Wednesday, April 2, 2025

ಇಡ್ಲಿ ದೋಸೆಗಳನ್ನು ಪ್ರತಿನಿತ್ಯ ತಿನ್ನುವುದರಿಂದ ಏನಾದರೂ ತೊಂದರೆ ಇದೆಯೇ? ಆಸಿಡಿಟಿ ಆಗುತ್ತದಾ?

 


ನಮ್ಮ ಆರೋಗ್ಯದ ಬಗ್ಗೆ ಅತಿ ಹೆಚ್ಚು ಗಮನ ಕೊಡುವುದೇ ಅನಾರೋಗ್ಯದ ಬಾಗಿಲು ತೆರೆದಂತೆ!!

  • ಎಲ್ಲಿ ಅತಿ ಉತ್ತಮವಾದ ಆರೋಗ್ಯ ಸೇವೆ ಇದೆಯೋ , ಎಲ್ಲಿ ಅತಿ ಸುಸಜ್ಜಿತವಾದ ಆಸ್ಪತ್ರೆ ಮತ್ತು ನುರಿತ ವೈದ್ಯರು ಇದ್ದಾರೊ ಅಲ್ಲೇ ಕಾಯಿಲೆಗಳ ಪ್ರಮಾಣವೂ ಹೆಚ್ಚು.

ಮೊದಲೆಲ್ಲ ನಮ್ಮವರು ಅವರಿಗೆ ಏನು ಬೇಕೊ ಅದನ್ನ ಅವರೇ ಬೆಳೆದುಕೊಳ್ಳುತ್ತಿದ್ದರು ಮತ್ತು ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕೊ ಅದನ್ನೇ ಬೆಳೆದುಕೊಂಡು ತಿನ್ನುತ್ತಿದ್ದರು. ಅವರೆಲ್ಲರೂ ಗಟ್ಟಿಮುಟ್ಟಾಗಿ ಆರೋಗ್ಯದಿಂದಲೇ ಇದ್ದರಲ್ಲವೆ?

  • ಯಾವಾಗ ಪಶ್ಚಿಮದ ದೇಶದಿಂದ ದುರುಳರು ಭಾರತಕ್ಕೆ ಲಗ್ಗೆ ಇಟ್ಟರೋ ಆಗಲೇ ಶುರುವಾಗಿದ್ದು ಅನಾರೋಗ್ಯದ ಭಯ ಮತ್ತು ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ.
  • ಜೊತೆಗೆ, ಎಲ್ಲ ಕಾಲದಲ್ಲಿ ಮತ್ತು ಎಲ್ಲ ಕಡೆಯೂ ಎಲ್ಲಾ ಬೆಳೆಗಳನ್ನು ಬೆಳೆದು ತಿನ್ನುತ್ತಿರುವುದು ಕೂಡಾ ಆರೋಗ್ಯದ ದೃಷ್ಟಿಯಿಂದ ಒಳ್ಳೆದಲ್ಲ.
    • ಕಾಶ್ಮೀರದ ಸೇಬು ಮಡಿಕೇರಿಯಲ್ಲಿ, ಮರಳುಗಾಡಿನ ಖರ್ಜೂರ ಮಲೆನಾಡಿನಲ್ಲಿ ಬೆಳೆದರೆ ತನ್ನತನವನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯ?
    • ಹಾಸನದ ರಾಗಿ ಮುದ್ದೆ ಬಯಲು ಸೀಮೆಗೆ ಹೋಗುವುದು ಹೇಗೆ ತಪ್ಪೋ, ಬಯಲು ಸೀಮೆಯ ಜೋಳದ ರೊಟ್ಟಿ ಮಂಡ್ಯಕ್ಕೆ ಬರುವುದು ಕೂಡಾ ಅಷ್ಟೇ ತಪ್ಪು.

ಇಟಲಿಯಿಂದ ಬಂದ ಪಿಝಾ, ಅಮೆರಿಕಾದ ಬರ್ಗರ್ , ಟರ್ಕಿಯ ಶವರ್ಮಾ, ಇವತ್ತು ಭಾರತೀಯರ ಅನಾರೋಗ್ಯದ ಮೂಲ!!

  • ಸೀಸನಲ್ ಮತ್ತು ರೀಜನಲ್ (Seasonal and regional) ಅಹಾರ ನಮ್ಮ ದೇಹಕ್ಕೆ ಅತ್ಯುತ್ತಮ ಮತ್ತು ಅಗತ್ಯವಾಗಿ ಬೇಕು. ಅದನ್ನು ಜೀವಮಾನ ಪರ್ಯಂತ ದಿನಕ್ಕೆ ಮೂರೂ ಹೊತ್ತು ಸೇವಿಸಿದರೂ ಆರೋಗ್ಯ ಕೆಡುವುದಿಲ್ಲ.
  • ಆಯಾ ಕಾಲದಲ್ಲಿ ಮತ್ತು ಆಯಾ ಪ್ರದೇಶದಲ್ಲಿ ಬೆಳೆಯುವ ಅಹಾರವೇ ನಮ್ಮ ದೇಹದ ಆರೋಗ್ಯವನ್ನ‌ ಕಾಪಾಡುತ್ತವೆ.
  • ನಮ್ಮ ಮೊದಲಿನವರು ಏನು ತಿನ್ನುತ್ತಿದ್ದರೋ ಅದೇ ಅಹಾರವನ್ನು ನಾವೂ ತಿಂದರೆ ಆರೋಗ್ಯ ಚೆನ್ನಾಗಿಯೇ ಇರುತ್ತದೆ.

