Episode (ಸಂಚಿಕೆ) – 3

SANTOSH KULKARNI
By -
0

 ಹೀಗೆ ಸಮಯ ಸಾಧಕನಾಗಿ ಬಂದಿದ್ದ ಉತ್ತಂಕನು ಜನಮೇಜಯನನ್ನು ಉದ್ದೇಶಿಸಿ “ಮಹಾರಾಜಾ, ಈ ತಕ್ಷಕ ನನಗೆ ವಿನಾ ಕಾರಣ ಅಪಕಾರ ಎಸಗಿದ್ದಾನೆ. ಈತನು ನನಗಷ್ಟೇ ಅಲ್ಲದೆ ಚಂದ್ರವಂಶಕ್ಕೂ ಘೋರ ಅನ್ಯಾಯವೆಸಗಿದ್ದಾನೆ. ಪ್ರಸ್ತುತ ಕೀರ್ತಿಶೇಷರಾಗಿರುವ ನಿಮ್ಮ ಪಿತಾಶ್ರೀ ಮಹಾರಾಜ ಪರೀಕ್ಷಿತರ ಸಾವಿಗೆ ಕಾರಣ ಇದೇ ತಕ್ಷಕ. ಆ ಕುರಿತಾದ ನಿಜ ವೃತ್ತಾಂತ ನಿಮಗೆ ತಿಳಿದಿದೆಯೇ” ಎಂದು ಪ್ರಶ್ನಿಸಿದನು.

ಆಗ ಜನಮೇಜಯ ಶಾಂತಚಿತ್ತನಾಗಿಯೆ ಇದ್ದು ತನ್ನ ತಂದೆಯ ಮರಣ ಕಾರಣದ ಕಥೆಯನ್ನು ತಾನು ಕೇಳಿ ತಿಳಿದಂತೆ ವಿವರಿಸಲು ಆರಂಭಿಸುತ್ತಾನೆ. “ಅಯ್ಯಾ ಸ್ನಾತಕನೇ, ನನ್ನ ತಂದೆಯ ಮರಣ ಕಾರಣವನ್ನು ಸಾಕಷ್ಟು ವಿವರವಾಗಿ ಕೇಳಿ ತಿಳಿದಿದ್ದೇನೆ. ಹಿಂದೊಮ್ಮೆ ಅವರು ಬೇಟೆಗಾಗಿ ಕಾನನ ಸೇರಿದ್ದರಂತೆ.

ಆ ಸಮಯದಲ್ಲಿ ಮೃಗವೊಂದನ್ನು ಬೆನ್ನಟ್ಟುತ್ತಾ ಶರವೇಗದಲ್ಲಿ ಬಹುದೂರ ಸಾಗಿ ಹೋಗುವ ಸ್ಥಿತಿ ನಿರ್ಮಾಣವಾಗಿತ್ತಂತೆ. ತನ್ನ ರಕ್ಷಕ ಪರಿವಾರ, ಬೆಂಗಾವಲು ಪಡೆಗಳಿಂದ ಬೇರ್ಪಟ್ಟು ಏಕಾಂಗಿಯಾಗಿ ಬಿಟ್ಟರಂತೆ. ಈ ಸಂದರ್ಭ ದಣಿವು ಬಳಲಿಕೆಗೆ ತುತ್ತಾಗಿದ್ದ ಸಮಯ, ತಾನಿರುವ ಕಾನನ ಪ್ರದೇಶದಲ್ಲಿ ಅವರಿಗೆ ಶಮೀಕ ಮಹರ್ಷಿಗಳ ಆಶ್ರಮ ಕಾಣಿಸಿತಂತೆ.

