ಯಾವುದು ಉತ್ತಮ: ಆರ್‌ಡಿ ಅಥವಾ ಎಫ್‌ಡಿ ಅಥವಾ ಎಸ್‌ಐಪಿ ಅಥವಾ ಎಂಎಫ್?

SANTOSH KULKARNI
By -
0

 

ಎಂಎಫ್?

ಇಲ್ಲಿ ಉತ್ತಮ ಯಾವುದು ಅನ್ನುವುದನ್ನ ನಿರ್ಧರಿಸಲು ನಮ್ಮ ಹೂಡಿಕೆಯ ಸಾಮರ್ಥ್ಯ ಮತ್ತು ಹೂಡಿಕೆಯ ಅವಧಿ ಅತಿ ಮುಖ್ಯ.

ಸ್ವಲ್ಪ ವಿವರವಾಗಿ ಹೇಳುತ್ತೇನೆ.

ಯಾವುದು ಉತ್ತಮ ಎಂದು ಹೇಳುವ ಮೊದಲು ಇವುಗಳ ನಡುವಿನ ವ್ಯತ್ಯಾಸವನ್ನು ಹೇಳುತ್ತೇನೆ.

೧) ಆರ್ ಡಿ (RD, recurring deposit)

  • ನಮಗೆ ತಿಳಿದಂತೆ ಇಲ್ಲಿ ಪ್ರತಿ ತಿಂಗಳು ಅಥವಾ ಒಂದು ನಿಶ್ಚಿತ ಅವಧಿಯ ಅಂತರದಲ್ಲಿ ನಿಗದಿತ ಮೊತ್ತದ ಹಣವನ್ನು ನಿಗದಿತ ಅವಧಿಯತನಕ ಪಾವತಿಸುತ್ತಾ ಹೋಗುತ್ತೇವೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯು ಹೂಡಿಕೆಯ ಸಮಯದಲ್ಲಿ ನಿಗದಿ ಪಡಿಸಿದ ಬಡ್ಡಿಯು ನಮ್ಮ ಹೂಡಿಕೆಗೆ ಸೇರುತ್ತಾ ಹೋಗುತ್ತದೆ ಮತ್ತು ಅವಧಿ ಮುಗಿದ ನಂತರ ಬಡ್ಡಿಯಸಹಿತ ನಮ್ಮ ಹಣವು ನಮ್ಮ ಉಳಿತಾಯ ಖಾತೆಗೆ ಜಮಾ ಆಗುತ್ತದೆ.
  • ನಾವು ಆರ್ ಡಿ ಪ್ರಾರಂಭಿಸುವಾಗಲೇ ನಿಗದಿತ ಅವಧಿಯ ನಂತರ ನಮಗೆ ಸಿಗುವ ಒಟ್ಟು ಮೊತ್ತವು ನಮಗೆ ತಿಳಿದಿರುತ್ತದೆ ಮತ್ತು ಅದೇ ಮೊತ್ತವನ್ನ ನಾವು ಪಡೆಯುತ್ತೇವೆ.
  • ಒಂದು ವೇಳೆ ಯಾವುದಾದರೂ ಕಂತುಗಳನ್ನ ನಾವು ಕಟ್ಟದಿದ್ದರೆ ನಮಗೆ ಅವಧಿಯ ಕೊನೆಗೆ ಸಿಗುವ ಮೊತ್ತ ಕೂಡಾ ನಾವು ಕಟ್ಟದಿರುವ ಕಂತು ಮತ್ತು ಅದರ ಮೇಲಿನ ಬಡ್ಡಿಯ ಮೊತ್ತದಷ್ಟು ಕಡಿಮೆಯಾಗುತ್ತದೆ.
  • ಅವಧಿಯ ಮಧ್ಯದಲ್ಲಿ ಯಾವಾಗ ಬೇಕಾದರೂ ನಾವು ನಮ್ಮ ಹಣವನ್ನು ವಾಪಸ್ ಪಡೆಯಲು ಅವಕಾಶವಿದೆ. (ಕೆಲವು ನಿರ್ಧಿಷ್ಟ ಆರ್.ಡಿ ಹೊರತು ಪಡಿಸಿ) ಕೆಲವು ನಿಬಂಧನೆಗಳ ಅನುಸಾರ ನಮಗೆ ನಾವು ಕಟ್ಟಿದ ಮೊತ್ತ ಮತ್ತು ಅದರ ಮೇಲಿನ ಬಡ್ಡಿ ಸಿಗುತ್ತದೆ.

