Showing posts with label dinakondu kathe(ದಿನಕ್ಕೊಂದು ಕಥೆ). Show all posts
Showing posts with label dinakondu kathe(ದಿನಕ್ಕೊಂದು ಕಥೆ). Show all posts

Thursday, May 22, 2025

ವಸ್ತುವಲ್ಲ, ಮನಸ್ಸು ಮುಖ್ಯ.

ಭಗವಾನ್ ಬುದ್ಧರು ಅನೇಕ ದಿನಗಳ ವಿಹಾರದ ಬಳಿಕ ಮಗಧ ದೇಶದ ರಾಜಧಾನಿಯತ್ತ ಹೊರಟರು. ಆಗ ಗ್ರಾಮೀಣ ಪ್ರದೇಶದ ಜನರು ಓಡೋಡಿ ಬಂದು ಬಗೆಬಗೆಯ ಕಾಣಿಕೆಗಳನ್ನು ತಂದರು. ಸಾಮ್ರಾಟ್ ಬಿಂಬಸಾರನಾದರೋ ಅತ್ಯಮೂಲ್ಯ ಉಡುಗೊರೆಗಳನ್ನು ತಂದೊಪ್ಪಿಸಿದ. ಆಗ ಭಗವಾನ್ ಬುದ್ಧರು ದಾನ ಸ್ವೀಕಾರ ಮಾಡಲೆಂದು ಬಲಗೈಯನ್ನೆತ್ತುತ್ತಿದ್ದರು.

ಅಷ್ಟರಲ್ಲಿ ಸಾವಿರಾರು ಮಂದಿಯ ಜನಸಂದಣಿಯ ನಡುವೆ ನುಗ್ಗಿ, ಒಬ್ಬ ಮುದುಕಿ ತನ್ನ ಕಾಣಿಕೆಯನ್ನು ಕೊಡಲೆಂದು ಬಂದವಳೇ ಕೈ ಮುಗಿದು "ಹೇ ಮಹಾಪ್ರಭು, ನಾನೋ ಬಡವಿ. ನಿಮಗೊಪ್ಪಿಸಲು ಅರ್ಹವಾದ ವಸ್ತು ನನ್ನ ಬಳಿ ಇಲ್ಲವೇ ಇಲ್ಲ. ನನಗೆ ಮರದಿಂದ ಬಿದ್ದ ಒಂದು ಮಾವಿನ ಹಣ್ಣು ಸಿಕ್ಕಿತು. ಅದನ್ನೇ ನಿಮಗೆ ಅರ್ಪಿಸುತ್ತಿದ್ದೇನೆ ಎಂದು ಅರ್ಧ ತಿಂದ ಮಾವಿನ ಹಣ್ಣನ್ನು ಮುಂದಕ್ಕೆ ಚಾಚಿದಳು" ಬುದ್ಧ ಅರ್ಧ ಮಾವಿನ ಹಣ್ಣನ್ನು ಕಂಡು ಬುದ್ಧರು "ಅಮ್ಮ, ಇದರ ಉಳಿದರ್ಧ ಎಲ್ಲಿ ಹೋಯ್ತು?" ಎಂದು ಪ್ರಶ್ನಿಸಿದರು. ಆಗ ಮುದುಕಿ "ನಾನು ಮಾವಿನ ಹಣ್ಣು ತಿನ್ನುತ್ತಿರುವಾಗಲೇ ನೀವು ತೆರಳುವ ಸಮಾಚಾರ ಸಿಕ್ಕಿತು. ನನ್ನ ಬಳಿ ಬೇರೇನೂ ಇಲ್ಲದ್ದರಿಂದ ಇದನ್ನೇ ಅರ್ಪಿಸಲೆಂದು ಬಂದೆ" ಎಂದಳು. ಈ ಮಾತನ್ನು ಕೇಳಿದ ಬುದ್ಧರು ತಮ್ಮ ಆಸನದಿಂದ ಇಳಿದು ಬಂದು, ಹಣ್ಣು ಸ್ವೀಕಾರ ಮಾಡಿದರು.

ಆಗ ಬಿಂಬಸಾರ "ಹೇ ಭಗವಾನ್, ನೀವು ಬಹುಮೂಲ್ಯ ಕಾಣಿಕೆಗಳನ್ನು ಕೇವಲ ಕೈಯಾಡಿಸಿ ಸ್ವೀಕಾರ ಮಾಡಿದಿರಿ. ಆದರೆ ಮುದುಕಿಯ ಅರ್ಧ ಎಂಜಲು ಹಣ್ಣನ್ನು ಸ್ವೀಕರಿಸಲು ಕೆಳಗಿಳಿದು ಬಂದಿರಿ. ಇದೇಕೆ ಹೀಗೆ?" ಮುಗುಳ್ನಗುತ್ತಾ ಬುದ್ಧ "ನೀವುಗಳೆಲ್ಲ ಕೊಟ್ಟದ್ದು ನಿಮ್ಮ ಸಂಪತ್ತಿನ ಒಂದು ಸಣ್ಣ ಅಂಶ ಮಾತ್ರ! ಅದಲ್ಲದೆ ಅಹಂಕಾರದಿಂದ ದಾನ ನೀಡುತ್ತೀರಿ. ಆದರೆ ಈ ಅಜ್ಜಿ ತನ್ನ ಬಳಿ ಇದ್ದುದೆಲ್ಲವನ್ನೂ ಪ್ರೀತಿ ಪೂರ್ವಕವಾಗಿ ಒಪ್ಪಿಸಿದ್ದಾರೆ. ಇಂತಹ ನಿರ್ಮಲ ಅಂತಃಕರಣದ ಪ್ರೀತಿ ಮುಖ್ಯ. ಕಾಣಿಕೆಯ ವೌಲ್ಯವಲ್ಲ" ಎಂದರು. ಈ ಮಾತನ್ನು ಕೇಳಿ ಬಿಂಬಸಾರ ತಲೆದೂಗಿ ಬಾಗಿದ. ಇಲ್ಲೆಂತಹ ಉನ್ನತ ಆದರ್ಶ ಹುದುಗಿದೆ. ಇತರರಿಗೆ, ವಿಶೇಷವಾಗಿ ಗಣ್ಯರಿಗೆ ನಾವು ಒಪ್ಪಿಸುವ ವಸ್ತುವಿಗಿಂತಲೂ, ಅದರ ಹಿನ್ನೆಲೆಯಲ್ಲಿರುವ ಭಾವನೆಗಳು ಮುಖ್ಯ.

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನ: ||ಭಗವದ್ಗೀತೆ 9.26||

ನೀತಿ :-- ಶುದ್ಧ ಅಂತಃಕರಣದಿಂದ, ಪ್ರೀತಿ- ಸ್ನೇಹ- ಭಕ್ತಿ ಭಾವದಿಂದ ಅರ್ಪಿಸಿದ ಸಣ್ಣ ವಸ್ತುವೂ ಮಹತ್ವದ್ದಾಗಬಲ್ಲುದು. ವಸ್ತುವಲ್ಲ ಮನಸ್ಸು ಮುಖ್ಯ.

