ವಿಶ್ವವಿಡೀ ಆರಾಧಿಸುತ್ತಿರುವ ಜನಪ್ರಿಯ ಸಂಬಾರ ವಸ್ತುವಿದು. ಬೆಳ್ಳುಳ್ಳಿಯ ಘಾಟುವಾಸನೆ, ಹೇರಳ ಔಷಧಿಯುಕ್ತ ಗುಣಗಳೇ ಇದನ್ನು ತುಂಬಾ ಎತ್ತರಕ್ಕೇರಿಸಿವೆ.
ಇದು ಆಂಟಿಬಯಾಟಿಕ್ ಮತ್ತು ಆಂಟಿಸೆಪ್ಟಿಕ್ ನಂತೆ ಕಾರ್ಯ ನಿರ್ವಹಿಸುವುದು. ಆಹಾರವನ್ನು ವಿಷಮಯಗೊಳಿಸುವ ಅನೇಕ ತೆರನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಬಲ್ಲುದು.
ಗರುಡನು ಇಂದ್ರನ ಬಳಿಯಿಂದ ಅಮೃತವನ್ನು ಅಪಹರಿಸಿ ಕೊಂಡೊಯ್ಯುವಾಗ, ಭೂಮಿಗೆ ಬಿದ್ದ ಅಮೃತದ ಬಿಂದುಗಳು ಶ್ವೇತ ಕಂದಗಳಾಗಿ ಅರಳಿದವಂತೆ !!
ಬೆಳ್ಳುಳ್ಳಿಯ ಉಗಮದ ಕುರಿತು ಹಬ್ಬಿರುವ ಈ ಕಥೆ,ಎಷ್ಟು ಸ್ವಾರಸ್ಯಪೂರ್ಣ !
ಎಂತಹ ಸುಂದರ ಕಲ್ಪನೆ !
ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ, ಕಡಿಮೆಯಾಗಿ ರಕ್ತದೊತ್ತಡ ಮತ್ತು ಹೃದಯರೋಗಗಳಿಗೆ ಉತ್ತಮ ಪರಿಣಾಮ ನೀಡುತ್ತದೆ.
ಗಂಟಲು ಉಸಿರಾಟದ ತೊಂದರೆ ಒಣಕೆಮ್ಮು, ದಮ್ಮು, ನೆಗಡಿ, ಶೀತ, ಕಫ ಮುಂತಾದ ಶ್ವಾಸನಾಳಗಳ ತೊಂದರೆಗಳು ನಿವಾರಿಸಲ್ಪಡುತ್ತವೆ. ಹಸಿವು ಮತ್ತು ಜೀರ್ಣಶಕ್ತಿಯನ್ನು ಉಂಟುಮಾಡುತ್ತದೆ. ಜಠರ ಮತ್ತು ಕರುಳಿನ ದೋಷಗಳು ವಾಯು ಪ್ರಕೋಪಗಳನ್ನು ನಿವಾರಿಸುತ್ತದೆ.
ಜ್ವರ, ಕಿವಿ ಮತ್ತು ಕಣ್ಣಿನ ತೊಂದರೆ, ವಾತ, ರಕ್ತದೋಷ, ಮೂತ್ರ ದೋಷಗಳಿಗೆ ಗುಣಕಾರಿ. ಇದು ಉತ್ತಮ ಸ್ಮರಣ ಶಕ್ತಿ ಪ್ರಚೋದಕವೂ ಹೌದು. ಕ್ಷಯ, ಕ್ಯಾನ್ಸರ್ ಚಿಕಿತ್ಸೆಗಳಿಗೂ ಬೆಳ್ಳುಳ್ಳಿ ಬಳಕೆಯಾಗುತ್ತಿದೆ.
ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಸಹಕಾರಿಯಾದ ಬೆಳ್ಳುಳ್ಳಿ ಆಯುರ್ವೇದದಲ್ಲಿ ಅಮೃತ ಸಮಾನವೆನಿಸಿದೆ. ಇದನ್ನು ದೀಪಕ, ಪಾಚಕ, ಬಲವರ್ಧಕ, ಧಾತು ವರ್ಧಕ, ಶುಕ್ರ ವರ್ಧಕ, ಕೇಶ ಮತ್ತು ಬುದ್ಧಿ ವರ್ಧಕವೆಂದು ಹೇಳಲಾಗಿದೆ. ನೋವು ನಿವಾರಕ ರೋಗನಿರೋಧಕ, ಕ್ರಿಮಿನಾಶಕ ಮತ್ತು ಶ್ವಾಸಹರವೆನಿಸಿದ ಬೆಳ್ಳುಳ್ಳಿ, ಮುರಿದ ಮೂಳೆಗಳನ್ನು ಜೋಡಿಸುವ ಸಾಮರ್ಥ್ಯ ಹೊಂದಿದೆ.