ಕಂಪ್ಯೂಟರ್ ಡ್ರೈವ್ ಗಳನ್ನು ಈಗಲೂ ಯಾಕೆ 'C' ನಿಂದಲೇ ಪ್ರಾರಂಭಿಸುತ್ತಾರೆ? C, D, E ಡ್ರೈವ್ ಗಳನ್ನು A, B, C ಡ್ರೈವ್ ಗಳಾಗಿ ಬದಲಾಯಿಸಬಹುದೆ?

SANTOSH KULKARNI
By -
0

 ಹಳೆಯ ಕಂಪ್ಯೂಟರ್‌ಗಳಲ್ಲಿ ಹಾರ್ಡ್ ಡಿಸ್ಕ್ ಇರುತ್ತಿರಲಿಲ್ಲ. ಇದರ ಬದಲಾಗಿ ಡೇಟಾ ಶೇಖರಿಸಿಡಲು ಫ್ಲಾ಼ಪಿ ಡಿಸ್ಕ್‌ಗಳಿದ್ದವು. ಓ‌ಎಸ್‌ ಅನ್ನು ನೇರವಾಗಿ ಫ್ಲಾ಼ಪಿ ಡಿಸ್ಕಿನಿಂದ ಲೋಡ್ ಮಾಡಲಾಗುತ್ತಿತ್ತು. ಮೂರುವರೆ ಇಂಚ್ ಮತ್ತು ಐದೂವರೆ ಇಂಚ್ ಗಾತ್ರದ ಫ್ಲಾ಼ಪಿ ಡಿಸ್ಕನ್ನು ಹಾಕಲು ಎರಡು ಫ್ಲಾ಼ಪಿ ಡಿಸ್ಕ್ ಡ್ರೈವ್‌ಗಳು ಇದ್ದವು. ಈ ಫ್ಲಾ಼ಪಿ ಡ್ರೈವ್‌ಗಳನ್ನು ಸೂಚಿಸಲು A ಮತ್ತು B ಅಕ್ಷರವನ್ನು ಬಳಸುತ್ತಿದ್ದರು.

ಹಾರ್ಡ್ ಡಿಸ್ಕ್ ಬಂದಮೇಲೆ ಹಾರ್ಡ್ ಡಿಸ್ಕ್ ಡ್ರೈವ್‌ಗಳಿಗೆ C, D, E... ಅಕ್ಷರಗಳ ಹೆಸರಿಡುವುದು ರೂಢಿಗೆ ಬಂತು. ಹಾರ್ಡ್ ಡಿಸ್ಕಿನ ಮೊದಲ ಪಾರ್ಟಿಷನ್ ಅಥವಾ ಓಎಸ್ ಇರುವ ಸಿಸ್ಟಮ್ ಪಾರ್ಟಿಷನ್ C ಡ್ರೈವ್ ಆಗಿರುತ್ತದೆ. ಉಳಿದ ಪಾರ್ಟಿಷನ್ ಮತ್ತು ಡ್ರೈವ್‌ಗಳು D, E, F ಮುಂತಾದವು ಆಗಿರುತ್ತದೆ.

೧೯೯೦ ದಶಕದ ಕೊನೆಯಿಂದ ಫ್ಲಾ಼ಪಿ ಡಿಸ್ಕಿನ ಬಳಕೆಯು ಕಡಿಮೆಯಾಗುತ್ತಾ ಹೋಗಿ, ಕ್ರಮೇಣ ನಿಂತುಹೋಗುತ್ತದೆ. ೨೦೦೫ರಿಂದ ನಿರ್ಮಿಸಲಾದ ಬಹುತೇಕ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಫ್ಲಾ಼ಪಿ ಡ್ರೈವ್ ‌ಇಲ್ಲ. ಇದರಿಂದಾಗಿ ಹೊಸ ಕಂಪ್ಯೂಟರ್‌ಗಳಲ್ಲಿ A ಮತ್ತು B ಡ್ರೈವ್ ಅಕ್ಷರಗಳು ಬಳಕೆಯಲ್ಲಿಲ್ಲ. ಆದರೂ ಕೂಡ ಹಿಂದಿನಂತೆ ಡ್ರೈವ್ ಹೆಸರನ್ನು C ಅಕ್ಷರದಿಂದ ಪ್ರಾರಂಭಿಸುವ ಪದ್ಧತಿಯು ಮುಂದುವರೆದಿದೆ.

D, E, F ಮುಂತಾದ ಪೂರ್ವನಿಯೋಜಿತ ಡ್ರೈವ್ ಅಕ್ಷರವನ್ನು A, B ಸೇರಿದಂತೆ ನಿಮಗೆ ಬೇಕಾದ (ಬೇರೆ ಡ್ರೈವ್ ಬಳಕೆಯಲ್ಲಿಲ್ಲದ) ಅಕ್ಷರಕ್ಕೆ ಬದಲಾಯಿಸಬಹುದು. ಆದರೆ C ಡ್ರೈವ್ ಅಕ್ಷರವನ್ನು ಬದಲಾಯಿಸುವುದು ಒಳ್ಳೆಯದಲ್ಲ. ಏಕೆಂದರೆ ಓಎಸ್ C ಡ್ರೈವ್‌ನಲ್ಲೇ ಇದೆ ಅಂದುಕೊಂಡು ಬಹಳಷ್ಟು ಡ್ರೈವರ್ ಮತ್ತು ತಂತ್ರಾಂಶಗಳನ್ನು ಕೋಡ್ ಮಾಡಲಾಗಿದೆ. C ಡ್ರೈವ್ ಅಕ್ಷರವನ್ನು ಬದಲಾಯಿಸಿದರೆ ಇವು ಸರಿಯಾಗಿ ಓಡದೇ ತೊಂದರೆ ಉಂಟಾಗುತ್ತದೆ.

ಡ್ರೈವ್ ಅಕ್ಷರವನ್ನು ಬದಲಾಯಿಸಬೇಕೆಂದರೆ ವಿಂಡೋಸ್‌ನಲ್ಲೆ ಇರುವ ಡಿಸ್ಕ್ ಮ್ಯಾನೇಜ್ಮೆಂಟ್ ಅಥವಾ ಯಾವುದೇ ಪಾರ್ಟಿಷನ್ ಮ್ಯಾನೇಜ್ಮೆಂಟ್ ತಂತ್ರಾಂಶವನ್ನು ಬಳಸಿ ಬದಲಾಯಿಸಬಹುದು.

Post a Comment

0Comments

Please Select Embedded Mode To show the Comment System.*