ವೇದಾಂಗ, ಉಪವೇದ ಮತ್ತು ವೇದಾಂಗಗಳ ನಡುವಿನ ವ್ಯತ್ಯಾಸವೇನು?

SANTOSH KULKARNI
By -
0

 ವೇದಗಳು ಮತ್ತು ವೇದಗಳ ತಾತ್ಪರ್ಯವಾದ ಉಪನಿಷತ್ತುಗಳು ಅಪೌರುಷೇಯವಾದರೆ, ವೇದಾಂಗಗಳನ್ನು ಋಷಿ ಮುನಿಗಳೇ, ವೇದಮಂತ್ರಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಹಾಯವಾಗುವ ಸಲುವಾಗಿ ರಚಿಸಿದ್ದಾರೆ.

ಶಿಕ್ಷಾ, ವ್ಯಾಕರಣ, ಛಂದ, ನಿರುಕ್ತ, ಜ್ಯೋತಿಷ್ಯ, ಕಲ್ಪ ಈ ಆರು ವೇದಾಂಗಗಳು, ವೇದಗಳ ಅಧ್ಯಯನ ಮತ್ತು ಅರಿವಿಗೆ ಸಂಬಂಧಿಸಿವೆ.

ವೇದಾಧ್ಯಯನ ಸಂಪನ್ನರಾಗಲು, ಯಜ್ಞಯಾಗಾದಿ ಅನುಷ್ಠಾನ ಮಾಡಲು ಷಡಂಗಗಳ ಜ್ಞಾನ ಅವಶ್ಯಕ.

ಪ್ರತಿ ವೇದವು ತನ್ನದೇ ಆದ ಶಿಕ್ಷಾ, ಛಂದ, ಜ್ಯೋತಿಷ್ಯ, ಮತ್ತು ಕಲ್ಪ ಪಠ್ಯಗಳನ್ನು ಹೊಂದಿವೆ.ವ್ಯಾಕರಣ ಮತ್ತು ನಿರುಕ್ತಗಳು, ಎಲ್ಲಾ ವೇದಗಳಲ್ಲೂ ಸಾಮಾನ್ಯವಾಗಿವೆ.

ಶಿಕ್ಷಾ: ಧ್ವನಿ ಶಾಸ್ತ್ರವಾದ "ಶಿಕ್ಷಾ" ಪಾಣಿನಿ ಮಹರ್ಷಿಯಿಂದ ರಚಿಸಲ್ಪಟ್ಟಿದ್ದು, ವೇದಮಂತ್ರಗಳನ್ನು ಹೇಗೆ ಸ್ವರಬದ್ಧವಾಗಿ ಉಚ್ಛರಿಸಬೇಕೆಂದು ತಿಳಿಸಲಾಗಿದೆ.

ವ್ಯಾಕರಣ, ನಿರುಕ್ತಗಳು ವ್ಯುತ್ಪತ್ತಿಶಾಸ್ತ್ರ ಗಳಾಗಿವೆ.

ವ್ಯಾಕರಣವು ಪಾಣಿನಿ ಮಹರ್ಷಿಯಿಂದ ರಚಿಸಲ್ಪಟ್ಟಿದೆ. ಒಳ್ಳೆಯ ಶಬ್ಧ, ಅಪಶಬ್ಧಗಳ ವ್ಯತ್ಯಾಸ ಮುಂತಾದ ವಿವರಣೆಯೊಡನೆ ವೇದಮಂತ್ರಗಳನ್ನು ಹೇಗೆ ಅರ್ಥೈಸಬೇಕೆಂಬುದನ್ನುತಿಳಿಸಲಾಗಿದೆ.

ವೇದಾಧ್ಯಯನಕ್ಕೆ ಅವಶ್ಯಕವಾಗಿರುವದರಿಂದ ವ್ಯಾಕರಣಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೆಂದರೆ, ಇದು ವೇದಪುರುಷನ ಮುಖ/ಬಾಯಿ ಎಂದು ವರ್ಣಿತವಾಗಿದೆ!!

ಇಂದಿನ ಎಲ್ಲಾ ಭಾರತೀಯ ಭಾಷೆಗಳಿಗೂ ಈ ವ್ಯಾಕರಣ ಶಾಸ್ತ್ರವೇ ಬುನಾದಿ.