Wednesday, April 2, 2025

ಅನ್ನಪೂರ್ಣ ದೇವಿಯ ಕಥೆ


ಸಂಸ್ಕೃತದಲ್ಲಿ, 'ಅನ್ನ' ಎಂದರೆ 'ಆಹಾರ' ಮತ್ತು 'ಪೂರ್ಣ' ಎಂದರೆ 'ಸಮೃದ್ಧಿ ಅಥವಾ ತುಂಬುವಿಕೆ. ಅನ್ನಪೂರ್ಣ ದೇವಿಯು ತನ್ನ ಬಳಿಗೆ ಬರುವ ಎಲ್ಲರಿಗೂ ಅನ್ನವನ್ನು ಮಾತ್ರ ನೀಡಬಲ್ಲದನ್ನು ಭರವಸೆ ನೀಡುತ್ತಾಳೆ.
ಇಂತಹ ಅಪರೂಪದ ಎಳೆಯನ್ನು ಉಳಿಸಿ. ಅವುಗಳನ್ನು ಪೋಷಿಸಲು ಮತ್ತು ನಿಮ್ಮ ಬಗ್ಗೆ ಯೋಚಿಸದೆ ನೀಡಲು, ಸ್ವಾರ್ಥಿಗಳಾಗಿರುವ ಪ್ರಸಂಗದ ವಿವರ ಇದಾಗಿದೆ.

"ಮಾತಾ ಅನ್ನಪೂರ್ಣೇಯು " ಅವಳು ಪಾರ್ವತಿ ದೇವಿಯ ಅವತಾರ ಮತ್ತು ತಾಯಿ ಶಕ್ತಿಯ ಅನೇಕ ರೂಪಗಳಲ್ಲಿ ಇದೂ ಒಂದಾಗಿದೆ.
ಈ ಅವತಾರದಲ್ಲಿ, ಅವಳು ಎಲ್ಲಾ ಜೀವಿಗಳನ್ನು ಪೋಷಿಸುತ್ತಾಳೆ.. ಆದ್ದರಿಂದ, ಹಿಂದೂಗಳು "ಅನ್ನ" (ಆಹಾರ) ಅನ್ನು ಪವಿತ್ರವೆಂದು ಪರಿಗಣಿಸುತ್ತಾರೆ, ಅದಕ್ಕಾಗಿಯೇ ಅವರು ಅದನ್ನು ತಿನ್ನುವ ಮೊದಲು ಪ್ರಾರ್ಥನೆ ಸಲ್ಲಿಸುತ್ತಾರೆ.
ಇದು ಮಾತೃ ದೇವತೆಯ ಅತ್ಯಂತ ರೀತಿಯ ಮತ್ತು ಉದಾರ ರೂಪವಾಗಿದೆ; ಭಕ್ತರಿಗೆ ಆಹಾರ ನೀಡಲು, ಅವರಿಗೆ ಬೇಕಾದುದನ್ನು ನೀಡಲು ಅವಳು ಯಾವಾಗಲೂ ಸಿದ್ಧಳಾಗಿದ್ದಾಳೆ. ಅವಳನ್ನು ಪೂಜಿಸುವವರಿಗೆ ಎಂದಿಗೂ ಹಸಿವಾಗುವುದಿಲ್ಲ. ಅನ್ನಪೂರ್ಣ ಆಹಾರದ ಸೃಷ್ಟಿಯಲ್ಲಿ ತೊಡಗಿರುವ ರೈತರು ಮತ್ತು ಜನರನ್ನು ಪೋಷಿಸುತ್ತದೆ.

ತಾಯಿ ಅನ್ನಪೂರ್ಣೆಯ ದ್ಯೋತಕ :

ಅನ್ನಪೂರ್ಣ ದೇವಿಯ ಅಭಿವ್ಯಕ್ತಿಯ ಬಗ್ಗೆ ಎರಡು ದಂತಕಥೆಗಳಿವೆ. ಎರಡೂ ಅಭಿವ್ಯಕ್ತಿಗಳಲ್ಲಿ, ಅನ್ನಪೂರ್ಣ ದೇವಿಯ ಜನ್ಮ ದಿನಾಂಕವು ಅಕ್ಷಯ ತೃತಿಯ ಮೊದಲ ಕಥೆ. ಪಾರ್ವತಿ ದೇವಿಯು ಕಣ್ಮರೆಯಾದಾಗ
ಒಂದು ದಿನ ಭಗವಾನ್ ಶಿವನು ತನ್ನ ಪತ್ನಿಯಾದ ಪಾರ್ವತಿ ದೇವಿಗೆ, ಜಗತ್ತು ಒಂದು ಭ್ರಮೆ ಮತ್ತು ಆಹಾರವು ಮಾಯೆ ಎಂದು ಕರೆಯಲ್ಪಡುವ ಈ ಭ್ರಮೆಯ ಭಾಗವಾಗಿದೆ ಎಂದು ಹೇಳಿದನು. ಸ್ವಭಾವತಃ (ಪ್ರಕೃತಿ) ಪಾರ್ವತಿಯು ಕೋಪಗೊಂಡಳು. ಅವಳು ಎಲ್ಲರೊಂದಿಗೆ ಪ್ರಪಂಚದಿಂದ ಕಣ್ಮರೆಯಾದಳು. ಆಹಾರ ಇಲ್ಲದೆ
ಜೀವಿಗಳು ಬದುಕಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಲು.

ಪಾರ್ವತಿಯ ಕಣ್ಮರೆಯು ವಿನಾಶ ಮತ್ತು ಗೊಂದಲಕ್ಕೆ ಕಾರಣವಾಯಿತು. ಋತುಗಳು ಬದಲಾಗುವುದನ್ನು ನಿಲ್ಲಿಸಿದವು; ಭೂಮಿ ಬಂಜರು ಆಯಿತು, ಭೀಕರ ಬರ ಬಂತು. ಮೂರು ಲೋಕಗಳಲ್ಲಿ (ಸ್ವರ್ಗ/ಸ್ವರ್ಗ ಲೋಕ, ಭೂಮಿ/ಭೂಲೋಕ, ಮತ್ತು ಪಾತಾಳ/ಪಾತಾಳ ಲೋಕ) ಯಾವುದರಲ್ಲಿಯೂ ಆಹಾರವನ್ನು ಹುಡುಕುವುದು ಅಸಾಧ್ಯವಾಗಿತ್ತು. ಎಲ್ಲರೂ ದೈವಿಕ ತಾಯಿಯನ್ನು ಪ್ರಾರ್ಥಿಸಿದರು, ಮತ್ತು ಅವರು ಮತ್ತೆ ವಾರಣಾಸಿ (ಕಾಶಿ) ನಲ್ಲಿ ಕಾಣಿಸಿಕೊಂಡರು ಹಾಗೂ ಪ್ರಪಂಚದ ಪ್ರಯೋಜನಕ್ಕಾಗಿ ಭೂಮಿಯ ಮೇಲೆ ಭಕ್ತರಿಗಾಗಿ ಅನ್ನವನ್ನು ಸ್ಥಾಪಿಸಿದರು, ಅಲ್ಲಿ ಅವರು ತಿರುಗಿ ಎಲ್ಲರಿಗೂ ಆಹಾರವನ್ನು ನೀಡಿದರು.

