ಅವಳ ಹೆಸರು ದಿಶಾ. ಕಾಲೇಜಿನ ಹುಡುಗರೆಲ್ಲರ ಕನಸಿನ ರಾಣಿ. ನೀಳನಾಸಿಕ, ತೊಂಡೆತುಟಿ, ಇಳಿಬಿದ್ದ ಮುಂಗುರುಳು, ನಕ್ಕಾಗ ಗುಳಿ ಬೀಳುವ ಗಲ್ಲ, ಸಿಂಹದ ನಡು, ಎತ್ತರದ ನಿಲುವು ಅವಳದಾಗಿತ್ತು. ಅವಳ ಸೌಂದರ್ಯಕ್ಕೆ ಹುಡುಗಿಯರೂ ಹೊಟ್ಟೆಕಿಚ್ಚುಪಡುತಿದ್ದರು. ಅವಳನ್ನು ಒಮ್ಮೆಯಾದರೂ ಮಾತನಾಡಿಸಿದರೆ ಧನ್ಯರಾಗುತ್ತೇವೆ ಎಂಬುದು ಹುಡುಗರೆಲ್ಲರ ತವಕ. ಅವಳು ಕಾಲೇಜಿನೊಳಗೆ ಅಡಿಯಿಟ್ಟರೆ ಎಲ್ಲರ ಕಣ್ಣುಗಳು ಅವಳತ್ತ ದೃಷ್ಟಿ ಹರಿಸುತಿದ್ದವು. ಅವಳು ಮೈಸೂರಿನವಳಂತೆ, ಅವರಪ್ಪ ತುಂಬಾ ಶ್ರೀಮಂತರಂತೆ, ಒಬ್ಬಳೇ ಮಗಳಂತೆ.. ಹೀಗೆ ಏನೇನೋ ಸುದ್ದಿಗಳು ಕಾಲೇಜಿನ ತುಂಬ ಮತ್ತು ಹುಡುಗರ ಬಾಯಿಯಲ್ಲಿ ಕೂಡ. ಕಾಲೇಜು ಕ್ಯಾಂಟೀನಿನಲ್ಲಿ, ಆಟದ ಮೈದಾನದಲ್ಲಿ, ಲೈಬ್ರರಿಯ ಪುಸ್ತಕಗಳ ಸಂಧಿನಲ್ಲಿ ಅವಳದೇ ಮಾತು. ಅವಳೊಲಿದವನು ನಿಜಕ್ಕೂ ಅದೃಷ್ಟವಂತ.
ಅಂತಹ ಅದೃಷ್ಟವಂತ ಕಾಲೇಜಿನಲ್ಲಿ ಒಬ್ಬನಿದ್ದ. ಅವನ ಹೆಸರು ಸೂರ್ಯ. ಅವಳ ಕ್ಲಾಸ್‍ಮೇಟ್. ಅವನೂ ಸ್ಫುರದ್ರೂಪಿ. ಅವಳಷ್ಟೇ ಎತ್ತರ. ಆದರೆ ಶ್ರೀಮಂತಿಕೆಯಲ್ಲಲ್ಲ. ಅವರಪ್ಪ ಕಾರ್ಖಾನೆಯೊಂದರಲ್ಲಿ ಬಡ ಕಾರ್ಮಿಕ. ಅಮ್ಮ ಶಾಲೆಯೊಂದರಲ್ಲಿ ಶಿಕ್ಷಕಿ. ಸೂರ್ಯ ಅವರ ತಂದೆತಾಯಿಗೆ ಒಬ್ಬನೇ ಮಗ. ಹಾಗಾಗಿ ಅವನು ಅಪ್ಪ ಅಮ್ಮ್ಮಂದಿರ ಕಣ್ಮಣಿ. ಅವನ ಪಾದಗಳಿಗೂ ತುಸು ನೋವಾಗದಂತೆ ಅವರು ಅವನನ್ನು ಬೆಳೆಸಿದ್ದರು. ಸೂರ್ಯನಿಗೆ ದಿಶಾಳನ್ನು ಕಂಡು ಎಲ್ಲರಂತೆ ಕನಸುಗಳಿದ್ದುದು ನಿಜ, ಆದರೆ ಅವಳು ನನಗೆ ನಿಲುಕದ ಗಗನಕುಸುಮ ಎಂಬುದು ಅವನಿಗೆ ಮನದಟ್ಟಾಗಿತ್ತು. ಎಲ್ಲ ಹುಡುಗರಂತೆ ಅವನೂ ಅವಳ ಬಗ್ಗೆ ಮಾತಿನಲ್ಲೇ ಮುದಪಡುತ್ತಾ ಕಣ್ಣೋಟದಲ್ಲೇ ಸುಖಿಸುತ್ತಾ ಕಾಲ ಕಳೆಯುತಿದ್ದ. ಆದರೆ ಒಂದು ದಿನ ಅವನ ಅದೃಷ್ಟದ ಬಾಗಿಲು ತೆರೆಯಿತು. ದಿಶಾ ಅವನ ಲ್ಯಾಬ್ ರೆಕಾರ್ಡ ನೀಡುವಂತೆ ಕೇಳಿದಳು. ಸೂರ್ಯನಿಗೆ ಆಕಾಶ ಕೈಗೆಟುಕಿದಂತಾಯಿತು. ಲ್ಯಾಬ್ ರೆಕಾರ್ಡ ನೀಡಿ ಮನೆಗೆ ಬಂದವನಿಗೆ ಮೈಯೆಲ್ಲಾ ಪುಳಕ, ಮನದಲ್ಲೆಲ್ಲಾ ಕನಸುಗಳು.
