ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯರು
೧೨--೦೭--೧೮೮೦ ರಂದು ಜನ್ಮತಳೆದ, ಮಹಾನ್ ಮೇರು ವ್ಯಕ್ತಿತ್ವ ಹೊಂದಿದ, ಕನ್ನಡದ ಕಣ್ಮಣಿ, ಕುಲಪುರೋಹಿತ ಬಿರುದಾಂಕಿತರು 'ಆಲೂರು ವೆಂಕಟರಾಯರು'. ಬಿಎ ಎಲ್ ಎಲ್ ಬಿ ಓದಿ ವಕೀಲಿ ವೃತ್ತಿಯೊಂದಿಗೆ ಕನ್ನಡ ನಾಡು ನುಡಿಗಾಗಿ ದುಡಿದವರು, ಎಂದೆಂದು ಪ್ರಾತ:ಸ್ಮರಣೀಯರು.
ಸಾಹಿತಿಗಳು, ಪತ್ರಕರ್ತರು, ಸ್ವಾತಂತ್ರ್ಯ ಹೋರಾಟಗಾರರು ಎನಿಸಿಕೊಂಡವರು. ಶ್ರೀಯುತರು 'ಜಯಕರ್ನಾಟಕ' ಎಂಬ ಕನ್ನಡ ಪತ್ರಿಕೆಯನ್ನು ಹುಟ್ಟು ಹಾಕಿ ಅನೇಕ ರೀತಿಯಲ್ಲಿ ಕನ್ನಡದ ಸೇವೆಯನ್ನುಗೈದರು. 'ಯಾರು ಅಂತರಾಳದಿಂದ ತಾಯಿಭಾಷೆಯನ್ನು ಪ್ರೀತಿಸುವುದಿಲ್ಲವೋ, ಗೌರವಿಸುವುದಿಲ್ಲವೋ, ತಾಯಿಯ ದುಸ್ಥಿತಿಗೆ ಮರುಗುವುದಿಲ್ಲವೋ, ಅವರು ಮನುಷ್ಯರಲ್ಲ, ಕಲ್ಲು ಬಂಡೆಗೆ ಸಮ. ಮೋಟು ಮರಗಳಂತೆ' ಎಂದವರು. ನಾನು ಕನ್ನಡಿಗನೆಂಬ ಪ್ರಜ್ಞೆ ಯಾವತ್ತೂ ಇರಬೇಕೆಂದರು.
ಕನ್ನಡ ಭಾಷೆ, ನೆಲಜಲದ ಬಗ್ಗೆ ಹಲವಾರು ಕೃತಿಗಳನ್ನು ಬರೆದು ಹೊರತಂದವರು. ಅಂದಾಜು ಸುಮಾರು ೨೫. ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಸತತ ಶ್ರಮವಹಿಸಿದವರು. ಕನ್ನಡ ಸಾಂಸ್ಕೃತಿಕ ವಲಯದ, ಕನ್ನಡದ ಮಣ್ಣಿಗಾಗಿ ಕಾಯಕಲ್ಪ ವಹಿಸಿ ಹಗಲಿರುಳು ದುಡಿದ, ಸೇವಾ ಕೈಂಕರ್ಯಗಳನ್ನು ಮಾಡಿದ ಹೋರಾಟಗಾರರು. ೧೯೫೬ ನವಂಬರ ೧ರಂದು ಕರ್ನಾಟಕ ಏಕೀಕರಣಗೊಂಡು, ಘೋಷಣೆಯಾದಾಗ ಹಂಪೆಯ ವಿರೂಪಾಕ್ಷ ಸನ್ನಿಧಿಯಲ್ಲಿ ಮಾತೆ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಇದರಿಂದ ಶ್ರೀಯುತರಿಗೆ 'ಕನ್ನಡ ಕುಲ ಪುರೋಹಿತ' ಬಿರುದು ನೀಡಿ ಗೌರವಿಸಲಾಯಿತು.
