Friday, February 14, 2025

ಭೂಮಿ ಸೂರ್ಯನ ಸುತ್ತ ಸುತ್ತುವ ಕಕ್ಷೆ ವರ್ತುಲವಾಗಿರದೆ ಅಂಡಾಕಾರವಾಗಿರಲು ಕಾರಣವೇನು?

 ನ್ಯೂಟನ್ನಿನ ಇನ್ವರ್ಸ್ ಸ್ಕ್ವೇರ್ ಲಾ ಪ್ರಕಾರ ಎರಡು ವಸ್ತುಗಳ ಮಧ್ಯೆ ಗುರುತ್ವಾಕರ್ಷಣ ಶಕ್ತಿ ಅವುಗಳ ಮಧ್ಯದ ದೂರದ ವರ್ಗಕ್ಕೆ ವಿರುದ್ಧವಾಗಿ ಬದಲಾಗುತ್ತದೆ. ಅಂದರೆ ದೂರ ಹೆಚ್ಚಾದರೆ ಶಕ್ತಿ ಕಡಿಮೆ; ದೂರ ಕಡಿಮೆ ಆದರೆ ಶಕ್ತಿ ಹೆಚ್ಚು.

ಈ ಕಾರಣದಿಂದ ಒಂದು ವಸ್ತು ಇನ್ನೊಂದು ವಸ್ತುವಿನ ಸುತ್ತ ಸುತ್ತುವಾಗ ಅದರ ವೇಗದ ಮೇರೆಗೆ ಅದರ ಹಾದಿ ನಾಲ್ಕು ರೂಪಗಳಲ್ಲಿ ಒಂದಾಗಿರುತ್ತದೆ:

1. ಹೈಪರ್ ಬೊಲಾ

2. ಪ್ಯಾರಾಬೊಲಾ

3. ಅಂಡಾಕಾರ

4. ವೃತ್ತಾಕಾರ.

ತುಂಬಾ ಹಿಂದೆ, ಸುಮಾರು ನಾನೂರು ಕೋಟಿ ವರ್ಷಗಳ ಹಿಂದೆ ಸೂರ್ಯನ ಗ್ರಹಗಳು ಸೂರ್ಯನ ಸುತ್ತ ಸುತ್ತಲು ತೊಡಗಿದವು. ಯಾವ ಗ್ರಹಗಳ ವೇಗ ತುಂಬಾ ಅಧಿಕವಾಗಿತ್ತೋ ಅವು ಮೊದಲ ಎರಡು ಹಾದಿ ಹಿಡಿದು ಎಲ್ಲೋ ಓಡಿಹೋದವು.

ವೇಗ ಕಡಿಮೆ ಇದ್ದ ಗ್ರಹಗಳು ಈಗಲೂ ಸೂರ್ಯನ ಸುತ್ತ ಸುತ್ತುತ್ತಿವೆ.

ಗ್ರಹದ ವೇಗ ಕರಾರುವಾಕ್ಕಾಗಿ ಇಂತಿಷ್ಟೇ ಎಂದು ಇದ್ದಾಗ ಮಾತ್ರ ಅದು ವೃತ್ತಾಕಾರದ ಹಾದಿಯಲ್ಲಿ ಸುತ್ತುತ್ತದೆ.

ಅದರ ವೇಗ ಅಕ್ಕಪಕ್ಕದ ಗ್ರಹಗಳ ದೆಸೆಯಿಂದ ಹೆಚ್ಚು ಕಡಿಮೆ ಆಗುತ್ತಿದ್ದರೆ ಅದು ಅಂಡಾಕಾರದ ಹಾದಿ ಹಿಡಿಯುತ್ತದೆ.

ಭೂಮಿಯ ವೇಗ ಸದಾ ನಿಖರವಾಗಿ ಒಂದೇ ಇರುವುದಿಲ್ಲ. ಹಾಗಾಗಿ ಅದು ಸ್ವಲ್ಪ ಅಂಡಾಕಾರದ ಕಕ್ಷೆಯಲ್ಲಿ ಸುತ್ತುತ್ತದೆ.