Showing posts with label song. Show all posts
Showing posts with label song. Show all posts

Wednesday, May 14, 2025

ವಾರ ಬಂತಮ್ಮ ಗುರುವಾರ ಬಂತಮ್ಮ

 

ವಾರ ಬಂತಮ್ಮ ಗುರುವಾರ ಬಂತಮ್ಮ ||

ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ |
ಸ್ಮರಣೆ ಮಾತ್ರದಲಿ ಕೇಶ ಕಳೆದು ಸದ್ಗತಿಯ ಕೊಡುವನಮ್ಮ||
ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ |
ರಾಘವೇಂದ್ರ ಗುರುರಾಜ ಬಂದು ಭವರೋಗ ಕಳೆವನಮ್ಮ |
ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ
ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ||ವಾರ||
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ |
ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ||ವಾರ||
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ |
ಹನುಮನಿದ್ದೆಡೆ ರಾಮನಿದ್ದು ನಿಜಮುಕ್ತಿ ಕೊಡುವನಮ್ಮ||ವಾರ||

Saturday, March 8, 2025

ಯಾವ ಜನ್ಮದ ಮೈತ್ರಿ?

 ಯಾವ ಜನ್ಮದ ಮೈತ್ರಿ |

ಎಲ್ಲಿದ್ದರೇನಂತೆ, ನಿನ್ನನೊಲಿಯದೆ ಮಾಣೆ, ||
ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು !
ಯಾವ ಜನ್ಮದ ಮೈತ್ರಿ |

ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು ! ||
ಮೇಲೆ ತೆರನೊರೆಯೆದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ ;
ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು !
ಯಾವ ಜನ್ಮದ ಮೈತ್ರಿ |

ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ ; ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ||
ಯಾವ ಜನ್ಮದ ಮೈತ್ರಿ ||

ರಚನೆ : ಕುವೆಂಪು



Wednesday, February 5, 2025

"ವಾತಾಪಿ ಗಣಪತಿಂ ಭಜೇ" ಹಾಡಿನ ಅರ್ಥವನ್ನು ವಿವರಿಸುವಿರಾ?

 ವಾತಾಪಿ ಗಣಪತಿಂ ಭಜೇಹಂ ಎಂಬ ಕೃತಿ ಮುದ್ದುಸ್ವಾಮಿ ದೀಕ್ಷಿತರಿಂದ ರಚಿಸಲ್ಪಟ್ಟಿದೆ.

ಇದರ ಅರ್ಥ ಹೀಗಿದೆ—

ವಾತಾಪಿ ಗಣಪತಿಂ ಭಜೇಹಂ| ವಾರಾಣಾಸ್ಯಂ ವರ ಪ್ರದಂ ಶ್ರೀ

ನಾನು ವಾತಾಪಿಯ ಗಣಪತಿಯನ್ನು ಭಜಿಸುತ್ತೇನೆ. ಈತನು ವಾರಣಾಸ್ಯನು. ವಾರಣ ಎಂದರೆ ಆನೆ. ಅಸ್ಯ ಎಂದರೆ ಮುಖ. ಗಣಪತಿಯು ಗಜಮುಖನು ಎಂಬುದು ಅರ್ಥ. ಆತನು ನಾವು ಬೇಡುವ ವರಗಳನ್ನು ನೀಡುತ್ತಾನೆ.

