Showing posts with label bhavageete. Show all posts
Showing posts with label bhavageete. Show all posts

Thursday, January 2, 2025

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ

 


ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,

ಕೈಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ
ಕೈಹಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು
ಕೇಳಿದೊಡನೆಯೆ – ಸಾಕು ನನಗೊಂದು ಹೆಜ್ಜೆ.
ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡೆಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು; ಇನ್ನು,
ಕೈಹಿಡಿದು ನಡೆಸು ನೀನು.
ಮಿರುಗು ಬಣ್ಣಕೆ ಬೆರೆತು ಭಯ ಮರೆತು ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದನೆಲ್ಲ.
ಇಷ್ಟು ದಿನ ಸಲಹಿರುವೆ ಮರ‍್ಖನನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳೆಕೊಂಡ ದಿವ್ಯಮುಖ ನಗುತ ?
-ಬಿ.ಎಂ.ಶ್ರೀಕಂಠಯ್ಯ

Wednesday, January 1, 2025

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !

 

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !

ಬೀಸು ಗಾಳಿಗೆ ಬೀಳು ಹೇಳುವ ತೆರೆಯ ಮೇಗಡೆ ಹಾರಲಿ !
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ,
ನೋಡಿ, ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ! ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ !
ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ !
ಮಿಂಚುತರ‍್ಪುವು ಮೂಡುತೈತರೆ ಬಾಲಕೋಮಲ ದಿನಮಣಿ !
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ !
ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ;
ಅದನೆ ಹೋಲುತ, ಅಂತ ತೇಲುತ ದೋಣಿಯಾಟವ ನೋಡಿರಿ!
ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ !
ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ.


ಕುವೆಂಪು






ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು



ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು

ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು

ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ಯತ್ತೆಗಳ ಕಾಡು
ಪಾವನೆಯರಾ ಕೃಷ್ಣ ಭೀಮೆಯರ ತಾಯ್ತಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

–ಹುಯಿಲುಗೋಳ ನಾರಾಯಣರಾಯರು




ನಿತ್ಯೋತ್ಸವ


ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ,

ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ…

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮೂಲೆಯಲ್ಲಿ

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,

ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ –

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ…

ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ-

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ…

– ಕೆ. ಎಸ್. ನಿಸಾರ್ ಅಹಮದ್‌

Wednesday, December 11, 2024

ಶಿವನು ಭಿಕ್ಷಕೆ ಬಂದ ನೀಡು ಬಾರೆ ತಂಗಿ

 ಶಿವನು ಭಿಕ್ಷಕೆ ಬಂದ ನೀಡು ಬಾರೆ ತಂಗಿ

ಇವನಂತ ಚೆಲ್ವರಿಲ್ಲ ನೋಡು ಬಾರೆ
||ಶಿವನು||
ಇವನಂತ ಚೆಲ್ವರಿಲ್ಲ ನೋಡು ಬಾರೆ

ಒಂದೇ ಕೈಲ ಝನಕ ಕೋಲ ಕಣೆ
ಬೆನ್ಹಿಂದೆ ಕಟ್ಟಿರುವ ತ್ರಿಶೂಲ ಕಣೆ
||ಒಂದೇ||
ನಂದಿಯ ಕೋಲು ಪತಾಕೆ ಕಣೆ
ಮತ್ತೊಂದೊಂದು ಪಾದದ ಶೌರ್ಯ ಕಣೆ
||ನಂದಿಯ||
||ಶಿವನು||

ಮೈಯೆಲ್ಲಾ ಹಾವಿನ ಮೊತ್ತ ಕಣೆ
ಬಲದ ಕೈಯಲಿ ಹಿಡಿದ ನಾಗರ ಬೆತ್ತ ಕಣೆ
||ಮೈಯೆಲ್ಲಾ||
ವೈಯಾರ ಮೂರು ಲೋಕ ಕರ್ತತಾನೆ
ತಕ ತೈಯ ತೈಯಾನಂದಕ್ಕುತಾಣೆ
||ವೈಯಾರ||
||ಶಿವನು||

ಮನೆಮನೆ ತಪ್ಪಾಲೆ ಧಿಮ್ಮಿಸಾಲೆ
ಆತ ಹಣವನ್ನು ಕೊಟ್ರು ಒಲ್ಲನಂತೆ ಕಣೆ
||ಮನೆಮನೆ||
ತಣಿಹಣ್ಣ ನೀಡಬೇಕಂತೆ ಕಣೆ
ಗೌರಿ ಮನಸ ಬಿಟ್ಟಿರಲಾರನಂತೆ ಕಣೆ
||ತಣಿಹಣ್ಣ||
||ಶಿವನು||