ನಾವು ದೈನಂದಿನ ಜೀವನದಲ್ಲಿ ಬಳಸುವ ತರಕಾರಿಗಳಲ್ಲಿ ಯಾವುದು ಭಾರತದ ಮೂಲದವು ಮತ್ತು ಯಾವುದು ಹೊರಗಿನ ದೇಶದ ಮೂಲದವುಗಳು?

SANTOSH KULKARNI
By -
0

 

ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ನಿಸರ್ಗವು ಬೇಕಾದದ್ದನ್ನೆಲ್ಲ ಕೊಟ್ಟಿದೆ.
ಅದನ್ನ ನಾವು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಷ್ಟೆ.

ಇದರಲ್ಲಿ ಒಂದು ಮುಖ್ಯವಾದುದೆಂದರೆ ಸೀಸನ್.

  • ಆಯಾ ಕಾಲಗಳಲ್ಲಿ ಸಿಗುವ ಹಣ್ಣು ತರಕಾರಿಗಳನ್ನ ತಿನ್ನುವುದು. ಹೀಗೆ ಮಾಡುವುದರಿಂದ ಆಯಾ ಕಾಲಗಳಲ್ಲಿ ಬರುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಿಂದ ದೂರವಿರಬಹುದು.

ಇಲ್ಲೊಂದು ವಿಚಾರವೇನೆಂದರೆ,

  • ಬಹಳಷ್ಟು ಹಣ್ಣು ತರಕಾರಿಗಳು ವರ್ಷ ಪೂರ್ತಿ ಮತ್ತು ಎಲ್ಲೆಡೆ ದೊರೆಯುತ್ತದಾದರೂ ಅವುಗಳಲ್ಲಿನ ಜೀವಸತ್ವಗಳ ಪ್ರಮಾಣ ಹೆಚ್ಚಿರುವುದು ಅವುಗಳು ಬೆಳೆಯುವ ಕಾಲದಲ್ಲಿ ಮತ್ತು ಅವುಗಳು ಬೆಳೆಯುವ ಪ್ರದೇಶಗಳಲ್ಲಿ ಮಾತ್ರ.
  • ಎಲ್ಲೋ ಬೆಳೆದದ್ದನ್ನ ಇನ್ನೆಲ್ಲಿಯೋ ತಿನ್ನುವುದು ಮತ್ತು ಯಾವುದೋ ಕಾಲದ್ದನ್ನ ಇನ್ನವುದೋ ಕಾಲದಲ್ಲಿ ಉಪಯೋಗಿಸುವುದರಿಂದ ಅವುಗಳಿಂದಾಗುವ ಪ್ರಯೋಜನದ ಪ್ರಮಾಣ ಕಡಿಮೆ.

ಇಲ್ಲಿ ಕೆಲವು ತರಕಾರಿಗಳ ಮೂಲವನ್ನ ಪಟ್ಟಿಮಾಡಿದ್ದೇನೆ. ಬಹಳಷ್ಟು ತರಕಾರಿಗಳ ಮೂಲದ ಬಗ್ಗೆ ಸರಿಯಾದ ಇತಿಹಾಸದ ದಾಖಲೆಗಳು ಸಿಗುವುದಿಲ್ಲ. ಲಭ್ಯವಿರುವ ಮಾಹಿತಿಯ ಅನುಸಾರ ಬರೆದಿದ್ದೇನೆ.

  • ಬದನೆ ಕಾಯಿ.

ಇದು ತರಕಾರಿಗಳ ರಾಜ. ಇದರ ಹುಟ್ಟುಸ್ಥಳ ದಕ್ಷಿಣ ಭಾರತ.

  • ಹಾಗಲಕಾಯಿ.

ಸ್ವಲ್ಪ ದೂರವೇ ಉಳಿಯುವ ರುಚಿಕರ ಮತ್ತು ಆರೋಗ್ಯದ ಕಣಜವಾದ ಬುಹೂಪಯೋಗಿ ಹಾಗಲ ಹುಟ್ಟಿದ್ದು ಭಾರತದಲ್ಲಿ. ಇಂದು ಹೆಚ್ಚಾಗಿ ಔಷಧ ರೂಪದಲ್ಲಿ ಕೂಡಾ ಉಪಯೋಗವಾಗುತ್ತದೆ.

  • ಮಾವಿನಕಾಯಿ.

ಹಣ್ಣುಗಳ ರಾಜ ಮಾವು, ಹಣ್ಣಾಗುವ ಮೊದಲು ತರಕಾರಿಯೂ ಆಗುತ್ತಾನೆ. ಇವನ ಹುಟ್ಟುಸ್ಥಳ ಭಾರತ.

  • ಪಾಲಾಕ್ ಸೊಪ್ಪು.

