ಇದರುನ್ನತತನವನು ಚೆನ್ನಾಗಿ ತಿಳಿಯಿರಿ.
ಅಯ್ಯಾ ಮನೆಮನೆ ತಿರುಗೋದು ಬೆಕ್ಕು
ಲಿಂಗಾಯತರ ಮನೆಯಲ್ಲಿ, ಹಾರುವರ ಮನೆಯಲ್ಲಿ,
ಕೊಮಟಿಗರ ಮನೆಯಲ್ಲಿ
ಹಾಲು ನೆಕ್ಕೋದು ಬೆಕ್ಕು ||
ಹೊಲೆಯರ ಮನೆಯಲ್ಲಿ, ಮಾದಿಗರ ಮನೆಯಲ್ಲಿ,
ಒಕ್ಕಲಿಗರ ಮನೆಯಲ್ಲಿ ಬಾಡು ತಿನ್ನೋದು ನೋಡು ಬೆಕ್ಕು;
ಇಂಥ ಸರ್ವಜಾತಿಯೊಳಗೆ ಸೇರಿಕೊಂಡಿರೋ ನಮ್ಮ ಆಚಾರವೆಲ್ಲ
ಮೈಲಾರಲಿಂಗ ಮೈಲಾರಲಿಂಗ ||
ಅಯ್ಯಾ ಉತ್ತರಿ ಮಳೆ ಬಂದು ಸುತ್ತಿ ಸುತ್ತಿ ಹೊಡೆವಾಗ
ನೆತ್ತಿ ಮ್ಯಾಗಳ ನೀರು ಗಂಟಲಿಗಿಳಿಯಿತಲ್ಲೊ;
ಅಯ್ಯಾ ಚರವೆಲ್ಲ ಸ್ಥಿತವಲ್ಲ, ನರಜನ್ಮ ಸ್ಥಿರವಲ್ಲ,
ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ ||
ಅಯ್ಯಾ ಹಸಿದವನು ಹೊಲೆಯ, ಸುಸ್ತಾದವನು ಚಾಂಡಾಲ,
ಅಯ್ಯಾ ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ;
ಇಂಥ ಜಾತಿಗಳ ಸಹವಾಸ ಮಾಡಲು ಬ್ಯಾಡಿ ಮೈಲಾರಲಿಂಗ ||
ಇದೊಂದು ಅದ್ಭುತವಾದ ಪದ. ಶರೀಫರ ಇತರ ಪದಗಳಿಗೆ ಹೋಲಿಸಿದಾಗ ಇದರ ರಚನೆ ಭಿನ್ನವಾಗಿ ತೋರುತ್ತದೆ. ಶರೀಫರ ಅನುಭಾವ ಹಾಗು ತತ್ವಗೀತೆಗಳಿಗಿಂತ ಭಿನ್ನವಾಗಿ ಇರುವ ಈ ಗೀತೆಯಲ್ಲಿ ಸಮಾಜವ್ಯವಸ್ಥೆಯ ಬಗೆಗಿನ ವ್ಯಥೆ ಎದ್ದು ಕಾಣುತ್ತದೆ. ಆದರೆ ಶರೀಫರ ಅನೇಕ ಪದಗಳಂತೆ ಇಲ್ಲಿಯೂ ಸಹ ಅವರು ಒಂದು ಭೌತಿಕ ವಸ್ತುವಿನ ಹೋಲಿಕೆಯಿಂದ ಗೀತೆಯನ್ನು ಪ್ರಾರಂಭಿಸುತ್ತ ಅರ್ಥವಿಸ್ತಾರವನ್ನು ಮಾಡುತ್ತ ಹೋಗುತ್ತಾರೆ.
ಬೆಕ್ಕಿಗೆ ಜಾತಿಯಿಲ್ಲ! ಸಸ್ಯಾಹಾರಿಗಳ ಮನೆಯಲ್ಲಿ ಹಾಲು ನೆಕ್ಕುವ ಬೆಕ್ಕು, ಮಾಂಸಾಹಾರಿಗಳ ಮನೆಯಲ್ಲಿ ಬಾಡನ್ನು ತಿನ್ನುತ್ತದೆ. ವಿವಿಧ ಜಾತಿಗಳಲ್ಲಿರುವ ಈ ಆಚಾರಗಳಿಗೆ ಮೂಲಕಾರಣನು ಆ ಮೈಲಾರಲಿಂಗ ದೇವನೇ ಅಲ್ಲವೆ?! ಮರಣದ ಸಮಯ ಬಂದಾಗ ಜಾತಿ ಎನ್ನುವುದು ಉಳಿಯುತ್ತದೆಯೆ? ಹೀಗಿರುವಾಗ ನಮ್ಮ ಆಚಾರ ದೊಡ್ಡದು, ನಮ್ಮ ವಿಚಾರ ದೊಡ್ಡದು(!), ನಾವು ದೊಡ್ಡ ಜಾತಿಯವರು ಎನ್ನುವುದರಲ್ಲಿ ಏನಾದರೂ ಅರ್ಥವಿದೆಯೆ? ಮರಣದ ಸಂಕೇತವಾಗಿರಬಹುದಾದ ಬೆಕ್ಕಿಗೆ ಸಣ್ಣವರು, ದೊಡ್ಡವರು ಎನ್ನುವ ಭೇದವೇ ಇಲ್ಲವಲ್ಲ!
