ವಾಸುಕಿಯ ಆಜ್ಞೆಯನ್ನು ಶಿರೋಧಾರ್ಯವೆಂದು ಸ್ವೀಕಾರ ಮಾಡಿ ಹೊರಟಿದ್ದಾನೆ ಈ *ಆಸ್ತಿಕ.* ಇವನು ನರರಿಗೂ (ಮನುಷ್ಯರಿಗೆ) ನಾಗರಿಗೂ ಸಮಾನ ಬಂಧು. ವಾಸುಕಿಯ ಅಳಿಯನಾದ ಈ ಆಸ್ತಿಕನ ಹುಟ್ಟಿನ ಹಿನ್ನೆಲೆಯೆ ಒಂದು ಕೌತುಕ.
ಹಿಂದೆ “ಯಾಯಾವರ” ಎಂಬ ಋಷಿಗಳ ಸಂತತಿಯಲ್ಲಿ “ಜರತ್ಕಾರು” ಎಂಬ ಓರ್ವನೆ ಓರ್ವ ಋಷಿ ಉಳಿದಿದ್ದನು. ಉಳಿದ ಸಂತತಿ ಅಳಿದು ಹೋಗಿತ್ತು. ಅಂದರೆ ಜರತ್ಕಾರು ಈ ಯಾಯಾವರ ಸಂತತಿಗೆ ಆ ಕಾಲದಲ್ಲಿ ಜೀವಸಹಿತ ಇದ್ದ ಏಕೈಕ ನರ. ಅವನು ಅಖಂಡ ಬ್ರಹ್ಮಚಾರಿಯಾಗಿ ತಪೋ ನಿರತನಾಗಿದ್ದನು. ಹೀಗಿರಲು ಧ್ಯಾನಾವಸ್ಥೆಯಿಂದ ಬಹಿರ್ಮುಖನಾಗಿ ಎಚ್ಚರಗೊಂಡು ಕಾಡಿನಲ್ಲಿ ಸಂಚರಿಸುವಾಗ ತನ್ನ ಪಿತೃಗಳು ಅಂದರೆ ಹಿರಿಯರು ಬಾಳಿ ಬದುಕಿ ಅಳಿದವರು ಮೋಕ್ಷ ಸಿಗದೆ ಪಿಶಾಚಿಗಳಾಗಿ ಜೋತುಬಿದ್ದಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡರು.
ಅವರ ಆ ಹೀನಾಯ ಸ್ಥಿತಿಗೆ ಕಾರಣ ಈ ಜರತ್ಕಾರು ಎಂದು ಅವರಿಂದ ಆರೋಪಿಸಲ್ಪಟ್ಟನು. ಯಾಕೆಂದರೆ ಮದುವೆಯಾಗಿ ವಂಶೋದ್ದಾರ ಮುಖೇನ ಪಿತೃ ಶ್ರಾದ್ಧಾದಿ ಸದ್ಗತಿಗಳನ್ನು ಮಾಡದೇ ತಮ್ಮ ವಂಶಸ್ಥ ಉಳಿದ ಪರಿಣಾಮವೇ ಹಿರಿಯರಾದ ಪಿತೃಗಳಿಗೆ ಈ ಸ್ಥಿತಿ ಒದಗಿತ್ತು. ಹಾಗಾಗಿ ಜರತ್ಕಾರು ಮದುವೆಯಾಗಿ ಸಂತಾನ ಪಡೆದು ಪಿತೃಗಳನ್ನು ಉದ್ದರಿಸಬೇಕೆಂದು ಅವರೆಲ್ಲರು ಕೇಳಿಕೊಂಡು ವಂಶೋದ್ದಾರದ ನಿರ್ದೇಶನವಿತ್ತರು.
