ಶಮೀಕ ಮಹರ್ಷಿಗಳ ಹಾರೈಕೆಯೋ, ಪರೀಕ್ಷಿತ ಮಹಾರಾಜರ ಜಾಗ್ರತೆಯೋ ಆರು ದಿನಗಳ ಕಾಲ ಕಳೆದು ಏಳನೆಯ ದಿನ ಸೂರ್ಯೋದಯವಾಯಿತು. ಇಂದಿನ ಒಂದು ದಿನ ಕಳೆದರೆ ಶಾಪದ ವಾಯಿದೆ ಮುಗಿಯಲಿದೆ ಎಂದು ಸೂರ್ಯಾಸ್ತಮಾನಕ್ಕಾಗಿ ಕಾಯುತ್ತಿದ್ದರು. ಆದರೆ ಏಳನೆಯ ದಿನ ಅದು ಹೇಗೆ ಏನಾಯಿತೋ ಶೃಂಗಿಯ ಶಾಪ ವಾಕ್ಯದಂತೆ ನನ್ನ ಪಿತ ತಕ್ಷಕನಿಂದ ಕಚ್ಚಲ್ಪಟ್ಟು ಮರಣ ಹೊಂದುವಂತಾಯಿತು.
ಹೀಗಾಗಿ ಹೋಗುವಲ್ಲಿ ನನ್ನ ಅಪ್ಪನಿಂದಾದ ಅಚಾತುರ್ಯ ಮತ್ತು ಶೃಂಗಿಯ ಶಾಪವೇ ಪ್ರಧಾನ ಕಾರಣ. ತಕ್ಷಕ ಕೇವಲ ನಿಮಿತ್ತ ಮಾತ್ರವಾಗಿ ಗೋಚರಿಸುತ್ತಾನೆ ಎಂದು ಮಹಾರಾಜ ಜನಮೇಜಯ ತನ್ನ ತಂದೆಯ ಅಂತ್ಯವಾದ ಸಮಗ್ರ ವೃತ್ತಾಂತವನ್ನು ಉತ್ತಂಕನಿಗೆ ವಿವರಿಸಿದನು.
ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಉತ್ತಂಕ “ಮಹಾರಾಜ ಜನಮೇಜಯ, ನೀನು ಈಗ ಹೇಳಿರುವ ವಿಚಾರದಲ್ಲಿ ಯಾವುದೂ ಸುಳ್ಳಲ್ಲ. ಸತ್ಯವೇ ಹೌದಾದರೂ ಪ್ರಕರಣ ಅರ್ಧಾಂಶವನ್ನಷ್ಟೇ ನೀನು ತಿಳಿದಿರುವೆ. ಪೂರ್ಣ ಕಥೆ ನೀನು ತಿಳಿಯಬೇಕಾಗಿದೆ. ಮಾತ್ರವಲ್ಲ ಅದು ಸತ್ಯ ಹೌದೋ ಅಲ್ಲವೋ ಎಂದು ವಿಮರ್ಶಿಸಿ ಖಚಿತ ಪಡಿಸಬೇಕು. ನೀನು ಕೇಳಿ ತಿಳಿದಿರುವಂತೆ ಎಲ್ಲವೂ ಸರಿಯಾಗಿಯೇ ಇದೆ. ನಿನ್ನ ಅಪ್ಪನಾದ ಪರೀಕ್ಷಿತ ಮಹಾರಾಜ ಸುಭದ್ರ ರಕ್ಷಣೆಯಲ್ಲಿ ಏಕಸ್ಥಂಭ ಗೋಪುರದಲ್ಲಿ ವಾಸವಾಗಿರುವಾಗ ತನ್ನ ರಕ್ಷಣೆಗಾಗಿ ನಾಗಸಂಕುಲದಿಂದ ರಕ್ಷಿಸಬಲ್ಲ ಮಹಾಮಾಂತ್ರಿಕರು, ವಿಷ ವೈದ್ಯರಿಗೆ ಧನ, ಕನಕಾದಿ ಬಹುಮೂಲ್ಯ ಸುವಸ್ತುಗಳನ್ನೀಯುವ ಪ್ರಚಾರ ಮಾಡಿಸಿದ್ದರು.