ಉತ್ತರಾ ನಕ್ಷತ್ರದಲ್ಲಿ ಬರುವ ಮಳೆಯು ಅಗಸ್ಟ ಕೊನೆಗೆ ಬರುವ ಸಂಭವವಿರುತ್ತದೆ. ಹೀಗಾಗಿ ಇದು ಜಡಿಮಳೆಯು. ಈ ಮಳೆಯಲ್ಲಿ ಸಿಕ್ಕಿಬಿದ್ದ ಮನುಷ್ಯನ ತಲೆಯೆಲ್ಲ ತೊಯ್ದು, ನೀರು ಗಂಟಲಿಗಿಳಿಯುತ್ತದೆ. ಇದೇ ರೀತಿಯಲ್ಲಿ ಮನುಷ್ಯನ ಬದುಕಿನ ಕೊನೆಯು ಯಾವಾಗಲೂ ಅನಿಶ್ಚಿತವೇ! ನಿಸರ್ಗದ ಈ ಪ್ರಹಾರಕ್ಕೆ ಜಾತಿ, ವರ್ಗ ಎನ್ನುವುದಿದೆಯೆ? ಹೀಗಿರುವಾಗ ಬಡವರ ಬದುಕನ್ನು ಹೀಯಾಳಿಸುವದು ಅನರ್ಥಕಾರಿಯಲ್ಲವೆ? ‘ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ’ ಎನ್ನುವಾಗ, ಶರೀಫರು ಅನುಭವಿಸುವ ವ್ಯಥೆಯು ಪರಿಣಾಮಕಾರಿಯಾಗಿ ಇಲ್ಲಿ ವ್ಯಕ್ತವಾಗುತ್ತಿದೆ. ‘ಬಡವರು’ ಎನ್ನುವಾಗ ಶರೀಫರು ಮತ್ತೊಂದು ಅರ್ಥವನ್ನು ಇಲ್ಲಿ ಹುದುಗಿಸಿದ್ದಾರೆ. ಭಾರತದಲ್ಲಿ ಜಾತಿ ಮತ್ತು ವರ್ಗ ಇವು ಒಂದನ್ನೊಂದು ಹೆಣೆದುಕೊಂಡಿವೆ. ಬಡವರೆಂದರೆ ಆರ್ಥಿಕವಾಗಿ ಕೆಳವರ್ಗದವರಷ್ಟೇ ಅಲ್ಲ, ಸಾಮಾಜಿಕವಾಗಿಯೂ ಕೆಳವರ್ಗದವರು.
ಈ ಗೀತೆಯ ಮೊದಲನೆಯ ನುಡಿಯಲ್ಲಿ ಬರುವ ಜಾತಿಗಳು ಸಹಸಾ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿಕೊಂಡಿರುವಂತಹವು. ಎರಡನೆಯ ನುಡಿಯಲ್ಲಿರುವ ಜಾತಿಗಳು ಸಹಸಾ ಕೆಳವರ್ಗಕ್ಕೆ ಸೇರಿದಂತಹವು. ಆದುದರಿಂದ ಬಡವರನ್ನು ಹೀಯಾಳಿಸಬೇಡಿರಿ ಎಂದು ಹೇಳುವಾಗ, ಶರೀಫರು ಜಾತಿ ಹಾಗು ವರ್ಗ ಎರಡನ್ನೂ ಸೂಚಿಸುತ್ತಾರೆ. ಜಾತಿ ಹಾಗು ವರ್ಗ ಇವುಗಳ ಅನ್ಯೋನ್ಯತೆಯನ್ನು ಆಧುನಿಕ ಭಾರತದಲ್ಲಿ ಪ್ರತಿಪಾದಿಸಿದವರಲ್ಲಿ ರಾಮಮನೋಹರ ಲೋಹಿಯಾ ಮುಖ್ಯರು. ಅವರಿಗಿಂತ ಒಂದು ಶತಮಾನದಷ್ಟು ಮೊದಲೇ, ಶರೀಫರು ಈ ಮಾತನ್ನು ತಮ್ಮ ಗೀತೆಯಲ್ಲಿ ಸೂಚಿಸಿದ್ದಾರೆ!