ಅವರ ಮಾತು ಪೂರ್ತಿಯಾಗಿ ಕೇಳಿಸಿಕೊಂಡು ತಪಸ್ಸಿನಲ್ಲಷ್ಟೆ ಆಸಕ್ತಿ ಹೊಂದಿದ್ದ, ಸಾಂಸಾರಿಕ ಬದುಕಿನ ಬಗ್ಗೆ ಒಲವು ಇರದ ಜರತ್ಕಾರು ತಾನಾಗಿ ಹೆಣ್ಣು ಕೇಳಲಾರೆನು. ತನ್ನದೇ ಹೆಸರು ಅಂದರೆ ಜರತ್ಕಾರು ಎಂದು ಹೆಸರಿನ ಹೆಣ್ಣನ್ನು ಯಾರಾದರು, ಅದೂ ಅವರೇ ಕರೆದು ವಿವಾಹ ಮಾಡಿಕೊಟ್ಟರೆ ಮಾತ್ರ ನಾನು ವರಿಸುವೆನೆಂದು ನುಡಿದು ಅಲ್ಲಿಂದ ಜಾರಿಕೊಳ್ಳುವ ವಿಮುಖ ನೀತಿ ಅನುಸರಿಸಿ ಹೊರಟನು.
ಈ ವೃತ್ತಾಂತ ತಿಳಿದ ಶೇಷರಾಜ ವಾಸುಕಿ ಯಾಯಾವರ ಋಷಿ ಸಂತತಿಯ ಏಳಿಗೆಯನ್ನು ಬಯಸಿ, ಜರತ್ಕಾರು ಎಂಬ ಹೆಸರಿನಿಂದಲೆ ಬೆಳೆಯುತ್ತಿದ್ದ ತನ್ನ ತಂಗಿಯನ್ನು ಈ ಋಷಿಗೆ ಕರೆದು ವಿವಾಹ ಮಾಡಿ ಕೊಟ್ಟನು. ವೈವಾಹಿಕ ಪದ್ದತಿಯಂತೆ ಪತಿಗೃಹ ಸೇರಿದ ನಾಗಿಣಿ ಜರತ್ಕಾರು ಕಶ್ಯಪ ಬ್ರಹ್ಮರ ಸಂತತಿಯಾದ್ದರಿಂದ ಇಚ್ಚಾರೂಪ ಧಾರಣೆ ಮಾಡಬಲ್ಲವಳಾಗಿದ್ದಳು.
ಮನುಷ್ಯನಾದ ಪತಿಯ ಜೊತೆ ಮಾನವ ರೂಪದಿಂದ ಜೊತೆಯಾಗಿದ್ದು ಆಶ್ರಮದಲ್ಲಿ ಕೆಲಕಾಲ ಕಳೆದಾಗ ದಾಂಪತ್ಯದ ಫಲವಾಗಿ ಗರ್ಭಿಣಿಯಾದಳು. ಆ ಸಂತೋಷ ಇಬ್ಬರಿಗೂ ಅವರವರ ಭಾವಕ್ಕನುಗುಣವಾಗಿ ಮನಮಾಡಿತ್ತು. ಮಾತೃ ಹೃದಯಕ್ಕೆ ಹೆಣ್ತನದ ಸಂತೃಪ್ತಿಯಾದರೆ, ವಂಶದ ಪಿತೃ ಋಣ ಮುಕ್ತಿಗಾಗಿ ಸಂತಾನ ಬಯಕೆಯ ಪೂರೈಕೆಯ ಕೃತಾರ್ಥತೆ ಋಷಿ ಜರತ್ಕಾರುವಿಗೆ.
