ತಿಂಡಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದೇ ದೋಸೆ.
ದೋಸೆಗಳಲ್ಲಿ ಅನೇಕ ವಿಧಗಳಿವೆ.
- ಮಸಾಲೆ ದೋಸೆ, ಮೈಸೂರು ಮಸಾಲೆ ದೋಸೆ, ಸೆಟ್ ದೋಸೆ, ನೀರ್ ದೋಸೆ, ಟೊಮ್ಯಾಟೊ ದೋಸೆ, ಕಾಯಿ ದೋಸೆ ಇತ್ಯಾದಿ.
ಅವೆಲ್ಲವುಗಳಲ್ಲೂ ಮಸಾಲೆ ದೋಸೆಯನ್ನ ಬಹುಶಃ ದೋಸೆಗಳ ರಾಜ ಅನ್ನಬಹುದೇನೋ.
ಈ ಮಸಾಲೆ ದೋಸೆಯ ಇತಿಹಾಸವನ್ನ ಹುಡುಕುತ್ತಾ ಹೋದಾಗ ನನಗೆ ಎರಡು ಮೂರು ಬಗೆಯ ಅಭಿಪ್ರಾಯಗಳು ಸಿಕ್ಕವು.
ಇದೇ ವಿಷಯವಾಗಿ ಇಂಗ್ಲೀಷ್ ಕೋರಾದಲ್ಲಿ ಕೂಡಾ ಬರೆದಿದ್ಧೇನೆ.
- ಇತಿಹಾಸಕಾರ ತಂಗಪ್ಪನ್ ನಾಯರ್ ಅವರ ಪ್ರಕಾರ ಇದು ಉಡುಪಿಯಲ್ಲಿ ಮೊಟ್ಟ ಮೊದಲು ಪ್ರಾರಂಭವಾಯಿತು.
- ಇನ್ನೊಬ್ಬ ಇತಿಹಾಸಕಾರ ಕೆ ಟಿ ಆಚಾರ್ಯ ಹೇಳುವಂತೆ ದೋಸೆಯು ಎರಡು ಸಾವಿರ ವರ್ಷಗಳ ಹಿಂದೆಯೇ ತಮಿಳು ನಾಡಿನಲ್ಲಿ ದೋಸೈ ಅನ್ನುವ ಹೆಸರಿನಲ್ಲಿ ಪ್ರಚಲಿತವಾಗಿತ್ತು.
- ಇದರ ಬಗ್ಗೆ ತಮಿಳಿನ ಸಂಗಮ್ ಸಾಹಿತ್ಯದಲ್ಲಿ ದಾಖಲೆಗಳಿತ್ತು ಅನ್ನುವುದು ಅವರ ವಾದ.
- ಆದರೆ ಸಂಗಮ್ ಸಾಹಿತ್ಯ ಆರನೇ ಶತಮಾನದ ನಂತರದ್ದು ಅನ್ನುವ ವಾದ ಕೂಡಾ ಇದೆ.
- ಹತ್ತನೇ ಶತಮಾನದಲ್ಲಿ ಕರ್ನಾಟಕವನ್ನ ಆಳಿದ ಚಾಲುಕ್ಯ ರಾಜ ಸೋಮೇಶ್ವರ ಸಂಗ್ರಹಿಸಿದ ಸಂಸ್ಕ್ರತ ಸಾಹಿತ್ಯ ಗ್ರಂಥ ಮನಸೋಲ್ಲಾಸದಲ್ಲಿ ದೋಸೆಯ ಬಗ್ಗೆ ದೋಸಕಾ ಎನ್ನುವ ಉಲ್ಲೇಖ ಕೂಡಾ ಇದೆ.
ಇದೊಂದು ಸಂಗ್ರಹಣಾ ಗ್ರಂಥವಾಗಿರುವುದರಿಂದ, ಇದರಲ್ಲಿರುವ ವಿಷಯಗಳು ಬಹು ಮೊದಲೇ ಬರೆಯಲ್ಪಟ್ಟವುಗಳು ಅನ್ನುವುದರಲ್ಲಿ ಅನುಮಾನವಿಲ್ಲ.
ಹಾಗಾಗಿ ಇದರ ಉಲ್ಲೇಖಗಳು , ಸಂಗಮ್ ಸಾಹಿತ್ಯಕ್ಕಿಂತ ಮೊದಲೇ ಬರೆದಿದ್ದಾಗಿರಬಹುದು.
- ವಿಕಿಪೀಡಿಯ ಹೇಳುವಂತೆ , ದೋಸೆಯು ವಿಶೇಷವಾಗಿ ಮಸಾಲೆ ದೋಸೆಯು ಮಂಗಳೂರಿನಲ್ಲಿ ಪ್ರಾರಂಭವಾಯಿತು.
