ಪಂಚಾಂಗ ಎಂಬುದು ಪ್ರತಿ ದಿನವೂ ಬದಲಾಗುವ ಸಮಯದ ಐದು ಅಂಗಗಳನ್ನು ತಿಳಿಸುವ ಹಿಂದೂ ಕ್ಯಾಲೆಂಡರ್. ಈ ಐದು ಅಂಗಗಳು - ಸೌರದಿನ(ವಾರ), ನಕ್ಷತ್ರ, ಚಂದ್ರದಿನ(ತಿಥಿ), ಅರ್ಧದಿನ(ಕರಣ) ಮತ್ತು ಸೂರ್‍ಯಚಂದ್ರರ ನಡುವಿನ ಕೋನ(ಯೋಗ).
ರಾಶಿ ಮತ್ತು ನಕ್ಷತ್ರ:
ಪಂಚಾಂಗಗಳನ್ನು ಅರಿಯಲು ಮೊದಲು ರಾಶಿ ಎಂದರೆ ಏನೆಂದು ತಿಳಿಯೋಣ. ರಾಶಿ ಎಂದರೆ ನಕ್ಷತ್ರಗಳ ಗುಂಪು. ಒಂದೊಂದು ನಕ್ಷತ್ರವೂ ತಾರೆಗಳ ಸಮೂಹ.
ವಾಸ್ತವವಾಗಿ ಭೂಮಿ ಸೂರ್ಯನ ಸುತ್ತ ಸುತ್ತುವಾಗ ಸೂರ್ಯ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ರಾಶಿಗಳ ಮುಂದೆ ಹಾದುಹೋಗುವ ಹಾಗೆ ಕಾಣುತ್ತದೆ.
ಹಾಗಾಗಿ ನಾವು ಸೂರ್ಯನೇ ರಾಶಿಯಿಂದ ರಾಶಿಗೆ ಸುತ್ತುತ್ತಾನೆ ಎಂದು ಕಲ್ಪಿಸಿಕೊಳ್ಳುತ್ತೇವೆ. ಹಾಗೆಯೇ ಚಂದ್ರನೂ ರಾಶಿಯಿಂದ ರಾಶಿಗೆ ಚಲಿಸುತ್ತದೆ.
ಭೂಮಿ, ಸೂರ್ಯ, ಚಂದ್ರ, ರಾಶಿಗಳು ಮತ್ತು ನಕ್ಷತ್ರಗಳನ್ನು ಅರ್ಥ ಮಾಡಿಕೊಳ್ಳಲು ಒಂದು ಗಡಿಯಾರದ ಮುಖವನ್ನು ನೋಡಿ. ಒಂದೇ ಒಂದು ವ್ಯತ್ಯಾಸ - ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದರಿಂದ ಈ ಗಡಿಯಾರದ ಮುಳ್ಳುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ.
ಗಡಿಯಾರದ ಮುಖದ ಕೇಂದ್ರದಲ್ಲಿ ಭೂಮಿ ಇದೆ. ಚಿಕ್ಕ ಮುಳ್ಳಿನ ತುದಿಯಲ್ಲಿ ಸೂರ್ಯ ಹಾಗೂ ದೊಡ್ಡ ಮುಳ್ಳಿನ ತುದಿಯಲ್ಲಿ ಚಂದ್ರ ಇದ್ದಾರೆ.
ವೃತ್ತಾಕಾರದಲ್ಲಿ 1ರಿಂದ 12 ರವರೆಗೆ ಇರುವ ಅಂಕಿಗಳು ಹನ್ನೆರಡು ರಾಶಿಗಳನ್ನು ತೋರಿಸುತ್ತವೆ. ಪ್ರತಿಯೊಂದು ರಾಶಿಯ ಕೋನ 360/12 = 30 ಡಿಗ್ರಿ.
ಅದೇ ರೀತಿಯಲ್ಲಿ ಒಂದು ವೃತ್ತದ ಸುತ್ತ 1ರಿಂದ 27 ರವರೆಗೆ ಅಂಕಿಗಳನ್ನು ಕಲ್ಪಿಸಿಕೊಳ್ಳಿ.
ಇವು 27 ನಕ್ಷತ್ರಗಳನ್ನು ತೋರಿಸುತ್ತವೆ. ಒಂದೊಂದು ನಕ್ಷತ್ರವೂ ಒಂದೊಂದು ತಾರಾಸಮೂಹ. ಪ್ರತಿಯೊಂದು ನಕ್ಷತ್ರದ ಕೋನ 360/27 = 13 ಡಿಗ್ರಿ 20 ನಿಮಿಷಗಳು. ಇದನ್ನು ನಾಲ್ಕು ಸಮನಾದ ಭಾಗಗಳನ್ನು ಮಾಡಿ ಒಂದೊಂದು ಭಾಗಕ್ಕೂ ಪಾದ ಎನ್ನುತ್ತಾರೆ. ಒಟ್ಟು 27*4=108 ಪಾದಗಳು. ಅಂದರೆ ಒಂದು ರಾಶಿಯಲ್ಲಿ ಒಂಬತ್ತು ಪಾದಗಳು ಅಥವಾ ಎರಡೂಕಾಲು ನಕ್ಷತ್ರಗಳಿರುತ್ತವೆ.
