ನಮ್ಮ ಸೂರ್ಯ ಮತ್ತು ಸೂರ್ಯನ ನಂತರ ನಮಗೆ ಹತ್ತಿರದ ಒಂದು ನಕ್ಷತ್ರ.. ಇವೆರಡರ ಮಧ್ಯದಲ್ಲಿನ ಅಗಾಧ ಕತ್ತಲೆಯಲ್ಲಿ ಗಟ್ಟಿಯಾದ ಧೂಳುಗಲ್ಲುಗಳಿಂದ, ಪರ್ವತಾಕಾರದ ಮಂಜುಗಡ್ಡೆಯ ತುಣುಕುಗಳಿಂದ ಸೂರ್ಯನನ್ನು ಸುತ್ತುವರಿದಂತೆ ಮಾಡಲ್ಪಟ್ಟ ದೈತ್ಯ ಗೋಳಾಕಾರದ ಗುಳ್ಳೆಯೇ.. ಊರ್ಟ್ ಮೋಡ (Oort cloud).
೧೯೫೦ ರಲ್ಲಿ ಇದರ ಇರುವಿಕೆಯನ್ನು ಅಂದಾಜಿಸಿದ ಡಚ್ ಖಗೋಳ ಶಾಸ್ತ್ರಜ್ಞ ಜಾನ್ ಊರ್ಟ್ ರವರ (Jan oort) ಹೆಸರನ್ನೇ ಇದಕ್ಕೆ ಕೊಟ್ಟಿದ್ದಾರೆ.
ಸೂರ್ಯನ ಸುತ್ತ ಸುತ್ತುವ ಗ್ರಹಗಳ ಕಕ್ಷೆಗಳು ಹಾಗೂ ಸೂರ್ಯಮಂಡಲದ ಅಂಚಿನಲ್ಲಿರುವ ಕೈಪರ್ ಬೆಲ್ಟ್* ಗಳು (Kuiper belt) ಸಮತಟ್ಟಾದ ತಟ್ಟೆಯಂತಿದ್ದರೆ (ಡಿಸ್ಕ್), ಊರ್ಟ್ ಮೋಡ ಮಾತ್ರ ದೊಡ್ಡ, ದಪ್ಪ-ಗೋಡೆಯ ಗೋಳದಂತೆ ರಚನೆಯಾಗಿದೆ.
*ಕೈಪರ್ ಪಟ್ಟಿಯು ಸೂರ್ಯ ಮಂಡಲದ ಅಂಚಿನಲ್ಲಿರುವ ಧೂಳು ಮತ್ತು ಗಟ್ಟಿ ಮಂಜುಗಡ್ಡೆಯ ದಪ್ಪ ತಟ್ಟೆಯಾಕಾರದ ರಚನೆಯಾಗಿದ್ದು, ಬಹುತೇಕ ಧೂಮಕೇತುಗಳು ಇಲ್ಲಿಂದಲೇ ಉತ್ಪತ್ತಿಯಾಗುತ್ತವೆ ಎಂಬುದು ತಜ್ಞರ ಅಭಿಪ್ರಾಯ.
ಊರ್ಟ್ ಮೋಡವು ಸುಮಾರು ನೂರುಕೋಟಿಯಿಂದ, ನೂರು ಸಾವಿರ ಕೋಟಿಗಟ್ಟಲೆ ಪರ್ವತಾಕಾರದ ಮಂಜುಗಡ್ಡೆಯಂತಹ ಕಾಯಗಳನ್ನು ಹೊಂದಿರಬಹುದು ಎಂದು ವಿಜ್ಞಾನಿಗಳ ಅಂದಾಜು.