೨) ಎಫ್. ಡಿ ( Fixed deposit)

  • ಇಲ್ಲಿ ಕೂಡಾ ಆರ್.ಡಿ ಖಾತೆಗೆ ಅನ್ವಯವಾಗುವ ಎಲ್ಲ ನಿಯಮಗಳೂ ಅನ್ವಯಿಸುತ್ತವೆ. ಅಲ್ಲಿ ಪ್ರತಿ ತಿಂಗಳೂ ಹಣ ಕಟ್ಟಿದರೆ ಇಲ್ಲಿ ಒಮ್ಮೆ ಮಾತ್ರ ಪಾವತಿಸುತ್ತೇವೆ. ಇಲ್ಲಿ ಕೂಡಾ ಅವಧಿಗೆ ಮುನ್ನ ನಮ್ಮ ಹಣವನ್ನು ಹಿಂಪಡೆಯುವ ಅವಕಾಶವಿದೆ. (ಕೆಲವು ನಿರ್ಧಿಷ್ಟ ಎಫ್.ಡಿ ಹೊರತು ಪಡಿಸಿ) ಮತ್ತು ನಿಬಂಧನೆಗಳ ಅನುಸಾರ ನಮಗೆ ಸಿಗುವ ಬಡ್ಡಿಯ ಮೊತ್ತದಲ್ಲಿ ಬದಲಾವಣೆ ಆಗಬಹುದು.

RBI ನ ಎಲ್ಲ ನಿಯಮಾವಳಿಗಳ ಅನುಸಾರ ಇವು ಇರುತ್ತವಾದರೂ, ಕಾಲಕಾಲಕ್ಕೆ ಬದಲಾಗುವ ಬಡ್ಡಿದರದ ಏರುಪೇರುಗಳು ಈ ಎರಡಕ್ಕೂ ಅನ್ವಯಿಸುವುದಿಲ್ಲ. ನಮ್ಮ ಖಾತೆಯನ್ನು ಪ್ರಾರಂಭಿಸುವಾಗ ನಿಗದಿ ಪಡಿಸಿದ ಬಡ್ಡಿಯ ದರವೇ ಅವಧಿ ಮುಗಿದಾಗ ನಮಗೆ ಸಿಗುತ್ತದೆ.

  • ನಾವು ಕಟ್ಟಿದ ಹಣವನ್ನ ಹೆಚ್ಚಿನ ಬಡ್ಡಿಗೆ ಸಾಲ ಕೊಡುವ ಮೂಲಕ ಹಣಕಾಸು ಸಂಸ್ಥೆಗಳು ಲಾಭ ಗಳಿಸುತ್ತವೆ.

೩) ಎಸ್.ಐ.ಪಿ (Systematic investment plan) 


  • ಇದನ್ನು ಆರ್.ಡಿ ಖಾತೆಗೆ ಹೋಲಿಸಬಹುದಾದರೂ ಅವಧಿಯ ನಂತರ ನಮಗೆ ಸಿಗುವ ಮೊತ್ತ ಅನಿಶ್ಚಿತ. ಇಷ್ಟೇ ಸಿಗುತ್ತದೆ ಎಂದು ಹೇಳಲಾಗದು.
  • RBI ನ ಯಾವುದೇ ನಿಯಮಗಳು ಇವಕ್ಕೆ ಅನ್ವಯಿಸುವುದಿಲ್ಲ. ನಮ್ಮ ಹಣಕ್ಕೆ ಯಾವುದೇ ರೀತಿಯ ಬಡ್ಡಿ ಸೇರ್ಪಡೆ ಆಗುವುದಿಲ್ಲ.
  • ನಾವು ಕಟ್ಟಿದ ಹಣವನ್ನ ನಮ್ಮ ಬ್ರೋಕರೇಜ್ ಎಜೆನ್ಸಿಯವರು ಅಥವಾ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳು ಷೇರು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಷೇರು ಖರೀದಿಯ ಮೂಲಕ ಹೂಡಿಕೆ ಮಾಡುತ್ತವೆ. ಷೇರುಗಳ ಬೆಲೆ ಏರಿದರೆ ನಮ್ಮ ಹಣ ಬೆಳೆಯುತ್ತದೆ, ಷೇರು ಬೆಲೆ ಕಡಿಮೆಯಾದರೆ ನಮ್ಮ ಹಣ ಕೂಡಾ ಕಡಿಮೆಯಾಗುತ್ತದೆ.
  • ನಮ್ಮ ಹೂಡಿಮೆಯ ಮೊತ್ತ ಬೆಳೆದರೂ, ಬೆಳೆಯದಿದ್ದರೂ ಬ್ರೋಕರೇಜ್ ಎಜೆನ್ಸಿಯವರು ತಮ್ಮ ನಿರ್ವಹಣಾ ಶುಲ್ಕವನ್ನ ನಾವು ಕಟ್ಟಿದ ಮೊತ್ತದಿಂದಲೇ ಪಡೆಯುತ್ತವೆ. ಒಮ್ಮೊಮ್ಮೆ ಅಸಲು ಕೂಡಾ ಕಡಿಮೆಯಾಗಬಹುದು.