ವಾರ(ಸೂರ್ಯನ ದಿನ):
ಚಿಕ್ಕ ಮುಳ್ಳು ಒಂದು ಸುತ್ತು ಬರುವ ಸಮಯ ಒಂದು ಸಂವತ್ಸರ. ಸೂರ್ಯ 12 ರಾಶಿಗಳನ್ನು ದಾಟಲು ಒಂದು ವರ್ಷ ತೆಗೆದುಕೊಳ್ಳುತ್ತಾನೆ. ಸೂರ್ಯೋದಯದಿಂದ ಮುಂದಿನ ಸೂರ್ಯೋದಯದ ಕಾಲವನ್ನು ಒಂದು ವಾರ (ದಿನ) ಎಂದು ಕರೆಯುತ್ತಾರೆ. (ವಾರ ಎಂದರೆ ಸಪ್ತಾಹ ಎಂದುಕೊಳ್ಳಬೇಡಿ.) ಒಂದು ಸಂವತ್ಸರದಲ್ಲಿ 365.25 ದಿನಗಳಿವೆ. ಅಂದರೆ ಸೂರ್ಯ ಒಂದೊಂದು ರಾಶಿಯಲ್ಲಿ 29 ರಿಂದ 32 ದಿನಗಳ ಕಾಲ ಕಳೆಯುತ್ತಾನೆ. ಈ ಅವಧಿಗಳನ್ನು ಸೌರಮಾಸಗಳೆಂದು ಕರೆಯುತ್ತಾರೆ.
12 ರಾಶಿಗಳಲ್ಲಿ 27 ನಕ್ಷತ್ರಗಳಿವೆ ಎಂದು ಹೇಳಿದ್ದೆ. ಸೂರ್ಯ ಒಂದೊಂದು ನಕ್ಷತ್ರದಲ್ಲಿ 365.25/27 = 13.5 ದಿನಗಳ ಕಾಲ ಇರುತ್ತಾನೆ.
ವ್ಯಕ್ತಿ ಹುಟ್ಟುವ ಸಮಯದಲ್ಲಿ ಸೂರ್ಯನಿರುವ ನಕ್ಷತ್ರವನ್ನು ಆತನ ಮಹಾನಕ್ಷತ್ರ ಎನ್ನುತ್ತಾರೆ.
ದೊಡ್ಡ ಮುಳ್ಳು ಒಂದು ಸುತ್ತು ಬರುವ ಸಮಯ ಒಂದು ತಿಂಗಳು. ಚಂದ್ರ ಭೂಮಿಗೆ ಒಂದು ಸುತ್ತು ಬರಲು ಒಂದು ಮಾಸ ತೆಗೆದುಕೊಳ್ಳುತ್ತಾನೆ.
ಚಿಕ್ಕ ಮುಳ್ಳು ಒಂದು ಅಂಕೆಯಿಂದ ಮುಂದಿನ ಅಂಕೆಗೆ ಹೋಗುವ ಸಮಯದಲ್ಲಿ ದೊಡ್ಡ ಮುಳ್ಳು ಒಂದು ಸುತ್ತು ಹೊಡೆಯುತ್ತದೆ. ಹಾಗೆಯೇ ಸೂರ್ಯ ಒಂದು ರಾಶಿ ದಾಟುವ ಸಮಯದಲ್ಲಿ ಚಂದ್ರ ಎಲ್ಲ 12 ರಾಶಿಗಳನ್ನು ಮತ್ತು 27 ನಕ್ಷತ್ರಗಳನ್ನು ದಾಟುತ್ತಾನೆ. ಅಂದರೆ ಚಂದ್ರ ಒಂದೊಂದು ರಾಶಿಯಲ್ಲಿ ಸುಮಾರು ಎರಡೂವರೆ ದಿನ ಕಳೆಯುತ್ತಾನೆ. ಹಾಗೂ ಒಂದೊಂದು ನಕ್ಷತ್ರದಲ್ಲಿ ಸುಮಾರು ಒಂದು ದಿನ ಇರುತ್ತಾನೆ.
ವ್ಯಕ್ತಿ ಹುಟ್ಟುವ ಸಮಯದಲ್ಲಿ ಚಂದ್ರನಿರುವ ನಕ್ಷತ್ರವನ್ನು ನಿತ್ಯನಕ್ಷತ್ರ/ಜನ್ಮನಕ್ಷತ್ರ ಎನ್ನುತ್ತಾರೆ.
ಲಗ್ನ:
ವ್ಯಕ್ತಿ ಹುಟ್ಟುವ ಸಮಯದಲ್ಲಿ ಪೂರ್ವದ ದಿಗಂತದಲ್ಲಿ ಯಾವ ರಾಶಿ, ನಕ್ಷತ್ರದ ಪಾದ ಹುಟ್ಟುತ್ತಿರುತ್ತದೋ ಆ ಕೋನ ವ್ಯಕ್ತಿಯ ಲಗ್ನವನ್ನು ಸೂಚಿಸುತ್ತದೆ.
ಪ್ರತಿ ಎರಡು ಗಂಟೆಗಳ ಕಾಲದ ನಂತರ ಲಗ್ನದ ರಾಶಿ ಬದಲಾಗುತ್ತದೆ.
ಜನ್ಮನಕ್ಷತ್ರ ಮತ್ತು ಪಾದ ಹಾಗೂ ಲಗ್ನವನ್ನು ನೋಡಿ ಭವಿಷ್ಯ ನುಡಿಯುವುದು ಭಾರತೀಯ ಜ್ಯೋತಿಷ್ಯಶಾಸ್ತ್ರದ ವಿಶೇಷ.
ತಿಥಿ(ಚಂದ್ರನ ದಿನ):
ಭೂಮಿಗೂ ಸೂರ್ಯನಿಗೂ ಮಧ್ಯೆ ಚಂದ್ರ ಇರುವಾಗ ಅಮಾವಾಸ್ಯೆ. ಅದನ್ನು ಸೊನ್ನೆ ಡಿಗ್ರಿ ಎಂದು ಭಾವಿಸಿ.
ಚಂದ್ರ ಪ್ರತಿ 12 ಡಿಗ್ರಿ ಕೋನವನ್ನು ಕ್ರಮಿಸುವ ಸಮಯಕ್ಕೆ ಒಂದು ತಿಥಿ ಎಂದು ಹೇಳುತ್ತಾರೆ.
ಮುಂದಿನ ಅಮಾವಾಸ್ಯೆಯವರೆಗೆ ಚಂದ್ರ 360 ಡಿಗ್ರಿ ಕೋನ ಚಲಿಸಿರುತ್ತಾನೆ. ಒಂದು ಚಂದ್ರಮಾಸದಲ್ಲಿ 30 ತಿಥಿಗಳಿವೆ.