(ಚಿತ್ರ ನೋಡಿ, ಕೇಂದ್ರದಲ್ಲಿ ಸಣ್ಣ ಕಕ್ಷೆಗಳಲ್ಲಿ ಸೂರ್ಯನ ಸುತ್ತ ಸುತ್ತುತ್ತಿರುವ ಗ್ರಹಗಳು ಹಾಗೂ ಅದರ ಸುತ್ತ ಬೆಳ್ಳಿ ತಟ್ಟೆಯಂತೆ ಕೈಪರ್ ಪಟ್ಟಿಯನ್ನು ಕೂಡ ನೋಡಬಹುದು.)
ಬೆಳಕಿನ ದೀಪದ ಸುತ್ತ ಸುತ್ತುವ ಪತಂಗಗಳ ಗುಂಪು ಈಗ ನಿಮಗೆ ನೆನಪಾದರೆ ಆಶ್ಚರ್ಯವಿಲ್ಲ. 😀
ಸಾಂದರ್ಭಿಕ ಚಿತ್ರ : courtesy - rocketstem.org
ಸೂರ್ಯಮಂಡಲದ ಹೊರಗಿನ, ಪ್ಲೂಟೋವಿನ ಅಂಡಾಕಾರದ ಕಕ್ಷೆಯನ್ನು ನೋಡುವುದಾದರೆ, ಹತ್ತಿರವಿದ್ದಾಗ ಅದು ಸೂರ್ಯನಿಂದ ೩೦ ಖ. ಮಾ ಮತ್ತು ದೂರವಿದ್ದಾಗ ೫೦ ಖ. ಮಾ ದೂರ ಇರುತ್ತದೆ.
ಖ.ಮಾ -> ಖಗೋಳಮಾನ ಅಥವಾ ಖಗೋಳ ಘಟಕ, Astronomical Unit (AU)
ಒಂದು ಖ. ಮಾ = ಭೂಮಿ ಮತ್ತು ಸೂರ್ಯನ ನಡುವಿನ ಅಂತರವಾಗಿದೆ. (೧೪.೯೫ ಕೋಟಿ ಕಿ. ಮೀ)
ಅದೇ ರೀತಿ, ಊರ್ಟ್ ಮೋಡದ ಒಳ ಅಂಚು ಸೂರ್ಯನಿಂದ ೨೦೦೦ ದಿಂದ ೫೦೦೦ ಖ.ಮಾ ನಷ್ಟು ದೂರ ಇದ್ದರೆ, ಹೊರ ಅಂಚು ಸೂರ್ಯನಿಂದ ೧೦,೦೦೦ ದಿಂದ ೧೦೦,೦೦೦ ಖ.ಮಾ ದಷ್ಟು ದೂರ ಇರಬಹುದು ಎಂದು ಭಾವಿಸಲಾಗಿದೆ.
(ಅಂದರೆ ಸೂರ್ಯ ಮತ್ತು ಹತ್ತಿರದ ನಕ್ಷತ್ರದ ನಡುವಿನ ಕಾಲುಭಾಗದಿಂದ ಅರ್ಧ ಭಾಗದಷ್ಟು ದೂರ)
ಸಾಂದರ್ಭಿಕ ಚಿತ್ರ : courtesy - astronomymagazine
"ಧೂಮಕೇತುಗಳ ಆಗರ" ಎಂದು ಕರೆಸಿಕೊಳ್ಳುವ ಈ ಊರ್ಟ್ ಮೋಡದಿಂದ ಕೆಲವೊಮ್ಮೆ ಬರುವ ದೀರ್ಘಾವಧಿ ಕಕ್ಷೆಗಳ ಧೂಮಕೇತುಗಳು ಸೂರ್ಯನ ಸುತ್ತಲೂ ತಿರುಗಲು ಸುಮಾರು ೨೦೦ರಿಂದ ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳುತ್ತವೆ ಎಂದು ಅಂದಾಜಿಸಲಾಗಿದೆ.
