ಭಾರತೀಯ ರಿಸರ್ವ್ ಬ್ಯಾಂಕ್ ನ ರೆಪೋ ರೇಟ್ ಮತ್ತು ರಿವರ್ಸ್ ರೆಪೋ ರೇಟ್ ಎಂದರೇನು? ಮತ್ತು ಅದು ಹಣದುಬ್ಬರದ‌ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

SANTOSH KULKARNI
By -
0

 ನಮಗೆ ಸಾಲ ಬೇಕೆಂದಾಗ ನಾವು ಏನು ಮಾಡುತ್ತೇವೆ ? ಬ್ಯಾಂಕ್ ನ‌ ಬಳಿ ಹೋಗಿ ಸಾಲ‌ ಕೇಳುತ್ತೇವೆ, ಅವರು ಏನು ಮಾಡುತ್ತಾರೆ ? ಸಾಲಕ್ಕೆ ಇಂತಿಷ್ಟು ಪ್ರತಿಶತ ಬಡ್ಡಿ ಹಾಕಿ ನಮಗೆ ಸಾಲ‌ ಕೊಡುತ್ತಾರೆ.

ಇದು ಜನಸಾಮಾನ್ಯರ ವಿಷಯವಾಯಿತು. ಇದೇ ರೀತಿ ಬ್ಯಾಂಕುಗಳಿಗೆ ಕೂಡಾ ಇತರರಿಗೆ ಅಥವಾ ಕಂಪನಿಗಳಿಗೆ ಸಾಲ‌ ಕೊಡಲು ಹಣ ಬೇಕಾಗುತ್ತದೆ ಅವರು ಆ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನ‌ ಬಳಿ ಸಾಲ‌ ಕೇಳುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಒಂದು ‌ನಿರ್ದಿಷ್ಟ ಪ್ರತಿಶತ ಬಡ್ಡಿ ವಿಧಿಸಿ ಬ್ಯಾಂಕಿಗೆ ಸಾಲ‌ ಕೊಡುತ್ತದೆ‌. ಭಾರತೀಯ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕುಗಳಿಗೆ ಸಾಲ ಕೊಡುವಾಗ ಹಾಕುವ ಬಡ್ಡಿದರವನ್ನೇ ರೆಪೋ ರೇಟ್ ಎನ್ನುತ್ತಾರೆ.

ಅದೇ ರೀತಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇದ್ದಾಗ ಅಥವಾ ಶನಿವಾರ ಭಾನುವಾರ ಇತ್ಯಾದಿ ದಿನಗಳಲ್ಲಿ ತಮ್ಮ ಬಳಿ ಇರುವ ಜನರ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನ‌ ಬಳಿ ಅತ್ಯಂತ ಅಲ್ಪಾವಧಿಗೆ ಠೇವಣಿ ಇಡುತ್ತದೆ. ಆ ಠೇವಣಿ‌ ಇಟ್ಟ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ನೀಡುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಉಳಿದ ಬ್ಯಾಂಕುಗಳು ಇಟ್ಟ ಠೇವಣಿಗೆ ಕೊಡುವ ಬಡ್ಡಿಯ ದರವನ್ನು ರಿವರ್ಸ್ ರೆಪೊ ರೇಟ್ ಎನ್ನುತ್ತಾರೆ.

ರೆಪೋ ರೇಟ್ ಮತ್ತು ಹಣದುಬ್ಬರ ಒಂದಕ್ಕೊಂದು ಹೇಗೆ ಸಂಬಂಧ ಹೊಂದಿದೆ ?

ರೆಪೋ ರೇಟ್ ಹೆಚ್ಚಾದಾಗ ಉಳಿದ ಬ್ಯಾಂಕ್ ಗಳು ಸಹ ಜನರಿಗೆ ಲೋನ್ ನೀಡುವಾಗ ಬಡ್ಡಿದರವನ್ನು ಹೆಚ್ಚಿಸುತ್ತವೆ. ಬಡ್ಡಿದರ ಹೆಚ್ಚಾದಾಗ ಜನಸಾಮಾನ್ಯರು ಲೋನ್ ನ್ನು ಕಡಿಮೆ‌ ತೆಗೆದುಕೊಳ್ಳುತ್ತಾರೆ ಮತ್ತು ತೆಗೆದುಕೊಂಡ ಲೋನ್ ನ್ನು ಬೇಕಾಬಿಟ್ಟಿ ಖರ್ಚು ಮಾಡುವುದಿಲ್ಲ. ಹಾಗಾಗಿ ಮಾರ್ಕೆಟ್ ನಲ್ಲಿ ಡಿಮ್ಯಾಂಡ್ ಕಡಿಮೆ ಆಗುತ್ತದೆ ಮತ್ತು ಹಣದುಬ್ಬರ ಇಳಿಯುತ್ತದೆ.