ಹೀಗೆ ಶುರುವಾದ ಪರಿಚಯ ಸೂರ್ಯನ ಎದೆಯಲ್ಲಿ ಅನುರಾಗದ ಪುಷ್ಪವನ್ನು ಅರಳಿಸಿತ್ತು. ಆದರೆ ಯಾವುದೋ ಅವ್ಯಕ್ತ ಹೆದರಿಕೆ ಅವನನ್ನು ಮುಂದುವರಿಯದಂತೆ ತಡೆಯುತಿತ್ತು. ದಿಶಾ ಇವನು ಕಂಡಾಗಲೆಲ್ಲಾ ಒಂದು ಮೋಹಕ ಮುಗುಳ್ನಗೆ ಬೀರುತಿದ್ದಳು. ಇವನ ಎದೆ ಡವಗುಟ್ಟುತಿತ್ತು. ಒಂದು ದಿನ ಧೈರ್ಯ ಮಾಡಿ ಆಕೆಯ ಮೊಬೈಲಿಗೊಂದು ಫೋನು ಮಾಡಿಯೇಬಿಟ್ಟ. ಅವಳೂ ಹರ್ಷಿತಳಾಗಿಯೇ ಉತ್ತರಿಸಿದಳು. ಕಾಲೇಜಿನ ಬಗ್ಗೆ, ಪಾಠಗಳ ಬಗ್ಗೆ ಶುರುವಾದ ಮಾತುಕತೆ ಸಿನೆಮಾಗಳ ಬಗ್ಗೆ, ಶಾಪಿಂಗ್ ಬಗ್ಗೆ, ರೆಸ್ಟೋರೆಂಟುಗಳ ಬಗ್ಗೆ ಸುಳಿದಾಡತೊಡಗಿತು. ನಿಧಾನವಾಗಿ ಸೂರ್ಯ ದಿಶಾಳಿಗೆ ಹತ್ತಿರವಾಗತೊಡಗಿದ. ಇಬ್ಬರೂ ಮೈಛಳಿ ಬಿಟ್ಟು ಮಾತನಾಡುವ ಹಂತ ತಲುಪಿದರು. ದಿನವೂ ದಿಶಾ ಅವನಿಗಾಗಿ ಕಾಯತೊಡಗಿದಳು. ಸಂಜೆ ಹುಡುಗಿಯರ ಹಾಸ್ಟೆಲಿನ ಮೂಲೆಯೊಂದರ ಬಳಿ ಬಂದು ಸೂರ್ಯ ನಿಲ್ಲತೊಡಗಿದ. ಸೂರ್ಯನಿಗೆ ಮೊದಮೊದಲು ಇದ್ದ ಹಿಂಜರಿಕೆ ಮಾಯವಾಗಿ ದಿಶಾಳ ಜೊತೆ ತಿರುಗುವುದು ರೂಢಿಯಾಯಿತು.