೨೦೧೪ರಲ್ಲಿ ಮಂಗಳ ಗ್ರಹದ ಬಹಳ ಹತ್ತಿರ ಹಾದು ಹೋದ ಇಂತಹ ಒಂದು ಧೂಮಕೇತು C/2013 A1 ಸೈಡಿಂಗ್ ಸ್ಪ್ರಿಂಗ್ ನ (ಮೂಲಸ್ಥಾನ ಇದೇ ಊರ್ಟ್ ಮೋಡ ಆಗಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.
ಕೆಳಗಿನ ಚಿತ್ರದಲ್ಲಿ ಗಮನಿಸಿ, ಕೆಂಪು ಗೋಳ ಮಂಗಳ ಗ್ರಹ ಹಾಗೂ ಮಸುಕಾದ ಬಿಳಿ ಚುಕ್ಕಿ ಧೂಮಕೇತು
ಈ ಸೈಡಿಂಗ್ ಸ್ಪ್ರಿಂಗ್ ಧೂಮಕೇತುವಿನ ಕಕ್ಷೆಯ ದೂರ ಎಷ್ಟೆಂದರೆ ಅದು ಇನ್ನೊಮ್ಮೆ ಸೂರ್ಯಮಂಡಲದ ಒಳಗೆ ಬರಲು ಸುಮಾರು 740,000 ವರ್ಷಗಳೇ ಹಿಡಿಯುತ್ತದೆ. 😀
ಸಾಂದರ್ಭಿಕ ಚಿತ್ರ : courtesy - nasa (hubble)
ಗ್ರಹಗಳ ನಡುವೆ ಕೆಲವೊಮ್ಮೆ ಕಂಡು ಬರುವ ದೀರ್ಘಾವಧಿ ಕಕ್ಷೆಯ ಧೂಮಕೇತುಗಳು ಊರ್ಟ್ ಮೋಡದಲ್ಲಿ ಹುಟ್ಟಿಕೊಂಡಿವೆ ಎಂದು ಭಾವಿಸಲಾಗಿದ್ದರೂ, ಅಷ್ಟು ದೂರದ ಊರ್ಟ್ ಮೋಡದಲ್ಲಿಯೇ ಯಾವುದೇ ವಸ್ತುವನ್ನು ಗಮನಿಸಲಾಗಿಲ್ಲ, ಹಾಗಾಗಿ ಸದ್ಯಕ್ಕೆ ಇದೊಂದು ಸೈದ್ಧಾಂತಿಕ ಪರಿಕಲ್ಪನೆಯಾಗಿದ್ದರೂ ದೀರ್ಘಾವಧಿಯ ಧೂಮಕೇತುಗಳ ಮೂಲಕ್ಕೆ ಇದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವಿವರಣೆಯಾಗಿಯೇ ಉಳಿದಿದೆ.
ಧೂಮಕೇತುಗಳ ಮೇಲೆ ಕಂಡುಬರುವ ಕೆಲವು ಅಣುಗಳು ಸೂರ್ಯನ ಜನನದ ಮೊದಲು ರೂಪುಗೊಂಡವಾಗಿರಬಹುದೆಂಬ ಭಾವನೆ ವಿಜ್ಞಾನಿಗಳಲ್ಲಿ ಇದೆ. ಈ ಪ್ರಾಚೀನ ಧೂಮಕೇತುಗಳ ಅಣುಗಳು ರೂಪುಗೊಳ್ಳಬಹುದಾದ ಪರಿಸ್ಥಿತಿಗಳನ್ನು ಅಧ್ಯಯನ ಮಾಡುವ ಮೂಲಕ, ವಿಜ್ಞಾನಿಗಳು ನಮ್ಮ ಸೌರವ್ಯೂಹದ ಪರಿಸರವು ಅದರ ಜನ್ಮದಲ್ಲಿ ಹೇಗಿತ್ತು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಹಾಗೂ ಸೂರ್ಯಮಂಡಲದಂತಹ ವ್ಯವಸ್ಥೆಗಳು (ನಕ್ಷತ್ರದ ಸುತ್ತ ಸುತ್ತುವ ಗ್ರಹ ಮತ್ತು ಉಪಗ್ರಹಗಳು) ಹೇಗೆ ರೂಪುಗೊಳ್ಳುತ್ತವೆ ಮತ್ತು ಹೇಗೆ ವಿಕಸನಗೊಳ್ಳುತ್ತವೆ ಎಂಬುದರ ಕುರಿತು ಸುಳಿವುಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ.