ಒಂದು ಉದಾಹರಣೆ ನೀಡುತ್ತೇನೆ.

ನಿಮಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಲೋನ್ ಸಿಕ್ಕಿತು ಎಂದಿಟ್ಟುಕೊಳ್ಳಿ, ನೀವು ಮನೆಗೆ ಏನೋ ಸಿಹಿತಿಂಡಿ ತೆಗೆದುಕೊಂಡು ಹೋಗಬೇಕು ಎಂದುಕೊಂಡು ಮಿಠಾಯಿ ಅಂಗಡಿಗೆ ಹೋದಿರಿ. ಹೋದವರೆ ಮಿಠಾಯಿಯ ರೇಟ್ ಎಷ್ಟು ಎಂದೂ ಕೇಳಲಿಲ್ಲ. ಡೈರೆಕ್ಟ್ ಈ ಮಿಠಾಯಿ 1 ಕೆಜಿ ಪ್ಯಾಕ್ ಮಾಡಿ ಎಂದಿರಿ ಏಕೆಂದರೆ ನಿಮ್ಮ ಬಳಿ‌ ಹಣವಿದೆ‌.‌ ಇದನ್ನು ಅರಿತ ಅಂಗಡಿಯವ ಮಿಠಾಯಿಯ ಬೆಲೆ 100₹ ಇದ್ದರೆ ₹110 ಎನ್ನುತ್ತಾನೆ. ನೀವು ಏನನ್ನೂ ಕೇಳದೆ ಮಿಠಾಯಿ ತೆಗೆದುಕೊಂಡು ಮನೆಗೆ ಬರುತ್ತೀರಿ.

ಅದೇ ನಿಮಗೆ ಹೆಚ್ಚು ಬಡ್ಡಿದರದಲ್ಲಿ ಲೋನ್ ಸಿಕ್ಕಿದ್ದರೆ ನೀವು ಖರ್ಚು ಮಾಡಲು ಹಿಂದೆ ಮುಂದೆ ನೋಡುತ್ತೀರಿ.

ಮಿಠಾಯಿ ಅಂಗಡಿಗೆ ಹೋದರೆ 1 ಕೆಜಿ ತೆಗದುಕೊಳ್ಳುವಲ್ಲಿ ಅರ್ಧ ಕೆಜಿ‌ ತೆಗೆದುಕೊಳ್ಳುವಿರಿ,‌ ಬೇಡಿಕೆ ಕಮ್ಮಿಯಾಗಿದ್ದನ್ನು ಅರಿತ ಅಂಗಡಿಗಾರ 100₹ ಇರುವುದನ್ನು 95 ಗೆ ಕೊಡುತ್ತಾನೆ. ಹೀಗೆ ಹಣದುಬ್ಬರ ಕಡಿಮೆ ಆಗುತ್ತದೆ.

ರೆಪೋ ರೇಟ್ ಹೆಚ್ಚಿದ್ದರೆ ಹಣದುಬ್ಬರ ಕಡಿಮೆಯಾಗುತ್ತದೆ.

ರೆಪೋ ರೇಟ್ ಕಡಿಮೆ‌ ಇದ್ದರೆ ಹಣದುಬ್ಬರ ಹೆಚ್ಚಾಗುತ್ತದೆ.

[ ನನ್ನ ಪ್ರಕಾರ ರೆಪೋ ರೇಟ್ ನ‌ ಮೇಲೆಯೆ ಪೂರ್ಣವಾಗಿ ಹಣದುಬ್ಬರ ನಿಂತಿಲ್ಲ. ಉದಾಹರಣೆಗೆ ಎಲ್ಲರೂ ಲೋನ್ ತೆಗೆದುಕೊಂಡೇ ಜೀವನ ಮಾಡುತ್ತಾರೆಯೆ ? ಖಂಡಿತ ಇಲ್ಲ‌. ಕಚ್ಚಾ ವಸ್ತುಗಳ ಬೆಲೆ ಏರಿದರೆ ಖಂಡಿತವಾಗಿ ಸಿಧ್ದವಸ್ತುಗಳ ಬೆಲೆ ಏರಿಕೆಯಾಗುತ್ತದೆ.ಆದರೂ ತಕ್ಕಮಟ್ಟಿಗೆ ರೆಪೋ ರೇಟ್ ಮೇಲೆ ಹಣದುಬ್ಬರ ನಿರ್ಧರಿತವಾಗಿರಬಹುದು.]

Post a Comment

0Comments

Post a Comment (0)