ತಿಲಕರ ಮರಾಠಿ ಕೃತಿ 'ಗೀತರಹಸ್ಯ' ವನ್ನು ಕನ್ನಡಕ್ಕೆ ಅನುವಾದಿಸಿದರು. ಆಧ್ಯಾತ್ಮಿಕವಾಗಿ ಮಹರ್ಷಿ ಅರವಿಂದರ ಪ್ರಭಾವ ಬಹಳವಿತ್ತು. ಇತಿಹಾಸ, ಸಾಹಿತ್ಯ, ಪತ್ರಿಕೆಯ ಸಂಪಾದಕತ್ವ ಪ್ರಿಯ ಕ್ಷೇತ್ರಗಳು, ಬಹಳಷ್ಟು ದುಡಿದವರು. ದೇಶವನ್ನು ಪ್ರೀತಿಸಲು, ಒಗ್ಗೂಡಿಸಲು, ಜಾತಿ, ಮತ, ಭಾಷೆ, ಜನಾಂಗ, ಬಡವ- ಬಲ್ಲಿದ, ಮೇಲರಿಮೆ-ಕೀಳರಿಮೆ, ಬಣ್ಣ ಯಾವುದೂ ಅಡ್ಡಿಯಾಗದು, ಅಡ್ಡಿಯಾದರೆ ನಾನೆಂಬ ಅಹಮಿಕೆ ಎಂದರು.
ಲೇಖಕರಿಗೆ, ಸಾಹಿತಿಗಳಿಗೆ ಬಹಳಷ್ಟು ತನ್ನ ಪತ್ರಿಕೆಯಲ್ಲಿ ಅವಕಾಶ ನೀಡಿ ಪ್ರೋತ್ಸಾಹಿಸಿದರು. ಹಾಗೆಯೇ ಅಶುದ್ಧ ಬರಹಗಳಿಗೂ ಸ್ಥಾನ ಕಲ್ಪಿಸಿ ತಿದ್ದಿಕೊಳ್ಳಲು, ಬೆಳೆಯಲು ಅವಕಾಶ ನೀಡುತ್ತಿದ್ದರು. ಕರ್ನಾಟಕದಾದ್ಯಂತ ಬರವಣಿಗೆಗಾರರು, ಸಾಹಿತಿಗಳೂ ಬೆಳೆಯಬೇಕೆಂದು ಕರೆಯಿತ್ತರು. ಕರ್ನಾಟಕದ ಉಸಿರಿಗಾಗಿ ಹೋರಾಟದ ಮನೋಭಾವ ಹೊಂದಿ, ಸತತ ಪರಿಶ್ರಮಪಟ್ಟ ವೆಂಕಟರಾಯರನ್ನು ದ.ರಾ ಬೇಂದ್ರೆಯವರು 'ಕರ್ನಾಟಕದ ಪ್ರಾಣೋಪಾಸಕರು' ಎಂದು ಕರೆದರು. ಕರ್ನಾಟಕ ಸರಕಾರ ಆಲೂರು ವೆಂಕಟರಾಯ ರಸ್ತೆ (ಎ ವಿ ರಸ್ತೆ) ಎಂಬುದಾಗಿ ಬೆಂಗಳೂರಿನಲ್ಲಿ ನಾಮಕರಣ ಮಾಡಿದ್ದು ತಿಳಿದು ಬರುತ್ತದೆ. ಇಂಥ ಮೇರು ಪರ್ವತಕ್ಕೆ ,ಮಹನೀಯರಿಗೆ ಯಾವುದೇ ಪ್ರಶಸ್ತಿಗಳನ್ನು ನೀಡದಿರುವುದು ಖೇದವೇ ಸರಿ. ಕನ್ನಡಕ್ಕಾಗಿ ದುಡಿದ ವೆಂಕಟರಾಯರು ಫೆಬ್ರವರಿ ೨೫--೧೯೬೪ರಲ್ಲಿ ನಮ್ಮನ್ನು ಅಗಲಿದರು.
ಕನ್ನಡಕ್ಕಾಗಿ ಹೋರಾಟ ಮಾಡಿದ ಮಾನ್ಯ ವೆಂಕಟರಾಯರ ಬಗ್ಗೆ ಸಾಸಿವೆಯಷ್ಟೂ ಪ್ರಸ್ತಾಪ ಕಂಡು ಬಂದಿಲ್ಲ. ಇದು ಕನ್ನಡದ ದುರಂತವೇ ಸರಿ. ಇನ್ನುಳಿದ ದಿನಪತ್ರಿಕೆಗಳಲ್ಲಿ ಉಲ್ಲೇಖವಿದೆಯೋ ಅಥವಾ ಅವರೂ ಈ ಮಹನೀಯರನ್ನು ಮರೆತೇ ಬಿಟ್ಟಿರುವರೋ ತಿಳಿದಿಲ್ಲ.