ದಿಶಾಳ ಬಳಿ ಒಂದು ಐಷಾರಾಮಿ ಕಾರು ಇತ್ತು. ಒಂದು ದಿನ, ಹೀಗೆ ಸುಮ್ಮನೆ ಕಾರಿನಲ್ಲಿ ದೂರ ದೂರ ಕುಳಿತುಕೊಂಡು ನಗರ ಸುತ್ತುವ ಬದಲು ಒಬ್ಬರಿಗೊಬ್ಬರು ಒತ್ತಿ ಕುಳಿತು ಜಾಲಿರೈಡ್ ಮಾಡಲು ನೀನ್ಯಾಕೆ ಒಂದು ಬೈಕ್ ತೆಗೆದುಕೊಳ್ಳಬಾರದೆಂದು ಸೂರ್ಯನ ಅಂತಸ್ತಿಗೆ ದುಬಾರಿಯಾದ ಸಲಹೆಯೊಂದನ್ನು ನೀಡಿದಳು. ಅವನಿಗೆ ತನ್ನ ಅಪ್ಪ-ಅಮ್ಮಂದಿರ ಪರಿಸ್ಥಿತಿ ತಿಳಿದಿದ್ದರೂ ಅದ್ಯಾವ ಮಹಾ..ಒಂದು ವಾರ ಸಮಯ ಕೊಡು.. ಬೈಕಿನಲ್ಲಿ ಹಾಸ್ಟೆಲಿನ ಹತ್ತಿರ ಹಾಜರಾಗುತ್ತೇನೆ ಎಂದು ಅವಳಿಗೆ ಭರವಸೆ ನೀಡಿದ. ಅಪ್ಪ-ಅಮ್ಮನ ಬಳಿ ಬೈಕು ಕೊಡಿಸುವಂತೆ ಅಲವತ್ತುಕೊಂಡ. ಇರುವುದು ಒಬ್ಬನೇ ಮಗ, ಅವನ ಆಸೆಯನ್ನು ಪೂರೈಸದೇ ಹೋದರೆ ನಾವು ಬದುಕುತ್ತಿರುವುದಾದರೂ ಯಾರಿಗೋಸ್ಕರ ಎಂದುಕೊಂಡರು ಅವನ ಅಪ್ಪ-ಅಮ್ಮಂದಿರು. ಅಪ್ಪ ತನ್ನ ಭವಿಷ್ಯ ನಿಧಿಯಿಂದ ಸ್ವಲ್ಪ ಹಣ ಸಾಲ ತೆಗೆದ. ಅಮ್ಮನ ಕೈಯ್ಯಲ್ಲಿದ್ದ ಚಿನ್ನದ ಬಳೆಗಳು ಮಾಯವಾದವು. ಸೂರ್ಯನಿಗೊಂದು ದುಬಾರಿ ಬೈಕು ಸಿಕ್ಕತು. ಮುಂದೆ ಸೂರ್ಯ, ಅವನ ಹಿಂದೆ ಅವನಿಗೊತ್ತಿಕೊಂಡು ದಿಶಾ.. ಪ್ರಪಂಚವೇ ಬದಲಾಯಿತು. ಬೈಕು ದಿನಾ ಎಲ್ಲೆ ಮೀರಿದ ವೇಗದಲ್ಲಿ ನಗರದ ರಸ್ತೆಗಳಲ್ಲಿ ಓಡಾಡತೊಡಗಿ ಉಳಿದ ಹುಡುಗರ ಕಣ್ಣುಗಳನ್ನು ಕುಕ್ಕತೊಡಗಿತು. ಇಷ್ಟಾದ ಮೇಲೆ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳದಿದ್ದರೆ ಆದೀತೇ..? ಸೂರ್ಯ ಒಂದು ಸುಂದರ ಸಂಜೆಯಲ್ಲಿ ‘ಓ ದಿಶಾ.. ನಾನು ನಿನ್ನನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ..’ ಅಂದ. ದಿಶಾ ದೊಡ್ಡದಾಗಿ ನಕ್ಕಳು. ‘ ಓ...ಕೆ.. ನಾನೂ ನಿನ್ನನ್ನು ಪ್ರೀತಿಸುತ್ತೇನೆ ಸೂರ್ಯ..’ ಎಂದು ಅವನ ಕೆನ್ನೆಗೊಂದು ಸಿಹಿಮುತ್ತು ನೀಡಿದಳು.