ನಿರುಕ್ತ: ಯಾಸ್ಕ ಮಹರ್ಷಿ ವಿರಚಿತ ನಿರುಕ್ತವು ವೇದಮಂತ್ರಗಳಲ್ಲಿನ ಕಠಿಣ ಶಬ್ದಗಳ ಅರ್ಥ ವಿವರಿಸಿದೆ. ಯಜ್ಞಯಾಗಾದಿ ಆಚರಣೆಗೆ ಸಂಬಂಧಿಸಿದ ಮಾಹಿತಿ ನೀಡುತ್ತದೆ.

ನಿರುಕ್ತವೆಂದರೆ ನಿಘಂಟು. ವೇದಗಳಲ್ಲಿನ ಪದಗಳಿಗೆ ಪರಿಪೂರ್ಣ ವಿವರಣೆ ನೀಡುವುದೇ ನಿರುಕ್ತ.

ಜ್ಯೋತಿಷ: ಆಕಾಶ ಕಾಯಗಳ ಚಲನೆ ಸಮಯ ಮತ್ತು ಅವು ಜೀವಿಗಳ ಮೇಲೆ ಬೀರುವ ಪರಿಣಾಮಗಳ ಅಧ್ಯಯನ ನಡೆಸಿ ಜ್ಞಾನಿಗಳು ಖಗೋಳ ಅಧ್ಯಯನದ ಮೂಲಕ ಜ್ಯೋತಿಷಶಾಸ್ತ್ರವನ್ನು ಕಂಡುಕೊಂಡರು. ಇದು ಗರ್ಗಾಚಾರ್ಯ, ಲಗಧ ಮಹರ್ಶಿ ಮೊದಲಾದವರಿಂದ ವಿವರಿಸಲ್ಪಟ್ಟಿದ್ದು, ಯಜ್ಞಯಾಗಾದಿಗಳಲ್ಲಿನ ಸಮಯ ಪರಿಜ್ಞಾನ ಮತ್ತು ಸಮಯ ನಿರ್ಧಾರದ ಫಲಾಫಲಗಳನ್ನು ವಿವರಿಸುತ್ತದೆ.

ಛಂದಸ್ಸು: ಪಿಂಗಳ ಮಹರ್ಷಿ ವಿರಚಿತ ವೇದಮಂತ್ರಗಳನ್ನು ರಚಿಸಲು ಅನುಸರಿಸುವ ಕ್ರಮವಾಗಿದ್ದು, ಮಂತ್ರ-ಶ್ಲೋಕಗಳ ವಿಶೇಷತೆಯನ್ನು ವಿವರಿಸುತ್ತದೆ. ಛಂದಸ್ಸುಗಳಲ್ಲಿ ಗಾಯತ್ರಿ ಅನುಷ್ಟುಪ್, ತ್ರಿಷ್ಟುಪ್, ಜಗತಿ ಮುಂತಾದವು ಪ್ರಮುಖವಾಗಿವೆ.

ಕಲ್ಪ : ಅಶ್ವಲಾಯನರು ಋಗ್ವೇದಕ್ಕೂ, ಅಪಸ್ಟಮ್ಭ, ಭೋದಾಯನ ಮಹರ್ಷಿ ಗಳು ಕೃಷ್ಣ ಯಜುರ್ವೇದಕ್ಕೂ ಕಲ್ಪಸೂತ್ರ ಬರೆದಿದ್ದಾರೆ. ಕಲ್ಪಸೂತ್ರಗಳು ಧರ್ಮಾಚರಣೆ ಮತ್ತು ವೇದೋಕ್ತ ಕರ್ಮಗಳನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಸುತ್ತದೆ.

ಆಯುರ್ವೇದ, ಧನುರ್ವೇದ, ಗಾಂಧರ್ವ ವೇದ, ಸ್ಥಾಪತ್ಯವೇದ, ಅರ್ಥವೇದಗಳು ಕ್ರಮವಾಗಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದಗಳಿಗೆ ಸಂಬಂಧಪಟ್ಟಿವೆ.

ಆಯುರ್ವೇದ: ವಿಶ್ವದ ಅತ್ಯಂತ ಪುರಾತನ ವೈದ್ಯಕೀಯ ಸಂಪ್ರದಾಯವಾಗಿದ್ದು, ಆರೋಗ್ಯಕರ ಮತ್ತು ಸಮತೋಲಿತ ಜೀವನದ ಮಹತ್ವವನ್ನು ವಿವರಿಸುತ್ತದೆ.

ಧನ್ವಂತರಿಯು ಆಯುರ್ವೇದದ ಮೂಲಪುರುಷನಾಗಿದ್ದು, ಭಾರದ್ವಾಜ, ಐತರೇಯ, ಕಶ್ಯಪ, ಅಗ್ನಿವೇಶರೇ ಮೊದಲಾದ ಜ್ಞಾನಿಗಳ ಆಸಕ್ತಿಕರ ಸಂಶೋಧನೆಗಳಿಂದ ವಿಶಿಷ್ಟ ವಿಜ್ಞಾನವಾಗಿ ಹೊಮ್ಮಿದೆ.