ಆಯಾಸಗೊಂಡು ವಿಶ್ರಾಂತಿಗಾಗಿ ಆಶ್ರಮದ ಬಳಿ ಸಾಗಿದರಂತೆ. ಆಗ ಅಲ್ಲಿ ಶಮೀಕ ಮಹರ್ಷಿಗಳು ಅಂತರ್ಮುಖಿಗಳಾಗಿ ತಪೋ ನಿರತರಾಗಿದ್ದರಂತೆ. ತನ್ನ ಆಶ್ರಮಕ್ಕೆ ಆಗಮಿಸಿದ ಮಹಾರಾಜ ಕಾಯುತ್ತಾ ನಿಂತರೂ, ಋಷಿವರನನ್ನು ಎಚ್ಚರಿಸುವ ಯತ್ನಗೈದರೂ ಅರಿವಿಗೆ ಬಾರದೆ ತಪಸ್ಸಿನಲ್ಲೇ ನಿರತರಾಗಿದ್ದರಂ

ಹೀಗಿರಲು ಬಳಲಿಕೆ, ಆಯಾಸದಿಂದ ಮೊದಲೇ ನಿಸ್ತೇಜನಾಗಿದ್ದ ಮಹಾರಾಜರಿಗೆ ತನ್ನ ದಣಿವು ಸಹನೆ ಮೀರುವಂತೆ ಮಾಡಿ ಕ್ರೋಧವಾಗಿ ಪರಿವರ್ತನೆಗೊಂಡಿತೋ ಏನೋ! ಸಂಯಮಚಿತ್ತ ವಿಚಲಿತಗೊಂಡು ವಿವೇಚನಾಶೂನ್ಯನಾಗಿ ಅಲ್ಲೇ ಆಶ್ರಮ ಪ್ರದೇಶದ ಪಕ್ಕದಲ್ಲಿ ಕಳಚಿ ಬಿದ್ದಿದ್ದ ಹಾವಿನ ಪೊರೆಯನ್ನು ಶಮೀಕ ಮಹರ್ಷಿಗಳತ್ತ ಬಾಣದ ತುದಿಯಿಂದ ಬೀಸಿ ಎಸೆದರಂತೆ. ಪರೀಕ್ಷಿತ ಮಹಾರಾಜನಿಂದ ಎಸೆಯಲ್ಪಟ್ಟ ಹಾವಿನ ಪೊರೆ ಶಮೀಕ ಮಹರ್ಷಿಗಳ ಕತ್ತಿನ ಸುತ್ತ ಹಾರದೋಪಾದಿಯಲ್ಲಿ ಸುತ್ತಿಕೊಂಡಿತಂತೆ.

ಆಗಲೂ ಎಚ್ಚರಗೊಳ್ಳಲಿಲ್ಲ ಶಮೀಕ ಮಹರ್ಷಿಗಳು. ಇನ್ನು ಇಲ್ಲಿ ನಿಂತು ಕಾಯುವುದು ನಿಷ್ಪ್ರಯೋಜಕವೆಂದು ಆಶ್ರಮವನ್ನು ತೊರೆದು ಪರೀಕ್ಷಿತ ಮಹಾರಾಜರು ಮರಳಿ ಹಸ್ತಿನಾವತಿಗೆ ಹಿಂದಿರುಗಿದರಂತೆ. ಇದೆಲ್ಲಾ ನಡೆದು ಹೋದ ಬಳಿಕ ಶುನಕ ಮಹರ್ಷಿಗಳ ಮಗ, ಋಷಿಯಾದ “ಶೃಂಗಿ” ತಾನು ಹೋಗಿರುವ ಕಾರ್ಯ ಪೂರೈಸಿ ಮರಳಿ ಆಶ್ರಮಕ್ಕೆ ಬಂದರಂತೆ.