ದಿನಗಳು ಕಳೆದವು. ಸೂರ್ಯನ ಮನಸ್ಸಿನಲ್ಲಿ ದಿಶಾ ಗಟ್ಟಿಯಾಗಿ ನೆಲೆನಿಂತಳು. ಭವಿಷ್ಯದ ಬಗೆಗೆ ಹೊಂಗನಸು ಕಾಣುತ್ತಾ ಸೂರ್ಯ ತೇಲತೊಡಗಿದ. ದಿಶಾಳಿಗೆ ಸೂರ್ಯ ಆಸರೆಯಾದ. ಅವಳು ಬಹು ಸಂತೋಷದಿಂದ ಸಮಯ ಕಳೆಯತೊಡಗಿದಳು. ಪದವಿಯ ಕೊನೆಯ ವರ್ಷಕ್ಕೆ ಬಂದದ್ದು ಇಬ್ಬರಿಗೂ ತಿಳಿಯಲೇ ಇಲ್ಲ.
ಸೂರ್ಯ ಒಂದು ದಿನ ತನ್ನ ಅಪ್ಪ-ಅಮ್ಮನ ಬಳಿ ತನ್ನ ಪ್ರೀತಿಯ ಹುಡುಗಿಯ ಬಗ್ಗೆ ಹೇಳಿಕೊಂಡ. ಅವರು ಹುಡುಗಿಯ ಜಾತಿ, ಅಂತಸ್ತು ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಮಗನ ಆಯ್ಕೆ ಸರಿಯಾಗಿಯೇ ಇರುತ್ತದೆ ಎಂಬ ನಂಬಿಕೆ ಅವರದು. ಮೇಲಾಗಿ ತನ್ನ ಪೂರ್ತಿ ಬದುಕನ್ನು ಅವಳ ಜೊತೆ ಕಳೆಯಬೇಕಾದವನು ಅವನು. ಒಬ್ಬರಿಗೊಬ್ಬರು ಇಷ್ಟಪಟ್ಟು ಬದುಕಿಗೆ ಪಾದಾರ್ಪಣೆ ಮಾಡುವುದಕ್ಕಿಂತ ಮಿಗಿಲಾಗಿ ಇನ್ನಾವ ಮಾರ್ಗವಿದ್ದೀತು ಜಗದಲ್ಲಿ ಎಂದು ಸಂತೋಷಪಟ್ಟರು. ಸೂರ್ಯನಿಗೆ ಸಮಾಧಾನವಾಯಿತು. ದಿಶಾಳನ್ನು ತನ್ನ ಮನೆಗೆ ಕರೆದು ತಂದು ಅಪ್ಪ-ಅಮ್ಮಂದಿರಿಗೂ ಅವರ ಭಾವೀ ಸೊಸೆಯನ್ನು ಪರಿಚಯಿಸಿದ. ಎಲ್ಲದಕ್ಕೂ ಮುಗುಳ್ನಗುತಿದ್ದ ದಿಶಾಳನ್ನು ಕಂಡು ಸೂರ್ಯನ ಅಪ್ಪ-ಅಮ್ಮನೂ ಮಗನ ಆಯ್ಕೆ ಸರಿಯಾಗಿದೆ ಎಂದು ನಿರಾಳವಾದರು.
ಒಂದು ದಿನ ದಿಶಾ ಸೂರ್ಯನಿಗೆ ಹೇಳಿದಳು. ‘ಸೂರ್ಯ.. ನನ್ನ ಪಪ್ಪಾ ನನಗಾಗಿಯೇ ಎಂದು ಒಂದು ಬಂಗಲೆ ಕಟ್ಟಿಸಿದ್ದಾರೆ.. ಮುಂದಿನ ಭಾನುವಾರ ಅದರ ಗೃಹಪ್ರವೇಶ. ಕಾಲೇಜಿನಲ್ಲಿ ನಾನು ನಿನಗೊಬ್ಬನಿಗೇ ಆಹ್ವಾನ ನೀಡುತ್ತಿರುವುದು.. ಬರಬೇಕು.’ ಸೂರ್ಯನಿಗೆ ಅತೀವ ಆನಂದವಾಯಿತು. ‘ನನ್ನ ದಿಶಾ.. ನನಗೊಬ್ಬನಿಗೇ ಆಹ್ವಾನ ನೀಡಿದ್ದಾಳೆ.. ಏಕೆಂದರೆ ನಾನೊಬ್ಬನೇ ಅವಳ ಹೃದಯಸಿಂಹಾಸನಾಧೀಶ್ವರ..’ ಅವನ ಮನಸ್ಸು ಕುಣಿಯಿತು. ಭಾವನೆಗಳನ್ನು ಬಿಗಿಹಿಡಿದು ಭಾನುವಾರಕ್ಕಾಗಿ ಕಾಯುತಿದ್ದ.