ಅದರಂತೆ ನೆರೆ ದೇಶಗಳಿಂದಲೂ ಅಂತಹ ಸಾಮರ್ಥ್ಯವುಳ್ಳ ಪ್ರವೀಣರು ಬಂದು ಹಸ್ತಿನೆ ಸೇರಿದ್ದರು. ಹೀಗಿರಲು ಸುದ್ದಿ ತಿಳಿದ ಕಾಶ್ಯಪ ಎಂಬ ಮಹಾ ಮಾಂತ್ರಿಕನೊಬ್ಬ ರಾಜ ಪರೀಕ್ಷಿತನ ಸಹಾಯಕ್ಕೆ ಒದಗಿ ಮಹಾರಾಜ ಪರೀಕ್ಷಿತನಿಂದ ಬಹುಮಾನ ದ್ರವ್ಯಗಳನ್ನು ಗಳಿಸುವ ಇರಾದೆಯಿಂದ ಹಸ್ತಿನೆಗೆ ಹೊರಟು ಬರುತ್ತಿದ್ದನು. ಅದೇ ಸಮಯದಲ್ಲಿ ಪರೀಕ್ಷಿತನನ್ನು ಶಾಪ ವಾಕ್ಯದಂತೆ ಕಚ್ಚಿ ಕೊಲ್ಲಲು ತಕ್ಷಕನೂ ಬರುತ್ತಿದ್ದನು. ರಕ್ಷಣೆ ಒದಗಿಸಲು ಬರುವ ಕಾಶ್ಯಪ ಕೊಲ್ಲಲು ಬರುವ ತಕ್ಷಕ ಅನಿರೀಕ್ಷಿತವಾಗಿ ದಾರಿ ಮಧ್ಯೆ ಮುಖಾಮುಖಿಯಾಗಿ ಮಾತನಾಡಿಕೊಂಡರು.
ಕಾಶ್ಯಪನ ಬಗ್ಗೆ, ಆತನ ಶಕ್ತಿಯ ಬಗ್ಗೆ ತಿಳಿದುಕೊಂಡ ತಕ್ಷಕ ಪರೀಕ್ಷಿಸಲು ಮುಂದಾದನು. ವಿಷವೈದ್ಯನೂ, ಮಂತ್ರಸಿದ್ಧಿಯುಳ್ಳವನೂ ಆದ ಕಾಶ್ಯಪನ ಶಕ್ತಿಗೆ ಸವಾಲೆಸೆದನು. ಪಕ್ಕದಲ್ಲಿದ್ದ ಹೆಮ್ಮರವೊಂದನ್ನು ಕಚ್ಚಿದರೆ ವಿಷದುರಿಗೆ ಮರ ಕರಟಿ ಕರಕಲಾದೀತು. ನೀನು ಅದರ ವಿಷದುರಿ ನಿವಾರಿಸಿ ಮತ್ತೆ ಸಜೀವಗೊಳಿಸಬಲ್ಲೆಯಾ? ಎಂದು ಪಂಥಾಹ್ವಾನ ನೀಡಿದನು. ಆಗ ಕಾಶ್ಯಪ ಒಪ್ಪಿ ಪಣಕ್ಕೆ ಸಿದ್ಧನಾದನು. ತಕ್ಷಕ ಆಡಿದಂತೆಯೇ ಹೆಮ್ಮರವನ್ನು ಕಚ್ಚಿ ತನ್ನ ವಿಷಜ್ವಾಲೆ ಸ್ಫುರಿಸಿದಾಗ ಮರ ಕರಟಿ ಮಸಿಯಂತಾಯಿತು. ಅದನ್ನು ನೋಡುತ್ತಿದ್ದ ಕಾಶ್ಯಪ ತಕ್ಷಣ ಮಂತ್ರೋದಕ ಚಿಮುಕಿಸಿ ಮರವನ್ನು ಮರಳಿ ಯಥಾಸ್ಥಿತಿಗೆ ತಂದನು. ಈಗ ತಕ್ಷಕನಿಗೆ ಕೊಲ್ಲುವವನಾದ ನನಗಿಂತ ರಕ್ಷಿಸುವವನಾದ ಈತ ಬಲಶಾಲಿ ಇದ್ದಾನೆಂದು ಸ್ಪಷ್ಟವಾಯಿತು.
