ಡಿಜಿಟಲ್ ರೂಪಿ ಅಥವಾ ಸಿಬಿಡಿಸಿ (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಯನ್ನು ಜಾರಿಗೆ ತರುತ್ತೇವೆ ಎಂದು ಕೇಂದ್ರ ಸರ್ಕಾರವು ಈ ಬಾರಿಯ ಬಜೆಟಿನಲ್ಲಿ ಘೋಷಿಸಿದೆ. ಭಾರತೀಯ ರಿಸರ್ವ ಬ್ಯಾಂಕ್ ಈ ಡಿಜಿಟಲ್ ರೂಪಿಯನ್ನು ಅಭಿವೃದ್ಧಿಪಡಿಸುವ ,ಬಿಡುಗಡೆ ಮಾಡುವ ಮತ್ತು ನಿರ್ವಹಣೆ ಮಾಡುವ ಜವಾಬ್ದಾರಿ ಹೊರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದರು. 2022 - 23 ಆರ್ಥಿಕ ವರ್ಷದ ಆರಂಭದಿಂದಲೇ ಡಿಜಿಟಲ್ ರೂಪಿ ಅಥವಾ ಸಿಬಿಡಿಸಿ ಬಳಕೆಗೆ ಬರಲಿದೆ ಎಂದು ಅವರು ಹೇಳಿದ್ದರು.
ಕೇಂದ್ರ ಸರ್ಕಾರವು RBI ಮೂಲಕ ತರಲು ಹೊರಟಿರುವ ಡಿಜಿಟಲ್ ರೂಪಿ( ಸಿಬಿಡಿಸಿ) ಕರೆನ್ಸಿಯು ಬ್ಲಾಕ್ ಚೈನ್ ಲೆಡ್ಜರ್ ಮತ್ತು ಇತರ ತಂತ್ರಜ್ಞಾನಗಳ ಆಧಾರದಲ್ಲಿ ಕೆಲಸ ಮಾಡಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬ್ಲಾಕ್ ಚೈನ್ ನಲ್ಲಿ ವ್ಯವಹಾರದ ದಾಖಲೆಗಳನ್ನು ಬದಲಿಸಲು ಸಾಧ್ಯವೇ ಇಲ್ಲ ಮತ್ತು ಅದರ ಲೆಡ್ಜರ್ ಪಾರದರ್ಶಕವಾಗಿರುತ್ತದೆ.ಹಾಗಾಗಿ ಕೇಂದ್ರ ಸರ್ಕಾರವು ಸಹ ಈ ತಂತ್ರಜ್ಞಾನವನ್ನು ಡಿಜಿಟಲ್ ರೂಪೀ ಯಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ..ಹಾಗಾಗಿ ಈಗ ಜಗತ್ತಿನ ಎಲ್ಲೆಡೆ ಬಳಕೆಯಲ್ಲಿರುವ ಕ್ರೀಫ್ಟೋಕರೆನ್ಸಿಗಳು ಬ್ಲಾಕ್ ಚೈನ್ ಲೆಡ್ಜರ್ ತಂತ್ರಜ್ಞಾನದಲ್ಲೇ ವಹಿವಾಟು ನಡೆಸುತ್ತವೆ. ಸಿಬಿಡಿಸಿ ಯನ್ನು RBI ಬ್ಲಾಕ್ ಚೈನ್ ತಂತ್ರಜ್ಞಾನದಲ್ಲೇ ನಿರ್ವಹಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.
ಡಿಜಿಟಲ್ ರೂಪಿ (ಸಿಬಿಡಿಸಿ) ಹೇಗೆ ಕೆಲಸ ಮಾಡುತ್ತದೆ?
ಆದರೆ ಇಡೀ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮಾಹಿತಿಯನ್ನು ಸರ್ಕಾರ ನೀಡಿಲ್ಲ. ಕ್ರಿಪ್ಟೋಕರೆನ್ಸಿಗಳ ವಿಷಯದಲ್ಲಿ ಅವುಗಳ ಬ್ಲಾಕ್ ಚೈನ್ ನ್ನು ಮೈನರ್ ಗಳು ನಿರ್ವಹಣೆ ಮಾಡುತ್ತಾರೆ.RBI ಬಿಡುಗಡೆ ಮಾಡಲಿರುವ ಡಿಜಿಟಲ್ ರೂಪಿ ಬ್ಲಾಕ್ ಚೈನ್ ಲೆಡ್ಜರ್ ತಂತ್ರಜ್ಞಾನದಲ್ಲೇ ಕಾರ್ಯನಿರ್ವಹಿಸುವುದಾದರೆ ಇದಕ್ಕಾಗಿ RBI ಪ್ರತ್ಯೇಕ ವ್ಯವಸ್ಥೆಯನ್ನೇ ರೂಪಿಸ ಬೇಕಾಗುತ್ತದೆ.