ಭೂತಾದಿ ಸಂಸೇವಿತ ಚರಣಂ| ಭೂತ ಭೌತಿಕ ಪ್ರಪಂಚ ಭರಣಂ|ವೀತರಾಗಿಣಂ ವಿನುತ ಯೋಗಿನಂ ವಿಶ್ವಕಾರಣಂ ವಿಘ್ನವಾರಣಂ||

ಅವನ ಪಾದಗಳು( ಚರಣ) ಸಕಲ ಭೂತಗಳು ಮತ್ತು ಇತರರಿಂದ ಸೇವಿಸ್ಲಪಡುತ್ತದೆ. ಈತನು ಜಗದ್ವ್ಯಾಪಿಯು ಆಗಿದ್ದಾನೆ ಮತ್ತು ಜಗದ್ರಕ್ಷಕನು ಆಗಿರುವನು( ಪ್ರಪಂಚ ಭರಣಂ)

ಆತನು ಮಹಾ ವೈರಾಗ್ಯ ಸ್ವಭಾವದವನು. ವೀತರಾಗ ಎಂದರೆ ಯಾವುದೇ ರಾಗಗಳಿಂದ ದೂರವಿರುವನು. ರಾಗ ಎಂದರೆ ನಾವು ಯಾವ ಭೋಗ ವಸ್ತುಗಳನ್ನು ಬಯಸುತ್ತೇವೆಯೋ ಅದು. ಹೀಗಾಗಿ, ಗಣನಾಥನು ಇಂತಹ ಎಲ್ಲಾ ಮೋಹಗಳಿಂದ ದೂರವಿರುವ ಮಹಾನುಭಾವನು ಎಂಬ ಅರ್ಥ.

ಸಕಲ ಯೋಗಿಗಳು ಗಣೇಶನನ್ನು ಕೊಂಡಾಡುತ್ತಾರೆ( ವಿನುತ). ಈತನು ಈ ಜಗತ್ತನ್ನು ಸೃಷ್ಟಿ ಮಾಡಿದವನು. ಶ್ರೀ ಗಣೇಶ ಅಥರ್ವ ಶೀರಿಷದಲ್ಲಿ ಈ ರೀತಿ ಸ್ತುತಿಪಟ್ಟಿದೆ-

'ಭಕ್ತಾನುಕಂಪಿನಂ ದೇವಂ ಜಗತ್ಕಾರಣಮಚ್ಯುತಂ'. ಅಲ್ಲದೆ ' ಅವ ಧಾತಾರಂ' ಎಂದು ಹೇಳಿದೆ. ಧಾತಾರ ಎಂದರೆ ಬ್ರಹ್ಮ . ಹೀಗಾಗಿ ಗಣೇಶನೆ ಬ್ರಹ್ಮ ದೇವನಾಗಿ ಈ ಜಗತ್ತನ್ನು ಸೃಷ್ಟಿ ಮಾಡುತ್ತಾನೆ.

ನಮ್ಮ ಎಲ್ಲಾ ಅಡೆತಡೆಗಳನ್ನು ( ವಿಘ್ನ) ನಾಶಮಾಡಿ ನಮಗೆ ಶುಭವನ್ನು ಉಂಟು ಮಾಡುವ ದಯಾಮಯನು.ಹೀಗಾಗಿ ಈತನು ವಿಘ್ನವಾರಣನು.

ಪುರಾ ಕುಂಭ ಸಂಭವ ಮುನಿವರ ಪ್ರಪೂಜಿತಂ ತ್ರಿಕೋಣ ಮಧ್ಯಗತಂ| ಮುರಾರಿ ಪ್ರಮುಖಾದ್ಯುಪಾಸಿತಂ ಮೂಲಾಧಾರ ಕ್ಷೇತ್ರಾಸ್ಥಿಥಂ|