ಈತನನ್ನು ಮುಂದುವರಿಯಲು ಬಿಟ್ಟರೆ ತನ್ನ ಕಾರ್ಯವಾದ ಪರೀಕ್ಷಿತನ ಕೊಲೆಗೆ ತಡೆಯೊಡ್ಡಬಲ್ಲನೆಂದು ತರ್ಕಿಸಿ ಯೋಚಿಸಿ ಉಪಾಯವೊಂದನ್ನು ಹೂಡಿದನು. ಸಂಪತ್ತಿನ ಆಸೆಯುಳ್ಳ ಕಾಶ್ಯಪನಿಗೆ ಹೇರಳ ನವರತ್ನ ಮಾಣಿಕ್ಯಾದಿ ಅನರ್ಘ್ಯ ದ್ರವ್ಯಗಳ ನಿಧಿಯನ್ನಿತ್ತು ಮಾನಿಸಿದನು. ಆಗ ದ್ರವ್ಯದಾಸೆಗೆ ಬಿದ್ದು ಸಂತುಷ್ಟನಾದ ಕಾಶ್ಯಪ ತಾನು ಬಂದಿರುವ ಉದ್ದೇಶಿತ ಕಾರ್ಯವನ್ನು ಕೈ ಬಿಟ್ಟು ತಕ್ಷಕನಿತ್ತ ಅಪಾರ ನಿಧಿಯೊಂದಿಗೆ ಹಿಂದುರುಗಿದನು.
ಹೀಗೆ ತನಗೆ ಸವಾಲಾಗಬಹುದಾಗಿದ್ದ ವಿಷ ವೈದ್ಯ ಮಹಾಮಾಂತ್ರಿಕನ್ನು ಹಿಂದಿರುಗಿಸಿ ಆಗುವಾಗ ಹೊತ್ತು ಮೀರಿ ಹೋಗುತ್ತಿತ್ತು. ಮಿತ ಸಮಯ ಉಳಿದಿರುವುದನ್ನು ಅರಿತ ತಕ್ಷಕ ತನ್ನ ಪರಿವಾರದ ಕೆಲವರನ್ನು ಸೇರಿಸಿಕೊಂಡು ಪರೀಕ್ಷಿತನಿರುವ ಏಕ ಸ್ತಂಭ ಮಂಟಪದ ಮಂದಿರದೆಡೆ ಬಂದನು. ಆದರೆ ರಕ್ಷಾ ಕೋಟೆಯನ್ನು ಕ್ರಮಿಸಿ ಮುಂದುವರಿಯಲಾಗಲಿಲ್ಲ. ತನ್ನ ಸಂಗಡಿಗರನ್ನು ಬ್ರಾಹ್ಮಣ ಕುಲೋತ್ತಮರಾಗಿ ಕಾಣಿಸುವಂತೆ ರೂಪಾಂತರಗೊಳಿಸಿದನು.
ಪರೀಕ್ಷಿತ ರಾಜನ ಶ್ರೇಯಸ್ಸಿಗೆ ಪ್ರಾರ್ಥಿಸುತ್ತಾ ಗುಣಗಾನ ನಿರತರಾಗಿ ಬಂದಿರುವ ವೈದಿಕ ಕರ್ಮಿಗಳಾದ ಬ್ರಹ್ಮ ಕುಲಸಂಜಾತರು, ನಿರಂತರ ಪ್ರಾರ್ಥನೆ, ಹಾರೈಕೆ, ಭಗವತ್ ನಾಮಾವಳಿಗಳ ಉಚ್ಚಾರಣೆ, ಸಾತ್ವಿಕ ಭಕ್ತಿಯ ರೂಪಗಳನ್ನು ಕಾವಲು ಭಟರು ಗಮನಿಸಿದಾಗ ಅವರಿಗೆ ಸಂದೇಹ ಮೂಡಲಿಲ್ಲ. ಬದಲಾಗಿ ಗೌರವ ವಿಶ್ವಾಸ ದೃಢವಾಯಿತು.