ಊರ್ಟ್ ಮೋಡವನ್ನು ಅನ್ವೇಷಿಸಲು ಇನ್ನೂ ಯಾವುದೇ ನೌಕೆಯನ್ನು ಕಳುಹಿಸಲಾಗಿಲ್ಲ, ಆದರೆ ಈಗಾಗಲೇ ಬಾಹ್ಯಾಕಾಶದಲ್ಲಿರುವ ಐದು ನೌಕೆಗಳು : ವಾಯೇಜರ್ 1, ವಾಯೇಜರ್ 2, ನ್ಯೂ ಹೊರೈಜನ್ಸ್, ಪಯೋನಿಯರ್ 10 ಮತ್ತು ಪಯೋನಿಯರ್ 11, ನಿರ್ವಾತದಲ್ಲಿ ಅಲೆಯುತ್ತಾ ಊರ್ಟ್ ಮೋಡವನ್ನು ತಲುಪುವ ನಿರೀಕ್ಷೆ ಇದೆ.
ಊರ್ಟ್ ಎಷ್ಟು ದೂರದಲ್ಲಿದೆ ಎಂದರೆ, ಎಲ್ಲಾ ಐದು ಬಾಹ್ಯಾಕಾಶ ನೌಕೆಗಳ ಶಕ್ತಿಯ ಮೂಲಗಳು ಊರ್ಟ್ ನ ಒಳ ಅಂಚನ್ನು ತಲುಪುವ ನೂರಾರು ವರ್ಷಗಳ ಮೊದಲೇ ಸತ್ತಿರುತ್ತವೆ🙄
ಸಾಂದರ್ಭಿಕ ಚಿತ್ರ : courtesy - Odessymagazine
ವಾಯೇಜರ್ 1 : ದಿನಕ್ಕೆ ಸುಮಾರು ಒಂದು ಮಿಲಿಯನ್ ಮೈಲುಗಳಷ್ಟು ಪ್ರಯಾಣಿಸಿದರೂ, ಅದು ಊರ್ಟ್ ಮೋಡದ ಒಳಗಿನ ಗಡಿಯನ್ನು ತಲುಪಲು ಸುಮಾರು 300 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಬಹುಶಃ ದೂರದ ಭಾಗದಿಂದ ನಿರ್ಗಮಿಸಲು ಇನ್ನೂ 30,000 ವರ್ಷಗಳನ್ನು ತೆಗೆದುಕೊಳ್ಳುತ್ತದೆ..☺️
ಕೆದಕಿದಷ್ಟೂ ಆಳವಾಗುವ, ತಿಳಿದಷ್ಟೂ ವಿಶಾಲವಾಗುವ, ಬ್ರಹ್ಮಾಂಡದ ಅಗಾಧತೆ ಹಾಗೂ ಆಯಸ್ಸಿನ ಮುಂದೆ ಅತೀ ಸಣ್ಣ ಗಾತ್ರದ ಹಾಗೂ ಅತೀ ಅತೀ ಅತೀ ಅತೀ ಸಣ್ಣ ಆಯಸ್ಸಿನ ಮನುಷ್ಯನ ಎಡೆಬಿಡದ ಪ್ರಯತ್ನಕ್ಕೆ ಸೃಷ್ಟಿಯೇ ಮನಸೋತು ತನ್ನ ರಹಸ್ಯಗಳನ್ನು ಬಿಟ್ಟುಕೊಡಬೇಕೇನೋ…