ತಿಥಿ ಮತ್ತು ದಿನದ ವ್ಯತ್ಯಾಸ:
ಚಂದ್ರನ ಒಂದು ತಿಥಿಯ ಸರಾಸರಿ ಸಮಯ ಸುಮಾರು ಒಂದು ದಿನ (ಸೂರ್ಯೋದಯದಿಂದ ಸೂರ್ಯೋದಯದವರೆಗಿನ ಸಮಯ.) ಸೂರ್ಯೋದಯದ ಕಾಲದಲ್ಲಿ ಯಾವ ತಿಥಿ ಇರುತ್ತದೋ ಅದು ಆ ಇಡೀ ದಿನದ ತಿಥಿಯೆಂದು ಹೇಳುವುದು ರೂಢಿ.
ತಿಥಿ ಮತ್ತು ದಿನದ ಅವಧಿಯಲ್ಲಿ ವ್ಯತ್ಯಾಸವಿದೆ. ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆ ಸುತ್ತುತ್ತದೆ. ಚಂದ್ರನೂ ಭೂಮಿಯ ಸುತ್ತ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತದೆ. ಆದರೆ ಎರಡು ವೇಗಗಳಲ್ಲಿ ವ್ಯತ್ಯಾಸ ಇರುತ್ತದೆ. ಹಾಗಾಗಿ ಚಂದ್ರ ಪೂರ್ವದಿಂದ ಪಶ್ಚಿಮಕ್ಕೆ ಹೋಗುವ ಹಾಗೆ ತೋರುತ್ತದೆ. ಈ ಕಾರಣಗಳಿಂದ ಪ್ರತಿ 12 ಡಿಗ್ರಿ ಚಲಿಸಲು ಚಂದ್ರನಿಗೆ ಸಮಾನವಾದ ಸಮಯ ತಗಲುವುದಿಲ್ಲ. ಒಂದು ತಿಥಿ 21.5 ಇಂದ 26 ಗಂಟೆಯವರೆಗೆ ಏರಿಳಿತವಾಗುತ್ತದೆ.
ಕೆಲವು ತಿಥಿಗಳು ಒಂದು ದಿನಕ್ಕಿಂತ ಉದ್ದ; ಹಾಗಾಗಿ ಒಂದು ದಿನದ ಸೂರ್ಯೋದಯದ ಕಾಲದಲ್ಲಿದ್ದ ತಿಥಿಯೇ ಮಾರನೆಯ ದಿನವೂ ಸೂರ್ಯೋದಯದ ಕಾಲದಲ್ಲಿದ್ದು ಎರಡೆರಡು ಏಕಾದಶಿ ಅಥವಾ ಎರಡೆರಡು ಪಾಡ್ಯ - ಹೀಗೆ ಒಂದೇ ತಿಥಿ ಎರಡು ದಿನಗಳಲ್ಲಿ ಬರಬಹುದು.
ಕೆಲವು ತಿಥಿಗಳು ಒಂದು ದಿನಕ್ಕಿಂತ ಚಿಕ್ಕವು. ಹಾಗಾಗಿ ಕೆಲವೊಮ್ಮೆ ಐದು ದಿನಗಳಲ್ಲಿ ಆರು ತಿಥಿಗಳು ಬಂದಾಗ ಒಂದು ತಿಥಿ ಸೂರ್ಯೋದಯದ ಸಮಯದಲ್ಲಿ ಇರುವುದಿಲ್ಲ. ಆ ತಿಥಿ ಲೋಪವಾಗಿದೆ ಎನ್ನುತ್ತಾರೆ.
ಪ್ರತಿಯೊಂದು ತಿಥಿ ಎಷ್ಟು ಗಳಿಗೆಗಳು ಎಂದು ಪಂಚಾಂಗದಲ್ಲಿ ಬರೆದಿರುತ್ತಾರೆ. (1 ದಿನ = 60 ಗಳಿಗೆಗಳು; 1 ಗಳಿಗೆ = 24 ನಿಮಿಷಗಳು)
ಕರಣ:
ದಿನದ ಮೊದಲರ್ಧವನ್ನು AM, ಉಳಿದರ್ಧವನ್ನು PM ಎನ್ನುತ್ತೇವಲ್ಲ ಹಾಗೆಯೇ ಪ್ರತಿ ತಿಥಿಯನ್ನು ಎರಡು ಅರ್ಧಗಳಾಗಿ ಮಾಡಿ ಒಂದೊಂದು ಭಾಗವನ್ನು ಕರಣ ಎಂದು ಕರೆಯುತ್ತಾರೆ. ಒಂದು ಚಂದ್ರಮಾಸದಲ್ಲಿ 30 ತಿಥಿಗಳು ಅಂದರೆ 60 ಕರಣಗಳು ಇರುತ್ತವೆ.
ಯೋಗ:
ಮತ್ತೆ ಗಡಿಯಾರವನ್ನು ನೆನಪಿಸಿಕೊಳ್ಳಿ. ಸೂರ್ಯ ಅಂದರೆ ಚಿಕ್ಕ ಮುಳ್ಳು 12 ತೋರಿಸುವಾಗ ಅವನ ಕೋನ (ರೇಖಾಂಶ) 0 ಡಿಗ್ರಿ. ಯಾವುದೇ ಕ್ಷಣದಲ್ಲಿ ಅವನು 0 ಇಂದ 360 ಡಿಗ್ರಿಯ ಯಾವುದಾದರೂ ಕೋನದಲ್ಲಿರುತ್ತಾನೆ.
ಹಾಗೆಯೇ ಚಂದ್ರ ಕೂಡಾ 0 ಇಂದ 360 ಡಿಗ್ರಿಯ ಯಾವುದಾದರೂ ಕೋನದಲ್ಲಿರುತ್ತಾನೆ.
