ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ
ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ.
ಎಂದೆಂದಿಗೂ ಸತ್ಯವಾದ ಸಾಲುಗಳಲ್ಲವೆ ಇವು?
ರಾಷ್ಡ್ರಕವಿ ಜಿ.ಎಸ್.ಎಸ್ ಅವರ ಈ ಕವನಕ್ಕೆ ಸಂಗೀತ ಮತ್ತು ಕಂಠ ಕೊಟ್ಟು ಜೀವ ತುಂಬಿದ್ದು ಸಿ ಅಶ್ವತ್ ಅವರು.
ಈ ಕವನವನ್ನ ಇನ್ನೊಮ್ಮೆ ಗಮನವಿಟ್ಟು ಓದಿ ನೋಡಿ. ಓದುತ್ತ ಹಾಗೆ ಜೀವನವನ್ನೊಮ್ಮೆ ನೆನೆಸಿಕೊಳ್ಳಿ.
ಖಂಡಿತವಾಗಿ ಕಣ್ಣು ತೇವವಾಗುತ್ತದೆ.
ಕೆಲವೇ ಸಾಲುಗಳಲ್ಲಿ ಸತ್ಯವನ್ನ ಬಿಚ್ಚಿಟ್ಟ ಈ ಹಾಡಿಗೆ ಸರಿಸಾಟಿ ಇದೆಯೆ?
ಹಾಗೆಯೇ ಇನ್ನೊಂದು ಹಾಡು…
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ
- ಇಂತಹ ಅದೆಷ್ಟೋ ಬರವಣಿಗೆಯಿಂದ ಕನ್ನಡ ಸಾಹಿತ್ಯವನ್ನ ಶ್ರೀಮಂತಗೊಳಿಸಿದ ಜಿ.ಎಸ್.ಎಸ್ ಅವರಿಗೆ ರಾಷ್ಟ್ರಕವಿಯ ಪಟ್ಟ ಕಟ್ಟಿದ್ದು ನನ್ನ ಪ್ರಕಾರ ತುಂಬಾ ಕಡಿಮೆ.
- ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರಿಗೆ ಕರ್ನಾಟಕ ಸರಕಾರವು 2006 ರಲ್ಲಿ ರಾಷ್ಟ್ರಕವಿ ಬಿರುದನ್ನ ಕೊಟ್ಟು ಸನ್ಮಾನಿಸಿತು.
ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 7–02-1926 ರಲ್ಲಿ ಜನಿಸಿದರು.
ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ದುಡಿಯಲಾರಂಭಿಸಿದರು.
ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ತಿಲಾಂಜಲಿಯಿಟ್ಟು ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿದರು.
- ಬಹುಮುಖ ಪ್ರತಿಭೆಯ ಇವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಮತ್ತು ಶ್ರೇಷ್ಠ ಬರಹಗಾರರೂ ಆಗಿದ್ದರು.
- ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ 23–12-2013 ರಲ್ಲಿ ದೈವಾಧೀನರಾದರು.
ಅವರ ಕೆಲವು ಬರಹಗಳು.
- ವಿಮರ್ಶೆಯ ಪೂರ್ವಪಶ್ಚಿಮ.
- ಸೌಂದರ್ಯ ತಿಬಿಂಬ.
- ಕನ್ನಡ ಕವಿಗಳ ಕಾವ್ಯ ಕಲ್ಪನೆ
- ಮಾಸ್ಕೊದಲ್ಲಿ ೨೨ ದಿನ
- ಗಂಗೆಯ ಶಿಖರಗಳಲ್ಲಿ,
- ಅಮೇರಿಕದಲ್ಲಿ ಕನ್ನಡಿಗ
- ಇಂಗ್ಲೆಂಡಿನಲ್ಲಿ ಚತುರ್ಮಾಸ.
- ಸಾಮಗಾನ
- ಚೆಲುವು-ಒಲವು
- ದೇವಶಿಲ್ಪ
- ದೀಪದ ಹೆಜ್ಜೆ
- ಕಾರ್ತೀಕ
- ತೀರ್ಥವಾಣಿ
- ಅನಾವರಣ
- ನನ್ನ ನಿನ್ನ ನಡುವೆ
- ವ್ಯಕ್ತ-ಮಧ್ಯ
ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅಗಣಿತ ಸೇವೆಗೆ ಕರ್ನಾಟಕ ಸರಕಾರವು ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕದ ಅತ್ಯುನ್ನತ ಗೌರವವಾದ ರಾಷ್ಟ್ರಕವಿ ಬಿರುದನ್ನ ಕೊಟ್ಟು ಸನ್ಮಾನಿಸಿತು.
ರಾಷ್ಟ್ರಕವಿ ಪ್ರಶಸ್ತಿಯ ಬಗ್ಗೆ ಸಾಕಷ್ಟು ವಾದ ಪ್ರತಿವಾದಗಳು ಇವೆ.
- ಈ ಪ್ರಶಸ್ತಿಯನ್ನ ಕರ್ನಾಟಕ ಸರಕಾರ ಕೊಡುತ್ತಿದೆಯಾದರೂ, ಇದನ್ನ ಮೊದಲು ಪ್ರಾರಂಭಿಸಿದ್ದು ಮದರಾಸು ಸರಕಾರ.
- 1949ರ ಮಾರ್ಚ್ 22 ರಂದು ಮದರಾಸು ಸರಕಾರವು 5 ಭಾರತೀಯ ಭಾಷೆಗಳ ಕವಿಗಳನ್ನ 'ರಾಷ್ಟ್ರಕವಿ' ಎಂದು ಘೋಷಿಸಿತು.
- ಅವರುಗಳಲ್ಲಿ ಕನ್ನಡದ ಎಂ.ಗೋವಿಂದ ಪೈ ಕೂಡಾ ಒಬ್ಬರಾಗಿದ್ದರು.
- ಅನಂತರ ಕರ್ನಾಟಕ ಸರಕಾರವು ಇನ್ನಿಬ್ಬರು ಕನ್ನಡದ ಕವಿಗಳಾದ ಕುವೆಂಪು ಮತ್ತು ಡಾ.ಜಿ.ಎಸ್.ಶಿವರುದ್ರಪ್ಪ ಅವರನ್ನ ರಾಷ್ಟ್ರಕವಿಗಳೆಂದು ಘೋಷಿಸಿತು.