Thursday, May 22, 2025

ವಸ್ತುವಲ್ಲ, ಮನಸ್ಸು ಮುಖ್ಯ.

ಭಗವಾನ್ ಬುದ್ಧರು ಅನೇಕ ದಿನಗಳ ವಿಹಾರದ ಬಳಿಕ ಮಗಧ ದೇಶದ ರಾಜಧಾನಿಯತ್ತ ಹೊರಟರು. ಆಗ ಗ್ರಾಮೀಣ ಪ್ರದೇಶದ ಜನರು ಓಡೋಡಿ ಬಂದು ಬಗೆಬಗೆಯ ಕಾಣಿಕೆಗಳನ್ನು ತಂದರು. ಸಾಮ್ರಾಟ್ ಬಿಂಬಸಾರನಾದರೋ ಅತ್ಯಮೂಲ್ಯ ಉಡುಗೊರೆಗಳನ್ನು ತಂದೊಪ್ಪಿಸಿದ. ಆಗ ಭಗವಾನ್ ಬುದ್ಧರು ದಾನ ಸ್ವೀಕಾರ ಮಾಡಲೆಂದು ಬಲಗೈಯನ್ನೆತ್ತುತ್ತಿದ್ದರು.

ಅಷ್ಟರಲ್ಲಿ ಸಾವಿರಾರು ಮಂದಿಯ ಜನಸಂದಣಿಯ ನಡುವೆ ನುಗ್ಗಿ, ಒಬ್ಬ ಮುದುಕಿ ತನ್ನ ಕಾಣಿಕೆಯನ್ನು ಕೊಡಲೆಂದು ಬಂದವಳೇ ಕೈ ಮುಗಿದು "ಹೇ ಮಹಾಪ್ರಭು, ನಾನೋ ಬಡವಿ. ನಿಮಗೊಪ್ಪಿಸಲು ಅರ್ಹವಾದ ವಸ್ತು ನನ್ನ ಬಳಿ ಇಲ್ಲವೇ ಇಲ್ಲ. ನನಗೆ ಮರದಿಂದ ಬಿದ್ದ ಒಂದು ಮಾವಿನ ಹಣ್ಣು ಸಿಕ್ಕಿತು. ಅದನ್ನೇ ನಿಮಗೆ ಅರ್ಪಿಸುತ್ತಿದ್ದೇನೆ ಎಂದು ಅರ್ಧ ತಿಂದ ಮಾವಿನ ಹಣ್ಣನ್ನು ಮುಂದಕ್ಕೆ ಚಾಚಿದಳು" ಬುದ್ಧ ಅರ್ಧ ಮಾವಿನ ಹಣ್ಣನ್ನು ಕಂಡು ಬುದ್ಧರು "ಅಮ್ಮ, ಇದರ ಉಳಿದರ್ಧ ಎಲ್ಲಿ ಹೋಯ್ತು?" ಎಂದು ಪ್ರಶ್ನಿಸಿದರು. ಆಗ ಮುದುಕಿ "ನಾನು ಮಾವಿನ ಹಣ್ಣು ತಿನ್ನುತ್ತಿರುವಾಗಲೇ ನೀವು ತೆರಳುವ ಸಮಾಚಾರ ಸಿಕ್ಕಿತು. ನನ್ನ ಬಳಿ ಬೇರೇನೂ ಇಲ್ಲದ್ದರಿಂದ ಇದನ್ನೇ ಅರ್ಪಿಸಲೆಂದು ಬಂದೆ" ಎಂದಳು. ಈ ಮಾತನ್ನು ಕೇಳಿದ ಬುದ್ಧರು ತಮ್ಮ ಆಸನದಿಂದ ಇಳಿದು ಬಂದು, ಹಣ್ಣು ಸ್ವೀಕಾರ ಮಾಡಿದರು.

ಆಗ ಬಿಂಬಸಾರ "ಹೇ ಭಗವಾನ್, ನೀವು ಬಹುಮೂಲ್ಯ ಕಾಣಿಕೆಗಳನ್ನು ಕೇವಲ ಕೈಯಾಡಿಸಿ ಸ್ವೀಕಾರ ಮಾಡಿದಿರಿ. ಆದರೆ ಮುದುಕಿಯ ಅರ್ಧ ಎಂಜಲು ಹಣ್ಣನ್ನು ಸ್ವೀಕರಿಸಲು ಕೆಳಗಿಳಿದು ಬಂದಿರಿ. ಇದೇಕೆ ಹೀಗೆ?" ಮುಗುಳ್ನಗುತ್ತಾ ಬುದ್ಧ "ನೀವುಗಳೆಲ್ಲ ಕೊಟ್ಟದ್ದು ನಿಮ್ಮ ಸಂಪತ್ತಿನ ಒಂದು ಸಣ್ಣ ಅಂಶ ಮಾತ್ರ! ಅದಲ್ಲದೆ ಅಹಂಕಾರದಿಂದ ದಾನ ನೀಡುತ್ತೀರಿ. ಆದರೆ ಈ ಅಜ್ಜಿ ತನ್ನ ಬಳಿ ಇದ್ದುದೆಲ್ಲವನ್ನೂ ಪ್ರೀತಿ ಪೂರ್ವಕವಾಗಿ ಒಪ್ಪಿಸಿದ್ದಾರೆ. ಇಂತಹ ನಿರ್ಮಲ ಅಂತಃಕರಣದ ಪ್ರೀತಿ ಮುಖ್ಯ. ಕಾಣಿಕೆಯ ವೌಲ್ಯವಲ್ಲ" ಎಂದರು. ಈ ಮಾತನ್ನು ಕೇಳಿ ಬಿಂಬಸಾರ ತಲೆದೂಗಿ ಬಾಗಿದ. ಇಲ್ಲೆಂತಹ ಉನ್ನತ ಆದರ್ಶ ಹುದುಗಿದೆ. ಇತರರಿಗೆ, ವಿಶೇಷವಾಗಿ ಗಣ್ಯರಿಗೆ ನಾವು ಒಪ್ಪಿಸುವ ವಸ್ತುವಿಗಿಂತಲೂ, ಅದರ ಹಿನ್ನೆಲೆಯಲ್ಲಿರುವ ಭಾವನೆಗಳು ಮುಖ್ಯ.

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನ: ||ಭಗವದ್ಗೀತೆ 9.26||

ನೀತಿ :-- ಶುದ್ಧ ಅಂತಃಕರಣದಿಂದ, ಪ್ರೀತಿ- ಸ್ನೇಹ- ಭಕ್ತಿ ಭಾವದಿಂದ ಅರ್ಪಿಸಿದ ಸಣ್ಣ ವಸ್ತುವೂ ಮಹತ್ವದ್ದಾಗಬಲ್ಲುದು. ವಸ್ತುವಲ್ಲ ಮನಸ್ಸು ಮುಖ್ಯ.