ಆ ಹೊತ್ತಿಗೆ ಸೂರ್ಯಾಸ್ತಮಾನ ಕಾಲವೂ ಸನ್ನಿಹಿತವಾಗಿತ್ತು. ಅರಸನ ಅಪಾಯ ದೂರವಾಗುವ ಕ್ಷಣ ಬಂದಾಗಿದೆ, ಸಂಭ್ರಮ ಸಂತೋಷ ಎಲ್ಲೆಡೆ ಚಿಗುರೊಡೆದಿದೆ. ಬಂದಿರುವ ಶ್ರೇಯೋಭಿಲಾಷಿಗಳ ಬ್ರಾಹ್ಮಣ್ಯಕ್ಕೆ ವಿಧೇಯರಾಗಿ ಅವರ ಪ್ರವೇಶಕ್ಕೆ ರಕ್ಷಣೆಗೆ ನಿಂತ ಸೇನೆಯ ಪ್ರಮುಖರು ಅನುಮತಿ ನೀಡಿದರು.
ಸೂಕ್ಷ್ಮ ಮತಿಯಾದ ಮಹಾರಾಜ ಎಡವಿದ್ದು ಇಲ್ಲಿಯೇ! ಪರೀಕ್ಷಿಸುವ ಅದ್ಬುತ ಶಕ್ತಿಯನ್ನು ಜನ್ಮದಿಂದಲೇ ಹೊಂದಿ ಬಂದವನು ಪರೀಕ್ಷಿತ ಮಹಾರಾಜ. ಅರ್ಜುನನ ಮಗನಾದ ಅಭಿಮನ್ಯು ಮತ್ತು – ಉತ್ತರೆಯರ ದಾಂಪತ್ಯ ಫಲವಾಗಿ ಗರ್ಭಾಂಬುಧಿಯಲ್ಲಿ ಮೂಡಿದವನು ಮಹಾರಾಜ ಪರೀಕ್ಷಿತ.
ಉತ್ತರೆ ಗರ್ಭಿಣಿಯಾಗಿರುವಾಗ ಮಹಾಭಾರತ ಯುದ್ಧ ಹದಿನೆಂಟು ದಿನಗಳ ಕಾಲ ಸಾಗಿ ಮುಕ್ತಾಯದ ಹಂತಕ್ಕೆ ಬಂದಿತ್ತು. ಆ ಕ್ಷಣದಲ್ಲಿ ಗುರು ದ್ರೋಣರ ಪುತ್ರ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ಉತ್ತರೆಯ ಗರ್ಭಕ್ಕೆ ಗುರಿಯಾಗಿ ಪ್ರಯೋಗಿಸಿ ಪಾಂಡವರ ವಂಶದ ಕುಡಿಯನ್ನು ನಾಶಗೈಯುವ ಪ್ರಯತ್ನ ಮಾಡಿದ್ದರು. ಆದರೆ ಕೃಷ್ಣ ಪರಮಾತ್ಮ ಸುದರ್ಶನ ಚಕ್ರದ ಮುಖೇನ ಗರ್ಭಸ್ಥ ಶಿಶುವನ್ನು ಬ್ರಹ್ಮಾಸ್ತ್ರದಿಂದ ರಕ್ಷಿಸಿದ್ದ.
ಈ ವಿಪತ್ತಿನಲ್ಲಿ ತನ್ನನ್ನು ರಕ್ಷಿಸುವ ದಿವ್ಯ ಚೇತನವಿದಾವುದು ಎಂದು ಉತ್ತರೆಯ ಗರ್ಭದೊಳಗಿಂದಲೇ ಪರೀಕ್ಷಿಸಿದ್ದರಿಂದ ಜನಿಸದ ನಂತರ ಪರೀಕ್ಷಿತನೆಂಬ ನಾಮಧೇಯಕ್ಕೆ ಕಾರಣವಾಗಿತ್ತು. ಅಥವಾ ಹರಿಯಿಂದ ರಕ್ಷಿತನಾದವ ಹರಿ ರಕ್ಷಿತ ಪರೀಕ್ಷಿತ ಎಂಬ ಅಭಿದಾನ ಪ್ರಾಪ್ತವಾಗಿತ್ತು ಎಂದು ನಂತರ ತಿಳಿದ ವಿಚಾರ. ಎಳವೆಯಲ್ಲಿದ್ದ ಸೂಕ್ಷ್ಮ ಪರೀಕ್ಷಾ ಜ್ಞಾನ ಈಗ ಬಂದೊದಗಿದ ಇಂತಹ ವಿಷಮ ಸ್ಥಿತಿಯಲ್ಲಿ ಹೇಗೆ ಮಂಕಾಯಿತೋ! ಬ್ರಾಹ್ಮಣರ ರೂಪದೊಳಗಿನ ಕಪಟವನ್ನು ಪರೀಕ್ಷಿಸಿ ಅರಿಯುತ್ತಿದ್ದರೆ ಅಪಾಯವಾಗುತ್ತಿರಲಿಲ್ಲ.