ಇವೆರಡೂ ಕೋನಗಳನ್ನು ಕೂಡಿಸಿ. 360 ಡಿಗ್ರಿಗಿಂತ ಹೆಚ್ಚು ಇದ್ದರೆ 360 ಡಿಗ್ರಿ ಕಳೆದುಬಿಡಿ. ಮಿಕ್ಕ ಕೋನ ಸಹಜವಾಗಿ 0 ಇಂದ 360 ಡಿಗ್ರಿ ಇರುತ್ತದೆ. ಇದನ್ನು 27 ಭಾಗಗಳನ್ನಾಗಿ ಮಾಡಿ. ಒಂದೊಂದು ಭಾಗವನ್ನು ಒಂದು ಯೋಗ ಎಂದು ಕರೆಯುತ್ತಾರೆ. ಒಂದು ಯೋಗ 13 ಡಿಗ್ರಿ 20 ನಿಮಿಷಗಳ ಕೋನಕ್ಕೆ ಸಮ.
ವ್ಯಕ್ತಿ ಹುಟ್ಟುವ ಸಮಯದಲ್ಲಿರುವ ಯೋಗವನ್ನು ನಿತ್ಯಯೋಗ/ಜನ್ಮಯೋಗ ಎನ್ನುತ್ತಾರೆ.
ಈ ಮೇಲೆ ವಾರ, ನಕ್ಷತ್ರ, ತಿಥಿ, ಕರಣ ಮತ್ತು ಯೋಗ ಎಂಬ ಐದು ವಿಷಯಗಳನ್ನು ವಿವರಿಸಿದೆ. ಇವುಗಳೇ ಪಂಚಾಂಗದ ಐದು ಅಂಗಗಳು. ಈ ಐದು ಅಂಗಗಳಿಗೆ ಕೊಟ್ಟಿರುವ ಹೆಸರುಗಳು ಏನೆಂದು ನೋಡೋಣ.
ವಾರಗಳು:
ವಾರಗಳಿಗೆ ಏಳು ಗ್ರಹಗಳ ಹೆಸರುಗಳನ್ನೇ ಕೊಟ್ಟಿದ್ದಾರೆ - ರವಿ, ಸೋಮ, ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿ. ಏಳು ದಿನಗಳ ನಂತರ ಇವೇ ಹೆಸರುಗಳು ಪುನಃ ಪುನಃ ಬರುತ್ತಿರುತ್ತವೆ. (Sunday, Monday, Tuesday, Wednesday, Thursday, Friday, Saturday)
12 ರಾಶಿಗಳು:
ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನದಿಂದ ಹಿಡಿದು ಮುಂದಿನ ಬಾರಿ ಮಕರ ರಾಶಿಗೆ ಪ್ರವೇಶಿಸುವ ದಿನದವರೆಗೆ ಒಂದು ಸಂವತ್ಸರ. ಒಂದು ಸಂವತ್ಸರಲ್ಲಿ 12 ರಾಶಿಗಳು: ಮೇಷ, ವೃಷಭ, ಮಿಥುನ, ಕಟಕ(ಕರ್ಕಾಟಕ), ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ. (Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, Pisces)
ಅರವತ್ತು ಸಂವತ್ಸರಗಳಿಗೆ ಅರವತ್ತು ಹೆಸರುಗಳಿವೆ. ಮತ್ತೆ ಅವೇ ಹೆಸರುಗಳು ರಿಪೀಟ್ ಆಗುತ್ತವೆ.
ಸೂರ್ಯ ಒಂದು ರಾಶಿಯಿಂದ ಮುಂದಿನ ರಾಶಿಗೆ ಪ್ರವೇಶಿಸುವ ಸಮಯವನ್ನು ಸಂಕ್ರಾಂತಿ ಎಂದು ಹೇಳುತ್ತಾರೆ. ಮಕರ ಸಂಕ್ರಾಂತಿ ಹೆಚ್ಚು ಪ್ರಸಿದ್ಧ.
ಸೌರಮಾಸಗಳಿಗೆ ಆಯಾ ರಾಶಿಗಳ ಹೆಸರನ್ನೇ ಇಡಲಾಗಿದೆ. ಉದಾಹರಣೆಗೆ ಧನುರ್ಮಾಸ.
ಜನ್ಮಕುಂಡಲಿಯ ವಿನ್ಯಾಸ: ದಕ್ಷಿಣ ಭಾರತದವರು ಕುಂಡಲಿಯಲ್ಲಿ 12 ರಾಶಿಗಳನ್ನು ಈ ಕ್ರಮದಲ್ಲಿ ತೋರಿಸುತ್ತಾರೆ:
27 ನಕ್ಷತ್ರಗಳು:
ಒಂದು ವರ್ಷದಲ್ಲಿರುವ 12 ರಾಶಿಗಳಲ್ಲಿ 27 ನಕ್ಷತ್ರಗಳಿವೆ. ಒಂದೊಂದು ನಕ್ಷತ್ರವೂ ಒಂದೊಂದು ತಾರಾಸಮೂಹ. ಒಂದೊಂದು ಸಮೂಹವನ್ನು ಅದರ ಮುಖ್ಯವಾದ ತಾರೆಯ ಹೆಸರಿನಿಂದ ಗುರುತಿಸುತ್ತಾರೆ. ಒಂದೊಂದು ರಾಶಿಯಲ್ಲಿ ಒಂಬತ್ತು ಪಾದಗಳು ಅಥವಾ ಎರಡೂಕಾಲು ನಕ್ಷತ್ರಗಳಿರುತ್ತವೆ.
