Monday, April 14, 2025

ಬೇರ್ ಮಾರ್ಕೆಟ್ ಮತ್ತು ಬುಲ್ ಮಾರ್ಕೆಟ್ ನಡುವಿನ ವ್ಯತ್ಯಾಸವೇನು?

 

"ಕರಡಿ" (bear) ಮತ್ತು "ಗೂಳಿ" (bull) ಇವು ಶೇರು ಮಾರುಕಟ್ಟೆಯಲ್ಲಿನ ಏರಿಳಿತವನ್ನ ಸೂಚಿಸುವ ಪದಗಳು.

ಶೇರು ಮಾರುಕಟ್ಟೆಯ ವಹಿವಾಟಿನ ಗತಿಯನ್ನು ಸೂಚಿಸುವ ಸಂವೇದಿ ಸೂಚ್ಯಂಕವು ಸತತವಾಗಿ ಪ್ರತಿದಿನವೂ ಇಳಿಯುತ್ತಾ ಹೋದಾಗ ಬೇರ್ ಮಾರ್ಕೆಟ್‌ ಅಂತ ಹೇಳುತ್ತಾರೆ.

  • ಒಮ್ಮೊಮ್ಮೆ ಒಂದೇ ದಿನದ ವಹಿವಾಟು ಎರಡರಿದ ಐದಾರು ಪ್ರತಿಶತದಷ್ಟು ಇಳಿತ ದಾಖಲಿಸುತ್ತದೆ. ಆಗಲೂ ಅದು ಬೇರ್ ಮಾರ್ಕೆಟ್ ಅನಿಸಿಕೊಳ್ಳುತ್ತದೆ.

ಸೂಚ್ಯಂಕವು ಸತತವಾಗಿ ಏರುತ್ತಾ ಹೋಗುತ್ತಿದ್ದರೆ ಅದು ಬುಲ್ ಮಾರ್ಕೆಟ್ ಅನಿಸಿಕೊಳ್ಳುತ್ತದೆ.

  • ಒಮ್ಮೊಮ್ಮೆ ಒಂದೇ ದಿನದ ವಹಿವಾಟು ಎರಡರಿದ ಐದಾರು ಪ್ರತಿಶತದಷ್ಟು ಏರಿಕೆ ದಾಖಲಿಸುತ್ತದೆ. ಆಗಲೂ ಅದು ಬುಲ್ ಮಾರ್ಕೆಟ್ ಅನಿಸಿಕೊಳ್ಳುತ್ತದೆ.

ಇದರಲ್ಲಿ ಯಾವುದು ಒಳ್ಳೆಯದು?

ದೇಶದ ಮತ್ತು ಮಾರುಕಟ್ಟೆಯ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಎರಡೂ ಉತ್ತಮವೇ.

ಮಾರುಕಟ್ಟೆಯ ಸೂಚ್ಯಂಕದ ಆರೋಗ್ಯಕರ ಏರಿಳಿತ ಹೂಡಿಕೆದಾರರ ಸಂಪತ್ತನ್ನ ಹೆಚ್ಚಿಸುತ್ತದೆ.

  • ಮಾರುಕಟ್ಟೆಯ ಸೂಚ್ಯಂಕವು ಏರಿದಾಗ ನಾವು ಹೂಡಿಕೆ ಮಾಡಿದ ಹಣವು ವೃದ್ಧಿಯಾಗುತ್ತದೆ ಮತ್ತು ಅದು ಇಳಿದಾಗ ಹೊಸ ಹೂಡಿಕೆಗೆ ಅವಕಾಶ ಮಾಡಿಕೊಡುತ್ತದೆ.

ಸೂಚ್ಯಂಕವು ಕೇವಲ ಏರುತ್ತಲೇ ಹೋದಾಗ ಶೇರುಗಳ ದರವು ಹೆಚ್ಚಾಗುವುದರಿಂದ ಹೊಸ ಹೂಡಿಕೆ ದಾರರಿಗೆ ಕಷ್ಟವಾಗಬಹುದು. ಹಾಗೆಯೇ ಅದು ಇಳಿಯುತ್ತಲೇ ಹೋದಾಗ ಈಗಾಗಲೇ ಹೂಡಿಕೆ ಮಾಡಿದವರ ಸಂಪತ್ತು ಗಣನೀಯವಾಗಿ ಕರಗಬಹುದು.

ಅದುದರಿಂದ, ಮಾರುಕಟ್ಟೆಯ ಆರೋಗ್ಯಕರ ಬೆಳವಣಿಗೆಗೆ ಶೇರು ನಿಯಂತ್ರಣ ಮಂಡಳಿಯು ಆಗಾಗ ಕಠಿಣವಾದ ಕ್ರಮಗಳನ್ನು ಕೈಗೊಳ್ಳುತ್ತದೆ. ಆಗ ಕರಡಿಯ ಕುಣಿತ ಹೆಚ್ಚಾಗಬಹುದು. ಆದರೆ ಇದು ಹೆಚ್ಚುಕಾಲ ಇರಲಾರದು. ಕರಡಿ ಕುಣಿತದ ಸದ್ದನ್ನು ಅಡಗಿಸಲು ಗೂಳಿಯು ಸದಾ ಸನ್ನದ್ಧವಾಗಿರುತ್ತದೆ.

  • ಏನೇ ಆದರೂ, ನಮ್ಮ ಆರ್ಥಿಕ ನೀತಿ, ಹಣದುಬ್ಬರ, ಡಾಲರ್ ಮೌಲ್ಯ ಮತ್ತು ದಿಗ್ಗಜ ಕಂಪನಿಗಳ ಪ್ರಮೋಟರ್ಸ್ ಗಳಲ್ಲಿರುವ ಶೇರುಗಳು, ಈ ಕರಡಿ ಮತ್ತು ಗೂಳಿಯನ್ನ ಆಡಿಸುವ ಅಸ್ತ್ರಗಳು.
  • ಇದರ ಆಳ ಮತ್ತು ಅಗಲದ ಅರಿವು ಇಲ್ಲದ ಸಾಮಾನ್ಯ ಹೂಡಿಕೆದಾರರು ತಮ್ಮ ಹೂಡಿಕೆಯಲ್ಲಿ ನಷ್ಟ ಅನುಭವಿಸುವುದು ಅತಿ ಸಾಮಾನ್ಯ.

ಇದರ ಅಳತೆಯು ಅಗಣಿತವಾದ್ದರಿಂದ ನಮ್ಮ ಹೂಡಿಕೆಯ ವಿಷಯದಲ್ಲಿ ಜಾಗರೂಕತೆ ಅಗತ್ಯ.