ಕ್ರಿಪ್ಟೋಕರೆನ್ಸಿಗಳು ಮತ್ತು ಸರ್ಕಾರವು ತರಲು ಹೊರಟಿರುವ ಡಿಜಿಟಲ್ ರೂಪಿ ಮಧ್ಯೆ ಬ್ಲಾಕ್ ಚೈನ್ ಮೂಲಭೂತ ಹೋಲಿಕೆ ಇರುವಂತೆಯೇ ಒಂದು ಮೂಲಭೂತ ವ್ಯತ್ಯಾಸವು ಇದೆ.
ಕ್ರಿಪ್ಟೋಕರೆನ್ಸಿ ಗಳಿಗೆ ಯಾವುದೇ ಸಂಸ್ಥೆ ಅಥವಾ ಬ್ಯಾಂಕ್ ಅಥವಾ ಸರ್ಕಾರದ ಖಾತರಿ ಇರುವುದಿಲ್ಲ.ಆದರೆ ಸರ್ಕಾರವು ಬಿಡುಗಡೆ ಮಾಡಲಿರುವ ಡಿಜಿಟಲ್ ರೂಪಿಗೆ (ಸಿಬಿಡಿಸಿ) ಸರ್ಕಾರ ಮತ್ತು ಬ್ಯಾಂಕ್ ನ ಖಾತರಿ ಇರುತ್ತದೆ.
ಡಿಜಿಟಲ್ ರೂಪಿಯು(ಸಿಬಿಡಿಸಿ) ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದರು.
ಈಗ ದೇಶದಲ್ಲಿ ಚಲಾವಣೆಯಲ್ಲಿರುವ ಡಿಜಿಟಲ್ ಪಾವತಿ ವ್ಯವಸ್ಥೆಗಳು :-
- ಆನ್ಲೈನ್ ಬ್ಯಾಂಕಿಂಗ್.
- ಪೇಮೆಂಟ್ ಬ್ಯಾಂಕಿಂಗ್
- ಮೊಬೈಲ್ ಬ್ಯಾಂಕಿಂಗ್
- ಯುಪಿಐ
ಆಧಾರಿತ ಪಾವತಿ ವ್ಯವಸ್ಥೆಗಳು ಇವೆ. ಕೇಂದ್ರ ಸರ್ಕಾರವು ಈ ವ್ಯವಸ್ಥೆಗಳನ್ನು ಡಿಜಿಟಲ್ ಆರ್ಥಿಕತೆ ಎಂದು ಕರೆದಿತ್ತು.ಈ ಎಲ್ಲಾ ವ್ಯವಸ್ಥೆಗಳಲ್ಲಿ ಬ್ಯಾಂಕ್ ಸೇವಾ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ.ಅಂದರೆ ಈ ವ್ಯವಸ್ಥೆಗಳಿಗೆ ಬ್ಯಾಂಕ್ ಮೂಲಕ ಹಣವನ್ನು ವರ್ಗಾಯಿಸಬೇಕಾಗುತ್ತದೆ.ಅನಂತರ ಆ ಹಣವನ್ನು ಈ ವ್ಯವಸ್ಥೆಯ ಒಳಗೆ ಚಲಾವಣೆ ಮಾಡುತ್ತಿರಬಹುದು.
ಡಿಜಿಟಲ್ ರೂಪಿಯು (ಸಿಬಿಡಿಸಿ) ನಗದು ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಸರ್ಕಾರವು ಹೇಳಿದೆ. ಈಗ ಬಳಕೆಯಲ್ಲಿರುವ ಡಿಜಿಟಲ್ ಪಾವತಿ ವ್ಯವಸ್ಥೆಗಳು ಸಹ ನಗದು ಬಳಕೆಯನ್ನು ಕಡಿಮೆ ಮಾಡಿವೆ.ಹೀಗಿರುವಾಗ ಈ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಡಿಜಿಟಲ್ ರೂಪಿ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಈ ಎಲ್ಲಾ ವ್ಯವಸ್ಥೆಗಳ ಜೊತೆಗೆ ಡಿಜಿಟಲ್ ರೂಪೀ (ಸಿಬಿಡಿಸಿ) ವ್ಯವಸ್ಥೆ ಅಸ್ತಿತ್ವದಲ್ಲಿ ಇರುವುದಾದರೆ ಅದು ಸಹ ಒಂದು ಪಾವತಿ ವ್ಯವಸ್ಥೆಯಾಗಿ ಮಾತ್ರವೇ ಉಳಿಯಲಿದೆ.
