ಶರ್ಮಿಳಾ ಠಾಗೂರ್

SANTOSH KULKARNI
By -
0

 

ಶರ್ಮಿಳಾ ಠಾಗೂರ್ ಗುಳಿ ಕೆನ್ನೆಯ ಪ್ರತಿಭಾವಂತ ಚೆಲುವೆ ಮತ್ತು ಉತ್ತಮ ಕಲಾವಿದೆ.

ಶರ್ಮಿಳಾ ಠಾಗೂರ್ 1944ರ ಡಿಸೆಂಬರ್ 8ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರ ತಂದೆ ಗೀತೀಂದ್ರನಾಥ ಠಾಗೂರರು ಬ್ರಿಟಿಷ್ ಇಂಡಿಯಾ ಕಾರ್ಪೊರೇಷನ್ನಿನ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿದ್ದರು. ತಾಯಿ ಇರಾ ಠಾಗೂರ್. ತಂದೆ ಮತ್ತು ತಾಯಿ ಎರಡೂ ಕುಟುಂಬಕ್ಕೂ ನೊಬೆಲ್ ಪುರಸ್ಕೃತ ಕವಿ ರಬೀಂದ್ರನಾಥ್ ಠಾಗೂರರು ದೂರ ಸಂಬಂಧಿಗಳಾಗಿದ್ದರು.

ಶರ್ಮಿಳಾ ಅವರು ಶಾಲೆಯಲ್ಲಿ ಓದುತ್ತಿದ್ದಾಗ 13ನೇ ವಯಸ್ಸಿನಲ್ಲಿ ಇರುವಾಗಲೇ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ದೊರಕಿ ಅವರ ಓದು ನಿಲುಗಡೆ ಆಯ್ತು. 1959ರಲ್ಲಿ ಸತ್ಯಜಿತ್ ರೇ ಅವರ ಬೆಂಗಾಲಿ ಚಿತ್ರ 'ಅಪುರ್ ಸನ್ಸಾರ್' ಚಿತ್ರದ ಮೂಲಕ ಶರ್ಮಿಳಾ ಸಿನಿಮಾ ವೃತ್ತಿಗೆ ಕಾಲಿಟ್ಟರು. 1964ರಲ್ಲಿ ಶಕ್ತಿ ಸಾಮಂತ್ ಅವರ ‘ಕಾಶ್ಮೀರ್ ಕಿ ಕಲಿ’ ಚಿತ್ರದಲ್ಲಿ ನಟಿಸಿದರು. 'ಎನ್ ಈವನಿಂಗ್ ಇನ್ ಪ್ಯಾರಿಸ್' ಚಿತ್ರದಲ್ಲಿ ಬಿಕಿನಿ ಧರಿಸಿದ ಪ್ರಥಮ ಭಾರತೀಯ ನಟಿ ಎನಿಸಿದರು. 1968ರಲ್ಲಿ ಬಿಕಿನಿ ಉಡುಪಿನಲ್ಲಿ ಫಿಲಂಫೇರ್ ಪತ್ರಿಕೆಗೂ ಪೋಸ್ ನೀಡಿದರು. ಆದರೆ 36 ವರ್ಷಗಳ ನಂತರ ಸೆನ್ಸಾರ್ ಮಂಡಲಿಯ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಭಾರತೀಯ ಚಿತ್ರಗಳಲ್ಲಿ ಬಿಕಿನಿ ಉಡುಪನ್ನು ಅತೀವವಾಗಿ ಬಿಂಬಿಸುತ್ತಿರುವ ಬಗ್ಗೆ ಕಳವಳವನ್ನು ಸಹಾ ವ್ಯಕ್ತಪಡಿಸಿದರು.

ಶಕ್ತಿ ಸಾಮಂತರು ಶರ್ಮಿಳಾರನ್ನು 1969 ವರ್ಷದಲ್ಲಿ ರಾಜೇಶ್ ಖನ್ನ ಜೊತೆ 'ಆರಾಧನಾ', 1972 ವರ್ಷದಲ್ಲಿ ‘ಅಮರ್ ಪ್ರೇಮ್', ಮುಂತಾದ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿಸಿದರು. ಈ ಎರಡೂ ಚಿತ್ರಗಳಲ್ಲದೆ ಇತರ ಚಿತ್ರ ನಿರ್ದೇಶಕರ ಸಫರ್, ದಾಗ್, ಮಾಲಿಕ್, ಚೋಟಿ ಬಹು, ರಾಜಾ ರಾಣಿ, ಆವಿಷ್ಕಾರ್ ಮುಂತಾದ ಬಹು ಯಶಸ್ವಿ ಚಿತ್ರಗಳಲ್ಲಿ ಸಹಾ ರಾಜೇಶ್ ಖನ್ನ ಮತ್ತು ಶರ್ಮಿಳಾ ಠಾಗೂರ್ ಜೋಡಿ ಅಪಾರ ಜನಪ್ರಿಯತೆಗಳಿಂದ ಕಂಗೊಳಿಸಿತು.