ದೇವರನ್ನು, ರಾಜನನ್ನು, ಶಿಶು ಮತ್ತು ರೋಗಿಯನ್ನು ಕಾಣಲು ಹೋಗುವಾಗ ಫಲ/ಕಾಣಿಕೆ ಕೊಂಡೊಯ್ಯುವುದು ಔಚಿತ್ಯ. ಅಂತೆಯೇ ಬ್ರಾಹ್ಮಣರು ತಂದಿದ್ದ ಫಲದ ಮಧ್ಯೆ ಅಷ್ಟ ಸಿದ್ಧಿ ಬಲ್ಲ ತಕ್ಷಕ ಕ್ರಿಮಿಯೋಪಾಧಿಯಲ್ಲಿ ಅಣಿಮಾ ಸಿದ್ಧಿಯಿಂದ ಅಣು ರೂಪದಲ್ಲಿ ಅಗೋಚರನಾಗಿ ಅವಿತು ಕುಳಿತಿದ್ದ. ದುಷ್ಕೃತ್ಯ ಮಾಡುವುದೇ ಸಣ್ಣತನ ಅಲ್ಲಿಯೂ ತಕ್ಷಕ ಅತೀ ಸಣ್ಣವನಾಗಿ ಅಡಗಿದ್ದ.
ಶಾಪದ ಅವಧಿ ಮುಗಿಯುತ್ತಾ ಬಂದಿದ್ದರಿಂದ ಬ್ರಾಹ್ಮಣರಿತ್ತ ಕದಳಿ ಫಲ ಸ್ವೀಕರಿಸುವಲ್ಲಿ ನಿಸ್ಸಂದೇಹ ಮತಿಯಿಂದ ಹರ್ಷಭಾವ ಹೊಂದಿ ವಿವೇಕವನ್ನು ಕೊನೆ ಗಳಿಗೆಯಲ್ಲಿ ಮರೆತು ಬಿಟ್ಟಿದ್ದನು. ಬ್ರಾಹ್ಮಣರಿತ್ತ ಪ್ರಸಾದಕ್ಕೆ ಕೈ ಚಾಚಿ, ಫಲವನ್ನು ಸ್ವೀಕರಿಸಿ ಸೇವಿಸುವುದಕ್ಕಾಗಿ ಮುಖದೆಡೆಗೆ ತಂದಾಗ ತಕ್ಷಕ ನಿಜರೂಪ ಧರಿಸಿ ವಿಷ ಜ್ವಾಲಮುಖಿಯಾಗಿ ತಟ್ಟನೆ ನೆಗೆದು ಕಚ್ಚಿಯೇ ಬಿಟ್ಟನು.
ಆತನ ಅದ್ಬುತ ವೇಗ, ವಿಷದ ತೀಕ್ಷ್ಣತೆ ರಾಜನಿಗೆ ಅವಸಾನ ಒದಗಿಸಿತ್ತು. ವಿಷ ಜ್ವಾಲೆಗೆ ಮಂಟಪವೇ ಕರಟಿ ಕಮರಿತ್ತು. ವಿಷ ವೈದ್ಯರು, ಮಾಂತ್ರಿಕರು ಕೈಸೋತು ಹೋದರು. ಕಾಲ ಮಿಂಚಿ ಹೋಗುವ ಮುನ್ನವೇ ತಕ್ಷಕ ಕಾರ್ಯ ಪೂರೈಸಿದ್ದ. ಶಮೀಕ ಮಹರ್ಷಿಯ ಪುತ್ರ ಋಷಿ ಶೃಂಗಿಯ ಶಾಪವನ್ನು ಹಠ ಹಿಡಿದ ತಕ್ಷಕ ನಿಜವಾಗಿಸಿಯೆ ಬಿಟ್ಟಿದ್ದನು.