ಈಗ ಯಾವುದು ಯಾರಿಗೆ ಉತ್ತಮ ಎಂದು ನೋಡೋಣ.

  • ರಿಸ್ಕ್ ಬೇಡವಾದರೆ ಆರ್.ಡಿ ಮತ್ತು ಎಫ್.ಡಿ ಗಳೇ ಉತ್ತಮ. ಇಲ್ಲಿ ಲಾಭ ಕಡಿಮೆಯಾದರೂ ಲಾಭ ಮಾತ್ರ ನಿಶ್ಚಿತವಾಗಿ ಸಿಗುತ್ತದೆ.
  • ನಮ್ಮ ಅಗತ್ಯತೆಗಳನ್ನು ಆಧರಿಸಿ ನಮ್ಮ ಡೆಪಾಸಿಟ್ ಗಳನ್ನ ಲಾಭದೊಂದಿಗೆ ಹಿಂಪಡೆಯಲು ಅವಕಾಶವಿದೆ. ಯಾಕೆಂದರೆ ನಾವು ಹಿಂಪಡೆಯುವ ದಿನದವರೆಗಿನ ಬಡ್ಡಿಯು ನಮ್ಮ ಅಸಲಿಗೆ ಸೇರ್ಪಡೆಯಾಗಿರುತ್ತದೆ.

ಸ್ವಲ್ಪ ರಿಸ್ಕ್ ತೆಗೆದುಕೊಳ್ಳುವುದಾದರೆ ಮತ್ತು ನಮಗೆ ತಕ್ಷಣ ಹಣದ ಅಗತ್ಯ ಇಲ್ಲವಾದರೆ ಎಸ್.ಐ.ಪಿ ಒಳ್ಳೆಯದು. ಇಲ್ಲಿನ ಲಾಭ ಬ್ಯಾಂಕ್ ಡೆಪಾಸಿಟ್ ಗಳಿಗಿಂತ ಹೆಚ್ಚು. ಆದರೂ ಅದು ನಿಶ್ಚಿತ ಅಲ್ಲ.

ನಮಗೆ ಅಗತ್ಯವಿದ್ದಾಗ ಒಮ್ಮೊಮ್ಮೆ ಹಿಂಪಡೆಯಲಾಗದು. ಯಾಕೆಂದರೆ ಇದು ಯಾವಾಗಲೂ ಲಾಭದಲ್ಲಿಯೇ ಇರುತ್ತದೆ ಎಂದು ಹೇಳಲಾಗದು. ಇಲ್ಲಿ ಲಾಭವನ್ನ ನೋಡಲು ಕನಿಷ್ಠ ಮೂರು ವರ್ಷವಾದರೂ ಬೇಕು.

  • ಬ್ಯಾಂಕ್ ಡೆಪಾಸಿಟ್ ಆದರೆ ಹೆಚ್ಚು ಆಯ್ಕೆಗಳಿಲ್ಲ ಮತ್ತು ಎಲ್ಲಕ್ಕೂ ಹೆಚ್ಚು ಕಡಿಮೆ ಒಂದೇ ರೀತಿಯ ಬಡ್ಡಿದರ ಇರುತ್ತದೆ. ಯಾವುದೇ ರೀತಿಯ ಹೆಚ್ಚಿನ ಜ್ಞಾನ ಇಲ್ಲದಿದ್ದವರೂ ಕೂಡಾ ಧೈರ್ಯವಾಗಿ ಹೂಡಿಕೆ ಮಾಡಬಹುದು. ಹೂಡಿಕೆ ಮಾಡಿ ಅವಧಿ ಮುಗಿಯುವವರೆಗೂ ಮರೆತುಬಿಡಬಹುದು.