ಅಗಸ್ತ್ಯ ಋಷಿಗಳು ಒಂದು ಕುಂಭದಿಂದ ಜನಿಸಿದರೆಂಬುದು ಪ್ರತೀತಿ. ಗಜಾನನನು ಸಪ್ತ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯರಿಂದ ಧ್ಯಾನಿಸಲ್ಪಟ್ಟವನು.ಅನಘಳಾದ ಕಾವೇರಿಯ ಉಗಮವನ್ನು ಇಲ್ಲಿ ಸೂಚಿಸಿದಂತಿದೆ. ತಮ್ಮ ಕಮುಂಡಲದಲ್ಲಿ ಕಾವೇರಿಯನ್ನು ತೆಗೆದುಕೊಂಡು ಮತ್ತಷ್ಟು ದಕ್ಷಿಣಕ್ಕೆ ಅಗಸ್ತ್ಯರು ಹೋಗುತ್ತಿರಬೇಕಾದರೆ ಕಾಗೆಯ ರೂಪವನ್ನು ಧರಿಸಿ ಆ ಕಮುಂಡಲವನ್ನು ಉರುಳಿಸಿ ಕನ್ನಡ ನಾಡಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಮಾಡಿದವನು ಮಹಾಗಣಪತಿಯೇ.

ತಂತ್ರ ಸಿದ್ಧಾಂತ ಪ್ರಕಾರ ಗಣೇಶನನ್ನು ತ್ರಿಕೋಣದ ಮಧ್ಯದಲ್ಲಿ ಒಂದು ಬಿಂದುವಿಟ್ಟು ಸಂಕೇತಿಸುತ್ತಾರೆ.( ತ್ರಿಕೋಣ ಮಧ್ಯಗತಂ)

ಗಣೇಶನನ್ನು ನಾರಾಯಣನಿಂದ ಮೊದಲ್ಗೊಂಡು ಸಕಲ ದೇವಾನು ದೇವತೆಗಳು ಪೂಜಿಸುತ್ತಾರೆ, ಉಪಾಸನೆ ಮಾಡುತ್ತಾರೆ. ಮುರಾರಿ ಎಂದರೆ ಮುರನ ವೈರಿಯಾದ ಶ್ರೀ ಕೃಷ್ಣ. ಶ್ಯಮಂತಕೋಪಾಖ್ಯಾನದ ಕಥೆಯ ಅನ್ವಯ ಭಾದ್ರಪದ ಶುಕ್ಲ ಚತುರ್ಥಿಯ ದಿವಸದಂದು ಚಂದ್ರನನ್ನು ನೋಡಿ ಅವಹೇಳನಕ್ಕೆ ಒಳಗಾದ ಕೃಷ್ಣನು ಇದರ ನಿವಾರಣೆಗೆ ವರಸಿದ್ಧಿ ವಿನಾಯಕನ ವ್ರತವನ್ನು ಆಚರಿಸುತ್ತಾನೆ. ಹೀಗಾಗಿ ಗಣಪತಿಯು ಮುರಾರಿ ಮತ್ತು ಇತರ ಪ್ರಮುಖರಿಂದ ಆರಾಧ್ಯನು.

ಯೋಗದ ಅನ್ವಯ ನಮ್ಮ ದೇಹದಲ್ಲಿ ಏಳು ಚಕ್ರಗಳಿದ್ದು ನಮ್ಮ ಬೆನ್ನು ಮೂಳೆಯ ಕಳಗಡೆಯಿಂದ ಪ್ರಾರಂಭವಾಗಿ ನಮ್ಮ ಶಿರದ ತನಕ ಇರುತ್ತದೆ. ಬೆನ್ನು ಮೂಳೆಯ ಕಳಗಡೆಯಿರುವ ಚಕ್ರಕ್ಕೆ ‌ಮೂಲಾಧಾರ ಚಕ್ರ ಎಂಬ ಹೆಸರು. ಇದರ ಅಧಿಪತಿ ಗಣೇಶ್ವರನೇ.

ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವ ಸ್ವರೂಪ ವಕ್ರತುಂಡಂ| ನಿರಂತರಂ ನಿಟಿಲ ಚಂದ್ರ ಖಂಡಂ ನಿಜ ವಾಮಕರ ವಿದ್ಯುತ್ರೇಕ್ಷು ದಂಡಂ|

ಚತ್ವಾರಿ ವಾಕ್ ಅಂದರೆ ನಾವು ಮಾತನಾಡುವಾಗ ಹೊರಬರುವ ವಾಣಿಯ ನಾಲ್ಕು ಹಂತಗಳು : ಪರಾ, ಪಶ್ಯಂತಿ, ಮಧ್ಯಮಾ, ವೈಖರಿ

ಮೊದಲನೆಯದು ಪರಾ, ಇದು ಮೂಲಾಧಾರದಲ್ಲಿ ನೆಲೆಗೊಂಡಿರುವ ಒಂದು ಶ್ರವ್ಯ ಶಬ್ದವಾಗಿದೆ. ಈ ಹಂತದಲ್ಲಿ ಉಚ್ಚಾರಣೆಗೆ ಯಾವುದೇ ಒತ್ತಡ ಇರುವುದಿಲ್ಲ.

ಎರಡನೆಯದು ಪಶ್ಯಂತಿ ಅಲ್ಲಿ ಮಣಿಪುರ ಚಕ್ರದಲ್ಲಿ ಉಚ್ಚಾರಣೆಯ ಕಡೆಗೆ ಕೇವಲ ಒತ್ತಡವಿದೆ.

ಅನಾಹತ ಚಕ್ರಕ್ಕೆ ಕೇಳಿಸಲಾಗದ ಶಬ್ದ ಅಥವಾ ನಾದವು ಬಂದಾಗ ಮಧ್ಯಮ ಹಂತವನ್ನು ತಲುಪುತ್ತದೆ, ಅಲ್ಲಿ ಶಬ್ದವು ರೂಪುಗೊಳ್ಳುತ್ತದೆ.

ವೈಖರಿ, ಶ್ರವ್ಯ ಧ್ವನಿ.. ನಮ್ಮ ಬಾಯಿಯಿಂದ ಹೊರಬರುವ ಕಿವಿಗೆ ಕೇಳಿಸುವ ಧ್ವನಿ.

ಶ್ರೀ ಗಣೇಶ ಅಥರ್ವ ಶೀರಿಷದಲ್ಲೂ ' ತ್ವಂ ಚತ್ವಾರಿ ವಾಕ್ಪದಾನಿ' ಎಂಬುದು ಬರುತ್ತದೆ. ಗಣೇಶನನ್ನು ಪ್ರಣವವಾದ ಓಂಕಾರ ಸ್ವರೂಪನೆಂದು ಕೊಂಡಾಡಿದ್ದಾರೆ. ಪ್ರಣವಾಕಾರ ಪ್ರಣವಸ್ವರೂಪ ಎಂದು ದೀಕ್ಷಿತರು ತಮ್ಮ ಕೃತಿಗಳಲ್ಲಿ ಸ್ವಲ್ಪ ಹೆಚ್ಚಾಗಿ ಬಳಸಿದ್ದಾರೆ.

ಈತನ ಸೊಂಡಿಲು ಬಾಗಿದೆ. ಇದಕ್ಕೆ ಈತನನ್ನು ವಕ್ರತುಂಡ ಎಂದು ಕರೆಯುತ್ತಾರೆ.

ಈತನು ಶಾಶ್ವತನು. ಇವನ ಹಣೆಯಲ್ಲಿ( ನಿಟಿಲ) ಅರ್ಧ ಚಂದ್ರನನ್ನು ಧರಿಸಿದ್ದಾನೆ. ಇವನ ಎಡಗಡೆಯ ಕೈಯಲ್ಲಿ ( ವಾಮ ಕರ) ಒಂದು ಕಬ್ಬಿನ ಜಿಲ್ಲೆಯನ್ನು ( ಇಕ್ಷು ದಂಡಂ) ಹಿಡಿದಿದ್ದಾನೆ. ಈ ರೀತಿ ತೋರಿಸಿರುವ ಕಾರಣ, ಗಣೇಶನು ನಮಗೆ ಸಂಪತ್ತನ್ನು ನೀಡುವನು ಎಂದು. ಅಲ್ಲದೆ ಭಾರತ ಹಿಂದಿನಿಂದಲೂ ಕೃಷಿ ಪ್ರಧಾನವಾದ ದೇಶ. ಗಣೇಶನು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಳ್ಳೆಯ ಕೃಷಿಗೆ ಕಾರಣನಾಗುತ್ತಾನೆ ಎಂಬುದು ಮತ್ತೊಂದು ಸಂಕೇತ.

