ಯಾತ್ಮಿಕ ಅಂಶಗಳಿಂದ ಅದು ಪೂಜಾರ್ಹ. ಅಧ್ಯಾತ್ಮಿಕ ಸಾಧನೆಯೊಂದಿಗೆ ಆರೋಗ್ಯ ಹಾಗೂ ಪರಿಸರದ ಬಗ್ಗೆ ಜಾಗೃತಿಯನ್ನು ಉಂಟುಮಾಡುತ್ತಾ ನಮ್ಮನ್ನು ‘ಪ್ರಬೋಧ’ ಎಂದರೆ ‘ಎಚ್ಚರಿಸುವ’ ಉತ್ಸವವೇ ‘ಪ್ರಬೋಧೋತ್ಸವ’ ಎನ್ನಬಹುದು.

Post a Comment

0Comments

Post a Comment (0)