ಶಿವನು ತನ್ನ ದೈವಿಕ ಹೆಂಡತಿಯ ಬಳಿಗೆ ಬಂದು ತನ್ನ ಕಪಾಲವನ್ನು ಅವಳಿಗೆ ಹಸ್ತಾಂತರಿಸಿದನು ಮತ್ತು ಪತ್ನಿಯ ಶಕ್ತಿಯಿಲ್ಲದೆ ಅವನು ಅಪೂರ್ಣ ಎಂದು ಶಿವನು ಅರಿತುಕೊಂಡನು. ಆತ್ಮವು ವಾಸಿಸುವ ದೇಹಕ್ಕೆ ಆಹಾರವಿಲ್ಲದೆ ಮೋಕ್ಷವನ್ನು ಸಾಧಿಸುವುದು ಅಸಾಧ್ಯವೆಂದು ಗುರುತಿಸಿದನು. ಪಾರ್ವತಿ ದೇವಿಯು ನಸುನಗುತ್ತಾ ತನ್ನ ಅಂಗೈಗಳಿಂದ ಶಿವನಿಗೆ ಉಣಬಡಿಸಿದಳು.

ಇನ್ನು ಎರಡನೇ ಕಥೆ : -

ತ್ರಿಮೂರ್ತಿ ಮತ್ತು ಮಹಾದೇವಿ ನಡುವಿನ ವಾದ: ಇದು ಎರಡನೆಯ ದಂತಕಥೆಯ ಪ್ರಕಾರ, ಒಂದು ದಿನ, ಮೂರು ದೇವತೆಗಳು (ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮತ್ತು ಮಹಾದೇವ ಅಥವಾ ಶಿವ) ತಮ್ಮಲ್ಲಿ ಯಾರು ಶ್ರೇಷ್ಠರು ಎಂಬ ಬಗ್ಗೆ ತೀವ್ರ ವಾದವನ್ನು ನಡೆಸಿದರು.
ಅವರ ವಾದಗಳನ್ನು ಕೇಳಿದ ನಂತರ, ಮಹಾದೇವಿಯು ಅವರಿಗೆ ಜಗತ್ತಿನಲ್ಲಿ ತನ್ನ ಪ್ರಾಮುಖ್ಯತೆಯನ್ನು ತೋರಿಸಲು ನಿರ್ಧರಿಸಿದಳು ಮತ್ತು ಕಣ್ಮರೆಯಾದಳು, ಇದರಿಂದಾಗಿ ತೀವ್ರ ಕ್ಷಾಮ ಮತ್ತು ಆಹಾರದ ಕೊರತೆಯುಂಟಾಯಿತು. ಪರಿಣಾಮವಾಗಿ, ಯಾಗಗಳಲ್ಲಿ ದೇವತೆಗಳಿಗೆ ತ್ಯಾಗದ ವಿಧಿಗಳನ್ನು ಅರ್ಪಿಸಲಾಗಲಿಲ್ಲ, ದೇವ, ದೇವತೆಗಳು ದುರ್ಬಲಗೊಳ್ಳಲು ಪ್ರಾರಂಭಿಸಿದರು, ಸಹಾಯಕ್ಕಾಗಿ ತ್ರಿಮೂರ್ತಿಗಳ ಕಡೆಗೆ ತಿರುಗಿದರು. ನಂತರ ವಿಷ್ಣುವು ಶಕ್ತಿ ದೇವತೆಯನ್ನು ಹಿಂತಿರುಗುವಂತೆ ಕೇಳಲು ಶಿವನನ್ನು ವಿನಂತಿಸಿದನು. ಅವನು ಶಿವನಿಗೆ ಹೇಳಿದನು. ಕಾಶಿಯಲ್ಲಿ ಒಬ್ಬ ಮಹಿಳೆ ಜನರಿಗೆ ಅನ್ನದಾನ ಮಾಡಲು ಪ್ರಾರಂಭಿಸಿದ್ದಾಳೆ.

ಶಿವನು ಈ ಮಹಿಳೆ ಬೇರೆ ಯಾರೂ ಅಲ್ಲ ಜಗದಂಬಾ (ವಿಶ್ವದ ತಾಯಿ) ಎಂದು ತಕ್ಷಣವೇ ಅರಿತುಕೊಂಡನು ಮತ್ತು ಅವಳ ಅವಶ್ಯಕತೆ ಮತ್ತು ಅವಳ ಸ್ವಭಾವವನ್ನು ಎಲ್ಲರೂ ಗುರುತಿಸಿದ್ದರಿಂದ ಸಂತೋಷಪಟ್ಟು ದೇವತೆಗಳಾದ ಪಾರ್ವತಿ ದೇವಿಗೆ ಆಹಾರವನ್ನು ಕೇಳಲು ಭಿಕ್ಷುಕನಾಗಿ ಕಾಶಿಗೆ ಹೋದನು. ; ಅವಳು ಶಿವನಿಗೆ ಆಹಾರವನ್ನು ಭಿಕ್ಷೆಯಾಗಿ ಅರ್ಪಿಸಿದಳು ಮತ್ತು ತಾನು ಅನ್ನಪೂರ್ಣೆಯ ರೂಪದಲ್ಲಿ ಕಾಶಿಯಲ್ಲಿ ನೆಲೆಸುವುದಾಗಿ ಮಹಾದೇವನಿಗೆ ಹೇಳಿದಳು.

ಶಿವನು ಹೋದ ಸ್ಥಳವು ಭೂಮಿಯ ಮೇಲಿನ ಏಕೈಕ ಅಡುಗೆಮನೆಯಾಗಿದ್ದು ಅದು ಕಾಶಿಯಲ್ಲಿದೆ. ಕಾಶಿಯು ಕಾರಣಿಕ ದೇಹವು ಅತ್ಯುನ್ನತ ಮಟ್ಟದ ಶಾಂತಿಯನ್ನು ವ್ಯಕ್ತಪಡಿಸುವ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ.
ಅನ್ನ ಇದು ಪೂರ್ಣ ಬ್ರಹ್ಮ..!
ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ

Thursday, March 27, 2025

ಮಧುರೈ ಮೀನಾಕ್ಷಿ ಪುರಾಣ ಹಿನ್ನೆಲೆ

 

ಮಧುರೈ ರಾಜ್ಯದ ರಾಜನದ ಮಲಯಧ್ವಜ ಪಾಂಡ್ಯ ರಾಜನ ಹೆಂಡತಿಯಾದ ಕಾಂಚನಮಲೈ ರಾಣಿಗೆ ಕನಸಿನಲ್ಲಿ ( ಆಧಿಶಕ್ತಿ ಪಾರ್ವತಿ ) ಬಂದು ನಾನು ನಿನ್ನ ಮಗಳಾಗಿ ಬರುವೆ ಎಂದು ಹೇಳಿರುತ್ತಾಳೆ..