ಕರಾಂಬುಜ ಪಾಶ ಬೀಜಾಪೂರಂ ಕಲುಷವಿದೂರಂ ಭೂತಾಕಾರಂ ಅನಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಷಿತ ಹೇರಂಬಂ.

ತನ್ನ ಕೈಯಲ್ಲಿ ಪಾಶ( ಹಗ್ಗ)ವನ್ನು ಮತ್ತು ಹಣ್ಣುಗಳನ್ನು ಹಿಡಿದಿದ್ದಾನೆ. ನಮ್ಮ ಪಾಪಗಳನ್ನು ನಾಶಮಾಡುತ್ತಾನೆ( ಕಲುಷ ವಿದೂರಂ). ಗಣಪತಿಯು ಆದಿ ಅಂತ್ಯಗಳಿಲ್ಲದ ಸುಬ್ರಹ್ಮಣ್ಯ ಸ್ವಾಮಿ ( ಗುರುಗುಹ) ಗೆ ಅತಿ ಪ್ರಿಯನಾದವನು. ಹಂಸಧ್ವನಿ ರಾಗದಿಂದ ಅಲಂಕೃತನಾದ ಜ್ಞಾನದಾತನು ಮತ್ತು ಪಾರ್ವತಿಯ ಮಗನು( ಹೇರಂಬಂ) . ಇವೆಲ್ಲವೂ ಆದ ವಾತಾಪಿ ಗಣಪತಿಯನ್ನು ನಾನು ಭಜಿಸುತ್ತೇನೆ.

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್||

Saturday, January 18, 2025

ಮಂತ್ರಾಲಯಕೆ ಹೋಗೋಣ

 


ಮಂತ್ರಾಲಯಕೆ ಹೋಗೋಣ

ಗುರುರಾಯರ ದರುಶನ ಮಾಡೋಣ |
ತುಂಗಾ ನದಿಯಲಿ ಮೀಯೋಣ
ಸುರಗಂಗಾ ಸ್ನಾನವದನ್ನೋಣ |
ಮಂಗಳ ಮೂರುತಿ ರಾಘವೇಂದ್ರನ
ಆಂಧ್ರಗಳಿಗೆ ಶರಣಾಗೋಣ ॥ ಮಂತ್ರಾಲಯಕ್ಕೆ ॥
ಅನಂತ ಜನುಮವ ಕೇಳೋಣ
ಆ ಮುಕುತಿಯ ಬೇಡಾ ಎನ್ನೋಣ |
ಜನುಮ ಜನುಮದಲು ಚರಣ
ಕಮಲದಿ ಶೃಂಗಗಳಾಗಿ ನಲಿಯೋಣ ॥ ಮಂತ್ರಾಲಯಕ್ಕೆ ॥

Friday, December 27, 2024

ಯಾರಿಗೆ ಯಾರುಂಟು ಎರವಿನ ಸಂಸಾರ

 


ಯಾರಿಗೆ ಯಾರುಂಟು ಎರವಿನ ಸಂಸಾರ

ನೀರಮೇಲಣ ಗುಳ್ಳೆ ನಿಜವಲ್ಲ ಹರಿಯೇ

ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲ ಬಿತ್ತಿ ಬರಿದಾಯ್ತು ಹರಿಯೆ

ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ
ಮರ ಬಗ್ಗೆ ಶಿರದ ಮೇಲೊರಗಿತೋ ಹರಿಯೆ