ಭಾನುವಾರ ಬಂದೇ ಬಿಟ್ಟಿತು. ತನ್ನ ಅಮ್ಮನಿಗೆ ವಿಷಯ ತಿಳಿಸಿ ಬೆಳಿಗ್ಗೆಯೇ ಹೊರಟ. ಬಸ್ಸಿನಲ್ಲಿಯೇ ಹೋಗು ಅಂದ ಅಮ್ಮನಿಗೆ ನಾನೇನೂ ಸಣ್ಣಮಗುವೇ ಎಂದು ಹೇಳಿ ನಕ್ಕು ಬೈಕಿನಲ್ಲಿಯೇ ಹೊರಟ. ಅಮ್ಮ ‘ನೀನು ಎಷ್ಟು ದೊಡ್ಡವನಾದರೂ ನನಗೆ ನೀನು ಚಿಕ್ಕ ಮಗುವೇ.. ರಸ್ತೆಯಲ್ಲಿ ಜೋಪಾನ..’ ಎಂದಳು. ಸರಿ ಎಂದವನು ಮನಸ್ಸಿನಲ್ಲಿಯೇ ತನಗೆ ತಿಳಿದಿದ್ದ ಪ್ರೇಮಗೀತೆಗಳನ್ನೆಲ್ಲಾ ಗುನುಗಿಕೊಂಡು ಹೊರಟ.
ಮೈಸೂರು ತಲುಪಿ ದಿಶಾ ನೀಡಿದ್ದ ವಿಳಾಸಕ್ಕೆ ಬಂದಾಗ ಅಲ್ಲಿ ಸೇರಿದ್ದ ಜನರನ್ನು ಕಂಡು ದಿಗಿಲಾಯಿತು. ಜನರಷ್ಟೇ ಸಂಖ್ಯೆಯ ಕಾರುಗಳು ಬಂಗಲೆಯ ಮುಂದೆ ನಿಂತಿದ್ದವು. ದಿಶಾ ಬಂಗಲೆಯ ಟೆರೇಸಿನ ಮೇಲೆ ಒಬ್ಬ ಸುಂದರ ಯುವಕನೊಂದಿಗೆ ನಿಂತಿದ್ದವಳು ಇವನನ್ನು ಕಂಡು ಕೆಳಗಿಳಿದು ಬಂದು ಸ್ವಾಗತಿಸಿದಳು. ನನ್ನ ಕಾಲೇಜಿನ ಆತ್ಮೀಯ ಗೆಳೆಯ ಇವನು.. ಹೆಸರು ಸೂರ್ಯ ಎಂದು ಅವಳ ತಂದೆ-ತಾಯಂದಿರಿಗೆ ಪರಿಚಯಿಸಿ ಬಂಗಲೆಯನ್ನು ತೋರಿಸಲು ಒಳಗೆ ಕರೆದೊಯ್ದಳು. ತಮ್ಮ ಮನೆಯ ಲಿವಿಂಗ್ ಹಾಲ್‍ನಷ್ಟೇ ದೊಡ್ಡದಾಗಿ ಅಷ್ಟೇ ಶುಭ್ರವಾಗಿದ್ದ ಸ್ನಾನದ ಮನೆ ನೋಡಿ ಸೂರ್ಯನಿಗೆ ತಾನು ಎಲ್ಲಿರುವೆನು ಎನಿಸಿತು. ದಿಶಾ ಖುಷಿಯಿಂದ ಬಂಗಲೆಯ ಮೂಲೆ ಮೂಲೆಯನ್ನೆಲ್ಲಾ ತೋರಿಸಿ ಮೇಲೆ ತಾರಸಿಗೆ ಕರದೊಯ್ದಳು.
