Showing posts with label G.S.Shirudrappa. Show all posts
Showing posts with label G.S.Shirudrappa. Show all posts

Tuesday, February 11, 2025

ಜಿ.ಎಸ್. ಶಿವರುದ್ರಪ್ಪ ಅವರನ್ನು ರಾಷ್ಟ್ರಕವಿ ಎಂದು ಯಾಕೆ ಕರೆಯುತ್ತಾರೆ?

 

ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ

ಎಲ್ಲಾ ಇವೆ ಈ ನಮ್ಮೊಳಗೆ

ಒಳಗಿನ ತಿಳಿಯನು ಕಲಕದೆ ಇದ್ದರೆ

ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಮ್ಮಿನ ಕೋಟೆಯಲಿ

ಎಷ್ಟು ಕಷ್ಟವೋ ಹೊಂದಿಕೆ ಎಂಬುದು

ನಾಲ್ಕು ದಿನದ ಈ ಬದುಕಿನಲಿ.

ಎಂದೆಂದಿಗೂ ಸತ್ಯವಾದ ಸಾಲುಗಳಲ್ಲವೆ ಇವು?

ರಾಷ್ಡ್ರಕವಿ ಜಿ.ಎಸ್.ಎಸ್ ಅವರ ಈ ಕವನಕ್ಕೆ ಸಂಗೀತ ಮತ್ತು ಕಂಠ ಕೊಟ್ಟು ಜೀವ ತುಂಬಿದ್ದು ಸಿ ಅಶ್ವತ್ ಅವರು.

ಈ ಕವನವನ್ನ ಇನ್ನೊಮ್ಮೆ ಗಮನವಿಟ್ಟು ಓದಿ ನೋಡಿ. ಓದುತ್ತ ಹಾಗೆ ಜೀವನವನ್ನೊಮ್ಮೆ ನೆನೆಸಿಕೊಳ್ಳಿ.
ಖಂಡಿತವಾಗಿ ಕಣ್ಣು ತೇವವಾಗುತ್ತದೆ.

ಕೆಲವೇ ಸಾಲುಗಳಲ್ಲಿ ಸತ್ಯವನ್ನ ಬಿಚ್ಚಿಟ್ಟ ಈ ಹಾಡಿಗೆ ಸರಿಸಾಟಿ ಇದೆಯೆ?

ಹಾಗೆಯೇ ಇನ್ನೊಂದು ಹಾಡು…

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ

  • ಇಂತಹ ಅದೆಷ್ಟೋ ಬರವಣಿಗೆಯಿಂದ ಕನ್ನಡ ಸಾಹಿತ್ಯವನ್ನ ಶ್ರೀಮಂತಗೊಳಿಸಿದ ಜಿ.ಎಸ್.ಎಸ್ ಅವರಿಗೆ ರಾಷ್ಟ್ರಕವಿಯ ಪಟ್ಟ ಕಟ್ಟಿದ್ದು ನನ್ನ ಪ್ರಕಾರ ತುಂಬಾ ಕಡಿಮೆ.
  • ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರಿಗೆ ಕರ್ನಾಟಕ ಸರಕಾರವು 2006 ರಲ್ಲಿ ರಾಷ್ಟ್ರಕವಿ ಬಿರುದನ್ನ ಕೊಟ್ಟು ಸನ್ಮಾನಿಸಿತು.

ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 7–02-1926 ರಲ್ಲಿ ಜನಿಸಿದರು.

ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ದುಡಿಯಲಾರಂಭಿಸಿದರು.

ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ತಿಲಾಂಜಲಿಯಿಟ್ಟು ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿದರು.

  • ಬಹುಮುಖ ಪ್ರತಿಭೆಯ ಇವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಮತ್ತು ಶ್ರೇಷ್ಠ ಬರಹಗಾರರೂ ಆಗಿದ್ದರು.
  • ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ 23–12-2013 ರಲ್ಲಿ ದೈವಾಧೀನರಾದರು.

ಅವರ ಕೆಲವು ಬರಹಗಳು.

  • ವಿಮರ್ಶೆಯ ಪೂರ್ವಪಶ್ಚಿಮ.
  • ಸೌಂದರ್ಯ ತಿಬಿಂಬ.
  • ಕನ್ನಡ ಕವಿಗಳ ಕಾವ್ಯ ಕಲ್ಪನೆ
  • ಮಾಸ್ಕೊದಲ್ಲಿ ೨೨ ದಿನ
  • ಗಂಗೆಯ ಶಿಖರಗಳಲ್ಲಿ,
  • ಅಮೇರಿಕದಲ್ಲಿ ಕನ್ನಡಿಗ
  • ಇಂಗ್ಲೆಂಡಿನಲ್ಲಿ ಚತುರ್ಮಾಸ.
  • ಸಾಮಗಾನ
  • ಚೆಲುವು-ಒಲವು
  • ದೇವಶಿಲ್ಪ
  • ದೀಪದ ಹೆಜ್ಜೆ
  • ಕಾರ್ತೀಕ
  • ತೀರ್ಥವಾಣಿ
  • ಅನಾವರಣ
  • ನನ್ನ ನಿನ್ನ ನಡುವೆ
  • ವ್ಯಕ್ತ-ಮಧ್ಯ

ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಅಗಣಿತ ಸೇವೆಗೆ ಕರ್ನಾಟಕ ಸರಕಾರವು ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕದ ಅತ್ಯುನ್ನತ ಗೌರವವಾದ ರಾಷ್ಟ್ರಕವಿ ಬಿರುದನ್ನ ಕೊಟ್ಟು ಸನ್ಮಾನಿಸಿತು.

ರಾಷ್ಟ್ರಕವಿ ಪ್ರಶಸ್ತಿಯ ಬಗ್ಗೆ ಸಾಕಷ್ಟು ವಾದ ಪ್ರತಿವಾದಗಳು ಇವೆ.

  • ಈ ಪ್ರಶಸ್ತಿಯನ್ನ ಕರ್ನಾಟಕ ಸರಕಾರ ಕೊಡುತ್ತಿದೆಯಾದರೂ, ಇದನ್ನ ಮೊದಲು ಪ್ರಾರಂಭಿಸಿದ್ದು ಮದರಾಸು ಸರಕಾರ.
  • 1949ರ ಮಾರ್ಚ್ 22 ರಂದು ಮದರಾಸು ಸರಕಾರವು 5 ಭಾರತೀಯ ಭಾಷೆಗಳ ಕವಿಗಳನ್ನ 'ರಾಷ್ಟ್ರಕವಿ' ಎಂದು ಘೋಷಿಸಿತು.
  • ಅವರುಗಳಲ್ಲಿ ಕನ್ನಡದ ಎಂ.ಗೋವಿಂದ ಪೈ ಕೂಡಾ ಒಬ್ಬರಾಗಿದ್ದರು.
  • ಅನಂತರ ಕರ್ನಾಟಕ ಸರಕಾರವು ಇನ್ನಿಬ್ಬರು ಕನ್ನಡದ ಕವಿಗಳಾದ ಕುವೆಂಪು ಮತ್ತು ಡಾ.ಜಿ.ಎಸ್.ಶಿವರುದ್ರಪ್ಪ ಅವರನ್ನ ರಾಷ್ಟ್ರಕವಿಗಳೆಂದು ಘೋಷಿಸಿತು.