ಆದರೆ SIP ಹಾಗಲ್ಲ. ನಮ್ಮ ದೇಶದಲ್ಲಿ ಸುಮಾರು 2500 ಕ್ಕೂ ಹೆಚ್ಚು ಮ್ಯೂಚುಯಲ್‌ ಫಂಡ್‌ ಗಳು ಇವೆ.

  • (ಅವುಗಳಲ್ಲಿ ಹೆಚ್ಚಿನವು ನೆಗೆಟಿವ್ ರಿಟರ್ನ್ ಕೊಟ್ಟಿವೆ ಅನ್ನುವುದು ಸತ್ಯವಾದರೂ ಯಾರೂ ಅದನ್ನ ಹೇಳುವುದಿಲ್ಲ. ಕೇವಲ ಲಾಭದ ಲೆಕ್ಕಾಚಾರವನ್ನು ಮಾತ್ರ ಕೊಡುತ್ತಾರೆ ).

ಇವುಗಳಲ್ಲಿ ಯಾವುದು ಮುಖ್ಯ ಎಂದು ನಿರ್ಧರಿಸುವುದು ಸಾಮಾನ್ಯವಾಗಿ ಅಸಾಧ್ಯ. ಆಗ ಬ್ರೋಕರೇಜ್ ಎಜೆನ್ಸಿಯ ಬಣ್ಣದ ಮಾತಿಗೆ ಮರುಳಾಗಲೇ ಬೇಕು. ಇಂತಹ ಮಾತುಗಳಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

  • ಈಗ ಕೆಲವು ವರ್ಷಗಳ ಹಿಂದೆ ದೇಶದ ಪ್ರತಿಷ್ಠಿತ ಕಂಪನಿ LIC ಯ ಮನಿ ಪ್ಲಸ್ ಪಾಲಿಸಿಯ ನೆನಪು ಇರಬಹುದು. ಆಗ ಏಜೆಂಟ್ ಗಳು (ಎಲ್ಲರೂ ಅಲ್ಲ) ಜನರನ್ನ ಎಷ್ಟರ ಮಟ್ಟಿಗೆ ದಾರಿ ತಪ್ಪಿಸಿದರು ಎನ್ನುವುದು ಈಗ ಮರೆತುಹೋದ ವಿಚಾರ.

ಆದುದರಿಂದ SIP ಗಳಲ್ಲಿ ಹೂಡಿಕೆ ಮಾಡಲು ಮಾರುಕಟ್ಟೆಯ ಕನಿಷ್ಠ ಜ್ಞಾನವಾದರೂ ಬೇಕು. ಮಾರುಕಟ್ಟೆಯ ಏರಿಳಿತದ ಬಗ್ಗೆ ನಿಗಾ ಇಡಬೇಕು. ನಮ್ಮ ಹೂಡಿಕೆಯ ಗತಿ ಎತ್ತ ಸಾಗುತ್ತಿದೆ ಅನ್ನುವುದನ್ನ ಆಗಾಗ್ಗೆ ಪರಿಶೀಲಿಸುತ್ತಿರಬೇಕು.

ಷೇರು ಮಾರುಕಟ್ಟೆಯ ಹಣೆಬರಹವನ್ನ ಯಾರಿಂದಲೂ ಹೇಳಲಾಗದು. ಎಂತೆಂತಹ ಬ್ಲೂಚಿಪ್ ಕಂಪನಿಗಳ ಷೇರು ಮೌಲ್ಯ ನೆಲಕಚ್ಚಿವೆ. ಎಷ್ಹೋ ಹೂಡಿಕೆದಾರರು ಅದೆಷ್ಟೋ ನಷ್ಟ ಅನುಭವಿಸಿದ್ದಾರೆ.

ಹಾಗಾದರೆ ಎಲ್ಲಿ ಹೂಡಿಕೆ ಮಾಡಬೇಕು ಎಂದು ಹೇಗೆ ನಿರ್ಧರಿಸವೇಕು?