ಅವಳೊಂದಿಗೆ ಇದ್ದ ಯುವಕ ಅಲ್ಲಿಯೇ ನಿಂತಿದ್ದ. ‘ಸೂರ್ಯ.. ಇವನ ಹೆಸರು ಹರ್ಷ. ನಮ್ಮ ತಂದೆಯ ಸ್ನೇಹಿತರ ಮಗ.. ಈ ಮನೆಗೆ ಪ್ಲಾನ್ ಹಾಕಿಸಿ ನಿಂತು ಕಟ್ಟಿಸಿದವನು ಇವನೇ.. ಮುಂದಿನ ವಾರ ಇದೇ ಮನೆಯಲ್ಲಿ ನಮ್ಮಿಬ್ಬರಿಗೂ ಮದುವೆಯ ನಿಶ್ಚಿತಾರ್ಥ ಇದೆ..’ ದಿಶಾಳ ಮುಂದಿನ ಮಾತುಗಳು ಸೂರ್ಯನಿಗೆ ಕೇಳಿಸಲಿಲ್ಲ. ಅವನನ್ನು ಎತ್ತಿ ಯಾರೋ ಬಂಗಲೆಯಿಂದ ಕೆಳಗೆ ಬಿಸಾಕಿದಂತಾಯಿತು. ಕಣ್ಣುಗಳಿಗೆ ಕತ್ತಲೆ ಕಟ್ಟಿದಂತಾಗಿ ಕೆಳಗೆ ಕುಸಿದ. ದಿಶಾ ಅವನನ್ನು ಹಿಡಿದೆತ್ತಿ ‘ಏನಾಯ್ತು ಸೂರ್ಯ..’ ಎಂದು ಕೆನ್ನೆ ತಟ್ಟಿದಳು. ‘ಹರ್ಷ ಸ್ವಲ್ಪ ನೀರು ತೆಗೆದುಕೊಂಡು ಬಾ..’ ಎಂದು ಅಲ್ಲಿ ಮೂಕನಾಗಿ ನಿಂತಿದ್ದ ಯುವಕನನ್ನು ಕೆಳಗೆ ಕಳುಹಿಸಿದಳು. ಅವನು ಅತ್ತ ಹೋದ ಮೇಲೆ ಸೂರ್ಯ ಗದ್ಗದಿತನಾಗಿ ಕೇಳಿದ. ‘ದಿಶಾ.. ನೀನು ನನ್ನನ್ನು ಪ್ರೀತಿಸಿದ್ದು ಸುಳ್ಳಾ..’ ದಿಶಾ ಸಣ್ಣಗೆ ನಕ್ಕಳು. ‘ಅಯ್ಯೋ ಸೂರ್ಯ.. ನಿನ್ನನ್ನು ಪ್ರೀತಿಸುತ್ತೇನೆ ಅಂದ ಒಂದೇ ಮಾತಿಗೆ ಇಷ್ಟೊಂದು ಭಾವುಕನಾಗಿದ್ದೀಯಲ್ಲೋ... ಸಮಯ ಕಳೆಯಲು ನನಗೆ ಕಾಲೇಜಿನಲ್ಲಿ ಒಬ್ಬ ಹುಡುಗನ ಸಾನಿಧ್ಯ ಬೇಕಾಗಿತ್ತು .. ನೀನು ಸಿಕ್ಕೆ ಅಷ್ಟೇ.. ಹರ್ಷ, ನನ್ನ ತಂದೆಯ ಬುಸಿನೆಸ್ ಪಾರ್ಟನರ್‍ರ ಮಗ.. ಅವನು ಆಗರ್ಭ ಶ್ರೀಮಂತ. ನನ್ನ ತಂದೆ-ತಾಯಿ ನನಗಾಗಿ ಅಳೆದೂ ಸುರಿದೂ ಆಯ್ಕೆ ಮಾಡಿದವನು..’ ಅವಳು ಹೇಳುವಷ್ಟರಲ್ಲಿ ನೀರು ತಂದ ಯುವಕನಿಂದ ಗುಟುಕು ನೀರು ಕುಡಿದ ಸೂರ್ಯ, ನಡುಗುತಿದ್ದ ಧ್ವನಿಯಲ್ಲಿ ‘ನಿಮಗಿಬ್ಬರಿಗೂ ಒಳ್ಳೆಯದಾಗಲಿ.. ನಿಮ್ಮ ಜೀವನ ಸುಖಕರವಾಗಿರಲಿ..’ ಎಂದ. ದಿಶಾ ಥ್ಯಾಂಕ್ಸ್.. ಅಂದಳು. ಬಂಗಲೆಯಿಂದ ಇಳಿಯುವ ಮೆಟ್ಟಿಲು ಕಡೆ ಹೊರಟವನಿಗೆ ದಿಶಾ ‘ಊಟ ಮಾಡಿ ಹೋಗಬೇಕು ಸೂರ್ಯ..’ ಎಂದಳು. ‘ಹೂಂ.. ಓಕೆ..’ ಎಂದ. ಅವನ ಹೊಟ್ಟೆ ತುಂಬಿತ್ತು.
