Showing posts with label Chandrashekhar. Show all posts
Showing posts with label Chandrashekhar. Show all posts

Friday, February 14, 2025

ಚಂದ್ರಶೇಖರ್ ಲಿಮಿಟ್ ಅಂದರೇನು?

 ಚಂದ್ರಶೇಖರ್ ಲಿಮಿಟ್ ಎಂಬುದು ಶ್ವೇತಕುಬ್ಜ (white dwarf) ನಕ್ಷತ್ರಗಳ ದ್ರವ್ಯರಾಶಿಯ (mass) ಬಗ್ಗೆ ಖಭೌತವಿಜ್ಞಾನವು ಕಂಡುಕೊಂಡಿರುವ ‌ಒಂದು ಪರಿಮಾಣದ ಮಿತಿಯ (limit) ಸೂಚಿ. ಈ ದ್ರವ್ಯರಾಶಿಯ ಮಿತಿಗೆ ಅದನ್ನು ಕಂಡುಹಿಡಿದ ‌(ಭಾರತದಲ್ಲಿ ಹುಟ್ಟಿ ನಂತರ ಅಮೇರಿಕದ ಪ್ರಜೆಯಾದ) ಖಭೌತವಿಜ್ಞಾನಿ, ಶ್ರೀ ಸುಬ್ರಹ್ಮಣ್ಯನ್ ಚಂದ್ರಶೇಖರ್ (೧೯೧೦-೧೯೯೫) ಅವರ ಹೆಸರನ್ನೇ ಇಡಲಾಗಿದೆ. ಈ ಕುರಿತಾದ ಹೆಚ್ಚಿನ ಸಂಶೋಧನೆಗಾಗಿ ಅವರಿಗೆ ೧೯೮೩ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ಶ್ರೀ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ೧೦೭ನೇ ಹುಟ್ಟಿದದಿನದಂದು ಗೂಗಲ್ ಸಂಸ್ಥೆಯು ಅವರ ನೆನಪಿಗಾಗಿ ಚಂದ್ರಶೇಖರ್ ಲಿಮಿಟ್-ಅನ್ನು ನಿರೂಪಿಸವ ಈ ಜಿಫ಼್ ಚಿತ್ರವನ್ನು ತನ್ನ ಲಾಂಛನದಲ್ಲಿ ‌ಪ್ರಕಟಿಸಿತ್ತು.

ಚಿತ್ರಕೃಪೆ: ಗೂಗಲ್

ಈ ನಿಯಮದಂತೆ, ಶ್ವೇತಕುಬ್ಜ ನಕ್ಷತ್ರಗಳ ದ್ರವ್ಯರಾಶಿಯು ನಮ್ಮ ಸೂರ್ಯನ ‌(ಸೂರ್ಯನೂ ಒಂದು ಶ್ವೇತ ಕುಬ್ಜ ನಕ್ಷತ್ರವೇ) ದ್ರವ್ಯರಾಶಿಯ‌ ೧.೪೪ರಷ್ಟು ಮಿತಿಯ ಒಳಗಿದ್ದರೆ ಮಾತ್ರವೇ ಅವುಗಳು ಸ್ಥಿರವಾದ (stable) ಶ್ವೇತ ಕುಬ್ಜಗಳಾಗಿ ಉಳಿದಿರುತ್ತವೆ. ಆ ದ್ರವ್ಯರಾಶಿಯ ಮಿತಿಯನ್ನು ಮೀರಿದರೆ (ದ್ರವ್ಯಸಂಚಯ [mass accretion] ಅಥವಾ ನಕ್ಷತ್ರಗಳ ಪರಸ್ಪರ ಘರ್ಷಣೆಯ ಕಾರಣಗಳಿಂದಾಗಿ) ನಕ್ಷತ್ರಗಳಲ್ಲಿ 'ಗುರುತ್ವಾಕರ್ಷಣೆಯ ಕುಸಿತ'ದಿಂದ (gravitational collapse) ಉಂಟಾಗುವ ಸ್ಫೋಟದಿಂದ (ಸೂಪರ್ನೋವಾ), ಒಂದೋ ಅವುಗಳು ನ್ಯೂಟ್ರಾನ್ ನಕ್ಷತ್ರಗಳಾಗಿ, ಇಲ್ಲವೇ ಕಪ್ಪುಕುಳಿಗಳಾಗಿ (black hole) ಮಾರ್ಪಡುತ್ತವೆ.