ಸುಜಾತಾ

SANTOSH KULKARNI
By -
0

    



 ಸುಜಾತಾ ಅವರು ಸಂತಸ, ದುಃಖ, ಪ್ರೀತಿ, ಭಾವುಕತೆ, ಇತ್ಯಾದಿಗಳನ್ನು ತಮ್ಮ ಕಣ್ಗಳಲ್ಲಿ, ಮುಖಚರ್ಯೆಯಲ್ಲಿ, ಆಡಂಬರವಿಲ್ಲದ ಸುಸಂಸ್ಕೃತ ಸಂಯಮದ ಹಾವಭಾವಗಳಲ್ಲಿ ಅಭಿವ್ಯಕ್ತಿಸುತ್ತಿದ್ದ ಕಲಾವಿದೆ ಈಕೆ.


    ಸುಜಾತಾ 1952ರ ಡಿಸೆಂಬರ್ 10ರಂದು ಶ್ರೀಲಂಕಾದಲ್ಲಿದ್ದ ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಶ್ರೀಲಂಕಾದಲ್ಲಿ ಬಾಲ್ಯ ಕಳೆದು 15ನೇ ವಯಸ್ಸಲ್ಲಿ ಕೇರಳಕ್ಕೆ ವಲಸೆ ಬಂದರು. ಶಾಲೆಯಲ್ಲಿದ್ದಾಗಲೇ ನಟನೆ ಇವರಿಗೆ ಇಷ್ಟವಾಗಿತ್ತು. ಕೇರಳಕ್ಕೆ ಬಂದ ಹೊಸತರಲ್ಲೇ 'ಎರ್ನಾಕುಲಂ ಜಂಕ್ಷನ್' ಎಂಬ ಮಲಯಾಳದ ಚಿತ್ರದಲ್ಲಿ ನಟಿಸಿದರು.

    ಮುಂದೆ ಸುಜಾತಾ ಮಲಯಾಳದ 'ತಪಸ್ವಿನಿ' ಚಿತ್ರದಲ್ಲಿ ನಟಿಸಿದರು. ತಮಿಳಿನಲ್ಲಿ ಕೆ. ಬಾಲಚಂದರ್ ಅವರ ಪ್ರಸಿದ್ಧ 'ಅವಳ್ ಒರು ತೊಡರ್ ಕಥೈ' ಅವರ ಪ್ರಥಮ ತಮಿಳು ಚಿತ್ರ. ಮುಂದೆ ಬಾಲಚಂದರ್ ಅವರ ಮತ್ತೊಂದು ಪ್ರಸಿದ್ಧ 'ಅವರ್ಗಳ್' ಚಿತ್ರದಲ್ಲಿ ಆಕೆ ರಜನೀಕಾಂತ್ ಮತ್ತು ಕಮಲಹಾಸನ್ ಜೊತೆಗೆ ನಟಿಸಿದರು. ಇದಲ್ಲದೆ ಅಣ್ಣಕ್ಕಿಳಿ, ವಿಧಿ, ಮಯಂಗುಗಿರಾಳ್ ಒರು ಮಾದು, ಸೆಂತಮಿಯ್ ಪಾಟ್ಟು, ಅವಳ್ ವರುವಾಳಾ, ಗುಪ್ಪೇದು ಮನಸು ಮುಂತಾದವು ಅವರ ಪ್ರತಿಭೆಯನ್ನು ಬೆಳಗಿದ ಇನ್ನಿತರ ಚಿತ್ರಗಳು.

    ಸುಜಾತಾ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದರು. ಅವರು ಗ್ಲಾಮರ್ ಪಾತ್ರಗಳಿಗೆ ಹೆಚ್ಚು ಗಮನಹರಿಸದೆ ಉತ್ತಮ ಅಭಿನಯಕ್ಕೆ ಆಸ್ಪದವಿದ್ದ ಪಾತ್ರಗಳಿಗೇ ಗಮನವಿತ್ತರು. ಮುಂದೆ ಅವರು ಹಿರಿಯ ಪಾತ್ರಗಳಲ್ಲಿ ನಟಿಸಿದರು. ಕನ್ನಡದಲ್ಲಿ 'ನನ್ನ ದೇವರು', 'ತುತ್ತಾ ಮುತ್ತಾ', 'ಕಿಚ್ಚ', 'ನೀಲಕಂಠ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

    ಸುಜಾತಾ ಅವರಿಗೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯದ ಹಲವು ಪ್ರಶಸ್ತಿಗಳು ಮತ್ತು ಅನೇಕ ಫಿಲಂಫೇರ್ ಪ್ರಶಸ್ತಿಗಳು ಸಂದಿದ್ದವು.

    ಹೃದಯ ಶಸ್ತ್ರಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸುಜಾತಾ 2011ರ ಏಪ್ರಿಲ್ 6ರಂದು ಅನಿರೀಕ್ಷಿತ ರೀತಿಯಲ್ಲಿ ನಿಧನರಾದರು. ಸಂಯಮದ ಪಾತ್ರಗಳನ್ನೇ ಆಯ್ದುಕೊಂಡರೂ ಬೇಡಿಕೆ ಮತ್ತು ಜನಪ್ರಿಯತೆಗಳನ್ನು ನಿರಂತರವಾಗಿ ಕಾಯ್ದುಕೊಂಡ ಸುಜಾತ ನೆನಪಲ್ಲುಳಿಯುವ ಆಪ್ತ ಪ್ರತಿಭೆ.

ಮಾಹಿತಿ ಕೃಪೆ : ಕನ್ನಡ ಸಂಪದ ಫೇಸ್ಬುಕ್ ಲೇಖನ

Post a Comment

0Comments

Please Select Embedded Mode To show the Comment System.*