ಜೋಗ ಜಲಪಾತಕ್ಕೆ ವರ್ಷಪೂರ್ತಿ ಭೇಟಿ ಕೊಡಬಹುದು. ಮಳೆಗಾಲದಲ್ಲಿ ನೀರಿರುತ್ತದೆ ಅನ್ನುವುದನ್ನ ಬಿಟ್ಟರೆ ಬೇರೇನನ್ನೂ ನೋಡಲಾಗದು. ಅಲ್ಲಿ ಜಲಪಾತದ ಜೊತೆಗೆ ನೋಡಬಹುದಾದ ಬೇರೆ ಸ್ಥಳಗಳೂ ಇವೆ . ಮಳೆಗಾಲದಲ್ಲಿ ಹೋದರೆ ಅವನ್ನೆಲ್ಲ ನೋಡಲಾಗದು.
- ಜೂನ್, ಜುಲೈ, ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಜಲಪಾತದ ಸೌಂದರ್ಯ ಸವಿಯಬಹುದು. ಒಮ್ಮೊಮ್ಮೆ ಜಲಾಶಯದಿಂದ ನೀರನ್ನು ಹೊರಬಿಡದಿದ್ದರೆ ಮಳೆಗಾದಲ್ಲಿ ಕೂಡಾ ಜಲಪಾತದ ರಮಣೀಯ ಸೌಂದರ್ಯ ಸವಿಯಲಾಗದು.
- ಭೋರ್ಗರೆಯುವ ನೀರಿನ ಸಪ್ಪಳವು ಕಿಲೊಮೀಟರ್‌ಗಟ್ಟಲೆ ದೂರದವರೆಗೂ ಕೇಳಿಸುತ್ತದೆ.
- ತಮಾಷೆಯಂದರೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗದಿಂದ ನಾವು ನೋಡುವ ಜಲಪಾತ ಇರುವುದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ!! ಅದರ ನಿಜವಾದ ಹೆಸರು ಗೇರುಸೊಪ್ಪ ಜಲಪಾತ.
- ಸುಮಾರು ಕಾಲು ಕಿಲೋ ಮೀಟರ್ ಎತ್ತರದ ಬೆಟ್ಟದಿಂದ ಧುಮುಕುವ ಜಲಪಾತದ ಬುಡಕ್ಕೆ ತಲುಪಲು ಜೋಗದಿಂದ ಮೆಟ್ಟಿಲುಗಳು ಇವೆ. ಮಳೆಗಾಲದ ಹೆಚ್ಚಿನ ದಿನಗಳಲ್ಲಿ ಮೆಟ್ಟಿಲು ಇಳಿದು ಬೆಟ್ಟದ ಬುಡ ತಲುಪಲು ಸಾಮಾನ್ಯವಾಗಿ ಅನುಮತಿ ಇರುವುದಿಲ್ಲ.
- ಜಲಪಾತದ ಸೌಂದರ್ಯವು ಬ್ರಿಟಿಷ್ ಬಂಗಲೆ ಕಡೆಯಿಂದ ಇನ್ನೂ ರೋಮಾಂಚಕವಾಗಿ ಇರುತ್ತದೆ. ಆದರೆ ಜೋರು ಮಳೆಗಾಲದಲ್ಲಿ ನಮಗೆ ಆ ಅವಕಾಶ ಕೂಡಾ ಲಭಿಸದೆ ಇರಬಹುದು.
- ಜೋಗದಿಂದ ಸುಮಾರು ಹನ್ನೆರಡು ಕಿ.ಮಿ. ದೂರದ ಕಾರ್ಗಲ್‌ನಲ್ಲಿ ಶರಾವತಿ ನದಿಗೆ ಕಟ್ಟಿದ ಆಣೆಕಟ್ಟು ಇದೆ. 193 ಅಡಿ ಎತ್ತರದ ಆಣೆಕಟ್ಟಿನ ಉದ್ದ 2.74 ಕಿ.ಮಿ. ಅದೇ ಲಿಂಗನಮಕ್ಕಿ ಡ್ಯಾಮ್.