ಮೆಟ್ಟಿಲುಗಳನ್ನು ಇಳಿಯುತಿದ್ದವನಿಗೆ ದಿಶಾಳಿಗೆ ಕೊಡಲೆಂದು ತಂದಿದ್ದ ಮಾರ್ಬಲಿನ ಜೋಡಿಹಕ್ಕಿಗಳ ಸಣ್ಣ ಗೊಂಬೆ ಜೇಬಿನಲ್ಲಿಯೇ ಉಳಿದಿದ್ದು ನೆನಪಾಗಿ ಮತ್ತೆ ವಾಪಾಸು ಮೆಟ್ಟಿಲು ಹತ್ತಿದ. ಅವನನ್ನೇ ದಿಟ್ಟಿಸುತಿದ್ದ ದಿಶಾಳ ಕೈಗೆ ಗೊಂಬೆಯನ್ನು ನೀಡಿ ತನ್ನೆದೆಯ ನೋವನ್ನು ನುಂಗಿಕೊಂಡು ನಗುನಗುತ್ತಾ, ‘ದಿಶಾ.. ನೀವಿಬ್ಬರು ಸದಾ ಈ ಜೋಡಿಹಕ್ಕಿಗಳಂತೆಯೇ ಇರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ..’ ಅಂದವನೇ ತಿರುಗಿ ನೋಡದೆ ದಡದಡನೆ ಮೆಟ್ಟಿಲು ಇಳಿದು ಅಲ್ಲಿಂದ ವೇಗವಾಗಿ ನಡೆದು ನಿಂತಿದ್ದ ಬೈಕಿನ ಬಳಿ ಬಂದ.
ಸುತ್ತಮುತ್ತ ಏನು ನಡೆಯುತ್ತಿದೆಯೆಂಬುದರ ಅರಿವು ಅವನಿಗಾಗುತ್ತಿರಲಿಲ್ಲ. ಬೈಕು ಹತ್ತಿದವನೇ ಸ್ಟಾರ್ಟ ಮಾಡಿ ಕೊನೆಯ ಬಾರಿಯೆಂಬಂತೆ ತಿರುಗಿ ನೋಡಿದ. ದಿಶಾ ಅವನತ್ತಲೇ ಓಡೋಡಿ ಬರುತಿದ್ದಳು. ಬಂದವಳೇ ಅವನ ಕಣ್ಣಗಳನ್ನೇ ನೋಡುತ್ತಾ ನಿಂತುಬಿಟ್ಟಳು. ತನ್ನೆರಡೂ ಕೈಗಳಿಂದ ಅವನ ಕೊರಳನ್ನು ಬಳಸಿ, ‘ಸೂರ್ಯ... ಸೂರ್ಯ.. ನಾನು ಯೌವ್ವನದ ಪ್ರೀತಿ ಬಿಸಿಲು ಬಿದ್ದ ತಕ್ಷಣ ಕರಗಿಹೋಗುವ ಇಬ್ಬನಿಯೆಂದುಕೊಂಡಿದ್ದೆ. ಅದನ್ನು ತಿಳಿಯಲೆಂದೇ ಒಂದು ಸಣ್ಣ ನಾಟಕವಾಡಿದೆ. ನಿನ್ನದು ಇಬ್ಬನಿಯಂತಹ ಪ್ರೀತಿಯಲ್ಲವೆನ್ನುವುದು ತಿಳಿಯಿತು.. ನಿನ್ನ ಪ್ರೀತಿ ಎಷ್ಟೇ ಬಿಸಿಲು ಬಿದ್ದರೂ ಆವಿಯಾಗಿ ಖಾಲಿಯಾಗದ ಸಾಗರದಂತಹ ಪ್ರೀತಿ.. ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ ಸೂರ್ಯ..’ ಎಂದ ದಿಶಾಳ ಕಣ್ಣುಗಳಿಂದ ಕಣ್ಣೀರು ಧಾರೆಯಾಗಿ ಹರಿಯತೊಡಗಿತ್ತು.