1975 ವರ್ಷದಲ್ಲಿ ಶರ್ಮಿಳಾ ಅವರು ಗುಲ್ಜಾರ್ ಅವರ ಪ್ರಸಿದ್ಧ ಚಿತ್ರ 'ಮೌಸಮ್'ನಲ್ಲಿ ಮಹಾನ್ ನಟ ಸಂಜೀವ್ ಕುಮಾರ್ ಅವರೊಂದಿಗೆ ಶ್ರೇಷ್ಠ ಅಭಿನಯದಲ್ಲಿ ಸಹಭಾಗಿಯಾದರು. ಈ ಚಿತ್ರದ ಅಭಿನಯಕ್ಕೆ ಅವರಿಗೆ ರಾಷ್ಟ್ರೀಯ ಚಲಚಿತ್ರ ಪ್ರಶಸ್ತಿ ಸಂದಿತು. ಶರ್ಮಿಳಾ 1991 ವರ್ಷದಲ್ಲಿ ಮೀರಾ ನಾಯರ್ ಅವರ 'ಮಿಸಿಸಿಪಿ ಮಸಾಲಾ' ಚಿತ್ರದ ಪೋಷಕ ನಟಿ ಪಾತ್ರದಲ್ಲಿ ಅಭಿನಯಿಸಿದರು.

ಶರ್ಮಿಳಾ ಅವರು ನಟ ಧರ್ಮೇಂದ್ರ ಜೊತೆಯಲ್ಲಿ ಸಹಾ ದೇವರ್, ಅನುಪಮಾ, ಮೇರೆ ಹಮ್‍ದಮ್ ಮೇರೆ ದೋಸ್ತ್, ಸತ್ಯಕಾಮ್, ಯಾಕೀನ್, ಚುಪ್ಕೆ ಚುಪ್ಕೆ, ಏಕ್ ಮಹಲ್ ಹೋ ಸಪ್ನೋಂ ಕಾ, ಸನ್ನಿ ಮುಂತಾದ ಚಿತ್ರಗಳ ಯಶಸ್ವಿ ಜೋಡಿ ಎನಿಸಿದ್ದರು. ಅಮಿತಾಬ್, ನಸೀರುದ್ದೀನ್ ಷಾ ಮುಂತಾದವರೊಂದಿಗೆ ಸಹಾ ಅವರು ಅಭಿನಯಿಸಿದ್ದರು.

ಶರ್ಮಿಳಾ ಠಾಗೂರ್ ಚಿತ್ರರಂಗದಲ್ಲಿ ಖ್ಯಾತಿಯಲ್ಲಿರುವಾಗಲೇ ಮಹಾನ್ ಕ್ರಿಕೆಟ್ ಪಟು ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು 1969ರಲ್ಲಿ ವರಿಸಿದರು. ಆ ನಂತರದಲ್ಲಿ ಸಹಾ ಅವರು ಚಿತ್ರರಂಗದಲ್ಲಿ ಪ್ರಖ್ಯಾತಿಯ ಶಿಖರವನ್ನೇರಿದರು.

ಪದ್ಮಭೂಷಣ ಗೌರವ, ನಾಯಕಿಯಾಗಿ 'ಮೌಸಮ್' ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಪುರಸ್ಕಾರ, ಪೋಷಕ ನಟಿಯಾಗಿ 'ಆಭರ್ ಅರಣ್ಯೆ' ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಪುರಸ್ಕಾರ, ಆರಾಧನಾ ಚಿತ್ರದ ಶ್ರೇಷ್ಠ ಅಭಿನಯಕ್ಕೆ ಫಿಲಂ ಫೇರ್ ಪ್ರಶಸ್ತಿ, ಹಲವು ಜೀವಮಾನ ಸಾಧನಾ ಗೌರವಗಳು, ಯುನಿಸೆಫ್ ರಾಯಭಾರಿತ್ವ, ಕೇನ್ಸ್ ಚಲನಚಿತ್ರೋತ್ಸವ ತೀರ್ಪುಮಂಡಲಿ ಜ್ಯೂರಿ ಸದಸ್ಯತ್ವ, ಮುಂತಾದ ಅನೇಕ ಗೌರವಗಳು ಶರ್ಮಿಳಾ ಅವರಿಗೆ ಸಂದಿವೆ.

ಶರ್ಮಿಳಾ ಠಾಗೂರ್ 2004 ವರ್ಷದಿಂದ 2011 ಅವಧಿಯಲ್ಲಿ ಕೇಂದ್ರೀಯ ಸೆನ್ಸಾರ್ ಮಂಡಲಿಯ ಮುಖ್ಯಸ್ಥೆಯಾಗಿದ್ದರು.

Tags:

Post a Comment

0Comments

Post a Comment (0)