ರಾಶಿಗಳು ಮತ್ತು ಅವುಗಳಲ್ಲಿರುವ ನಕ್ಷತ್ರಗಳ ಹೆಸರುಗಳು ಹೀಗಿವೆ:
ಮೇಷ - ಅಶ್ವಿನಿ, ಭರಣಿ, ಕೃತ್ತಿಕೆ
ವೃಷಭ - ಕೃತ್ತಿಕೆ, ರೋಹಿಣಿ, ಮೃಗಶಿರ
ಮಿಥುನ - ಮೃಗಶಿರ, ಆರಿದ್ರ, ಪುನರ್ವಸು
ಕಟಕ - ಪುನರ್ವಸು, ಪುಷ್ಯ, ಆಶ್ಲೇಷ
ಸಿಂಹ - ಮಖ, ಪುಬ್ಬ(ಪೂರ್ವ ಫಾಲ್ಗುಣಿ), ಉತ್ತರೆ (ಉತ್ತರ ಫಾಲ್ಗುಣಿ)
ಕನ್ಯಾ - ಉತ್ತರೆ (ಉತ್ತರ ಫಾಲ್ಗುಣಿ), ಹಸ್ತ, ಚಿತ್ರ
ತುಲಾ - ಚಿತ್ರ, ಸ್ವಾತಿ, ವಿಶಾಖ
ವೃಶ್ಚಿಕ - ವಿಶಾಖ, ಅನುರಾಧ, ಜ್ಯೇಷ್ಠ
ಧನುಸ್ - ಮೂಲ, ಪೂರ್ವಾಷಾಢ, ಉತ್ತರಾಷಾಢ
ಮಕರ - ಉತ್ತರಾಷಾಢ, ಶ್ರವಣ, ಧನಿಷ್ಠ
ಕುಂಭ - ಧನಿಷ್ಠ, ಶತಭಿಷ, ಪೂರ್ವಭಾದ್ರ
ಮೀನ - ಪೂರ್ವಭಾದ್ರ, ಉತ್ತರಭಾದ್ರ, ರೇವತಿ.
ಈ ಉತ್ತರದ ಕೊನೆಯಲ್ಲಿ ಒಂದು ತಿಂಗಳ ಪಂಚಾಂಗ ಕೊಟ್ಟಿದೆ. ಪ್ರತಿ ದಿನದ ನಕ್ಷತ್ರ ಕೊಟ್ಟಿದೆ. ಗಮನಿಸಿ.
27 ನಕ್ಷತ್ರಗಳಲ್ಲಿ ಮೊದಲ ಒಂಬತ್ತು ನಕ್ಷತ್ರಗಳಿಗೆ ಒಂಬತ್ತು ಗ್ರಹಗಳು ಈ ಕ್ರಮದಲ್ಲಿ ಅಧಿಪತಿಗಳು: ಕೇತು, ಶುಕ್ರ, ರವಿ, ಸೋಮ, ಮಂಗಳ, ರಾಹು, ಗುರು, ಶನಿ ಮತ್ತು ಬುಧ. ಮುಂದಿನ ಒಂಬತ್ತು ನಕ್ಷತ್ರಗಳಿಗೆ ಹಾಗೂ ಅದರ ಮುಂದಿನ ಒಂಬತ್ತು ನಕ್ಷತ್ರಗಳಿಗೆ ಇದೇ ಕ್ರಮದಲ್ಲಿ ಗ್ರಹಗಳು ಅಧಿಪತಿಗಳಾಗಿರುತ್ತವೆ.
ತಿಥಿಗಳು:
ದಕ್ಷಿಣ ಭಾರತದಲ್ಲಿ ಅಮಾವಾಸ್ಯೆಯ ಮಾರನೇ ತಿಥಿಯಿಂದ ಹಿಡಿದು ಮುಂದಿನ ಅಮಾವಾಸ್ಯೆಯವರೆಗೆ ಒಂದು ಚಂದ್ರಮಾಸ.(ಉತ್ತರ ಭಾರತದಲ್ಲಿ ಹುಣ್ಣಿಮೆಯ ಮಾರನೇ ತಿಥಿಯಿಂದ ಹಿಡಿದು ಮುಂದಿನ ಹುಣ್ಣಿಮೆಯವರೆಗೆ ಒಂದು ಚಂದ್ರಮಾಸ.)
ಹನ್ನೆರಡು ಚಂದ್ರಮಾಸಗಳಿಗೆ ಹುಣ್ಣಿಮೆಯಂದು ಕಾಣುವ ನಕ್ಷತ್ರಗಳ ಹೆಸರುಗಳನ್ನು ಬಳಸಿ ಹೆಸರಿಡಲಾಗಿದೆ:
ಚೈತ್ರ(ಚಿತ್ರ), ವೈಶಾಖ(ವಿಶಾಖ), ಜ್ಯೇಷ್ಠ(ಜ್ಯೇಷ್ಠ), ಆಷಾಢ(ಪೂರ್ವಾಷಾಢ), ಶ್ರಾವಣ(ಶ್ರವಣ), ಭಾದ್ರಪದ(ಪೂರ್ವಭಾದ್ರ), ಆಶ್ವಯುಜ(ಅಶ್ವಿನಿ), ಕಾರ್ತೀಕ(ಕೃತ್ತಿಕೆ), ಮಾರ್ಗಶಿರ(ಮೃಗಶಿರ), ಪುಷ್ಯ(ಪುಷ್ಯಮಿ), ಮಾಘ(ಮಘ/ಮಖ), ಫಾಲ್ಗುಣ(ಉತ್ತರ ಫಾಲ್ಗುಣಿ).
ಚಂದ್ರನ ಪ್ರತಿ ಮಾಸದ 30 ತಿಥಿಗಳಿಗೆ ಒಟ್ಟು 16 ಹೆಸರುಗಳಿವೆ.
ಮೊದಲ 14 ತಿಥಿಗಳು ಪಾಡ್ಯ(ಪ್ರತಿಪತ್), ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ.
15ನೇ ತಿಥಿ ಹುಣ್ಣಿಮೆ.
ಮತ್ತೆ ಮೊದಲ 14 ಹೆಸರುಗಳು ಬರುತ್ತವೆ.
30ನೇ ತಿಥಿ ಅಮಾವಾಸ್ಯೆ.