ಎಷ್ಟೋ ವರ್ಷಗಳು ಆದರೂ ಕೂಡ ಮಲಯಧ್ವಜ ರಾಜನಿಗೆ ಕಾಂಚನಮಲೈ ಇಬ್ಬರು ದಂಪತಿಗಳಿಗೆ ಮಕ್ಕಳ ಭಾಗ್ಯ ಇರುವುದಿಲ್ಲ.. ಹೀಗೆ ಆದ್ರೆ ರಾಜ್ಯದ ಗತಿ ಏನು? ಎಂಬ ಚಿಂತೆ ರಾಜ ರಾಣಿಗೆ ಬರುತ್ತದೆ.

ಹಾಗಾಗಿ ಅವರು ಒಬ್ಬ ಮಗನಿಗಾಗಿ ಪುತ್ರ ಕಾಮೇಷ್ಠಿ ಯಜ್ಞವನ್ನು ಮಾಡುತ್ತಾರೆ.. ಆದರೆ ಅದರಿಂದ ಒಬ್ಬಳು 3 ವರ್ಷದ ಹುಡುಗಿಯೊಬ್ಬಳು ಆ ಯಜ್ಞ ಕುಂಡದಿಂದ ಹೊರಗೆ ಬರುತ್ತಾಳೆ ಅವಳಿಗೆ 2 ರ ಬದಲು 3 ಸ್ತನಗಳು ಇರುತ್ತದೆ ಇದನ್ನು ನೋಡಿದ ರಾಜ ರಾಣಿಗೆ ಆಶ್ಚರ್ಯವಾಗುತ್ತದೆ..

ಆಗ ಒಂದು ಅಶರೀರವಾಣಿ ಕೇಳಿಸುತ್ತೆ

ಮಲಯಧ್ವಜ ರಾಜನೇ ಚಿಂತಿಸಬೇಡ ಇವಳು ಸಾಮಾನ್ಯ ಹುಡುಗಿಯಲ್ಲ ( ಆಧಿಶಕ್ತಿ ಜಗನ್ಮಾತೆ ಪಾರ್ವತಿಯೇ ನಿನ್ನ ಮಗಳಾಗಿ ಬಂದಿರುವಳು.. ಹಾಗೂ ಇವಳಿಗೆ

3 ಸ್ತನಗಳು ಇದೆ ಎಂದು ಚಿಂತಿಸಬೇಡ..

ಇವಳು ತನ್ನ ಬಾವಿ ಪತಿಯನ್ನು ನೋಡಿ ಗುರುತಿಸಿದಾಗ ಇವಳ 3 ನೇ ಸ್ತನವು ಮಾಯವಾಗುತ್ತದೆ ಹಾಗೂ ಇವಳನ್ನು ಗಂಡು ಮಗುವಿನ ಹಾಗೆ ಬೆಳೆಸು ಯುದ್ಧಭ್ಯಾಸ ಶಸ್ತ್ರಭ್ಯಾಸ ಕಲಿಸಿ ವೀರ ಯೋಧೆಯನ್ನಾಗಿ ಮಾಡು ಎಂದು ಆ ಆಶರೀರವಾಣಿಯು ಹೇಳುತ್ತೆ..

ಯಜ್ಞ ಕುಂಡದಿಂದ ಜನ್ಮ ಪಡೆದ ಈ ಹುಡುಗಿಗೆ ತುಂಬಾ ಕೈಗಳು ಇರುತ್ತವೆ ಹಾಗಾಗಿ ಮಲಯಧ್ವಜ ರಾಜನು ಇವಳಿಗೆ ( ತಡಾತಕೈ ) ಎಂದು ಹೆಸರಿಟ್ಟು ನಾಮಕರಣ ಮಾಡುತ್ತಾನೆ..

ಹಾಗೂ ಅವಳಿಗೆ ಎಲ್ಲ ರೀತಿಯ ವಿದ್ಯಾಭ್ಯಾಸ ಶಸ್ತ್ರಭ್ಯಾಸ ಯುದ್ಧಭ್ಯಾಸ ಎಲ್ಲವನ್ನು ಮಲಯಧ್ವಜ ರಾಜನು ಕಲಿಸಿ ಕೊಡುತ್ತಾನೆ.. " ತಡಾತಕೈ" ಆಧಿಶಕ್ತಿ ಪಾರ್ವತಿಯ ಅವತಾರವಾದ ಕಾರಣ ಎಲ್ಲ ರೀತಿಯ ವಿಧ್ಯೆ ಯುದ್ಧ ವಿಧ್ಯೆ ಎಲ್ಲವನ್ನು ಬೇಗ ಕಲಿತುಕೊಳ್ಳುತ್ತಾಳೆ..

( ತಡಾತಕೈಗೆ ಮೀನಾಕ್ಷಿ ಎಂಬ ಹೆಸರು ಹೇಗೆ ಬಂತು ನೋಡೋಣ )

ತಡಾತಕೈ ಬೆಳೆದು ಯುವತಿ ಆಗುತ್ತಾಳೆ ಅವಳ ತಂದೆ ಮಲಯಧ್ವಜ ರಾಜನ ನಂತರ ಇವಳನ್ನೇ ಸಿಂಹಾಸನದ ಮೇಲೆ ಕೂರಿಸಿ ಪಟ್ಟಾಭಿಷೇಕವನ್ನು ಮಾಡುತ್ತಾರೆ.. ಮಧುರೈ ರಾಜ್ಯದ ರಾಣಿ ಆಗುತ್ತಾಳೆ

" ಆ ಸಮಯದಲ್ಲಿ ಅಗಸ್ತ್ಯ ಋಷಿಗಳು ಅರಮನೆಗೆ ಬರುತ್ತಾರೆ ತಡಾತಕೈ ಅಗಸ್ತ್ಯ ಋಷಿಗಳಿಗೆ ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಳ್ಳುತ್ತಾಳೆ..

( ತಡಾತಕೈ ಕಣ್ಣುಗಳು ಮೀನಿನ ಕಣ್ಣುಗಳ ಹಾಗೆ ಸುಂದರವಾಗಿ ಇದ್ದವು..

ಹಾಗಾಗಿ ಅಗಸ್ತ್ಯ ಋಷಿಗಳು ಅವಳಿಗೆ ( ಮೀನಾಕ್ಷಿ )

ಎಂದು ಮತ್ತೊಮ್ಮೆ ಮರುನಾಮಕರಣ ಮಾಡುತ್ತಾರೆ

ಹೀಗಾಗಿ ( ತಡಾತಕೈಗೆ - ಮೀನಾಕ್ಷಿ ) ಎಂಬ ಹೆಸರು ಬರುತ್ತದೆ.