  • ನಮಗೆ ಮಾರುಕಟ್ಟೆಯ ಜ್ಞಾನವೇ ಇಲ್ಲದಿದ್ದರೆ ಮತ್ತು ನಮ್ಮಲ್ಲಿ ಸಾಕಷ್ಟು ಹಣವಿಲ್ಲದಿದ್ದರೆ ಹಾಗೂ ಹೆಚ್ಚಿನ ಅವಧಿಗೆ ಹೂಡಿಕೆ ಮಾಡುವ ಶಕ್ತಿ ಇಲ್ಲದಿದ್ದರೆ ನನ್ನ ಪ್ರಕಾರ ಬ್ಯಾಂಕ್ ಗಳಲ್ಲಿ ಹೂಡುವುದೇ ಉತ್ತಮ.
  • ನಮ್ಮಲ್ಲಿ ಸಾಕಷ್ಟು ಹಣವಿದ್ದು , ಹೆಚ್ಚಿನ ಅವಧಿಗೆ ಹೂಡಿಕೆ ಮಾಡುವ ಶಕ್ತಿ ಇದ್ದು, ಮಾರುಕಟ್ಟೆಯ ಜ್ಞಾನ ಸ್ವಲ್ಪವಾದರೂ ಇದ್ದರೆ SIP ಗಳು ಉತ್ತಮ. ಅದೂ ಆಗಾಗ್ಗೆ ಲಾಭಾಂಶವನ್ನ ಹಿಂಪಡೆಯುವ ಅನುಭವ ಕೂಡಾ ಇರಬೇಕು. ಜೊತೆಗೆ ನಷ್ಟದ ಭಾರವನ್ನು ಸಹಿಸುವ ಶಕ್ತಿಯೂ ಇರಬೇಕು.

ಸೂಚನೆ :- ಇದುವರೆಗಿನ ದಾಖಲೆಯ ಆದಾರವನ್ನು ನೋಡಿದರೆ ಉತ್ತಮವಾದ SIP ಯ ಹೂಡಿಕೆಯು ಬ್ಯಾಂಕ್ ಡೆಪಾಸಿಟ್ ಗಳಿಗಿಂತ ಹೆಚ್ಚಿನ ಲಾಭಾಂಶವನ್ನು ಕೊಟ್ಟಿವೆ. ಆದರೆ ತಕ್ಷಣಕ್ಕೆ ಲಾಭವನ್ನ ನಿರೀಕ್ಷಿಸಲಾಗದು.

SIP ಗಳಲ್ಲಿ ಲಾಭವನ್ನು ನೋಡಲು ಮಾರುಕಟ್ಟೆಯ ಏರಿಳಿತವನ್ನ ಲೆಕ್ಕಿಸದೆ ನಿಯಮಿತವಾಗಿ ಮತ್ತು ದೀರ್ಘಾವಧಿಯ ಹೂಡಿಕೆ ಮಾಡುವದು ಅನಿವಾರ್ಯ.

SIP ಗಳನ್ನು ನಿರ್ವಹಿಸುವ ಫಂಡ್ ಮ್ಯಾನೇಜರ್ ಗಳು ನಮ್ಮ ಹೂಡಿಕೆಯನ್ನು ಮಾರುಕಟ್ಟೆಯ ಹಲವು ಕ್ಷೇತ್ರಗಳಲ್ಲಿ ತೊಡಗಿಸುವುದರಿಂದ ಒಂದು ಕಡೆ ನಷ್ಟವಾದರೂ ಇನ್ನೊಂದು ಕಡೆ ಲಾಭ ಬಂದಿರುತ್ತದೆ. ಆದು ನಮ್ಮ ಹೂಡಿಕೆಯನ್ನು ಬೆಳೆಸುತ್ತದೆ.

ನೆನಪಿರಲಿ :-

ನಮ್ಮ ಕಷ್ಟದ ಗಳಿಕೆಯ ಉಳಿಕೆಯು ಬೆಳೆಯಬೇಕೇ ಹೊರತು ಕರಗಬಾರದು. ಅದಕ್ಕಾಗಿ ನಮಗೆ ಯಾವುದು ಸೂಕ್ತ ಎಂಬುದನ್ನ ನಾವೇ ಅರಿತು ನಿರ್ಧರಿಸಬೇಕು.

ವಂದನೆಗಳು.

ಚಿತ್ರಗಳು :- ಗೂಗಲ್ ನಿಂದ.

Tags:

Post a Comment

0Comments

Post a Comment (0)