ಆಗ ತಪೋ ನಿರತರೇ ಆಗಿರುವ ತನ್ನ ಪಿತ ಮಹರ್ಷಿ ಶುನಕರ ಕೊರಳ ಹಾರವಾಗಿ ಸರ್ಪದ ಪೊರೆ ಇರುವುದನ್ನು ಕಂಡು ಕೆಂಡಾಮಂಡಲವಾಗುವ ಕೋಪ ಆವರಿಸಿತಂತೆ. ಆ ಕ್ರೋಧಾಗ್ನಿ ಮಹಿಮಾನ್ವಿತ ಋಷಿಕುಮಾರ ಶೃಂಗಿಯ ಬಾಯಿಯಿಂದ ಶಾಪ ವಾಕ್ಯವಾಗಿ ಹೊರಬಂದೆ ಬಿಟ್ಟಿತಂತೆ! “ತಪೋನಿರತ ಮಹರ್ಷಿಗೆ ಅಪಚಾರ ಎಸಗಿದವನು ಇಂದಿನಿಂದ ಏಳು ದಿನಗೊಳಗಾಗಿ ನಾಗ ಸಂಕುಲದ ತಕ್ಷಕನಿಂದ ಕಡಿದು ಕಚ್ಚಿ ಕೊಲ್ಲಲ್ಪಡಲಿ” ಎಂಬುದಾಗಿ ಇತ್ತಂತೆ ಆ ಶಾಪವಾಕ್ಯ.

ಇದೆಲ್ಲವೂ ಘಟಿಸಿ ಹೋದ ಬಳಿಕ ತಪೋನಿರತರಾಗಿದ್ದ ಶಮೀಕ ಮಹರ್ಷಿಗಳು ಬಹಿರ್ಮುಖರಾಗಿ ಪ್ರಸನ್ನತೆಯಿಂದ ಕಣ್ತೆರೆದರಂತೆ. ಆ ಸಮಯದಲ್ಲಿ ಅಲ್ಲೇನೋ ಘೋರತರ ಕೃತಿ ನಡೆದಿದೆ ಎಂದು ಅವರಿಗೆ ಭಾಸವಾಯಿತಂತೆ. ತಕ್ಷಣ ನಡೆದು ಹೋಗಿರಬಹುದಾದ ವೃತ್ತಾಂತವನ್ನು ದಿವ್ಯ ದೃಷ್ಟಿಯಿಂದ ಅರಿತುಕೊಂಡರಂತೆ. ತನ್ನ ಮಗನಾದ ಶೃಂಗಿಯನ್ನು ಕರೆದು ಅಯ್ಯೋ ಮಗನೇ, ಏನು ಮಾಡಿಬಿಟ್ಟೆ? ರಾಜ ಒಂದೊಮ್ಮೆಗೆ ತಪ್ಪೆಸಗಿದರೂ ಆತ ಧರ್ಮಾತ್ಮನಿದ್ದಾನೆ.

ಆತನ ಸಾವು ಲೋಕಕ್ಕೆ ಮಾರಕವಾದೀತು ಎಂದು ಹೇಳುತ್ತಾ ಮರುಗಿದರಂತೆ. ಪರಿಹಾರ ಮಾರ್ಗವೇನೆಂದು ಯೋಚಿಸಿ, ತನ್ನ ಶಿಷ್ಯರಲ್ಲೊಬ್ಬನಾದ ಗೌರಮುಖನನ್ನು ಕರೆದರಂತೆ. ತನ್ನ ಮಗ ಶೃಂಗಿ ಪರೀಕ್ಷಿತ ರಾಜನಿಗಿತ್ತ ಶಾಪದ ಕುರಿತಾಗಿ ಅರುಹಿದರಂತೆ. ಈ ಕೂಡಲೆ ಹಸ್ತಿನೆಗೆ ತೆರಳಿ ಶಾಪ ವಿಚಾರ ಅರಸನಿಗೆ ತಿಳುಹಬೇಕು. 

ಜಾಗೃತನಾಗಿ ಏಳುದಿನ ಕಳೆಯುವಂತೆ, ಬೇಕು ಬೇಕಾಗಬಹುದಾದ ಪರಿಮಾರ್ಜನೆ, ನಾಗ ದಿಗ್ಬಂಧನಾದಿಗಳನ್ನು ಮಾಡಿ ಕಟ್ಟೆಚ್ಚರದಿಂದ ಏಳು ಹಗಲು ರಾತ್ರಿಗಳನ್ನು ಕಳೆಯುವಂತೆ ಸೂಚಿಸಿ ಬರಲು ಹೇಳಿ ಕಳುಹಿಸಿದರಂತೆ.

