Friday, April 18, 2025

ಕೈಯಾರ ಕಿಞ್ಞಣ್ಣ ರೈಗಳು ಯಾರು? ಕನ್ನಡ ಭಾಷೆಗೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಇವರ ಕೊಡುಗೆ ಏನು?

 

ಕಯ್ಯಾರ ಕಿಞ್ಞಣ್ಣ ರೈ ಕವಿ, ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ ಸದಾಕಾಲ ಸ್ಮರಣೀಯರು.

ಕಾಸರಗೋಡಿನ ಪೆರಡಾಲ ಹಳ್ಳಿಯಲ್ಲಿ ದುಗ್ಗಪ್ಪ ರೈ ಮತ್ತು ದೇಯ್ಯಕ್ಕ ರೈ ದಂಪತಿಗಳಿಗೆ 1915ರ ಜೂನ್ 8 ರಂದು ಜನಿಸಿದ ರೈ ಅವರ ಮನೆ ಮಾತು ತುಳು. ಆದರೆ ಕನ್ನಡ, ತುಳು, ಮಲೆಯಾಳಂ, ಸಂಸ್ಕೃತ ಬಲ್ಲವರಾಗಿದ್ದರು.

ತನ್ನ 12 ವರ್ಷದಲ್ಲೇ ‘ಸುಶೀಲ’ ಎಂಬ ಕೈಬರಹ ಪತ್ರಿಕೆ ಹೊರತಂದಿದ್ದರು. ಮುಂದೆ ಸ್ವಾಭಿಮಾನ , ಮದ್ರಾಸ್‌ಮೈಲ್‌ , ಹಿಂದು ಮುಂತಾದ ಪತ್ರಿಕೆಗಳಿಗೆ ಬರೆಯುತ್ತಿದ್ದರು.

ಕವಿ ಕಯ್ಯಾರರು ತಮ್ಮ ‘ಶ್ರೀಮುಖ’ ‘ಐಕ್ಯಗಾನ’, ‘ಪುನರ್ನವ’, ‘ಶಾಂತಮಾನ’, 'ಚೇತನ', 'ಕೊರಗ', 'ಶತಮಾನದ ಗಾನ', 'ಗಂಧವತಿ', 'ಪ್ರತಿಭಾ ಪಯಸ್ವಿನಿ' ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದರು. ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ನಾಟಕ, ವ್ಯಾಕರಣ ಮುಂತಾದ ಕ್ಷೇತ್ರಗಳಲ್ಲಿಯೂ ಕಯ್ಯಾರರು ಪ್ರವೀಣರು. 'ದುಡಿತವೇ ನನ್ನ ದೇವರು' ಎನ್ನುವದು ರೈಯವರ ಆತ್ಮಕಥನ.

ಹುಟ್ಟು ಹೋರಾಟಗಾರರಾದ ಕಯ್ಯಾರರು ತಮ್ಮ ಬಾಲ್ಯದಲ್ಲಿ ಗಾಂಧೀಜಿಯ ಪ್ರಭಾವಕ್ಕೊಳಗಾಗಿ ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಪ್ರೇಮಿ. ಕಾಸರಗೋಡನ್ನು ಕೇರಳಕ್ಕೆ ಸೇರಿಸಿದಾಗ "ಬೆಂಕಿ ಬಿದ್ದಿದೆ ನಮ್ಮ ಮನೆಗೆ... ಓ ಬೇಗ ಬನ್ನಿ, ಕನ್ನಡದ ಗಡಿ ಕಾಯೋಣ ಬನ್ನಿ, ಕನ್ನಡದ ನುಡಿ ಕಾಯೋಣ ಬನ್ನಿ" ಎಂದು ಕರೆ ನೀಡಿದರು. ಸ್ವಾತಂತ್ರ್ಯಾನಂತರವೂ ಮಹಾಜನ ಆಯೋಗದ ವರದಿಯ ಅನುಷ್ಠಾನಕ್ಕಾಗಿ ಹೋರಾಡಿದವರು. ರಾಜ್ಯ ಗುರುತಿಸುವಿಕೆಯು ಭಾಷಾವಾರು ಆದ್ಯತೆಯ ಮೇಲೆ ಸರಿಯಾಗಿ ಆಗಿಲ್ಲ, ತುಳುನಾಡು ಕರ್ನಾಟಕದ ಭಾಗ ಎಂಬ ಮಹಾಜನ ಆಯೋಗ ವರದಿಗೆ ಯಾವುದೇ ಪುಷ್ಠಿ ದೊರೆತಿಲ್ಲ ಎಂಬ ವಿಷಾದ ಕೊನೆಯವರೆಗೂ ಅವರನ್ನು ಕಾಡಿತು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಅವರ ಕನಸು ಕೊನೆಗೂ ನನಸಾಗಿಲ್ಲ.

ಮಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದಲೂ ಅವರು ತಮ್ಮ ಹೋರಾಟದ ಕಹಳೆ ಮೊಳಗಿಸಿದ್ದರು. ಅವರ ಸಾಧನೆಯ ಮುಕುಟಕ್ಕೆ ಹಲವು ಪ್ರಶಸ್ತಿಗಳು ಗರಿ ತೊಡಿಸಿವೆ. ಅಷ್ಟಲ್ಲದೇ 'ಶ್ರೇಷ್ಠ ಶಿಕ್ಷಕ' ರಾಷ್ಟ್ರ ಪ್ರಶಸ್ತಿಯ ಗೌರವವೂ ಸಂದಿದೆ. ಹಂಪಿ ವಿಶ್ವವಿದ್ಯಾಲಯದ 'ನಾಡೋಜ' ಪ್ರಶಸ್ತಿ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪೇಜಾವರ ಪ್ರಶಸ್ತಿ, ಆದರ್ಶ ರತ್ನ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕರ್ನಾಟಕ ಗಡಿ ರತ್ನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಗಳಿಸಿದ್ದರು.

ಪತ್ನಿ ಉಞ್ಞಕ್ಕ ಮತ್ತು ಎಂಟು ಮಕ್ಕಳ ಸುಖೀ ಸಂಸಾರವನ್ನು ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ಕಳೆದವರು. ಆಗೋಸ್ತ್ 9, 2015 ರಂದು ಶತಾಯುಷಿ ಕವಿಯವರು ಇಹಲೋಕವನ್ನು ತ್ಯಜಿಸಿದರು.