ನಮಗಿಷ್ಟವಾದ ತಿನಿಸು ಯಾವ ಹೋಟೆಲ್‌ನಲ್ಲಿ ಎಷ್ಟು ಬೆಲೆಗೆ ಸಿಗುತ್ತದೆ ಅನ್ನುವುದನ್ನ ತಿಳಿದುಕೊಂಡು ನಾವೇ ಹೊಟೆಲ್‌ಗೆ ಹೋಗಿ ತಿನ್ನುವುದು ಹಾಗೂ ಯಾವ ಹೊಟೆಲ್‌ನಲ್ಲಿ ಯಾವ ತಿನಿಸು ಚೆನ್ನಾಗಿರುತ್ತದೆ ಮತ್ತು ಅದರ ಬೆಲೆ ಎಷ್ಟು ಅನ್ನುವ ಸ್ಪಷ್ಟವಾದ ಜ್ಞಾನ ಇಲ್ಲದಿದ್ದಾಗ ಜೊಮಾಟೊ , ಸ್ವಿಗ್ಗಿಯಂತಹ ವಿತರಕರ ಮೂಲಕ ತಿನಿಸು ತರಿಸಿಕೊಳ್ಳುವುದರ ನಡುವಿನ ವ್ಯತ್ಯಾಸವೇ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳ ನಡುವಿನ ವ್ಯತ್ಯಾಸ.
ಷೇರು ಮಾರುಕಟ್ಟೆ.
- ಮಾರುಕಟ್ಟೆಯಲ್ಲಿ ನೊಂದಾಯಿತವಾದ ಯಾವುದಾದರೂ ಕಂಪನಿಯ ಷೇರುಗಳನ್ನು ನೇರವಾಗಿ ಅಥವಾ ಮಧ್ಯವರ್ತಿಗಳ ಮೂಲಕ ಅಂದಿನ ಬೆಲೆಯಲ್ಲಿ ಖರೀದಿಸಿ ಆ ಕಂಪನಿಯ ಸಹಭಾಗಿತ್ವವನ್ನು ಪಡೆಯುವುದು ಷೇರುಮಾರುಕಟ್ಟೆಯ ವ್ಯವಹಾರ.
- ಭಾರತೀಯ ಷೇರು ಮಾರುಕಟ್ಟೆಗಳಾದ NSE ಮತ್ತು BSE ಗಳಲ್ಲಿ ಒಟ್ಟಾಗಿ ಸುಮಾರು ಎಂಟು ಸಾವಿರ ಕಂಪನಿಗಳು ನಮೂದಿಸ್ಪಟ್ಟಿವೆ. ಇಷ್ಟೊಂದು ದೊಡ್ಡ ಸಂಖ್ಯೆಯ ಕಂಪನಿಗಳಲ್ಲಿ ಯಾವ ಕಂಪನಿಯ ಷೇರು ಕೊಂಡು ಕೊಳ್ಳಬೇಕು ಅನ್ನುವುದನ್ನ ನಿರ್ಧರಿಸುವುದು ಅಷ್ಟು ಸುಲಭವಲ್ಲ . ಅಂತಹ ಸಮಯದಲ್ಲಿ ಉಪಯೋಗಕ್ಕೆ ಬರುವುದೇ ಮ್ಯೂಚುವಲ್ ಫಂಡ್‌ಗಳು.
- ಇದರ ಪೂರ್ತಿ ನಿರ್ವಹಣೆಯನ್ನು ಹೂಡಿಕೆದಾರರೇ ಮಾಡಬೇಕು.
- ಕೆಲವು ಕಂಪನಿಗಳು ತಮ್ಮ ಲಾಭಾಂಶವನ್ನು ಷೇರುದಾರರಿಗೆ ಡಿವಿಡೆಂಡ್ ರೂಪದಲ್ಲಿ ಕೊಡುತ್ತವೆ.
- ಷೇರು ಮಾರುಕಟ್ಟೆಯಲ್ಲಿ ನೇರವಾಗಿ ವ್ಯವಹರಿಸಲು ಅದರ ಬಗ್ಗೆ ಸ್ವಲ್ಪವಾದರೂ ತಿಳಿದಿರಬೇಕು.
- ಒಂದು ನಿರ್ಧಿಷ್ಟ ಕಂಪನಿಯ ಷೇರು ಕೊಳ್ಳುವಾಗ ಕನಿಷ್ಟಪಕ್ಷ ಒಂದು ಷೇರನ್ನಾದರೂ ಕೊಳ್ಳಲೇಬೇಕು.
- ಮಾರುಕಟ್ಟೆಯ ಏರಿಳಿತದ ನೇರ ಪರಿಣಾಮ ನಾವು ಕೊಂಡುಕೊಳ್ಳುವ ಷೇರಿನಮೇಲೆ ಆಗುತ್ತದೆ.