ಡಿಜಿಟಲ್ ರೂಪಿಯನ್ನು ಜಾರಿಗೆ ತರಲು ಸರ್ಕಾರವು ಸ್ವತ: 14 ತಿಂಗಳುಗಳ ಗಡುವು ಹಾಕಿಕೊಂಡಿದೆ.ಈ ಗಡುವಿನೊಳಗೆ ಡಿಜಿಟಲ್ ರೂಪಿ ಜಾರಿಗೆ ಬಂದರೆ ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.
ಆಕ್ಷೇಪಣೆಗಳು :- ಬ್ಲಾಕ್ ಚೈನ್ ತಂತ್ರಜ್ಞಾನದ ಅಡಿಯಲ್ಲಿ ಕೆಲಸ ಮಾಡುವ ಡಿಜಿಟಲ್ ರೂಪಿಯನ್ನು ಭಾರತೀಯ RBI ಹೊರತರಲು ಮುಂದಾಗಿರುವುದಕ್ಕೆ ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ.
ರಘುರಾಜರಾಮನ್ -: RBI ಮಾಜಿ ಗವರ್ನರ್ ರಘುರಾಜರಾಮನ್ ಅವರು ಈ ಚರ್ಚೆಗೆ ಬಂದ ಆರಂಭದಲ್ಲೇ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ತನ್ನದೇ ಸ್ವಂತ ಡಿಜಿಟಲ್ ರೂಪಿಯನ್ನು (ಸಿಬಿಡಿಸಿ) ಹೊರತರುವ ಮುನ್ನ RBI ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದರು. ಡಿಜಿಟಲ್ ರೂಪಿಯನ್ನು RBI ಸರಿಯಾಗಿ ವಿನ್ಯಾಸ ಮಾಡದಿದ್ದರೆ ಅದರ ಸಂಪೂರ್ಣ ದತ್ತಾಂಶಗಳು ಪರರ ಕೈಸೇರುವ ಅಪಾಯವಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಸರ್ಕಾರವೇ ಇದನ್ನು ಜಾರಿಗೆ ಮಾಡುವುದರಿಂದ ಸಾಕಷ್ಟು ಸೇವೆಗಳಲ್ಲಿ ವ್ಯತ್ಯಯವಾಗುವ ಸಂಭವವಿರುತ್ತದೆ. ಗ್ರಾಹಕರಿಗೆ ಒದಗಿಸುವ ಸೇವೆ ಎಷ್ಟರಮಟ್ಟಿಗೆ ಲಭ್ಯವಾಗುತ್ತದೆ ಎಂಬ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.
ಡಿಜಿಟಲ್ ರೂಪಿ (ಸಿಬಿಡಿಸಿ) ಜಾರಿಗೊಳಿಸುವ ಮುನ್ನ ಖಾಸಗಿ ರಂಗವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ರಾಜನ್ ಸಲಹೆ ನೀಡಿದ್ದಾರೆ.ಸರ್ಕಾರ ಜಾರಿಗೊಳಿಸುವುದಕ್ಕಿಂತಲೂ ಹೆಚ್ಚು ಹೊಸತನದಿಂದ ಕೂಡಿದ ಚಿಂತನೆಗಳನ್ನು ಖಾಸಗಿ ರಂಗದವರು ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ, ಹೀಗಾಗಿ ಎಲ್ಲಾ ದಿಕ್ಕುಗಳಲ್ಲೂ ಯೋಚಿಸಿ ಚಟುವಟಿಕಗಳನ್ನು ಆರಂಭಿಸಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕ್ರಿಪ್ಟೋಕರೆನ್ಸಿಗಳ ಹಿಂದೆ ಜಗತ್ತು ಓಡುವುತ್ತಿರುವುದನ್ನು ವಿಶ್ಲೇಷಿರುವ ಅವರು, ಒಂದೆರೆಡು ಕ್ರಿಪ್ಟೋಕರೆನ್ಸಿಗಳನ್ನು ಬಿಟ್ಟು ,ಈ ಸ್ವರೂಪದ ಎಲ್ಲಾ ಕರೆನ್ಸಿಗಳು ಸಧ್ಯದಲ್ಲೇ ಅಂತ್ಯ ಕಾಣಲಿದೆ ಎಂದಿದ್ದಾರೆ. ಚಿಟ್ ಫಂಡ್ಗಳು ತಂದೊಡ್ಡಿದ ಸಮಸ್ಯೆಯನ್ನು ಇವು ಪುನರಾವರ್ತಿಸಲಿವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಶಕ್ತಿಕಾಂತದಾಸ್ (RBI Governor) -: ಸರ್ಕಾರ ಹೊರತರಲಿರುವ ಡಿಜಿಟಲ್ ರೂಪಿ (ಸಿಬಿಡಿಸಿ) ಎಂಬ ಹೊಸ ವ್ಯವಸ್ಥೆಗೆ ಸೈಬರ್ ಭದ್ರತೆ ಹಾಗೂ ವಂಚನೆಗಳು ದೊಡ್ಡ ಸವಾಲುಗಳು ಎಂದು RBI ಗವರ್ನರ್ ಶಕ್ತಿಕಾಂತದಾಸ್ ಕಳವಳ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಯಾವುದೇ ತರಾತುರಿ ಇಲ್ಲ ಎಂದು ಅವರು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ನಕಲಿ ನೋಟುಗಳ ಹಾವಳಿ ಇತ್ತು.RBI ನ ಅಧಿಕೃತ ನೋಟುಗಳನ್ನು ನಕಲಿ ಮಾಡಲಾಗುತಿತ್ತು. ಸಿಬಿಡಿಸಿಯಲ್ಲೂ ಅಂತಹ ಯತ್ನಗಳು ನಡೆಯುವ ಬಗ್ಗೆ ಎಚ್ಚರ ವಹಿಸಲಾಗಿದ್ದು ಅಗತ್ಯ ಸೈಬರ್ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ. ಸಂಕೀರ್ಣ ವಿಚಾರವಾಗಿರುವ ಕಾರಣದಿಂದ , ಇದರ ಜಾರಿಗೆ ಕಾಲಮಿತಿ ನಿಗದಿಪಡಿಸಲಾಗದು ಎಂದು ಅವರು ಈ ಹಿಂದೆ ಹೇಳಿದ್ದರು..
ಟ್ಯೂಲಿಪ್ ಮೇನಿಯಾ -: ಖಾಸಗಿ ಕ್ರಿಪ್ಟೋಕರೆನ್ಸಿಗಳಿಂದ ಆರ್ಥಿಕ ಭದ್ರತೆಗೆ ಅಪಾಯವಿದೆ ಎಂದು ದಾಸ್ ಹೇಳಿದ್ದಾರೆ. ಇವುಗಳಲ್ಲಿ ಹೂಡಿಕೆ ಮಾಡಬೇಕಾದಲ್ಲಿ ಎಚ್ಚರವಹಿಸಿ ಎಂದು ದಾಸ್ ಸಲಹೆ ನೀಡಿದ್ದಾರೆ.ಹಾಲಂಡ್ ನಲ್ಲಿ ನಡೆದ " ಟ್ಯುಲಿಪ್ ಮೇನಿಯಾ" ವನ್ನು ಅವರು ಉಲ್ಲೇಖಿಸಿದ್ದಾರೆ. 17 ನೆಯ ಶತಮಾನದಲ್ಲಿ ಹಾಲೆಂಡ್ ನಲ್ಲಿ ಟ್ಯುಲಿಪ್ ಗಡ್ಡೆಯ ಬೆಲೆ ಇದ್ದಕ್ಕಿದ್ದಂತೆ ಸಾರ್ವಕಾಲಿಕ ಮಟ್ಟಕ್ಕೆ ಹೆಚ್ಚಾಯಿತು. ಈ ಏರಿಕೆಯು ಆ ವಸ್ತುವಿನ ಮೌಲ್ಯ ಆಧರಿಸಿ ಆಗಿದ್ದಲ್ಲ, ಆದರೆ ಮಾರಾಟಗಾರರು ಹಬ್ಬಿಸಿದ ಉಹಾಪೋಹಗಳು ಬೆಲೆಯನ್ನು ಹೆಚ್ಚಿಸಿದ್ದವು.ಮಾರಾಟಗಾರರು ತಮ್ಮ ಸ್ವಾರ್ಥಕ್ಕೆ ಬೆಲೆ ಏರಿಕೆಯ ತಂತ್ರವನ್ನು ಮಾಡಿದ್ದರು.ಹಾಗೆಯೇ ಬೆಲೆಯು ಸಾರ್ವಕಾಲಿಕ ಪತನವನ್ನು ದಾಖಲಿಸಿತ್ತು. ಹಣಕಾಸು ಮಾರುಕಟ್ಟೆಯಲ್ಲಿ ದಿಡೀರ್ ಏರಿ, ದಿಡೀರ್ ಇಳಿಯುವ ವಿದ್ಯಮಾನವನ್ನು "ಟ್ಯುಲಿಪ್ ಮೇನಿಯಾ" ಎಂದು ಕರೆಯಲಾಗುತ್ತದೆ.