ನಂತರ ಎಲ್ಲರೂ ತಡಾತಕೈಯನ್ನು ಮೀನಾಕ್ಷಿ ಎಂದೆ ಕರೆಯಲು ಶುರು ಮಾಡಿದರು

ಮೀನಾ + ಅಕ್ಷಿ ಅಕ್ಷಿ ಎಂದರೆ ಕಣ್ಣು

( ಮೀನಾಕ್ಷಿ )

ಹೀಗೆ ಮೀನಾಕ್ಷಿಯು ತನ್ನ ಮಧುರೈ ರಾಜ್ಯವನ್ನು ಚೆನ್ನಾಗಿ ಲಾಲನೆ ಪಾಲನೆ ಮಾಡುತ್ತ ತನ್ನದೇ ಯುದ್ಧ ಸೈನ್ಯವನ್ನು ರಚಿಸಿದಳು ತನ್ನ ಯುದ್ಧ ಸೈನ್ಯಕ್ಕೆ

( ಸುಮತಿ ಎಂಬ ಸ್ತ್ರೀ ಯನ್ನು ಸೇನಾಧೀಪತಿಯನ್ನಾಗಿ ಮಾಡಿದಳು.. ಮೀನಾಕ್ಷಿಯು ತನ್ನ ಯುದ್ಧ ಸೈನ್ಯದ ಜೊತೆಗೆ ಸಾಗಿ ಭೂಮಿ ಮೇಲೆ ಇರುವ ಎಲ್ಲ ರಾಜ್ಯವನ್ನು ವಶಪಡಿಸಿ ಕೊಳ್ಳುತ್ತಾಳೆ..

ನಂತರ ತನ್ನ ಎಲ್ಲ ಕೈಗಳನ್ನು ಶಸ್ತ್ರ ಹಿಡಿದು ಎಲ್ಲ ಲೋಕಗಳ ಮೇಲೆ ಆಕ್ರಮಣ ಮಾಡುತ್ತಾಳೆ

ಅವಳು ಎಲ್ಲ ಲೋಕಕ್ಕೆ ಹೋಗಿ ಅಲ್ಲಿ ಎಲ್ಲರನ್ನು ಸೋಲಿಸಿ ಗೆದ್ದು ಬರುತ್ತಾಳೆ ನಂತರ

( ಸ್ವರ್ಗ ಲೋಕ, ವೈಕುಂಠ, ಬ್ರಹ್ಮ ಲೋಕ ಈ ಮೂರು ಲೋಕಕ್ಕೆ ಹೋಗಿ ಅಲ್ಲಿ ಆ ಲೋಕವನ್ನು ಗೆಲ್ಲುತ್ತಾಳೆ

ನಂತರ ಎಲ್ಲ ಕಡೆ ಹೋಗಿ ಎಲ್ಲ ಗೆದ್ದು ಆದಮೇಲೆ ಕೊನೆಗೆ ಕೈಲಾಸಕ್ಕೆ ಹೋಗುತ್ತಾಳೆ ಅಲ್ಲಿ ನಂದಿ ಹಾಗೂ ಶಿವನ ಗಣಗಳ ಜೊತೆ ಹೋರಾಡಿ ಅವರನ್ನು ಸೋಲಿಸುತ್ತಾಳೆ ಕೊನೆಗೆ ಮುಂದೆ ಹೋದಾಗ ಅಲ್ಲಿ ಶಿವನು ( ಸುಂದರೇಶ್ವರ ) ರೂಪದಲ್ಲಿ ಕುಳಿತಿರುತ್ತಾನೆ

( ಶಿವನನ್ನು ನೋಡಿದ ಕೂಡಲೇ ಇವನೇ ನನ್ನ ಪತಿ ಎಂದು ಮೀನಾಕ್ಷಿಗೆ ಗೊತ್ತಾಗುತ್ತದೆ ಕೂಡಲೇ ಅವಳ

3 ನೇಯ ಸ್ತನವು ಮಾಯವಾಗುತ್ತದೆ ನಂತರ ಅವಳು ಶಿವನ ಬಳಿ ಹೋಗಿ ವಿವಾಹ ವಿಚಾರ ಮಾತಾಡುತ್ತಾಳೆ ಶಿವನು ಸರಿ ಎಂದ..

ನಂತರ ಮೀನಾಕ್ಷಿಯು ಶಿವನನ್ನು ಕರೆದುಕೊಂಡು ಭೂ ಲೋಕದಲ್ಲಿರುವ ಮಧುರೈ ರಾಜ್ಯಕ್ಕೆ ಬರುತ್ತಾಳೆ..

ಹೀಗೆ ಆಧಿಶಕ್ತಿ ಪಾರ್ವತಿಯು ಮೀನಾಕ್ಷಿಯಾಗಿ

ಮಹಾದೇವ ಶಿವನು ಸುಂದರೇಶ್ವರನಾಗಿ

ಇಬ್ಬರು ಅಲ್ಲಿ ವಿವಾಹವಾಗುತ್ತಾರೆ..

ವಿವಾಹಕ್ಕೆ ಎಲ್ಲ ದೇವಾನು ದೇವತೆಗಳು ಬರುತ್ತಾರೆ

( ವಿಷ್ಣುದೇವನು ಮೀನಾಕ್ಷಿಯ ಸಹೋಧರನಾಗಿ ವಿವಾಹವನ್ನು ಮುಂದೆ ನಡೆಸಿ ಕೊಡುತ್ತಾನೆ..

( ಬ್ರಹ್ಮದೇವನು ಪುರೋಹಿತನಾಗಿ ವಿವಾಹ ಮಾಡಿಸುತ್ತಾನೆ.. ಎಲ್ಲ ದೇವಾನು ದೇವತೆಗಳು ದೇವರುಗಳು ಎಲ್ಲ ಅಕ್ಷತೆ.. ಹೂ ಮಳೆಯನ್ನು ಸುರಿಸುತ್ತಾರೆ.

ಹೀಗೆ ಆಧಿಶಕ್ತಿ ಪಾರ್ವತಿಯು ಮೀನಾಕ್ಷಿಯಾಗಿ

ಶಿವನು ಸುಂದರೇಶ್ವರನಾಗಿ ಇಬ್ಬರು ಮಧುರೈ ಕ್ಷೇತ್ರದಲ್ಲಿ ನೆಲೆಸುತ್ತಾರೆ.