ಪಾಡ್ಯದಿಂದ ಹುಣ್ಣಿಮೆವರೆಗಿನ 15 ತಿಥಿಗಳ ಕಾಲದಲ್ಲಿ ಚಂದ್ರ ಹಿಗ್ಗುತ್ತಾ ಹೋಗುವುದರಿಂದ ಶುಕ್ಲಪಕ್ಷ ಎನ್ನುತ್ತಾರೆ. ಶುಕ್ಲ ಎಂದರೆ ಬಿಳಿ. ಮತ್ತೆ ಪಾಡ್ಯದಿಂದ ಅಮಾವಾಸ್ಯೆವರೆಗಿನ 15 ತಿಥಿಗಳ ಕಾಲದಲ್ಲಿ ಚಂದ್ರ ಕುಂದುತ್ತಾ ಹೋಗುವುದರಿಂದ ಕೃಷ್ಣಪಕ್ಷ ಎನ್ನುತ್ತಾರೆ. ಕೃಷ್ಣ ಎಂದರೆ ಕಪ್ಪು.
ಕರಣಗಳು:
ಚಂದ್ರಮಾಸದ 30 ತಿಥಿಗಳಲ್ಲಿ 60 ಕರಣಗಳಿಗೆ 11 ಹೆಸರುಗಳಿವೆ. ಏಳು ಹೆಸರುಗಳು ಒಂದು ಮಾಸದಲ್ಲಿ ಎಂಟೆಂಟು ಬಾರಿ ಬರುತ್ತವೆ. ನಾಲ್ಕು ಕರಣಗಳು ಒಮ್ಮೊಮ್ಮೆ ಮಾತ್ರ ಬರುತ್ತವೆ. 7*8+4=60.
ಅವುಗಳ ಕ್ರಮ ಹೀಗಿದೆ:
ಶುಕ್ಲಪಕ್ಷದ ಪಾಡ್ಯದ ಮೊದಲಾರ್ಧವು ಕಿಂಸ್ತುಘ್ನ(ಕೆಟ್ಟ ಬುದ್ಧಿ) ಎಂಬ ಕರಣ. ಇದು ಮಾಸಕ್ಕೆ ಒಮ್ಮೆ ಬರುತ್ತದೆ. ರಿಪೀಟ್ ಆಗದ ಕಾರಣ ಇದೊಂದು ಸ್ಥಿರಕರಣ.
ಶುಕ್ಲಪಕ್ಷದ ಪಾಡ್ಯದ ಉತ್ತರಾರ್ಧದಿಂದ ಆರಂಭಿಸಿ ಕೃಷ್ಣಪಕ್ಷದ ಚತುರ್ದಶಿಯ ಪೂರ್ವಾರ್ಧದ ತನಕ
ಬವ(ಇದ್ದುದ್ದರಲ್ಲಿ ತೃಪ್ತಿ), ಬಾಲವ(ಆಟೋಟ), ಕೌಲವ(ಕೆಟ್ಟ ಕೆಲಸ), ತೈತಿಲ(ಮೃದು ಧೈರ್ಯ), ಗರಿಜ(ಕಿಲಾಡಿ), ವಣಿಜ(ವ್ಯಾಪಾರ) ಮತ್ತು ಭದ್ರಾ(ಕ್ರೂರ) ಎಂಬ ಏಳು ಕರಣಗಳು ಅನುಕ್ರಮವಾಗಿ ಎಂಟು ಸಲ ಮತ್ತೆ ಮತ್ತೆ ಬರುತ್ತವೆ. ಅಂದರೆ 7x8=56 ಕರಣಗಳು. ರಿಪೀಟ್ ಆಗುವ ಕಾರಣದಿಂದ ಇವುಗಳಿಗೆ ಚರಕರಣಗಳೆಂದು ಹೆಸರು.
ನಂತರದ ಮೂರು ಕರಣಗಳು ಸ್ಥಿರಕರಣಗಳು.
ಕೃಷ್ಣ ಚತುರ್ದಶಿಯ ಉತ್ತರಾರ್ಧವು ಶಕುನಿ(ಜಾಣತನ) ಎಂಬ ಕರಣ.
ಅಮಾವಾಸ್ಯೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳಲ್ಲಿ ಚತುಷ್ಪಾತ್(ದುಡಿಮೆ) ಮತ್ತು ನಾಗವಾನ್(ಗುಟ್ಟಾಗಿ ಕೆಲಸ) ಎಂಬ ಕರಣಗಳಿವೆ.
ಕಿಂಸ್ತುಘ್ನ, ಶಕುನಿ, ಚತುಷ್ಪಾತ್ ಮತ್ತು ನಾಗವಾನ್ - ಇವು ತಿಂಗಳೊಂದರ ಒಳಗೆ ಪುನರಾವರ್ತಿಸದೆ ಇರುವುದರಿಂದ ಇವು ಸ್ಥಿರಕರಣಗಳು.
ಏಳು ಚರಣಗಳ ಎಂಟು ಆವರ್ತನೆಗೆ ಐವತ್ತಾರು ಚರಕರಣಗಳಾಗುತ್ತವೆ. ಇವಕ್ಕೆ ನಾಲ್ಕು ಸ್ಥಿರಕರಣಗಳನ್ನು ಸೇರಿಸಿದಾಗ ಮೂವತ್ತು ತಿಥಿಗಳಲ್ಲಿ ಅಂದರೆ ಒಂದು ತಿಂಗಳಲ್ಲಿ ಅರವತ್ತು ಕರಣಗಳಾಗುತ್ತವೆ.
ಈ ಉತ್ತರದ ಕೊನೆಯಲ್ಲಿ ಒಂದು ತಿಂಗಳ ಪಂಚಾಂಗ ಕೊಟ್ಟಿದೆ. ಪ್ರತಿ ದಿನದಲ್ಲಿ ಮುಖ್ಯ ಕರಣ ಕೊಟ್ಟಿದೆ. ಗಮನಿಸಿ.
