ಯಾವುದೇ ವಸ್ತುವನ್ನು ಉತ್ಪಾದನೆ ಮಾಡುವಾಗ ಅದರ ಉತ್ಪನ್ನಗಳ ಇಡೀ ಜೀವನಚಕ್ರವನ್ನು ಅಧ್ಯಯನ ಮಾಡಿ ಯಾವುದೇ ಹಂತದಲ್ಲೂ - ಸಾಮಗ್ರಿಗಳನ್ನು ಪಡೆಯುವಾಗಿನಿಂದ ಹಿಡಿದು ಉತ್ಪಾದನೆ ಕ್ರಿಯೆಯ ವೇಳೆ ಮತ್ತು ಅದು ಗ್ರಾಹಕನಿಗೆ ತಲುಪಿ ಅವನು ಅದನ್ನು ಉಪಯೋಗಿಸಿ ಮಿಕ್ಕಿದ್ದನ್ನು ಬಿಸಾಡುವವರೆಗೆ - ಇಷ್ಟೂ ಹಂತಗಳಲ್ಲಿ ಏನಾಗಬೇಕು, ಏನಾಗಬಾರದು ಎಂದರೆ
೧. ಪರ್ಯಾವರಣಕ್ಕೆ ಹಾನಿ ಆಗಬಾರದು ಅಥವಾ ತುಂಬಾ ಕಡಿಮೆ ಹಾನಿ ಆಗಬೇಕು,
೨. ಉತ್ಪಾದನೆಯಿಂದ ಲಾಭ ಆಗಬೇಕು,
೩. ಸಾಮಗ್ರಿಗಳು ಮತ್ತು ಎನರ್ಜಿ ಪೋಲಾಗಬಾರದು.
ಈ ನಿರ್ಬಂಧಗಳನ್ನು ಪಾಲಿಸಿ ನಡೆಸುವ ಉತ್ಪಾದನೆಯೇ "ಬಿಡದೆ ನಡೆಸಬಹುದಾದ", "ಊರ್ಜಿತವಾಗಬಲ್ಲ", "ಸಮರ್ಥನೀಯ", "ಸುಸ್ಥಿರ" ಅಂದರೆ sustainable ಉತ್ಪಾದನೆ.
ಒಂದು ಉದಾಹರಣೆ:
ಚೆನ್ನೈನ ಬಿಎಂಡಬ್ಲ್ಯು ಕಾರ್ಖಾನೆಯಲ್ಲಿ ಈ ವರ್ಷದ ಕೊನೆಯ ಹೊತ್ತಿಗೆ ನೂರಕ್ಕೆ ನೂರರಷ್ಟು ವಿದ್ಯುತ್ ಅನ್ನು ಬಿಸಿಲಿನಿಂದಲೇ ತಯಾರಿಸುತ್ತಾರೆ.
ಅಲ್ಲಿನ ಸೋಲಾರ್ ವಿದ್ಯುತ್ ಸ್ಥಾವರ ಹೀಗಿದೆ:
ಎಲ್ಇಡಿ ಬೋರ್ಡುಗಳ ಉಪಯೋಗದ ಕಾರಣ ವಿದ್ಯುತ್ ಬಳಕೆ ೫೦% ಕಡಿಮೆಯಾಗಿದೆ.
ಎಚ್ ವಿ ಎಲ್ ಎಸ್ (high volume low speed) ಫ್ಯಾನುಗಳ ಉಪಯೋಗದ ಕಾರಣ ವಿದ್ಯುತ್ ಬಳಕೆ ೩೦% ಕಡಿಮೆಯಾಗಿದೆ.
ಮಳೆಗಾಲದಲ್ಲಿ ಮಳೆನೀರನ್ನು ಕೂಡಿಟ್ಟು ಕೊಂಡು ಇಡೀ ಫ್ಯಾಕ್ಟರಿಯಲ್ಲಿ ಇಡೀ ವರ್ಷ ಅಷ್ಟೇ ನೀರಲ್ಲಿ ಉತ್ಪಾದನೆ ಕಾರ್ಯ ನಡೆಯುತ್ತಿದೆ. ಉಪಯೋಗಿಸಿದ ನೀರನ್ನು ಶುದ್ಧೀಕರಿಸಿ ಮರು ಉಪಯೋಗಕ್ಕೆ ಬಳಸುತ್ತಾರೆ.
ಫ್ಯಾಕ್ಟರಿಯ ಕಾಲು ಭಾಗದಷ್ಟು ವಿಸ್ತೀರ್ಣದಲ್ಲಿ ಕಾಡನ್ನು ಬೆಳೆಸಿದ್ದಾರೆ.
ಬಿಎಂಡಬ್ಲ್ಯು ಕಾರಿನ ಹಳೇ ಬಿಡಿ ಭಾಗಗಳನ್ನು ಫ್ಯಾಕ್ಟರಿಯಲ್ಲಿ ಕರಗಿಸಿ ಉತ್ಪಾದನೆಗೆ ಮತ್ತೆ ಬಳಸಬಹುದಾಗಿದೆ. ಹೀಗಾಗಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ತಪ್ಪುತ್ತದೆ.
ಅನಗತ್ಯವಾದ ಪ್ರಿಂಟಿಂಗ್ ಇಲ್ಲಿ ಮಾಡುವುದಿಲ್ಲ. ಹೀಗಾಗಿ ಪರೋಕ್ಷವಾಗಿ ಕಾಡು ಉಳಿಯುತ್ತದೆ.
ಕ್ಯಾಂಟೀನ್ ಆಹಾರ ಉಳಿದುಕೊಂಡರೆ ಅದನ್ನು ಗೊಬ್ಬರವನ್ನಾಗಿ ಮಾಡಿ ಉಪಯೋಗಿಸುತ್ತಾರೆ.
ಅಗತ್ಯವಿದ್ದಾಗ ಮಾತ್ರ ಏಸಿ, ಲ್ಯಾಪ್ ಟಾಪ್ ಮತ್ತು ಲೈಟುಗಳನ್ನು ಆನ್ ಮಾಡುತ್ತಾರೆ.
ಇಷ್ಟೆಲ್ಲಾ ಕ್ರಮಗಳಿಂದ ಬಿಎಂಡಬ್ಲ್ಯು ಕಾರ್ಖಾನೆ sustainable manufacturing ಸಾಧಿಸುತ್ತಿದೆ.