Thursday, December 5, 2024

ಇನೋಬ್ಬರಿಗೆ ಕೇಡು ಬಯಸಿದರೆ ಏನಾಗುತ್ತೆ

ಫಲವತ್ತಾದ ಇಪ್ಪತ್ತೈದು ಎಕರೆ ತೋಟದ ಭೂಮಿಯ ಒಡೆಯನಾಗಿದ್ದ ನಿಂಗಪ್ಪ ಅನಕ್ಷರಸ್ಥನಾಗಿದ್ದ. ಓದಲು ಬರೆಯಲು ಬಾರದೆ ತಾನು ಅನುಭವಿಸಿದ ಕಷ್ಟಗಳನ್ನು ತನ್ನ ಮಗ ಅನುಭವಿಸಬಾರದೆಂದು ನಿರ್ಧರಿಸಿದ್ದ. ಕಷ್ಟಪಟ್ಟು ಮಗನನ್ನು ವಿದ್ಯಾವಂತನನ್ನಾಗಿ ಮಾಡಿದ್ದ. ಆತನ ಹೆಸರು ವಿನಯ. ನಿಜಕ್ಕೂ ವಿನಯವಂತನಾಗಿದ್ದ. ಪಟ್ಟಣದ ಹಾಸ್ಟೆಲ್ನಲ್ಲಿ ಇದ್ದುಕೊಂಡು, ಹಗಲಿರುಳೂ ಓದಿ, ಉನ್ನತ ಶ್ರೇಣಿಯಲ್ಲಿ ಕೃಷಿ ಪದವಿಯನ್ನು ಪಡೆದುಕೊಂಡಿದ್ದ. ಸರ್ಕಾರಿ ನೌಕರಿಯ ಕನಸು ಕಾಣದ ಆತ ದಿನವೂ ಪಂಚೆ ಉಟ್ಟುಕೊಂಡು, ತಲೆಗೆ ಟವಲ್ಲು ಸುತ್ತಿಕೊಂಡು ಅಪ್ಪನೊಡನೆ ಹೊಲದಲ್ಲಿ ಮಣ್ಣಿನ ಮಗನಾಗಿ ಬೆವರು ಸುರಿಸಿ ದುಡಿಯುತ್ತಿದ್ದ. ತಾನು ಕಲಿತ ಕೃಷಿ ಪದವಿಯ ಜ್ಞಾನವನ್ನು ಬಳಸಿಕೊಂಡು ಹೊಸ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದ.


ತಾತನ ಕಾಲದಿಂದಲೂ ತನ್ನಪ್ಪ ಬೆಳೆಯುತ್ತಿದ್ದ ನಾಟಿ ದ್ರಾಕ್ಷಿ ತೋಟದಲ್ಲಿ ಹೊಸ ತಳಿಯ ಬೀಜರಹಿತ ಕಪ್ಪು ದ್ರಾಕ್ಷಿ ಸಸಿಗಳನ್ನು ವಿನಯ ನಾಟಿ ಮಾಡಿದ. ಅವುಗಳ ಬುಡಕ್ಕೆ ಹನಿ ಹನಿಯಾಗಿ ನೀರು ತೊಟ್ಟಿಕ್ಕುವಂತೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ. ಹಾಗಾಗಿ ಬಹಳ ಬೇಗನೆ ದ್ರಾಕ್ಷಿ ಸಸಿಗಳು ಆಳೆತ್ತರಕ್ಕೆ ಬೆಳೆದುನಿಂತವು. ಮಾರುದ್ದ ಅಂತರದಲ್ಲಿ ಕಲ್ಲಿನ ಕಂಬಗಳನ್ನು ನೆಟ್ಟು ನಿರ್ಮಿಸಿದ್ದ ಚಪ್ಪರದ ತುಂಬ ಬಳ್ಳಿಯಾಗಿ ಹರಡಿಕೊಂಡವು. ಕೆಲ ತಿಂಗಳುಗಳು ಕಳೆಯುತ್ತಲೇ ದ್ರಾಕ್ಷಿ ಬಳ್ಳಿಗಳಲ್ಲಿ ಹೂವುಗಳು ಕಾಣಿಸಿಕೊಂಡವು. ಆ ಹೂವುಗಳನ್ನು ಕೀಟಗಳು ತಿನ್ನಬಾರದು, ತಿಂದರೆ ಇಳುವರಿ ಕಡಿಮೆಯಾದೀತೆಂದು ಮುಂಜಾಗ್ರತೆಯಿಂದ ವಿನಯ ಹದಿನೈದು ದಿನಕ್ಕೊಮ್ಮೆ ರಾಸಾಯನಿಕ ಕೀಟನಾಶಕವನ್ನು ಸಿಂಪಡಿಸತೊಡಗಿದ.

ದಿನಗಳೆದಂತೆ ಹೂವುಗಳು ಸಣ್ಣ ಸಣ್ಣ ಕಾಯಿಗಳಾದವು. ಎಲೆಗಳ ಕೆಳಗೆ ಬೊಗಸೆಯಷ್ಟು ದ್ರಾಕ್ಷಿ ಕಾಯಿಗಳ ಗೊಂಚಲು ಜೋತುಬಿದ್ದವು. ಆಗ ಊರಿನಲ್ಲಿದ್ದ ಎಲ್ಲ ರೈತರ ಕಣ್ಣುಗಳು ಅರಳಿದವು. ಪಟ್ಟಣದ ಹಾಸ್ಟೆಲ್ನಲ್ಲಿದ್ದು ಓದಿ, ಹಳ್ಳಿಗೆ ಮರಳಿದ ನಿಂಗಪ್ಪನ ಮಗ ಒಳ್ಳೆಯ ಫಸಲು ಬೆಳೆಯುತ್ತಿದ್ದಾನೆ. ಇದ್ದರೆ ಇಂತಹ ಮಗ ಇರಬೇಕು ಅಂತ ಅನೇಕರು ಹೊಗಳಿದರು.

ಆದರೆ ನಿಂಗಪ್ಪನ ಹೊಲದ ಅಕ್ಕಪಕ್ಕದ ದ್ಯಾವಪ್ಪ ಮತ್ತು ಸಂಗಪ್ಪ ಮಾತ್ರ ಹೊಗಳಿಕೆಯ ಮಾತುಗಳನ್ನು ಕೇಳಿ ಹೊಟ್ಟೆಕಿಚ್ಚುಪಟ್ಟರು. ಹೇಗಾದರೂ ಮಾಡಿ ದ್ರಾಕ್ಷಿ ತೋಟವನ್ನು ನಾಶಪಡಿಸಬೇಕೆನ್ನುವ ಕೆಟ್ಟ ಯೋಚನೆ ಅವರಿಬ್ಬರಲ್ಲಿ ಮೂಡಿತು. ಒಂದು ದಿನ ರಾತ್ರಿ ಇಬ್ಬರೂ ತಮ್ಮ ನೂರಾರು ಕುರಿಗಳನ್ನು ನಿಂಗಪ್ಪನ ತೋಟದೊಳಕ್ಕೆ ನುಗ್ಗಿಸಿಬಿಟ್ಟು ತೆಪ್ಪಗೆ ನಿದ್ದೆ ಹೋದರು.