ಯೋಗಗಳು:
ಮೊದಲೇ ಹೇಳಿದಂತೆ ಸೂರ್ಯ ಚಂದ್ರರ ರೇಖಾಂಶಗಳಿಂದ 27 ಯೋಗಗಳು ಉಂಟಾಗುತ್ತವೆ. ಪ್ರತಿ 13 ಡಿಗ್ರಿ 20 ನಿಮಿಷಗಳ ಕೋನಕ್ಕೆ ಒಂದೊಂದು ಯೋಗ.
ಮೊದಲ 13 ಡಿಗ್ರಿ 20 ನಿಮಿಷಗಳ ಕೋನದ ಯೋಗಕ್ಕೆ ವಿಷ್ಕುಂಭ(ಗೆದ್ದವರು) ಎಂದು ಹೆಸರು. ನಂತರದ 26 ಯೋಗಗಳು ಕ್ರಮವಾಗಿ ಪ್ರೀತಿ, ಆಯುಷ್ಮಾನ, ಸೌಭಾಗ್ಯ,
ಶೋಭನ, ಅತಿಗಂಡ(ಅತಿಕಷ್ಟ), ಸುಕರ್ಮಾ, ಧೃತಿ,
ಶೂಲ(ನೋವು), ಗಂಡ(ತೊಂದರೆ), ವೃದ್ಧಿ, ಧ್ರುವ(ಸ್ಥಿರ),
ವ್ಯಾಘಾತ(ಹಿಂಸೆ), ಹರ್ಷಣ(ಸಂತೋಷ), ವಜ್ರ, ಸಿದ್ಧಿ,
ವ್ಯತೀಪಾತ(ದುರಂತ), ವರೀಯಾನ(ಸುಖ), ಪರಿಘ(ಅಡೆತಡೆ), ಶಿವ,
ಸಿದ್ಧ, ಸಾಧ್ಯ, ಶುಭ, ಶುಕ್ಲ,
ಬ್ರಹ್ಮ, ಐಂದ್ರ, ವೈಧೃತಿ(ಕೊಂಕು ಬುದ್ಧಿ).
ಪ್ರತಿ 25–26 ದಿನಗಳಲ್ಲಿ 27 ಯೋಗಗಳು ಜರುಗುತ್ತವೆ.
ಈ ಉತ್ತರದ ಕೊನೆಯಲ್ಲಿ ಒಂದು ತಿಂಗಳ ಪಂಚಾಂಗ ಕೊಟ್ಟಿದೆ. ಪ್ರತಿ ದಿನದ ಯೋಗ ಕೊಟ್ಟಿದೆ. ಗಮನಿಸಿ.
ಯೋಗದ ಲೆಕ್ಕ:
ಮೇಲಿನ ಕುಂಡಲಿ ಏಪ್ರಿಲ್ 1, 2022 ರ ಮಧ್ಯರಾತ್ರಿ 12 ಗಂಟೆಯ ಸ್ಥಿತಿ.
ಮೇಷ ರಾಶಿಯ ಪ್ರಾರಂಭದಲ್ಲಿ ಕೋನ 0 ಡಿಗ್ರಿ.
ಸೂರ್ಯ 11 ರಾಶಿಗಳ ನಂತರ ಮೀನರಾಶಿ ಪ್ರವೇಶಿಸಿ 18 ಡಿಗ್ರಿ ಹಾಗೂ ಚಂದ್ರ ಮೀನರಾಶಿ ಪ್ರವೇಶಿಸಿ 12 ಡಿಗ್ರಿ ಆಗಿದೆ.
ಅಂದರೆ ಸೂರ್ಯನ ರೇಖಾಂಶ 11*30+18=348 ಡಿಗ್ರಿ.
ಚಂದ್ರನ ರೇಖಾಂಶ 11*30+12=342 ಡಿಗ್ರಿ.
ಎರಡನ್ನೂ ಕೂಡಿಸಿದರೆ 348+342=690 ಡಿಗ್ರಿ.
ಇದರಿಂದ 360 ಡಿಗ್ರಿ ಕಳೆದರೆ 330 ಡಿಗ್ರಿ.
ಇದನ್ನು 13.333 ಇಂದ ಭಾಗಿಸಿದರೆ 24.7, ಅಂದರೆ 25ನೇ ಯೋಗ ಅಂದರೆ ಬ್ರಹ್ಮ ಯೋಗ ನಡೆದಿದೆ.
ಉದಾಹರಣೆಗೆ ಒಂದು ಚಂದ್ರಮಾಸದ ಪಂಚಾಂಗ ಹೀಗಿದೆ:
ಉದಾಹರಣೆಗೆ ಜನವರಿ ಹದಿನೈದನೇ ತಾರೀಖಿನ ಪಂಚಾಂಗ
ವಾರ - ರವಿವಾರ
ತಿಥಿ - ಅಷ್ಟಮೀ
ನಕ್ಷತ್ರ - ಚಿತ್ರಾ
ಯೋಗ — ಸುಕರ್ಮಾ, ಧೃತಿ
ಕರಣ - ಕೌಲವ.
60 ಸಂವತ್ಸರಗಳು
1987ರಲ್ಲಿ ಪ್ರಭವ ಸಂವತ್ಸರ ಬಂದಿತ್ತು. ಈಗ ಶುಭಕೃತ ಸಂವತ್ಸರ ನಡೆಯುತ್ತಿದೆ.