ಇದರ ಮೂಲ ಉತ್ತರ ಭಾರತ. ಅತ್ಯಂತ ಆರೋಗ್ಯದಾಯಕ ಸೊಪ್ಪು.

  • ಕ್ಯಾರೆಟ್.

ಕೆಂಪು, ಕಿತ್ತಳೆ, ಹಳದಿ ಮುಂತಾದ ಬಣ್ಣಗಳಲ್ಲಿ ಸಿಗುವ ಇದರ ಮೂಲ ಪರ್ಷಿಯ. ಅಲ್ಲಿ ಇದರ ಕಾಡು ಜಾತಿಯನ್ನ ಬೆಳೆಯುತ್ತಿದ್ದರು.

ಇದನ್ನ ಭಾರತದಲ್ಲಿ ಕೂಡಾ ಬಹಳ ಮೊದಲಿನಿಂದ ಬೆಳೆಯುತ್ತಿದ್ದರು ಅನ್ನುವ ದಾಖಲೆ ಇದೆ.

  • ಮೂಲಂಗಿ.

ಕಾಡು ಜಾತಿಯ ಮೂಲಂಗಿಯನ್ನ ಮೊದಲು ಚೈನಾದಲ್ಲಿ ಬೆಳೆದ ಮಾಹಿತಿ ಇದೆ. ಇಂದು ನಾವು ಉಪಯೋಗಿಸುವ ಮೂಲಂಗಿಯ ಮೂಲ ಭಾರತ.

  • ಬೂದುಗುಂಬಳ(ಕುಂಬಳಕಾಯಿ)

ಇದರ ಹುಟ್ಟು ಕೋಲಂಬಿಯಾ ಅಥವಾ ಅಮೆರಿಕಾ ಇರಬಹುದು. ಆದರೆ ಹಿಂದೂ ಧರ್ಮದಲ್ಲಿ ಇದಕ್ಕೆ ಒಂದು ವಿಶೇಷ ಸ್ಥಾನವಿರುವುದರಿಂದ ಇದರ ಮೂಲ ಭಾರತ ಎನ್ನುವುದನ್ನ ಅಲ್ಲಗಳೆಯಲಾಗದು. ಇದೊಂದು ಔಷಧಿಯ ಕಣಜ.

  • ಹೀರೆಕಾಯಿ,

ಬಹೂಪಯೋಗಿ ಹೀರೆಕಾಯಿಯ ಜನ್ಮ ಸ್ಥಳ ಭಾರತ.

  • ಮಗೆಕಾಯಿ ಮತ್ತು ಸವತಿಯ ಕಾಯಿ (ಸವತೆ ಕಾಯಿ)

ಇವುಗಳು ಭಾರತದ ಮೂಲದ ಸವತಿಯರು. ಇವಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ.

  • ಟೊಮೆಟೊ.

ಇದು ದಕ್ಷಿಣ ಅಮೆರಿಕಾದಿಂದ ಬಂದ ತರಕಾರಿ ಹಣ್ಣು. ಅತ್ಯಂತ ಹೆಚ್ಚು ಉಪಯೋಗವಾಗುವ ತರಕಾರಿ.

  • ಕ್ಯಾಬೆಜ್, ಎಲೆಕೋಸು.

ಸುಮಾರು ಆರು ಸಾವಿರ ವರ್ಷಗಳಿಂದ ಇದನ್ನ ಚೈನಾದವರು ಬೆಳೆಯತ್ತಿದ್ದರಂತೆ.

  • ಹೂಕೋಸು

ಲೆಬನಾನ್ ಮತ್ತು ಸಿರಿಯಾದಲ್ಲಿ ಮೊದಲು ಇದನ್ನ ಬೆಳೆಯುತ್ತಿದ್ದರು. ಇಟಲಿಯ ಜನ ಇದನ್ನ ಮೊತ್ತಮೊದಲು ತಿನ್ನುವ ಸಾಹಸ ಮಾಡಿದರು. ಇದು ಇಂದು ಪ್ರಪಂಚದಾದ್ಯಂತ ಜನಜನಿತವಾಗಿದೆ.

  • ಬೀಟ್ರೂಟ್

ಹೆಚ್ಚಾಗಿ ಔಷಧಕ್ಕಾಗಿಯೇ ಉಪಯೋಗುವಾಗುತ್ತಿದ್ದ ಇದರ ಮೂಲ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಭಾಗಗಳಿರಬಹುದು. ಇದನ್ನ ತರಕಾರಿಯಾಗಿ ಉಪಯೋಗಿಸಲು ಪ್ರಾರಂಭಿಸಿದ್ದು ಫ್ರಾನ್ಸ್ ನಲ್ಲಿ ಹದಿನೆಂಟನೇ ಶತಮಾನದಿಂದೀಚೆಗೆ.