ಸಮರ್ಥನೆ ಮತ್ತು ಸವಾಲುಗಳು :- ಸಿಬಿಡಿಸಿ ಅಥವಾ ಡಿಜಿಟಲ್ ರೂಪಿ ವ್ಯವಸ್ಥೆ ಜಾರಿಗೆ ಬಂದರೆ,
1.ನಿರ್ವಹಣೆ ವೆಚ್ಚ:
ಹಣಕಾಸು ವ್ಯವಸ್ಥೆ ನಿರ್ವಣೆಯ ಕಾರ್ಯದಕ್ಷತೆ ಹೆಚ್ಚುತ್ತದೆ.ಜತೆಗೆ ಹಣಕಾಸು ನಿರ್ವಹಣೆ ವೆಚ್ಚ ಕಡಿಮೆಯಾಗುತ್ತದೆ ಎಂದು ಸಚಿವೆ ಅವರ ಬಜೆಟ್ ಭಾಷಣದಲ್ಲಿ ತಿಳಿಸಿದರು.
2. ನೋಟುಗಳು ಮತ್ತು ನಾಣ್ಯಗಳು :
ಡಿಜಿಟಲ್ ರೂಪಿ ವ್ಯವಸ್ಥೆಯಲ್ಲಿ ನೋಟುಗಳನ್ನು ಮುದ್ರಿಸುವ ,ನಾಣ್ಯಗಳನ್ನು ಠಂಕಿಸುವ, ಅವುಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ ಇಡುವ, ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಉಸಾಬರಿಗಳು ಇರುವುದಿಲ್ಲ. ಹೀಗಾಗಿ ಈ ವೆಚ್ಚಗಳೆಲ್ಲಾ ಉಳಿಯುತ್ತವೆ ಎಂಬುದು ಸರ್ಕಾರದ ವಾದ.
ಸವಾಲುಗಳು - ಆದರೆ, RBI ಡಿಜಿಟಲ್ ನಿರ್ವಹಣೆಗೆ ಬ್ಲಾಕ್ ಚೈನ್ ಲೆಡ್ಜರ್ ವ್ಯವಸ್ಥೆ ಅಳವಡಿಸಿಕೊಂಡರೆ ವೆಚ್ಚ ಉಳಿತಾಯದ ಲಾಭ ದೊರೆಯುವುದಿಲ್ಲ, ಏಕೆಂದರೆ ಈಗ ಬ್ಯಾಂಕ್ ಗಳು ಬಳಸುವ ಸರ್ವರ್ ಗಳು, ತಂತ್ರಾಂಶಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಗಳನ್ನು ಬ್ಲಾಕ್ ಚೈನ್ ಆಧಾರಿತ ಡಿಜಿಟಲ್ ರೂಪಿ ನಿರ್ವಹಣೆಗೆ ಬಳಸಲು ಸಾಧ್ಯವಿಲ್ಲ, ಇದರ ನಿರ್ವಹಣೆಗೆ ಪ್ರತ್ಯೇಕ ಸರ್ವರ್, ಪ್ರತ್ಯೇಕ ತಂತ್ರಾಂಶ, ಅತ್ಯಂತ ಪ್ರಬಲವಾದ ಕಂಪ್ಯೂಟರ್ ಗಳು ಮತ್ತು ಭಾರಿ ವೇಗದ ಇಂಟರ್ನೆಟ್ ಸಂಪರ್ಕ ಎಲ್ಲವೂ ಬೇಕಾಗುತ್ತದೆ.ಇವುಗಳ ನಿರ್ವಹಣೆಗೆ ಎಂಜಿನಿಯರಿಂಗ್ ಪರಿಣಿತರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. RBI ಈ ವ್ಯವಸ್ಥೆಯನ್ನು ಜಾರಿಗೆ ತಂದರೆ ದೇಶದ ಎಲ್ಲಾ ಬ್ಯಾಂಕ್ ಗಳು ಈ ವ್ಯವಸ್ಥೆಯನ್ನು ಅಳವಡಿಸಿ ಕೊಳ್ಳಬೇಕಾಗುತ್ತದೆ.ಇದಕ್ಕಾಗಿ ಬ್ಯಾಂಕಿಂಗ್ ಉದ್ಯಮವು ಭಾರಿ ಮೊತ್ತದ ಬಂಡವಾಳ ಹೂಡಬೇಕಾಗುತ್ತದೆ.
