ಕನ್ನಡ ಚಿತ್ರರಂಗದ ನೂರನೇ ಚಿತ್ರ "ರಣಧೀರ ಕಂಠೀರವ". 1962 ನೇ ವರ್ಷದಲ್ಲಿ ಬಿಡುಗಡೆಯಾದ ಎರಡನೇ ಚಿತ್ರವಿದು.
ಡಾ. ರಾಜ ಕುಮಾರ್, ಉದಯ ಕುಮಾರ್, ಲೀಲಾವತಿ,ನಾಗೇಂದ್ರ ರಾವ್, ನರಸಿಂಹ ರಾಜು, ಬಾಲಕೃಷ್ಣ,ಪಾಪಮ್ಮ, ಬಿ. ವಿ. ರಾಧಾ, ಚಿ. ಉದಯ ಶಂಕರ್, ಅಶ್ವಥ್,. ಕಾಂತಾ ಬಹಳದು ಬಂದು ಕೊಡಲಾದರೂ ರಾವ್, ಜಿ. ವಿ. ಅಯ್ಯರ್ ಸೇರಿದಂತೆ ದೊಡ್ಡ ತಾರಾ ಗಣವಿರುವ ಚಿತ್ರ. ಎನ್. ಸಿ. ರಾಜನ್ ನಿರ್ದೇಶಕರು. ಕನ್ನಡ ಚಲನ ಚಿತ್ರ ಸಂಘ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಕಲಾವಿದರೆ ನಿರ್ಮಾಣ ಮಾಡಿದ ಚಿತ್ರವಿದು. ಜಿ. ಕೆ. ವೆಂಕಟೇಶ್ ಸಂಗೀತ ಚಿತ್ರಕ್ಕಿದೆ. ಜಿ. ವಿ. ಅಯ್ಯರ್ ಈ ಚಿತ್ರಕ್ಕೆ ಕತೆ, ಚಿತ್ರ ಕತೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ.ಜಿ. ವಿ. ಅಯ್ಯರ್ ಕೂಡಾ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು.ರಾಜಕುಮಾರ್, ಬಾಲಣ್ಣ, ನರಸಿಂಹ ರಾಜು ಉಳಿದ ಮೂವರು.ಆ ಕಾಲದಲ್ಲಿ ಈ ಪ್ರಯತ್ನ ಕಲಾವಿದರನ್ನು ಒಂದು ಗೂಡಿಸಿದ ಘಟನೆಯು ಆಗಿತ್ತು.
ಇದು ಮೈಸೂರು ರಾಜವಂಶದ ಕತೆಯ ಮೇಲೆ ರಚಿತವಾಗಿರುವ ಚಿತ್ರ. ಮೈಸೂರು ಅರಮನೆಯ ಅಧಿಕೃತ ದಾಖಲೆ ಆಧರಿಸಿಯೇ ಸಿನಿಮಾ ಕತೆ ಮಾಡಲಾಗಿತ್ತು ಎಂದೂ ಹೇಳಲಾಗಿದೆ. ಈ ಕಾರಣಕ್ಕೆ ಇದು ಕನ್ನಡದ ಅಧಿಕೃತ ಎನ್ನಬಹುದಾದ ಐತಿಹಾಸಿಕ ಚಿತ್ರ ಎಂದೂ ಗುರುತಿಸಲಾಗಿದೆ.
ಮೇಲಿನದು ಸಿನಿಮಾ ಕುರಿತ ವಿಷ್ಯವಾದರೆ ಚಿತ್ರ ನಿರ್ಮಾಣದ ನಂತರ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ಮಂದಿರಗಳೆ ಸಿಗಲಿಲ್ಲ.ಆಗಿನ ಪರಿಸ್ಥಿತಿ ಹಾಗಿತ್ತು. ಈ ಸಮಸ್ಯೆಯಿಂದಾಗಿ ಹಿಮಾಲಯ ಎಂಬ ಒಂದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು ಎಂಬ ಪ್ರಸಂಗವನ್ನು ಜಿ. ವಿ. ಅಯ್ಯರ್ ಅವರೇ ಹೇಳಿದ್ದರು. ಬಿಡುಗಡೆಯ ನಂತರ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ ಮೇಲೆ ಚಿತ್ರ ಗೆಲುವು ಕಂಡಿತು.10/2/1962 ರಂದು ರಣ ಧೀರ ಕಂಠೀರವ ಬಿಡುಗಡೆ ಆಗಿತ್ತು.