ಆಧುನಿಕ ಸಮತಾವಾದಿಗಳಂತೆ ಶರೀಫರು ಸಾಮಾಜಿಕ ಕ್ರಾಂತಿಯನ್ನು ಉಪದೇಶಿಸುತ್ತಿಲ್ಲ. ಆದರೆ ಮಾನವೀಯತೆಯನ್ನು ಬೋಧಿಸುತ್ತಿದ್ದಾರೆ. ಸಮಾಜವ್ಯವಸ್ಥೆಯು ಉಳ್ಳವರಿಗೆ ಬೆಳದಿಂಗಳಾದಾಗ, ಇಲ್ಲದವರಿಗೆ ಕತ್ತಲೆಯ ಕೂಪವಾಗಿದೆ. ಆದುದರಿಂದ ಆ ವರ್ಗದವರನ್ನು ಹಳಿಯುವುದು ಸಣ್ಣತನ ಎನ್ನುವುದು ಶರೀಫರ ಅಭಿಪ್ರಾಯವಾಗಿದೆ.
ಜಾತಿ ಹಾಗು ವರ್ಗದ ಏಕತೆಯನ್ನು ಮತ್ತೆ ಮುಂದುವರಿಸುತ್ತ, ಶರೀಫರು ‘ಹಸಿದವನೆ ಹೊಲೆಯ, ಸುಸ್ತಾದವನೆ ಚಾಂಡಾಲ’ ಎನ್ನುತ್ತಾರೆ. ‘ಹೊಲಸು ತಿನ್ನುವವನೆ ಹೊಲೆಯ’ ಎನ್ನುವ ಬಸವಣ್ಣನವರ ವಚನಕ್ಕಿಂತ ಇದು ಭಿನ್ನವಾಗಿರುವುದನ್ನು ಗಮನಿಸಬೇಕು. ಬಸವಣ್ಣನವರು ನೀತಿಯ ನೆಲೆಗಟ್ಟಿನಲ್ಲಿ ಈ ಮಾತನ್ನು ಹೇಳಿದ್ದರೆ, ಶರೀಫರು ಸಮಾಜವ್ಯವಸ್ಥೆಯ ಆಧಾರದ ಮೇಲೆ, ತಮ್ಮ ಅನುಭವಸಾರವನ್ನು ಉಸರುತ್ತಿದ್ದಾರೆ. ಈ ಪ್ರಸಂಗದಲ್ಲಿ ಯುರೋಪಿನ ಆಧುನಿಕ ಸಮತಾವಾದಿ ಮಾರ್ಕ್ಸನ ವಿಚಾರಗಳು ಶರೀಫರ ವಿಚಾರಗಳಿಗೆ ಹೋಲುತ್ತಿವೆ ಎನ್ನಬಹುದು.
ಕೆಳವರ್ಗದವರ ಇಂತಹ ಸ್ಥಿತಿಗೆ ಕಾರಣರಾದ ಮೇಲ್ವರ್ಗದ ತತ್ವವಾದಗಳನ್ನು ಶರೀಫರು ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ ಎಂದು ಗುರುತಿಸುತ್ತಾರೆ! ಇಂತಹ ಜಾತಿಗಳ ಸಹವಾಸವನ್ನು ಬಿಟ್ಟುಬಿಡುವುದೇ ಹಿತಕರ ಎಂದು ಶರೀಫರು ಉದ್ಗರಿಸುವುದು ಅವರ ವ್ಯಥೆಯ ಆಳವನ್ನು ತೋರಿಸುತ್ತದೆ.
ಗೀತೆಯ ಮೊದಲಲ್ಲಿ ಬರುವ,
“ಭಿನ್ನಭೇದವ ಮಾಡಬ್ಯಾಡಿರಿ,
ಇದರುನ್ನತತನವನು ಚೆನ್ನಾಗಿ ತಿಳಿಯಿರಿ.” ಎನ್ನುವ ಪಲ್ಲವು ಮನುಷ್ಯರಲ್ಲಿರುವ ಭೇದಬುದ್ಧಿಯು ಹೀನಕರವಾಗಿದೆ, ಹಾಗು ‘ಎಲ್ಲರೂ ಒಂದೇ’ ಎನ್ನುವ ವಿಚಾರವೇ ಉನ್ನತವಿಚಾರವು ಎಂದು ತಿಳಿಹೇಳುತ್ತದೆ.
ಶರೀಫರ ಈ ಗೀತೆಯಲ್ಲಿಯ ನುಡಿಗಟ್ಟುಗಳು ಆಧುನಿಕ ಕವನಗಳ ನುಡಿಗಟ್ಟುಗಳನ್ನು ಹೋಲುತ್ತವೆ. ಗೀತೆಯ ದೇಹವು ಆಧುನಿಕ ಕವನಗಳ ದೇಹವಾಗಿದೆ. ಆದರೆ ಒಳಗಿನ ಆತ್ಮ ಮಾತ್ರ ಶರೀಫರದೇ.
No comments:
Post a Comment