ಹೀಗಿರಲು ಒಂದು ದಿನ ಋಷಿ ಜರತ್ಕಾರು ತನ್ನ ದೈನಂದಿನ ದಿನಚರಿಯನ್ನು ಮೀರಿ ಮಧ್ಯಾಹ್ನ ನಂತರವೂ ಮಲಗಿದ್ದನು. ಸಂಜೆಯ ಹೊತ್ತಾಯಿತು, ಸಂಧ್ಯಾ ವಂದನಾದಿ ವಿಧಿ ಪೂರೈಸಬೇಕಾದ ಸಮಯವಾಗಿದೆ, ಪತಿ ಮಲಗಿ ನಿದ್ರಿಸುತ್ತಿದ್ದಾನೆ. ಸತಿ ಜರತ್ಕಾರು ಧರ್ಮದಂತೆ ಕರಣೇಷು ಮಂತ್ರಿಯಾಗಿ ಮೈ ಕುಲುಕಿ ಪತಿಯನ್ನು ಎಚ್ಚರಿಸಿದಳು. ನಿದ್ರಾಭಂಗ ಮಾಡಿದಳೆಂದು ಅತೀವ ಕ್ರೋಧಗೊಂಡ ಪತಿ ಜರತ್ಕಾರು ಕ್ಷುದ್ಧನಾಗಿ ಎದ್ದು ಆಶ್ರಮ ಬಿಟ್ಟು ಹೊರಟೇ ಹೋದನು.
ಆತನಿಗೆ ಕೋಪಗೊಂಡು ಹೊರ ಬರಲು ಒಂದು ಕ್ಷುಲ್ಲಕ ಕಾರಣವಷ್ಟೇ ಬೇಕಾಗಿತ್ತು. ಎಷ್ಟೆಂದರೂ ಪಿತೃ ಸದ್ಗತಿಗಾಗಿ ಕಾರ್ಯ ಕಾರಣದಿಂದ ಮದುವೆಯಾದವನು. ಪತ್ನಿ ಗರ್ಭಿಣಿಯಾದ ಮೇಲೆ ಮಗು ಆಗಲೇ ಬೇಕು.. ಇಲ್ಲಿ ತಪೋಮುಖನಾಗುವ ಬಯಕೆಯೇ ಬಲವಾಗಿರಲು, ಈತನನ್ನು ಯಾವ ಬಾಂಧವ್ಯವೂ ಬಂಧಿಸಲಿಲ್ಲ.
ಗರ್ಭಿಣಿಯಾದರೂ ಮರಳಿ ಬಾರದ ಪತಿಗಾಗಿ ಕಾಡಾಡಿಯಾಗಿ ಎಲ್ಲಿ ಹುಡುಕಿದರೂ ಪತಿ ಕಾಣ ಸಿಗಲಿಲ್ಲ. ಕತ್ತಲು ಆವರಿಸಲಾಂಭಿಸಿತು. ವೈವಾಹಿಕ ಬದುಕೆಂಬ ಬೆಳಕು ಆರಿ ಹೋಗಿ ಆಕೆಯ ಪಾಲಿಗೆ ಅದು ಶಾಶ್ವತ ಕತ್ತಲೆಯೇ ಆಗಿ ಬಿಟ್ಟಿತ್ತು. ಕೆಲ ದಿನಗಳ ಕಾಲ ಪತಿಗಾಗಿ ಕಾಯುತ್ತಾ, ಹುಡುಕುತ್ತಾ ಕಾಣಸಿಗದೆ ಬಸವಳಿದಳು.
ಹೆಣ್ಣಾದವಳಿಗೆ ಮತ್ತೆ ತಿರುಗಿ ಆಶ್ರಯವೆಂದಿದ್ದರೆ ತವರು ಮನೆ ತಾನೇ? ಹೀಗೆ ಅಣ್ಣನ ಆಶ್ರಯ ಪಡೆದು ಗಂಡು ಮಗುವೊಂದಕ್ಕೆ ಜನ್ಮವಿತ್ತಳು. ಆ ಮಗನೇ *ಆಸ್ತಿಕ*. ತನ್ನ ಪತಿ ತಂದೆಯಾದನು. ಅವನ ವಂಶ ಯಾಯಾವರ ಸಂತತಿಯ ಋಷಿ ಪಿತೃಗಳಿಗೂ ಪೈಶಾಚ ಸ್ಥಿತಿಯಿಂದ ಮುಕ್ತಿಯೂ ಆಯಿತು.