ದಕ್ಷಿಣ ಭಾರತವೂ ಸೇರಿದಂತೆ, ಶ್ರೀಲಂಕಾ ಮತ್ತು ಮಲೇಷಿಯಾ ಗಳಲ್ಲಿ ಕೂಡಾ ದೋಸೆ ಜನಪ್ರಿಯ ತಿಂಡಿಯಾಗಿತ್ತು (ಈಗ ಕೂಡಾ) ಅನ್ನುವ ದಾಖಲೆಗಳು ಸಿಗುತ್ತವೆ.
ಹಾಗೇನೇ,
- ಮನಸೋಲ್ಲಾಸದಲ್ಲಿರುವ ದೋಸಕಾ ಅನ್ನುವುದು ದೋಸೈ ಎಂದು ತಮಿಳುನಾಡಿನಲ್ಲಿ ಬದಲಾಗಿ ,ಅಲ್ಲಿಂದ ಶ್ರೀಲಂಕಾ ಮತ್ತು ಮಲೇಷಿಯಾ ಗಳಿಗೆ ಕೂಡಾ ಹೋಯಿತು ಅನ್ನುವುದನ್ನ ಯಾವುದೋ ಬ್ಲಾಗ್ ನಲ್ಲಿ ಓದಿದ್ದೇನೆ.
ಆದರೆ ಅದರ ಬಗ್ಗೆ ದಾಖಲೆಗಳು ಮತ್ತು ಪುರಾವೆಗಳು ಸಾಕಷ್ಟು ಸಿಗುತ್ತಿಲ್ಲ.
- ಇವೆಲ್ಲ ಉಲ್ಲೇಖಗಳನ್ನ ನೋಡಿದರೆ ದೋಸೆಯ ಮೂಲದ ಬಗ್ಗೆ ಒಮ್ಮತದ ನಿರ್ಧಾರಕ್ಕೆ ಬರುವುದು ಕಷ್ಟ.
- ತಮಿಳಿನ ಸಂಗಮ್ ಸಾಹಿತ್ಯದ ಬಗ್ಗೆ ಇರುವ ಅಭಿಪ್ರಾಯಗಳನ್ನ ನೋಡಿದರೆ ದೋಸೆಯ ಹುಟ್ಟು ತಮಿಳುನಾಡು ಅನ್ನುವುದನ್ನ ನಂಬುವುದು ಕಷ್ಟ.
- ನನ್ನ ಅಭಿಪ್ರಾಯದ ಪ್ರಕಾರ ಮನಸೋಲ್ಲಾಸದಲ್ಲಿ ಇರುವ ದೋಸಕಾ ಅನ್ನುವುದೇ ದೋಸೆಯ ಮೂಲ ಮತ್ತು ಉಡುಪಿ ಮೂಲದ ಹೋಟೆಲ್ ನವರಿಂದ ಮಸಾಲೆ ದೋಸೆ ಮಂಗಳೂರಿನಲ್ಲಿ ಪ್ರಾರಂಭವಾಗಿರಬಹುದು.
ವಿಕಿಪೀಡಿಯ ಕೂಡಾ ಅದನ್ನೇ ಹೇಳುತ್ತದೆ.
ಮೂಲ ಯಾವುದೇ ಇದ್ದರೂ ದೋಸೆಗೆ ಸರಿಸಾಟಿಯಾಗಿ ನಿಲ್ಲುವ ಮತ್ತೊಂದು ಉತ್ತಮವಾದ ತಿಂಡಿಯಿಲ್ಲ.
- ಇದರ ಉಪಯೋಗವನ್ನ ಅಕ್ಷರಶಃ ಉಪಯೋಗಿಸಿಕೊಂಡದ್ದು ನನ್ನ ಪ್ರಕಾರ ಉತ್ತರಕನ್ನಡ.
ಅಲ್ಲಿನ ಬಹುತೇಕ ಮನೆಗಳಲ್ಲಿ ತಿಂಗಳಿಗೆ ಮೂವತ್ತು ದಿನವೂ ದೋಸೆಯೇ ಬೆಳಗಿನ ಉಪಹಾರ.
ದೋಸೆ ಮತ್ತು ಜೋನಿಬೆಲ್ಲ ಜೊತೆಗೆ ತುಪ್ಪ, ಮತ್ತು ಒಂದರ್ಧ ಲೀಟರ್ ಚಹಾ ಇಲ್ಲದಿದ್ದರೆ ಬೆಳಗಿನ ಉಪಹಾರ ಪರಿಪೂರ್ಣವಾಗಲಾರದು.
ಶಿರಸಿಯ ಭಾಗದಲ್ಲಿ ಅದನ್ನ ತುಂಬಾ ತೆಳ್ಳಗೆ ಮತ್ತು ಗರಿ ಗರಿಯಾಗಿ ಮಾಡುತ್ತಾರೆ ಮತ್ತು ಅದನ್ನು ತೆಳ್ಳೇವು ಎಂದು ಕರೆಯುತ್ತಾರೆ.
ಒಟ್ಟಿನಲ್ಲಿ ದೋಸೆಗೆ ದೋಸೆಯೇ ಸಾಟಿ.