- ಪವರ್ ಜನರೇಟಗ್ ಸ್ಟೇಷನ್ ಕೂಡಾ ನೋಡಬಹುದಾದ ಸ್ಥಳ. ಇತ್ತೀಚೆಗೆ ಸಾರ್ವಜನಿಕರಿಗೆ ಪ್ರವೇಶ ಇದೆಯೋ ಇಲ್ಲವೊ ಗೊತ್ತಿಲ್ಲ.
- ಜೋಗ ಜಲಪಾತದ ಹತ್ತಿರದಲ್ಲಿಯೇ ವಾಟರ್ ಸ್ಪೋರ್ಟ್ಸ್ ಕೂಡಾ ಇದೆ. ಮಳೆಯ ದಿನಗಳಲ್ಲಿ ಅವು ಇರದೇ ಇರಬಹುದು.
ಇವೆಲ್ಲ ನಿಜ. ಆದರೆ ಜೋಗವು ಹೇಗಿದೆ?
ಪ್ರಕೃತಿಯ ಸೌಂದರ್ಯ ಸವಿಯಲು ನಿರ್ವಿವಾದವಾಗಿ ನಾವಲ್ಲಿಗೆ ಹೋಗಲೇಬೇಕು. ಲಕ್ಷಗಟ್ಟಲೆ ಪ್ರವಾಸಿಗರು ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ , ಪ್ರವಾಸಿಗರ ಅನುಕೂಲಕ್ಕಾಗಿ ನಮ್ಮ ಪ್ರವಾಸೋದ್ಯಮ ಇಲಾಖೆ ಅಥವಾ ಸರಕಾರ ಏನು ಮಾಡಿದೆ?
- ಕಿತ್ತುಹೋದ ನೆಲ ಹಾಸುಗಳು, ಮುರಿದು ನೇತಾಡುತ್ತಿರುವ ರೇಲಿಂಗುಗಳು, ಗುಣಮಟ್ಟವಿಲ್ಲದ ರೆಸ್ಟೋರೆಂಟ್ ಗಳು, ತುಕ್ಕು ಹಿಡಿದಿರುವ ಕಬ್ಬಿಣದ ಸೇತುವೆ, ಎಲ್ಲೆಂದರಲ್ಲಿ ಕಣ್ಣಿಗೆ ರಾಚುವ ಕಸದ ರಾಶಿ. ಕಿತ್ತು ಹೋಗಿರುವ ಮೆಟ್ಟಿಲುಗಳು.
- ಇವು ನಾವೆಲ್ಲರೂ ಸೇರಿ ಮಾಡಿದ ಸುಂದರ ಜೋಗ. ಬಹಳಷ್ಟು ಬಾರಿ ನಾವು ಅಧಿಕಾರಿಗಳನ್ನು ದೂಷಿಸುವ ಮೊದಲು, "ಇಂತಹ ಸುಂದರ ತಾಣವನ್ನು ಹಾಳು ಮಾಡಲು ನಾವೆಷ್ಟು ಕಾಣಿಕೆ ನೀಡಿದ್ದೇವೆ" ಎಂದು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು.
- ಇನ್ನು , ಬ್ರಟಿಷ್ ಬಂಗಲೆ ಕಡೆ ಹೋದರೆ ಸುರಕ್ಷತೆ ಅನ್ನುವ ಪದ ಕೇವಲ ಶಬ್ದಕೋಶಕ್ಕಷ್ಟೆ ಸೀಮಿತ ಎಂದು ಅನಿಸುತ್ತದೆ.
ಅಧಿಕಾರಿಗಳ ಕರ್ತವ್ಯಲೋಪ, ಪ್ರವಾಸಿಗರ ಅಶಿಕ್ಷಿತ ವರ್ತನೆ ಒಂದು ಸುಂದರ ಪ್ರವಾಸಿ ತಾಣದ ಸೌಂದರ್ಯಕ್ಕೆ ಮಸಿ ಬಳಿದಿರುವುದಂತೂ ಸತ್ಯ.