ವಾತಾಪಿ ಗಣಪತಿಂ ಭಜೇಹಂ ಎಂಬ ಕೃತಿ ಮುದ್ದುಸ್ವಾಮಿ ದೀಕ್ಷಿತರಿಂದ ರಚಿಸಲ್ಪಟ್ಟಿದೆ.
ಇದರ ಅರ್ಥ ಹೀಗಿದೆ—
ವಾತಾಪಿ ಗಣಪತಿಂ ಭಜೇಹಂ| ವಾರಾಣಾಸ್ಯಂ ವರ ಪ್ರದಂ ಶ್ರೀ
ನಾನು ವಾತಾಪಿಯ ಗಣಪತಿಯನ್ನು ಭಜಿಸುತ್ತೇನೆ. ಈತನು ವಾರಣಾಸ್ಯನು. ವಾರಣ ಎಂದರೆ ಆನೆ. ಅಸ್ಯ ಎಂದರೆ ಮುಖ. ಗಣಪತಿಯು ಗಜಮುಖನು ಎಂಬುದು ಅರ್ಥ. ಆತನು ನಾವು ಬೇಡುವ ವರಗಳನ್ನು ನೀಡುತ್ತಾನೆ.
ಭೂತಾದಿ ಸಂಸೇವಿತ ಚರಣಂ| ಭೂತ ಭೌತಿಕ ಪ್ರಪಂಚ ಭರಣಂ|ವೀತರಾಗಿಣಂ ವಿನುತ ಯೋಗಿನಂ ವಿಶ್ವಕಾರಣಂ ವಿಘ್ನವಾರಣಂ||
ಅವನ ಪಾದಗಳು( ಚರಣ) ಸಕಲ ಭೂತಗಳು ಮತ್ತು ಇತರರಿಂದ ಸೇವಿಸ್ಲಪಡುತ್ತದೆ. ಈತನು ಜಗದ್ವ್ಯಾಪಿಯು ಆಗಿದ್ದಾನೆ ಮತ್ತು ಜಗದ್ರಕ್ಷಕನು ಆಗಿರುವನು( ಪ್ರಪಂಚ ಭರಣಂ)
ಆತನು ಮಹಾ ವೈರಾಗ್ಯ ಸ್ವಭಾವದವನು. ವೀತರಾಗ ಎಂದರೆ ಯಾವುದೇ ರಾಗಗಳಿಂದ ದೂರವಿರುವನು. ರಾಗ ಎಂದರೆ ನಾವು ಯಾವ ಭೋಗ ವಸ್ತುಗಳನ್ನು ಬಯಸುತ್ತೇವೆಯೋ ಅದು. ಹೀಗಾಗಿ, ಗಣನಾಥನು ಇಂತಹ ಎಲ್ಲಾ ಮೋಹಗಳಿಂದ ದೂರವಿರುವ ಮಹಾನುಭಾವನು ಎಂಬ ಅರ್ಥ.
ಸಕಲ ಯೋಗಿಗಳು ಗಣೇಶನನ್ನು ಕೊಂಡಾಡುತ್ತಾರೆ( ವಿನುತ). ಈತನು ಈ ಜಗತ್ತನ್ನು ಸೃಷ್ಟಿ ಮಾಡಿದವನು. ಶ್ರೀ ಗಣೇಶ ಅಥರ್ವ ಶೀರಿಷದಲ್ಲಿ ಈ ರೀತಿ ಸ್ತುತಿಪಟ್ಟಿದೆ-
'ಭಕ್ತಾನುಕಂಪಿನಂ ದೇವಂ ಜಗತ್ಕಾರಣಮಚ್ಯುತಂ'. ಅಲ್ಲದೆ ' ಅವ ಧಾತಾರಂ' ಎಂದು ಹೇಳಿದೆ. ಧಾತಾರ ಎಂದರೆ ಬ್ರಹ್ಮ . ಹೀಗಾಗಿ ಗಣೇಶನೆ ಬ್ರಹ್ಮ ದೇವನಾಗಿ ಈ ಜಗತ್ತನ್ನು ಸೃಷ್ಟಿ ಮಾಡುತ್ತಾನೆ.
ನಮ್ಮ ಎಲ್ಲಾ ಅಡೆತಡೆಗಳನ್ನು ( ವಿಘ್ನ) ನಾಶಮಾಡಿ ನಮಗೆ ಶುಭವನ್ನು ಉಂಟು ಮಾಡುವ ದಯಾಮಯನು.ಹೀಗಾಗಿ ಈತನು ವಿಘ್ನವಾರಣನು.