ಬೆಳಗಾಯಿತು. ದ್ಯಾವಪ್ಪ ಮತ್ತು ಸಂಗಪ್ಪನ ಕೆಟ್ಟ ಯೋಚನೆ ಅವರಿಗೇ ತಿರುಮಂತ್ರವಾಗಿತ್ತು. ಹಿಂದಿನ ದಿನ ಸಂಜೆ ವಿನಯ ದ್ರಾಕ್ಷಿ ತೋಟಕ್ಕೆ ಕೀಟನಾಶಕವನ್ನು ಸಿಂಪಡಿಸಿದ್ದ. ಕುರಿಗಳು ಕೀಟನಾಶಕ ಅಂಟಿದ ಒಂದಿಷ್ಟು ದ್ರಾಕ್ಷಿ ಬಳ್ಳಿಯನ್ನು ತಿನ್ನುತ್ತಲೇ ಎಚ್ಚರ ತಪ್ಪಿ, ಹೊಟ್ಟೆ ಉಬ್ಬಿಕೊಂಡು ಅರೆಜೀವವಾಗಿ ಬಿದ್ದಿದ್ದವು. ಅವುಗಳನ್ನು ನೋಡಿದ ದ್ಯಾವಪ್ಪ ಮತ್ತು ಸಂಗಪ್ಪ ಇಬ್ಬರೂ ಎದೆಬಡಿದುಕೊಂಡು ಅಳತೊಡಗಿದರು. ‘ಜೀವನಕ್ಕೆ ಆಧಾರವಾಗಿರುವ ಕುರಿಗಳು ಸಾಯುತ್ತಿವೆ. ಯಾರಾದರೂ ಕಾಪಾಡಿ’ ಎಂದು ಗೋಳಾಡತೊಡಗಿದರು.

ಆಗ ತೋಟದ ಸುತ್ತಮುತ್ತಲಿನ ರೈತರೆಲ್ಲರೂ ಓಡೋಡಿ ಬಂದರು. ಕಷ್ಟಪಟ್ಟು ಬೆಳೆದ ನಿಂಗಪ್ಪನ ದ್ರಾಕ್ಷಿ ತೋಟವನ್ನು ನಾಶಪಡಿಸಲು ರಾತ್ರೋರಾತ್ರಿ ಕುರಿಗಳನ್ನು ತೋಟದೊಳಗೆ ಬಿಟ್ಟಿದ್ದೂ ಅಲ್ಲದೆ, ತಮ್ಮ ಕುರಿಗಳನ್ನು ಕಾಪಾಡಿ ಎನ್ನುತ್ತಿದ್ದಾರೆ ಇವರನ್ನು ಸುಮ್ಮನೆ ಬಿಡಬಾರದು, ಪೊಲೀಸರಿಗೆ ದೂರು ಕೊಟ್ಟು, ಇವರಿಬ್ಬರನ್ನು ಜೈಲಿಗೆ ಕಳುಹಿಸಬೇಕು. ಸುಮ್ಮನಿದ್ದರೆ ಇವರಿಬ್ಬರೂ ಪಾಠ ಕಲಿಯುವುದಿಲ್ಲವೆಂದು ನಿರ್ಧರಿಸಿದರು.

ಆ ಕೂಡಲೇ ಅಪ್ಪನೊಂದಿಗೆ ಹೊಲದತ್ತ ಧಾವಿಸಿಬಂದ ವಿನಯ, ‘ಆಗಿದ್ದು ಆಗಿ ಹೋಯಿತು. ಈಗ ಅರೆಜೀವವಾಗಿ ಬಿದ್ದಿರುವ ಮೂಕಪ್ರಾಣಿಗಳಾದ ಕುರಿಗಳನ್ನು ಬದುಕಿಸೋಣ ಬನ್ನಿ, ಎಲ್ಲರೂ ಕುರಿಗಳನ್ನು ಒಂದೊಂದಾಗಿ ಎತ್ತಿಕೊಂಡು ಬನ್ನಿ…’ ಎಂದು ಹೇಳಿದವನೇ ಕುರಿಯೊಂದನ್ನು ಎತ್ತಿಕೊಂಡು ತೋಟದ ಬದುವಿನ ಮೇಲೆ ಹೋಗಿ ಕುಳಿತ. ಅದೇ ಬದುವಿನ ಮೇಲೆ ಬೆಳೆದಿದ್ದ ಒಂದೆರಡು ಜಾತಿಯ ಗಿಡದ ಸೊಪ್ಪನ್ನು ಕಿತ್ತುಕೊಂಡ. ಅಗಲವಾದ ಕಲ್ಲಿನ ಮೇಲೆ ಹಾಕಿ ಕುಟ್ಟಿ ಅರೆದು, ಅಗತ್ಯವಾದ ಔಷಧಿಯನ್ನು ತಯಾರಿಸಿದ. ಆ ಔಷಧಿಯನ್ನು ಕುರಿಗಳಿಗೆ ಕುಡಿಸಿದ. ಸ್ವಲ್ಪ ಸಮಯದ ಬಳಿಕ ಎಲ್ಲ ಕುರಿಗಳು ತಲೆಕೊಡವಿಕೊಂಡು ಎದ್ದು ನಿಂತವು. ‘ಬ್ಯಾ.. ಬ್ಯಾ…’ ಅಂತ ಅರಚತೊಡಗಿದವು.

ನಿಂಗಪ್ಪ ಮತ್ತು ಆತನ ಮಗ ವಿನಯನ ಶ್ರಮದ ಫಲವನ್ನು ನೋಡಲಾಗದೆ ಹೊಟ್ಟೆಕಿಚ್ಚುಪಟ್ಟು ನಾಶಪಡಿಸಲು ಹೋಗಿ ತಾವೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಕ್ಕೆ ದ್ಯಾವಪ್ಪ ಮತ್ತು ಸಂಗಪ್ಪ ಪಶ್ಚಾತ್ತಾಪಪಟ್ಟರು. ಸಕಾಲಕ್ಕೆ ತಮ್ಮ ಕುರಿಗಳಿಗೆಲ್ಲ ಔಷಧಿಯುಣಿಸಿ ಕಾಪಾಡಿದ್ದಕ್ಕೆ ಇಬ್ಬರೂ ವಿನಯನ ಕಾಲಿಗೆ ಎರಗಿದರು. ಕೂಡಲೇ ವಿನಯ ಅವರ ಭುಜಗಳನ್ನು ಹಿಡಿದು ಮೇಲಕ್ಕೆ ಎತ್ತಿದ. ಪಶ್ಚಾತ್ತಾಪ ತುಂಬಿದ ಅವರಿಬ್ಬರ ಕಣ್ಣಂಚಿನಲ್ಲಿ ಹನಿಗಳು ಉದುರಿದವು.

ಆಧಾರ : ಹ.ಸ.ಬ್ಯಾಕೋಡ
ಸಂಗ್ರಹ: ವೀರೇಶ್ ಅರಸಿಕೆರೆ.