ಅಂತೆಯೇ ಗೌರಮುಖನಿಂದ ಸತ್ಯವರಿತ ಪರೀಕ್ಷಿತ ಮಹಾರಾಜ ಚಿಂತಾಕ್ರಾಂತನಾಗಿ ಸಾಧಕ ಹಾದಿಯ ವಿವೇಚನೆಗೈದು ಮಂತ್ರಿಗಳು, ಪುರೋಹಿತರೊಡನೆ ಸಮಾಲೋಚನೆ ನಡೆಸಿದರಂತೆ. ಹಾಗೆ ಕಂಡು ಕೊಂಡ ಮಾರ್ಗವಾಗಿ ಒಂದೇ ಕಂಬವುಳ್ಳ ಎತ್ತರವಾದ ಮಂಟಪವೊಂದನ್ನು ಕಟ್ಟಿಸಿ ಸುತ್ತಲೂ ಮಹಾ ಮಾಂತ್ರಿಕರನ್ನೂ, ವಿಷ ವೈದ್ಯರನ್ನೂ ಕಾವಲಿರಿಸಿ, ಹರಿತಾಯುಧಗಳ ಸೈನಿಕರು, ಸರ್ಪ ಪ್ರವೇಶ ನಿರ್ಬಂಧಕ್ಕೆ ಅಗ್ನಿಯ ಆವರಣ, ಅದರೊಳಗೆ ಮಂತ್ರ ಪ್ರವೀಣರು, ಮಾಯಾ ವಿದ್ಯಾ ನಿಪುಣರನ್ನು ಒಳ ಆವರಣವಾಗಿ ಇರಿಸಲಾಯಿತಂತೆ.

ಹೀಗೆ ವ್ಯವಸ್ಥೆ ಮಾಡಿ ಯಾರಿಗೂ ಸಂದರ್ಶನ ನೀಡದೇ, ಏಕಾಂತವಾಗಿ ಏಳು ದಿನ ಕಳೆಯುವ ದೀಕ್ಷೆಗೈದು ಏಕಸ್ಥಂಭ ಮಂಟಪವೇರಿ ಬಹು ಸುತ್ತಿನ ಕಗ್ಗಾವಲಿನ ರಕ್ಷಣೆಯಿಂದ ಆವೃತರಾಗಿ ಕುಳಿತರಂತೆ.

ಇತ್ತ ಶಮೀಕ ಮಹರ್ಷಿಗಳು – ತಕ್ಷಕ ಪರೀಕ್ಷಿತ ಮಹಾರಾಜನನ್ನು ಕೊಲ್ಲುವಲ್ಲಿ ವಿಫಲನಾಗಲಿ, ಮಗ ಶೃಂಗಿಯ ಶಾಪ ಫಲಿಸದೇ ಹೋಗಲಿ, ಒಂದೊಮ್ಮೆಗೆ ಕಚ್ಚಿದರೂ ವಿಷವೇರದಂತೆ ವೈದ್ಯರೂ ಮಂತ್ರವಾದಿಗಳೂ ತಡೆಯುವಂತಾಗಲಿ ಎಂದು ಬಹುವಿಧದ ಶಾಂತಿ ತಂತ್ರಗಳನ್ನು, ಹವನಗಳನ್ನು ವಿರಚಿಸುತ್ತಾ ದೇವಾನು ದೇವತೆಗಳನ್ನು ಪ್ರಾರ್ಥಿಸಿ ಹರಸುತ್ತಿದ್ದರಂತೆ.

Post a Comment

0Comments

Please Select Embedded Mode To show the Comment System.*