ಅಡವಿಯೊಳನೆಮಾಡಿ ಗಿಡಕೆ ತೊಟ್ಟಿಲು ಕಟ್ಟಿ
ತೊಟ್ಟಿಲಿನ ಶಿಶು ಮಾಯವಾಯಿತು ಹೆರಿಯೆ

ತಂದೆ ಶ್ರೀ ಪುರಂದರವಿಠಲ ನಾರಾಯಣ
ನಾ ಸಾಯೊ ಹೊತ್ತಿಗೆ ನೀ ಕಾಯೊ ಹರಿಯೆ

ಕೃತಿ : ಪುರಂದರ ದಾಸರು

Thursday, December 12, 2024

ಪವಮಾನ ಜಗದ ಪ್ರಾಣ

 

ಪವಮಾನ ಜಗದ ಪ್ರಾಣ ಸಂಕರುಷಣ

ಭವನೇ ಭಯಾರಣ್ಯದಹನ
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರೀಯ

ಹೇಮ ಕಚ್ಚುಟ ಉಪವೀತ-ಧರಿಪ ಮಾರುತ
ಕಾಮಾದಿ ವರ್ಗರಹಿತ
ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನರಾಧಿಪುದಕೆ
ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು ||1||

ವಜ್ರ ಶರೀರ ಗಂಭೀರ-ಮಕುಟಧರ
ದುರ್ಜನವನ ಕುಠಾರ
ನಿರ್ಜರಮಣಿ ದಯಾ ಪಾರಾ-ವಾರ ಉದಾರ
ಸಜ್ಜನರಘ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ-
ಮೂರ್ಜನದಲಿ ಭವವರ್ಜಿತನೆನಿಸೊ ||2||

ಪ್ರಾಣ ಅಪಾನ ಉದಾನ-ವ್ಯಾನ ಸಮಾನ
ಆನಂದ ಭಾರತೀರಮಣ
ನೀನೆ ಯಾಮ ಯಾಮಕೆ ಜ್ಞಾನ
ಧನಪಾಲಿಪ ವರೇಣ್ಯ
ನಾನು ನಿರುತದಲಿ ಏನೇನನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ
ಕೊಡುವುದು ಭಾನು ಪ್ರಕಾಶ ||3||

Wednesday, December 11, 2024

ಶಿವನು ಭಿಕ್ಷಕೆ ಬಂದ ನೀಡು ಬಾರೆ ತಂಗಿ

 ಶಿವನು ಭಿಕ್ಷಕೆ ಬಂದ ನೀಡು ಬಾರೆ ತಂಗಿ

ಇವನಂತ ಚೆಲ್ವರಿಲ್ಲ ನೋಡು ಬಾರೆ
||ಶಿವನು||
ಇವನಂತ ಚೆಲ್ವರಿಲ್ಲ ನೋಡು ಬಾರೆ

ಒಂದೇ ಕೈಲ ಝನಕ ಕೋಲ ಕಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಣೆ
||ಒಂದೇ||
ನಂದಿಯ ಕೋಲು ಪತಾಕೆ ಕಣೆ
ಮತ್ತೊಂದೊಂದು ಪಾದದ ಶೌರ್ಯ ಕಣೆ
||ನಂದಿಯ||
||ಶಿವನು||

ಮೈಯೆಲ್ಲಾ ಹಾವಿನ ಮೊತ್ತ ಕಣೆ
ಬಲದ ಕೈಯಲಿ ಹಿಡಿದ ನಾಗರ ಬೆತ್ತ ಕಣೆ
||ಮೈಯೆಲ್ಲಾ||
ವೈಯಾರ ಮೂರು ಲೋಕ ಕರ್ತತಾನೆ
ತಕ ತೈಯ ತೈಯಾನಂದಕ್ಕುತಾಣೆ
||ವೈಯಾರ||
||ಶಿವನು||