  • ಡೊಳ್ಳು ಮೆಣಸಿನಕಾಯಿ.

ದಕ್ಷಿಣ ಅಮೆರಿಕಾದ ಇದು ಅತ್ಯಂತ ರುಚಿಕರ ಮತ್ತು ಆರೋಗ್ಯಕರ ಕೂಡಾ.

  • ಬೆಂಡೆಕಾಯಿ,

ಇಥಿಯೋಪಿಯಾದಲ್ಲಿ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಇದನ್ನ ಬೆಳೆದ ಮಾಹಿತಿ ಇದೆ. ಇದರ ಒಣಗಿದ ಬೀಜದ ಪುಡಿಯನ್ನ ಕಾಫಿಗೆ ಪರ್ಯಾಯವಾಗಿ ಉಪಯೋಗಿಸುತ್ತಿದ್ದ ಮಾಹಿತಿ ಇದೆ. ಈಗ ಕೂಡಾ ಇದರ ಕಾಫಿ ಮಾಡುತ್ತಾರೆ.

  • ಬೀನ್ಸ್.

ಮೆಕ್ಸಿಕೋ ಮೂಲದ ಬೀನ್ಸ್ ಅಥವಾ ಅವರೆ ಕಾಯಿ ಜಾತಿಯ ತರಕಾರಿಗೆ ಹದಿನೈದು ಸಾವಿರ ವರ್ಷಗಳ ಇತಿಹಾಸವಿದೆ.

  • ಹಸಿರು ಬಟಾಣಿ

ಬಟಾಣಿಯು ಗ್ರೀಸ್,ಸಿರಿಯಾ ಅಥವಾ ಟರ್ಕಿಯಿಂದ ಬಂದಿರಬಹುದು. ಈಜಿಪ್ಟ್ ನ ನೈಲ್ ನದಿ ಪ್ರದೇಶದಲ್ಲಿ ಕೂಡಾ ಆರುಸಾವಿ ವರ್ಷಗಳ ಹಿದೆ ಇದನ್ನ ಬೆಳೆದ ಉದಾಹರಣೆ ಇದೆ.

  • ಆಲೂಗಡ್ಡೆ,

ಅತ್ಯಂತ ಜನಪ್ರಿಯ ಆಲೂ ಗಡ್ಡೆಯ ಜನನ ಹತ್ತು ಸಾವಿರ ವರ್ಷಗಳ ಹಿಂದೆ ಪೆರು ಅಥವಾ ಬೊಲಿವಿಯಾ ಇರಬಹುದು.

  • ಈರುಳ್ಳಿ

ಈರುಳ್ಳಿಯ ಮೂಲ ಹುಡುಕುತ್ತ ಹೋದರೆ ಕಣ್ಣಿನಲ್ಲಿ ನೀರು ಬರುವುದು ಗ್ಯಾರೆಂಟಿ.

ಚೈನಾ, ಇಂದಿನ ಪಾಕಿಸ್ತಾನದ ಪ್ರದೇಶಗಳು ಅಥವಾ ಈಜಿಪ್ಟಿನ ಪ್ರದೇಶಗಳು, ಹೀಗೆ ಒಮ್ಮತದ ಅಭಿಪ್ರಾಯ ಸಿಗಲಾರದು.

ಎಲ್ಲಾ ವಿಧವಾಗಿಯೂ ಕಣ್ಣೀರ ತರಕಾರಿಯಾಗಿಬಿಟ್ಟಿದೆ.

  • ಬೆಳ್ಳುಳ್ಳಿ,

ಈಜಿಪ್ಟಿನಲ್ಲಿ ಮಮ್ಮಿಗಳನ್ನ ಮಾಡುವಾಗ ಬೆಳ್ಳುಳ್ಳಿಯ ಎಣ್ಣೆ ಉಪಯೋಗಿಸಿದ ಮಾಹಿತಿ ಇದೆ. ಅದಕ್ಕಿಂತ ಮೊದಲಿನಿಂದಲೂ ಅಲ್ಲಿ ಇದನ್ನ ಬೆಳೆದ ಮಾಹಿತಿ ಸಿಗುತ್ತದೆ.

ಇವನ್ನ ಬಿಟ್ಟು ಇನ್ನೂ ಬಹಳಷ್ಟು ತರಕಾರಿಗಳನ್ನ ಬಿಟ್ಟುಬಿಟ್ಟಿದ್ದೇನೆ.

ಚಿತ್ರಗಳ ಮತ್ತು ವಿಷಯಗಳ ಸಂಗ್ರಹ: ಗೂಗಲ್.

Post a Comment

0Comments

Post a Comment (0)