ಎಲ್ಲೆಲ್ಲಿ ಬಳಕೆ -:
ಡಿಜಿಟಲ್ ಕರೆನ್ಸಿಯನ್ನು ವಿಶ್ವದ ಹಲವು ದೇಶಗಳು ಪ್ರಯೋಗಕ್ಕೆ ಒಳಪಡಿಸಿವೆ.87 ದೇಶಗಳು ಈ ಬಗ್ಗೆ ಚಿಂತನೆ ನಡೆಸಿದ್ದು ಈ ಪೈಕಿ 35 ದೇಶಗಳು ಕಾರ್ಯರೂಪಕ್ಕೆ ತರಲು ಅಡಿಯಿಟ್ಟಿವೆ.ಸಧ್ಯ 9 ದೇಶಗಳಲ್ಲಿ ಕೇಂದ್ರಿಯ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಸ್ತಿತ್ವದಲ್ಲಿವೆ. ಇತ್ತೀಚೆಗೆ ನೈಜೀರಿಯ ದೇಶವು ಡಿಜಿಟಲ್ ಕರೆನ್ಸಿಯನ್ನು ಪರಿಚಯಪಢಿಸಿದೆ.ಇದರ ಹೆಸರು " ಇ -ನೈರಾ' . ಬಹಮಾಸ್ ನಲ್ಲಿ " ಸ್ಯಾಂಡ್ ಡಾಲರ್" ಹೆಸರಿನ ಡಿಜಿಟಲ್ ಹಣ 2020 ರಲ್ಲಿ ಕಾರ್ಯಾರಂಭ ಮಾಡಿದೆ.
ಚೀನಾ, ದ.ಕೊರಿಯ ಸೇರಿದಂತೆ 14 ದೇಶಗಳು ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿವೆ ಎನ್ನಲಾಗಿದ್ದು ಪೂರ್ಣಪ್ರಮಾಣದ ಜಾರಿಗೆ ಮುಂದಾಗಿವೆ. ಇ-ಸಿಎನ್ ವೈ ಹೆಸರಿನ ಕರೆನ್ಸಿಯನ್ನು ಚೀನಾ ಇದೇ ತಿಂಗಳಲ್ಲಿ ಜಾರಿ ಮಾಡಬಹುದು. 2022 ರ ಕೊನೆಯ ಹೊತ್ತಿಗೆ ಕಜಕಸ್ಥಾನದಲ್ಲಿ ಸಿಬಿಡಿಸಿ ಜಾರಿಗೆ ಬರಲಿದೆ.
ಜನರ ಅಭಿಪ್ರಾಯ ಪಡೆದು ಯೋಜನೆಯ ವಿನ್ಯಾಸ ಮಾಡಲಾಗುವುದು ಎಂದು ನ್ಯೂಜಿಲ್ಯಾಂಡಿನ ಕೇಂದ್ರಿಯ ಬ್ಯಾಂಕ್ ತಿಳಿಸಿದೆ. ರಷ್ಯಾ, ಬ್ರೆಜಿಲ್ ದೇಶಗಳು ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿವೆ.
ಅಂತರಾಷ್ಟ್ರೀಯ ಸಹಕಾರ ಸಿಗದಿದ್ದರೆ ಇಂತಹ ಮಹತ್ವದ ಹಾಗೂ ಸೂಕ್ಷ್ಮ ಯೋಜನೆಗಳು ಭವಿಷ್ಯದಲ್ಲಿ ಭಾರಿ ಸಮಸ್ಯೆ ಎದುರಿಸಲಿವೆ ಎಂದು ತಜ್ಞರು ಹೇಳಿದ್ದಾರೆ.