ಮನೆಮನೆ ತಪ್ಪಾಲೆ ಧಿಮ್ಮಿಸಾಲೆ
ಆತ ಹಣವನ್ನು ಕೊಟ್ರು ಒಲ್ಲನಂತೆ ಕಣೆ
||ಮನೆಮನೆ||
ತಣಿಹಣ್ಣ ನೀಡಬೇಕಂತೆ ಕಣೆ
ಗೌರಿ ಮನಸ ಬಿಟ್ಟಿರಲಾರನಂತೆ ಕಣೆ
||ತಣಿಹಣ್ಣ||
||ಶಿವನು||

Sunday, November 8, 2020

ಭಾರತದ ರಾಷ್ಟ್ರೀಯ ಹಾಡು

 


  • ಬಂಕಿಮಚಂದ್ರ ಚಟರ್ಜಿ ರಚಿಸಿದ ವಂದೇ ಮಾತರಂ ಭಾರತದ ರಾಷ್ಟ್ರೀಯ ಹಾಡು... ೧೯೫೦ರ ಜನವರಿ ೨೪ ರಂದು ಸಂವಿಧಾನ ರಚನಾ ಸಭೆ ಇದನ್ನು ರಾಷ್ಟ್ರೀಯ ಹಾಡನ್ನಾಗಿ ಅಂಗೀಕರಿಸಿತು. ಇದು ರಾಷ್ಟ್ರಗೀತೆಗೆ ಸರಿಸಮನಾದ ಸ್ಥಾನಮಾನ ಹೊಂದಿದೆ. ೧೮೯೬ರಲ್ಲಿ ವಂದೇ ಮಾತರಂ ಹಾಡನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿ ಹಾಡಲಾಗಿತ್ತು. ವಂದೇ ಮಾತರಂ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ದೇಶಭಕ್ತರಿಗೆ ಹೆಚ್ಚಿನ ಸ್ಫೂರ್ತಿಯನ್ನು ತುಂಬಿದ ಹಾಡು..
    ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಕ್ರಾಂತಿಕಾರರ ಕೊನೆಯ ಉಸಿರಿನ ಘೋಷಣೆ ವಂದೇ ಮಾತರಂ ಆಗಿರುತ್ತಿತ್ತು.. ವಂದೇ ಮಾತರಂ ಹಾಡನ್ನು ಬಂಕಿಮಚಂದ್ರ ಚಟರ್ಜಿಯವರ " ಆನಂದ ಮಠ " ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ .. ಆನಂದ ಮಠ ಕಾದಂಬರಿ ೧೮೮೨ ರಲ್ಲಿ ಪ್ರಕಟವಾಯಿತು .. ಬಂಕಿಮಚಂದ್ರ ಚಟರ್ಜಿಯವರು ಸಂಸ್ಕೃತದಲ್ಲಿ ವಂದೇ ಮಾತರಂ ಬರೆದಿದ್ದರು .. ಇದನ್ನು ಇಂಗ್ಲಿಷಿಗೆ ಅನುವಾದ ಮಾಡಿದವರು ಶ್ರೀ ಅರವಿಂದೊ.. ವಂದೇ ಮಾತರಂ ಗೀತೆಯ ಮಟ್ಟನ್ನು ರಚಿಸಿದವರುವ ಖ್ಯಾತ ಸಂಗೀತಜ್ಞ ವಿಷ್ಣು ದಿಗಂಬರ ಪಲೂಸ್ಕರ್.. ಇಂದಿಗೂ ಸಮಾರಂಭಗಳ ಪ್ರಾರಂಭದಲ್ಲಿ ವಂದೇ ಮಾತರಂ ಪ್ರಾರ್ಥನೆ ಹಾಡುತ್ತಾರೆ
  • ಈ ಗೀತೆಯನ್ನು ಮೊದಲ ಬಾರಿಗೆ 1896 ಕಲ್ಕಕತ್ತದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.