ಚರಕ ಸಂಹಿತೆ, ಸುಶ್ರುತ ಸಂಹಿತೆ, ವಾಗ್ಭಟ ಸಂಹಿತೆ (ಅಷ್ಟಾಂಗ ಹೃದಯ) ಆಯುರ್ವೇದದ ಪ್ರಮುಖ ಗ್ರಂಥಗಳಾಗಿವೆ.

ಧನುರ್ವೇದ:

ರಾಜಕೀಯ ನಾಗರಿಕ ಮತ್ತು ಸೈನ್ಯ ರಕ್ಷಣೆ, ಸಮರ ಕಲೆಗಳು, ಬಿಲ್ವಿದ್ಯೆ, ಕುಸ್ತಿ, ಕತ್ತಿವರಸೆ, ಶಸ್ತ್ರಶಾಸ್ತ್ರದಲ್ಲಿನ ನೈಪುಣ್ಯ, ಯುದ್ಧಗಳ ಕುರಿತಲ್ಲದೆ, ಆಧ್ಯಾತ್ಮಿಕ ವಿಜ್ಞಾನಗಳಾದ ಕರ್ತವ್ಯ, ಪುರುಷಾರ್ಥ ಮುಂತಾದವುಗಳನ್ನೂ ವಿವರಿಸುತ್ತದೆ.

ಧನುರ್ವೇದದ ಕುರಿತು ಲಭ್ಯವಿರುವ ಪುಸ್ತಕಗಳೆಂದರೆ: ದ್ರೌಣ ವಿದ್ಯಾ, ಕೋದಂಡ ಮಂಡನ, ಧನುರ್ವಿದ್ಯಾ ಸಂಹಿತೆ.

ಗಂಧರ್ವ ವೇದ:

ಸಂಗೀತದ ಜ್ಞಾನವಾಗಿರುವ ಗಂಧರ್ವ ವೇದವನ್ನು ಸಾಮವೇದದಿಂದ ಪಡೆಯಲಾಗಿದೆ. ಭಕ್ತಿ ಸಂಗೀತದ ಹೊರತಾಗಿ ಅಧ್ಯಾತ್ಮಿಕ ವಿಜ್ಞಾನದ ಜತೆಗೆ, ಸಂಗೀತ, ನೃತ್ಯ, ಕಾವ್ಯ ಸೇರಿದಂತೆ ಎಲ್ಲಾ ಕಲಾ ಪ್ರಕಾರಗಳ ಅಧ್ಯಯನ.

ಮನಸ್ಸಿನ ಸಂತುಲತೆಗೆ ಪ್ರಕೃತಿಯ ಧ್ವನಿ ಮತ್ತು ಸಂಗೀತದ ವೇದವಿಜ್ಞಾನವನ್ನು ಧ್ಯಾನದಲ್ಲಿ ದೈಹಿಕ-ಮಾನಸಿಕ ಆರೋಗ್ಯವೃದ್ಧಿಗೆ ಪೂರಕವಾಗುವಂತೆ ಪರಿಣಾಮಕಾರಿಯಾಗಿ ಬಳಸಲಾಗಿದೆ.

ಸ್ಥಾಪತ್ಯವೇದ ಮತ್ತು ಅರ್ಥ ವೇದ:

ಶಿಲ್ಪವೇದವಾಗಿರುವ ಸ್ಥಾಪತ್ಯವು ವಾಸ್ತುಶಿಲ್ಪಾದಿ ಹಲವು ಕಲೆಗಳನ್ನು ವಿವರಿಸುತ್ತದೆ ಶುಕ್ರ ನೀತಿಯ ಪ್ರಕಾರ ಹಲವು ಕಲೆಗಳಿದ್ದರೂ, 64 ಕಲೆಗಳನ್ನು ಪ್ರಮುಖವೆಂದು ಪರಿಗಣಿಸಲಾಗಿದೆ.

ಅಥರ್ವವೇದದ ಉಪವೇದವಾದ ಅರ್ಥ ವೇದವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ವಿವರಿಸುತ್ತದೆ.

(ಮಧ್ಯಯುಗದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಪರಿಪೂರ್ಣವಾಗಿ ರಚಿಸಿದ್ದಾನೆ)

Post a Comment

0Comments

Post a Comment (0)