ಪುರಾ ಕುಂಭ ಸಂಭವ ಮುನಿವರ ಪ್ರಪೂಜಿತಂ ತ್ರಿಕೋಣ ಮಧ್ಯಗತಂ| ಮುರಾರಿ ಪ್ರಮುಖಾದ್ಯುಪಾಸಿತಂ ಮೂಲಾಧಾರ ಕ್ಷೇತ್ರಾಸ್ಥಿಥಂ|
ಅಗಸ್ತ್ಯ ಋಷಿಗಳು ಒಂದು ಕುಂಭದಿಂದ ಜನಿಸಿದರೆಂಬುದು ಪ್ರತೀತಿ. ಗಜಾನನನು ಸಪ್ತ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯರಿಂದ ಧ್ಯಾನಿಸಲ್ಪಟ್ಟವನು.ಅನಘಳಾದ ಕಾವೇರಿಯ ಉಗಮವನ್ನು ಇಲ್ಲಿ ಸೂಚಿಸಿದಂತಿದೆ. ತಮ್ಮ ಕಮುಂಡಲದಲ್ಲಿ ಕಾವೇರಿಯನ್ನು ತೆಗೆದುಕೊಂಡು ಮತ್ತಷ್ಟು ದಕ್ಷಿಣಕ್ಕೆ ಅಗಸ್ತ್ಯರು ಹೋಗುತ್ತಿರಬೇಕಾದರೆ ಕಾಗೆಯ ರೂಪವನ್ನು ಧರಿಸಿ ಆ ಕಮುಂಡಲವನ್ನು ಉರುಳಿಸಿ ಕನ್ನಡ ನಾಡಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ಮಾಡಿದವನು ಮಹಾಗಣಪತಿಯೇ.
ತಂತ್ರ ಸಿದ್ಧಾಂತ ಪ್ರಕಾರ ಗಣೇಶನನ್ನು ತ್ರಿಕೋಣದ ಮಧ್ಯದಲ್ಲಿ ಒಂದು ಬಿಂದುವಿಟ್ಟು ಸಂಕೇತಿಸುತ್ತಾರೆ.( ತ್ರಿಕೋಣ ಮಧ್ಯಗತಂ)
ಗಣೇಶನನ್ನು ನಾರಾಯಣನಿಂದ ಮೊದಲ್ಗೊಂಡು ಸಕಲ ದೇವಾನು ದೇವತೆಗಳು ಪೂಜಿಸುತ್ತಾರೆ, ಉಪಾಸನೆ ಮಾಡುತ್ತಾರೆ. ಮುರಾರಿ ಎಂದರೆ ಮುರನ ವೈರಿಯಾದ ಶ್ರೀ ಕೃಷ್ಣ. ಶ್ಯಮಂತಕೋಪಾಖ್ಯಾನದ ಕಥೆಯ ಅನ್ವಯ ಭಾದ್ರಪದ ಶುಕ್ಲ ಚತುರ್ಥಿಯ ದಿವಸದಂದು ಚಂದ್ರನನ್ನು ನೋಡಿ ಅವಹೇಳನಕ್ಕೆ ಒಳಗಾದ ಕೃಷ್ಣನು ಇದರ ನಿವಾರಣೆಗೆ ವರಸಿದ್ಧಿ ವಿನಾಯಕನ ವ್ರತವನ್ನು ಆಚರಿಸುತ್ತಾನೆ. ಹೀಗಾಗಿ ಗಣಪತಿಯು ಮುರಾರಿ ಮತ್ತು ಇತರ ಪ್ರಮುಖರಿಂದ ಆರಾಧ್ಯನು.
ಯೋಗದ ಅನ್ವಯ ನಮ್ಮ ದೇಹದಲ್ಲಿ ಏಳು ಚಕ್ರಗಳಿದ್ದು ನಮ್ಮ ಬೆನ್ನು ಮೂಳೆಯ ಕಳಗಡೆಯಿಂದ ಪ್ರಾರಂಭವಾಗಿ ನಮ್ಮ ಶಿರದ ತನಕ ಇರುತ್ತದೆ. ಬೆನ್ನು ಮೂಳೆಯ ಕಳಗಡೆಯಿರುವ ಚಕ್ರಕ್ಕೆ ಮೂಲಾಧಾರ ಚಕ್ರ ಎಂಬ ಹೆಸರು. ಇದರ ಅಧಿಪತಿ ಗಣೇಶ್ವರನೇ.
ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವ ಸ್ವರೂಪ ವಕ್ರತುಂಡಂ| ನಿರಂತರಂ ನಿಟಿಲ ಚಂದ್ರ ಖಂಡಂ ನಿಜ ವಾಮಕರ ವಿದ್ಯುತ್ರೇಕ್ಷು ದಂಡಂ|
ಚತ್ವಾರಿ ವಾಕ್ ಅಂದರೆ ನಾವು ಮಾತನಾಡುವಾಗ ಹೊರಬರುವ ವಾಣಿಯ ನಾಲ್ಕು ಹಂತಗಳು : ಪರಾ, ಪಶ್ಯಂತಿ, ಮಧ್ಯಮಾ, ವೈಖರಿ
ಮೊದಲನೆಯದು ಪರಾ, ಇದು ಮೂಲಾಧಾರದಲ್ಲಿ ನೆಲೆಗೊಂಡಿರುವ ಒಂದು ಶ್ರವ್ಯ ಶಬ್ದವಾಗಿದೆ. ಈ ಹಂತದಲ್ಲಿ ಉಚ್ಚಾರಣೆಗೆ ಯಾವುದೇ ಒತ್ತಡ ಇರುವುದಿಲ್ಲ.