ಆ ಮಗುವೇ ಆಸ್ತಿಕ. ಅವನ ವಿದ್ಯಾಭ್ಯಾಸ, ಅಧ್ಯಯನಕ್ಕೆ ಮಾವ ವಾಸುಕಿಯಿಂದ ವ್ಯವಸ್ಥೆಯಾಯಿತು. ಬೆಳೆಯುತ್ತಾ ಆಸ್ತಿಕ ವಿದ್ವಾಂಸನಾಗಿ, ತಪಸ್ಸನ್ನೂ ಮಾಡಿ ಘನ ತಪಸ್ವಿಯೂ ಆದನು.
ಹೀಗೆ ಜ್ಞಾನ ಬಲ, ತಪೋ ಬಲಯುತನಾದ ಆಸ್ತಿಕ ಈಗ ವಾಸುಕಿಯಿಂದ ನಿಯೋಜಿತನಾಗಿದ್ದಾನೆ. ಸರ್ಪ ಸಂಕುಲದ ಸಂರಕ್ಷಣೆಯ ಕಾರ್ಯ ಸಿದ್ದಿಗಾಗಿ ಹೊರಟಿದ್ದಾನೆ. ಹುಟ್ಟು ಮಾತ್ರದಿಂದಲೇ ಪಿತೃ ಋಣ ಮುಕ್ತಿಗೊಳಿಸಿ, ಪಿತೃ ಸಂಪ್ರಾಪ್ತಿ ಪಡೆದವನು ಆಸ್ತಿಕ. ಈಗ ತಾಯಿಯ ವಂಶದ ಉಳಿವಿಗಾಗಿ ಮುಂದಾಗಿದ್ದಾನೆ.
ನೇರವಾಗಿ ಹಸ್ತಿನಾಪುರದ ತಕ್ಷಶಿಲೆಗೆ ಬಂದು ಸರ್ಪಯಾಗ ನಡೆಯುತ್ತಿರುವ ಯಾಗ ಶಾಲೆಯ ಬಳಿ ಸಾಗಿ ನೋಡಿದರೆ ಆತನಿಗೆ ವಿಚಿತ್ರವೇ ಕಾದಿತ್ತು. ಸರ್ಪಗಳು ಋತ್ವಿಜರ ಮಂತ್ರ ಬಲಕ್ಕೆ ಸುರುಳಿ ಸುರುಳಿಯಾಗಿ ಸುತ್ತಿ, ತಿರು ತಿರುಗಿ ವರ್ಷೋಪಾಧಿಯಲ್ಲಿ ಅಂದರೆ ಮೋಡದಿಂದ ಪತನಗೊಂಡು ಮಳೆ ಹನಿಗಳಾಗಿ ಬೀಳುವಂತೆ, ಬಿದ್ದು ಯಾಗಕ್ಕೆ ಆಹುತಿಯಾಗುತ್ತಿರುವುದನ್ನು ದೂರದಿಂದಲೇ ಕಣ್ಣಾರೆ ನೋಡಿ ಮರುಗಿದನು. ಯಜ್ಞಶಾಲೆಯ ಪ್ರವೇಶ ನಿರ್ಬಂಧಿಸಲ್ಪಟ್ಟಿತ್ತು.
ಉತ್ತಂಕನ ಸಲಹೆಯಂತೆ ಭದ್ರ ಕಾವಲು ವ್ಯವಸ್ಥೆಯಾಗಿದೆ. ಯಾಗ ಶಾಲೆಯನ್ನು ಸುತ್ತುವರಿದು ಕೋಟೆಯಂತೆ ಶಕ್ತಿ – ಯುಕ್ತಿ, ಮಂತ್ರ – ತಂತ್ರಗಳ ಆವರಣಗಳು ಸುಭದ್ರವಾಗಿವೆ. ಪ್ರವೇಶಕ್ಕೆ ದಾರಿ ಹೇಗೆಂದು ಆಸ್ತಿಕ ಯೋಚಿಸತೊಡಗಿದ್ದಾನೆ.