ನಮ್ಮ‌ ಮನೆಯಲ್ಲಿ ವಾರಕ್ಕೆ ಐದಾರು ದಿನ ಬೆಳಗಿನ ತಿಂಡಿಗೆ ದೋಸೆಯೇ ಇರುತ್ತದೆ. ಒಮ್ಮೊಮ್ಮೆ ರಾತ್ರಿಯ ಊಟಕ್ಕೂ ದೋಸೆಯೇ ಇರುತ್ತದೆ.

ವಾರದ ಒಂದೆರಡು ದಿನ ಇಡ್ಲಿ ಇರುತ್ತದೆ. ಇಡ್ಲಿ ಮಾಡಿದ ದಿನದ ಮಧ್ಯಾನ್ಹದ ಊಟಕ್ಕೂ ಇಡ್ಲಿಯೇ. ನಮಗೆ ಎಂದೂ ಎಸಿಡಿಟಿ ಸಮಸ್ಯೆ ಕಾಣಿಸಿಲ್ಲ.

ಇಡ್ಲಿ ದೋಸೆ ತಿನ್ನುವುದರಿಂದ ಬೇರೆ ರೀತಿಯ ಆರೋಗ್ಯ ಸಮಸ್ಯೆ ಕೂಡಾ ಆಗಿಲ್ಲ.

    • ನಾನು ಹೇಳುತ್ತಿರುವುದು ಮನೆಯಲ್ಲಿ ಎಣ್ಣೆ ಹಾಕದೆ ಮಾಡುವ ದೋಸೆ. ಅರ್ಥ ಲೀಟರ್ ಎಣ್ಣೆ ಸುರಿದು ಮಾಡುವ ಹೊಟೆಲ್ ದೋಸೆ ತಿಂದರೆ ಎಸಿಡಿಟಿಯೂ ಬರುತ್ತದೆ, ಮತ್ತಿನ್ನೇನಾದರೂ ಇದ್ದರೆ ಅದೂ ಬರುತ್ತದೆ. ಅದು ದೋಸೆಯ ತಪ್ಪಲ್ಲ , ಅದಕ್ಕೆ ಹಾಕಿದ ಎಣ್ಣೆಯ ತಪ್ಪು.
  • ನಾವು ಯಾವಾಗ ನಮ್ಮ‌ ಅಹಾರದ ಮೂಲವನ್ನು ಬದಲಿಸುತ್ತೇವೋ ಆಗ ನಮ್ಮ ದೇಹ ಅದನ್ನ‌ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಆಗಲೇ ಎಸಿಡಿಟಿಯಂತಹ ಸಮಸ್ಯೆ ಶುರು ಆಗುತ್ತದೆ.

ಅಮೆರಿಕಾದಿಂದ ಹಾರಿಕೊಂಡು ಬಂದ ಗೋಧಿ ಇವತ್ತು ಭಾರತೀಯರನ್ನ ಸಕ್ಕರೆ ಕಾಯಿಲೆಗೆ ತಳ್ಳಿದೆ ಅಂದರೆ ಬಹುಶಃ ಬಹಳಷ್ಟು ವಿರೋಧಗಳು ಕೇಳಿಬರುತ್ತವೆ. ಆದರೆ ಸತ್ಯವು ಸುಳ್ಳಾಗಲು ಸಾಧ್ಯವಿಲ್ಲ.

  • ಗೋಧಿಯಿಂದಲೇ ಸಕ್ಕರೆ ಕಾಯಿಲೆ ಬರದಿದ್ದರೂ ಸಕ್ಕರೆ ಕಾಯಿಲೆ ಬಂದವರು ನಿರಂತರ ಗೋಧಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಾಯಂ ಆಗುತ್ತದೆ.

ಇಡ್ಲಿ ದೋಸೆಗಳು ಅತ್ಯಂತ ಆರೋಗ್ಯಕರ ಅಹಾರ. ಒಂದು ದಿನ ಮೊದಲೇ ರುಬ್ಬಿ ಇಟ್ಟ ಇಡ್ಲಿ ಮತ್ತು ದೋಸೆ ಹಿಟ್ಟು ತುಂಬಾ ಒಳ್ಳೆಯದು.

  • ಅಕ್ಕಿ , ಉದ್ದು ದೇಹದ ನೀರಿನ ಅಂಶವನ್ನು ಕಡಿಮೆ ಮಾಡುವುದಿಲ್ಲ. ಆದರೆ ಗೋಧಿ ದೇಹದ ನೀರಿನ ಅಂಶವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಚಪಾತಿ , ಪಿಝಾ, ಬರ್ಗರ್ ತಿಂದಾಗ ಹೆಚ್ಚು ನೀರು ಬೇಕೆನಿಸುತ್ತದೆ. ಮಾರನೇ ದಿನ ಅದರ ಎಫೆಕ್ಟ್ ತಿಳಿಯುತ್ತದೆ!!

ಅದಕ್ಕಾಗಿ, ಇಡ್ಲಿ ದೋಸೆ ತಿನ್ನುವುದರಿಂದ ಎಸಿಡಿಟಿ ಬರುತ್ತದೆ ಅನ್ನುವ ತಪ್ಪು ಕಲ್ಪನೆ ಬೇಡ. ಧಾರಾಳವಾಗಿ ತಿನ್ನಿ , ಆರೋಗ್ಯದಿಂದಿರಿ.