ಎರಡನೆಯದು ಪಶ್ಯಂತಿ ಅಲ್ಲಿ ಮಣಿಪುರ ಚಕ್ರದಲ್ಲಿ ಉಚ್ಚಾರಣೆಯ ಕಡೆಗೆ ಕೇವಲ ಒತ್ತಡವಿದೆ.
ಅನಾಹತ ಚಕ್ರಕ್ಕೆ ಕೇಳಿಸಲಾಗದ ಶಬ್ದ ಅಥವಾ ನಾದವು ಬಂದಾಗ ಮಧ್ಯಮ ಹಂತವನ್ನು ತಲುಪುತ್ತದೆ, ಅಲ್ಲಿ ಶಬ್ದವು ರೂಪುಗೊಳ್ಳುತ್ತದೆ.
ವೈಖರಿ, ಶ್ರವ್ಯ ಧ್ವನಿ.. ನಮ್ಮ ಬಾಯಿಯಿಂದ ಹೊರಬರುವ ಕಿವಿಗೆ ಕೇಳಿಸುವ ಧ್ವನಿ.
ಶ್ರೀ ಗಣೇಶ ಅಥರ್ವ ಶೀರಿಷದಲ್ಲೂ ' ತ್ವಂ ಚತ್ವಾರಿ ವಾಕ್ಪದಾನಿ' ಎಂಬುದು ಬರುತ್ತದೆ. ಗಣೇಶನನ್ನು ಪ್ರಣವವಾದ ಓಂಕಾರ ಸ್ವರೂಪನೆಂದು ಕೊಂಡಾಡಿದ್ದಾರೆ. ಪ್ರಣವಾಕಾರ ಪ್ರಣವಸ್ವರೂಪ ಎಂದು ದೀಕ್ಷಿತರು ತಮ್ಮ ಕೃತಿಗಳಲ್ಲಿ ಸ್ವಲ್ಪ ಹೆಚ್ಚಾಗಿ ಬಳಸಿದ್ದಾರೆ.
ಈತನ ಸೊಂಡಿಲು ಬಾಗಿದೆ. ಇದಕ್ಕೆ ಈತನನ್ನು ವಕ್ರತುಂಡ ಎಂದು ಕರೆಯುತ್ತಾರೆ.
ಈತನು ಶಾಶ್ವತನು. ಇವನ ಹಣೆಯಲ್ಲಿ( ನಿಟಿಲ) ಅರ್ಧ ಚಂದ್ರನನ್ನು ಧರಿಸಿದ್ದಾನೆ. ಇವನ ಎಡಗಡೆಯ ಕೈಯಲ್ಲಿ ( ವಾಮ ಕರ) ಒಂದು ಕಬ್ಬಿನ ಜಿಲ್ಲೆಯನ್ನು ( ಇಕ್ಷು ದಂಡಂ) ಹಿಡಿದಿದ್ದಾನೆ. ಈ ರೀತಿ ತೋರಿಸಿರುವ ಕಾರಣ, ಗಣೇಶನು ನಮಗೆ ಸಂಪತ್ತನ್ನು ನೀಡುವನು ಎಂದು. ಅಲ್ಲದೆ ಭಾರತ ಹಿಂದಿನಿಂದಲೂ ಕೃಷಿ ಪ್ರಧಾನವಾದ ದೇಶ. ಗಣೇಶನು ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಳ್ಳೆಯ ಕೃಷಿಗೆ ಕಾರಣನಾಗುತ್ತಾನೆ ಎಂಬುದು ಮತ್ತೊಂದು ಸಂಕೇತ.
ಕರಾಂಬುಜ ಪಾಶ ಬೀಜಾಪೂರಂ ಕಲುಷವಿದೂರಂ ಭೂತಾಕಾರಂ ಅನಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಷಿತ ಹೇರಂಬಂ.
ತನ್ನ ಕೈಯಲ್ಲಿ ಪಾಶ( ಹಗ್ಗ)ವನ್ನು ಮತ್ತು ಹಣ್ಣುಗಳನ್ನು ಹಿಡಿದಿದ್ದಾನೆ. ನಮ್ಮ ಪಾಪಗಳನ್ನು ನಾಶಮಾಡುತ್ತಾನೆ( ಕಲುಷ ವಿದೂರಂ). ಗಣಪತಿಯು ಆದಿ ಅಂತ್ಯಗಳಿಲ್ಲದ ಸುಬ್ರಹ್ಮಣ್ಯ ಸ್ವಾಮಿ ( ಗುರುಗುಹ) ಗೆ ಅತಿ ಪ್ರಿಯನಾದವನು. ಹಂಸಧ್ವನಿ ರಾಗದಿಂದ ಅಲಂಕೃತನಾದ ಜ್ಞಾನದಾತನು ಮತ್ತು ಪಾರ್ವತಿಯ ಮಗನು( ಹೇರಂಬಂ) . ಇವೆಲ್ಲವೂ ಆದ ವಾತಾಪಿ ಗಣಪತಿಯನ್ನು ನಾನು ಭಜಿಸುತ್ತೇನೆ.
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್||