- ಸಾಮಾನ್ಯವಾಗಿ ಷೇರುಗಳಲ್ಲಿ ಹೂಡಿಕೆ ಮಾಡಲು ಹೆಚ್ಚು ಮೊತ್ತದ ಹಣ ಬೇಕಾಗುತ್ತದೆ.
ಮ್ಯೂಚುವಲ್ ಫಂಡ್.
- ಮ್ಯೂಚುವಲ್ ಫಂಡ್ ಅನ್ನುವುದು ಒಂದು ಹೂಡಿಕೆಯಲ್ಲ. ಅದು ಹೂಡಿಕೆಗೊಂದು ದಾರಿ.
- ಪರೋಕ್ಷವಾಗಿ ಹಲವು ಕಂಪನಿಗಳ ಷೇರುಗಳಲ್ಲಿ ಫಂಡ್ ಹೌಸ್‌ಗಳ ಮೂಲಕ ಹೂಡಿಕೆ ಮಾಡುವುದನ್ನು ಮ್ಯೂಚುವಲ್ ಫಂಡ್ ಹೂಡಿಕೆ ಎನ್ನಬಹುದು. ಇಲ್ಲಿ ನಮ್ಮ ಹಣವು ಹೂಡಿಕೆಯಾದ ಕಂಪನಿಯ ಸಹಭಾಗಿತ್ವ ನಮಗೆ ಸಿಗುವುದಿಲ್ಲ.
- ಲಭ್ಯವಿರುವ ಯಾವುದಾದರೂ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಬಹುದು. ನಮ್ಮ ಹೂಡಿಕೆಯ ನಿರ್ವಹಣೆಯನ್ನು ನುರಿತ ನಿರ್ವಾಹಕರು ಅಥವಾ ಫಂಡ್ ಮೇನೇಜರ್‌ಗಳು ಮಾಡುತ್ತಾರೆ.
- ಮ್ಯೂಚುವಲ್ ಫಂಡ್‌ಗಳಲ್ಲಿನ ಕನಿಷ್ಟ ಹೂಡಿಕೆ ತಿಂಗಳಿಗೆ 100.00 ರೂ.ನಿಂದ ಪ್ರಾರಂಭವಾಗುತ್ತದೆ. ನಾವಂದುಕೊಂಡ ಕಂಪನಿಯ ಷೇರಿನ ಬೆಲೆ 100.00 ರೂ.ಗಿಂತ ಹೆಚ್ಚಿದ್ದರೆ ನಾವು ಆ ಷೇರನ್ನು ಕೊಂಡುಕೊಳ್ಳಲಾಗದು. ಆದರೆ ಅದೇ 100.00 ರೂ. ವನ್ನು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಆ ಹಣವನ್ನು ಇನ್ನೂ ಉತ್ತಮ ಕಂಪನಿಯಲ್ಲಿ ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆ ಮಾಡಬಹುದು.
- ನಮ್ಮ ಹಣವು ಹಲವಾರು ಕಂಪನಿಯ ಈಕ್ವಿಟಿ ಷೇರುಗಳಲ್ಲಿ ಮತ್ತು ಡೆಟ್ ಫಂಡ್‌ಗಳಲ್ಲಿ ಹೂಡಿಕೆಯಾಗುತ್ತದೆ. ನಮ್ಮ ಹಣವು ಹಲವಾರು ಕಂಪನಿಗಳಲ್ಲಿ ಮತ್ತು ಬೇರೆ ಬೇರೆ ರೀತಿಯ ಫಂಡ್‌ಗಳಲ್ಲಿ ಹೂಡಿಕೆಯಾಗುವುದರಿಂದ ಮಾರುಕಟ್ಟೆಯ ಸ್ವಲ್ಪ ಮಟ್ಟಿನ ಏರಿಳಿತದ ನೇರ ಪರಿಣಾಮ ಮ್ಯೂಚುವಲ್ ಫಂಡ್‌ಗಳ ಮೇಲೆ ಅಷ್ಟಾಗಿ ಆಗುವುದಿಲ್ಲ.
- ಮ್ಯೂಚುವಲ್ ಫಂಡ್‌ಗಳು ಒಂದು ರೀತಿಯಲ್ಲಿ ಷೇರು ಮಾರಕಟ್ಟೆಯ ಬೆನ್ನೆಲುಬು.
- ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಜೆ ಮಾಡಲು ಯಾವುದೇ ಅನುಭವದ ಅಗತ್ಯ ಬೇಕಿಲ್ಲ.
- ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತದೆ ಹಣ ಬೇಕಿಲ್ಲ. ಪ್ರತಿ ತಿಂಗಳು ನಿಗದಿತ ಮೊತ್ತದ ಹಣವನ್ನು S I P ಮೂಲಕ ಹೂಡಿಕೆ ಮಾಡಬಹುದು.