1. ಪ್ರಭವ 2. ವಿಭವ 3. ಶುಕ್ಲ 4. ಪ್ರಮೋದ
5. ಪ್ರಜೋತ್ಪತ್ತಿ 6. ಆಂಗೀರಸ 7. ಶ್ರೀಮುಖ 8. ಭಾವ
9. ಯುವ 10. ಧಾತ್ರಿ 11. ಈಶ್ವರ 12. ಬಹುಧಾನ್ಯ
13. ಪ್ರಮಾಧಿ 14. ವಿಕ್ರಮ 15. ವೃಷ 16.ಚಿತ್ರಭಾನು
17. ಸ್ವಭಾನು 18. ತಾರಣ 19. ಪಾರ್ಥಿವ 20. ವ್ಯಯ
21. ಸರ್ವಜಿತ್ 22. ಸರ್ವಧಾರಿ 23. ವಿರೋಧಿ 24. ವಿಕೃತ
25. ಖರ 26. ನಂದನ 27. ವಿಜಯ 28. ಜಯ
29. ಮನ್ಮಥ 30. ದುರ್ಮುಖ 31. ಹೇವಿಳಂಬಿ 32. ವಿಳಂಬಿ
33. ವಿಕಾರಿ 34. ಶಾರ್ವರಿ 35. ಪ್ಲವ 36. ಶುಭಕೃತ
37. ಶೋಭಾಕೃತ 38. ಕ್ರೋಧಿ 39. ವಿಶ್ವಾವಸು 40.ಪರಾಭವ
41. ಪ್ಲವಂಗ 42. ಕೀಲಕ 43. ಸೌಮ್ಯ 44. ಸಾಧಾರಣ
45. ವಿರೋಧಿಕೃತ 46. ಪರಿಧಾವಿ 47. ಪ್ರಮಾಧಿ
48. ಆನಂದ
49. ರಾಕ್ಷಸ 50. ನಳ 51. ಪಿಂಗಳ 52. ಕಾಳಯುಕ್ತಿ
53. ಸಿದ್ಧಾರ್ಥಿ 54. ರುದ್ರ 55. ದುರ್ಮತಿ 56. ದುಂದುಭಿ
57. ರುದಿರೋದ್ಗಾರಿ 58. ರಕ್ತಾಕ್ಷಿ 59. ಕ್ರೋಧನ
60. ಅಕ್ಷಯ / ಕ್ಷಯ?
ಶಕ ಕ್ಯಾಲೆಂಡರ್ ನಲ್ಲಿ ಅಧಿಕ ಮಾಸ
ಹಿಂದೂ ಶಕ ಕ್ಯಾಲೆಂಡರ್ ಪ್ರಕಾರ ಹನ್ನೆರಡು ಚಂದ್ರಮಾಸಗಳು ಸೇರಿ ಒಂದು ಸಂವತ್ಸರ. ಇದರಲ್ಲಿ 354.3672 ದಿನಗಳಿವೆ. ಭೂಮಿಯ ಸುತ್ತಾಟಕ್ಕೆ ಬೇಕಾದ 365.2564 ದಿನಗಳ ವರ್ಷಕ್ಕೂ ಸಂವತ್ಸರಕ್ಕೂ 10.8992 ದಿನಗಳ ವ್ಯತ್ಯಾಸವಿದೆ. ಇವೆರಡನ್ನು ಸರಿದೂಗಿಸಲು ಎರಡು ಮೂರು ವರ್ಷಗಳಿಗೊಮ್ಮೆ ಒಂದು ಚಂದ್ರಮಾಸ ಹೆಚ್ಚುವರಿ ಸೇರಿಸಬೇಕು.
ಯಾವ ಸೌರಮಾಸದಲ್ಲಿ (ಸಂಕ್ರಾಂತಿಯಿಂದ ಸಂಕ್ರಾಂತಿಗೆ) ಎರಡು ಅಮಾವಾಸ್ಯೆಗಳು ಬರುತ್ತವೋ ಆಗ ಮೊದಲ ಅಮಾವಾಸ್ಯೆಯ ನಂತರದ ತಿಥಿ ಅಧಿಕ ಮಾಸದ ಆರಂಭವನ್ನು ಸೂಚಿಸುತ್ತದೆ. ಅಧಿಕ ಮಾಸದ ಹೆಸರು ಮುಂದಿನ ಮಾಸದ ಹೆಸರೇ ಆಗಿರುತ್ತದೆ.
ಸರಾಸರಿ ಪ್ರತಿ 19 ವರ್ಷಗಳಲ್ಲಿ 19 ಸಂವತ್ಸರಗಳಲ್ಲದೆ 7 ಅಧಿಕ ಮಾಸಗಳಿರುತ್ತವೆ.
19*365.2564= 6939.8716 ದಿನಗಳು
(19*12+7)*29.5306=6939.6205 ದಿನಗಳು.
2001, 2004, 2007, 2010, 2012, 2015, 2018, 2020 ರಲ್ಲಿ ಅಧಿಕಮಾಸಗಳಿದ್ದವು.
2020 ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಅಧಿಕ ಕಾರ್ತೀಕ ಮಾಸ ಇತ್ತು.
ಈ ವರ್ಷ 2023 ರಲ್ಲಿ ಶೋಭಕೃತು ಸಂವತ್ಸರದಲ್ಲಿ ಅಂತಹ ಒಂದು ಅಧಿಕಮಾಸವಿದೆ. ಆಷಾಢಮಾಸದ ನಂತರ ಜುಲೈ-ಆಗಸ್ಟ್ ನಲ್ಲಿ ಕಟಕಮಾಸದಲ್ಲಿ ಎರಡು ಅಮಾವಾಸ್ಯೆಗಳು ಇದ್ದು ಅಧಿಕ ಶ್ರಾವಣಮಾಸ, ನಂತರ ನಿಜ ಶ್ರಾವಣಮಾಸ ಬರುತ್ತದೆ.
ಮುಂದೆ 2026 ರ ಜೂನ್-ಜುಲೈಯಲ್ಲಿ ಅಧಿಕ ಆಷಾಢ, 2029 ರ ಮೇ-ಜೂನ್ ನಲ್ಲಿ ಅಧಿಕ ಜ್ಯೇಷ್ಠ ಹಾಗೂ 2031 ರ ಅಕ್ಟೋಬರ್-ನವೆಂಬರ್ ನಲ್ಲಿ ಅಧಿಕ ಆಶ್ವಯುಜ ಮಾಸಗಳಿರುತ್ತವೆ.