ಶಿಕ್ಷೆಯೆಂದರೆ ಜೀವನ ಪರಿವರ್ತನೆ

 ಈ ಪ್ರಪಂಚದಲ್ಲಿ ಅನೇಕ ಜನರು ತಪ್ಪು ಮಾಡಿದಾಗ ಶಿಕ್ಷೆಗೆ ಒಳಗಾಗುವುದುಂಟು. ಶಿಕ್ಷೆಯ ಉದ್ದೇಶ-ಶಿಕ್ಷ ಣವೇ ಆಗಿದೆ. ಒಮ್ಮೆ ತಪ್ಪು ಮಾಡಿದವನು ಮುಂದಕ್ಕೆಂದೂ ಅಂತಹ ತಪ್ಪು ಮಾಡದಿರುವಂತಹ ಶಿಕ್ಷ ಣ ನೀಡುವುದಕ್ಕಾಗಿ ನಮ್ಮ ಆಡಳಿತ ವ್ಯವಸ್ಥೆಯಲ್ಲಿ


ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗಳಿವೆ. ಇದರಿಂದ ನಮ್ಮ ಸಮಾಜವನ್ನು, ಜನಜೀವನವನ್ನು ಸರಿ ಮಾರ್ಗದಲ್ಲಿ ಮುನ್ನಡೆಸುವಂತಹ ಕೆಲಸ ಸಾಧ್ಯ. ಈ ಬಗೆಯ ನ್ಯಾಯಾಂಗ ಮಹತ್ವವನ್ನು ನಿರೂಪಿಸುವ ಒಂದು ಪ್ರಸಂಗ ಇಲ್ಲಿದೆ.

ಚೀನಾ ದೇಶದಲ್ಲಿ ಒಬ್ಬ ಚಿಂತಕರ ಪ್ರಸಿದ್ಧಿಯನ್ನು ಕೇಳಿ ಅಲ್ಲಿಯ ಅರಸನು ಅವರನ್ನು ತನ್ನ ರಾಜ್ಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದನು. ಈ ನ್ಯಾಯಾಧೀಶರು ಸೂಕ್ತ ನ್ಯಾಯ ತೀರ್ಪುಗಳಿಂದಾಗಿ ಬಹು ವಿಖ್ಯಾತರಾದರು. ಅಲ್ಲಿಯ ರಾಜಧಾನಿಯಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯ ಬಳಿ ಸಾಕಷ್ಟು ಸಂಪತ್ತು ಇತ್ತು. ಇದೆಲ್ಲವೂ ಬಡ ಜನರ ಶೋಷಣೆಯಿಂದ ಸಂಗ್ರಹಿಸಿದ್ದು, ಅದರ ರಕ್ಷ ಣೆಗಾಗಿ ಬಲಿಷ್ಠ ರಕ್ಷ ಕರನ್ನೂ ನೇಮಿಸಿಕೊಂಡಿದ್ದ. ಹಾಗಿದ್ದರೂ ಒಮ್ಮೆ ಕಳ್ಳತನ ನಡೆದೇ ಬಿಟ್ಟಿತು ಹಾಗೂ ಕಳ್ಳನನ್ನು ಬಂಧಿಸಲಾಯಿತು.

ಈ ಕಳ್ಳನನ್ನು ಸುಪ್ರಸಿದ್ಧ ನ್ಯಾಯಾಧೀಶರೆದುರು ಹಾಜರುಪಡಿಸಿದಾಗ ಆತನು ತನ್ನ ಕಳ್ಳತನದ ಅಪರಾಧವನ್ನು ಒಪ್ಪಿಕೊಂಡದ್ದಲ್ಲದೆ, ಈ ಹಿಂದೆ ಮಾಡಿದ್ದ ಕಳ್ಳತನಗಳನ್ನೂ ಒಪ್ಪಿಕೊಂಡನು. ಆ ಕಳ್ಳನಿಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದ ನ್ಯಾಯಾಧೀಶರು ಶ್ರೀಮಂತ ವ್ಯಾಪಾರಿಯನ್ನು ಕರೆಸಿ, ಆತನು ಧನ ಸಂಗ್ರಹ ಮಾಡಿದ ವಿಧಾನದ ಬಗ್ಗೆ ಪ್ರಶ್ನಿಸತೊಡಗಿದರು. ಆದರೆ ತನ್ನ ಗುಟ್ಟು ಬಿಡಲೊಪ್ಪದ ಆ ವ್ಯಾಪಾರಿ 'ಎಲ್ಲವೂ ನನ್ನ ವ್ಯಾಪಾರದ ಫಲವಾಗಿದೆ' ಎಂದು ವಾದಿಸಿದನು. ಬಡವರ ಶೋಷಣೆಯ ತಪ್ಪನ್ನು ಒಪ್ಪಿಕೊಳ್ಳಲೇ ಇಲ್ಲ.

ನ್ಯಾಯಾಧೀಶರು ವ್ಯಾಪಾರಿಗೆ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದರು. ಸಿಟ್ಟುಗೊಂಡ ವ್ಯಾಪಾರಿ ಪ್ರಶ್ನಿಸಿದ- 'ನೀವು ಕಳ್ಳನಿಗೆ ಒಂದು ವರ್ಷ ಶಿಕ್ಷೆ ವಿಧಿಸಿದರೆ, ನನಗೇಕೆ ಎರಡು ವರ್ಷ ವಿಧಿಸುತ್ತೀರಿ?'. ನ್ಯಾಯಾಧೀಶರು ಸಮಾಧಾನದಿಂದ ಉತ್ತರಿಸಿದರು- 'ಆ ಕಳ್ಳನು ತಪ್ಪನ್ನು ಒಪ್ಪಿಕೊಂಡನು. ಆದ್ದರಿಂದ ಅವನಲ್ಲಿ ಹೃದಯ ಪರಿವರ್ತನೆ ಸಾಧ್ಯತೆ ಇದೆ. ಆದರೆ ನೀವು ಒಪ್ಪಿಕೊಳ್ಳಲೇ ಇಲ್ಲ. ಆದ್ದರಿಂದ ಈ ಶಿಕ್ಷೆಯಿಂದ ನಿಮಗಾವ ಶಿಕ್ಷ ಣವೂ ಸಿಗಲಾರದು' ಎಂದಾಗ ವ್ಯಾಪಾರಿ ತಲೆ ತಗ್ಗಿಸಿದ.

ಈ ಪ್ರಪಂಚದಲ್ಲಿ ಮಾನವನು ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಪಡೆಯುವ ಶಿಕ್ಷ ಣಕ್ಕಿಂತ ಬದುಕೆಂಬ ವಿದ್ಯಾಲಯದಲ್ಲಿ ಪಡೆಯುವ ಶಿಕ್ಷ ಣವು ಹೆಚ್ಚು ಮೌಲ್ಯಯುತವಾದುದೇ ಆಗಿದೆ. ಕಾನೂನು ಕಟ್ಟಳೆ, ರೀತಿ-ರಿವಾಜು, ನೀತಿ- ನಿಯಮಗಳನ್ನು ಮೀರಿದವರಿಗೆ ಸರಕಾರ ಇಲ್ಲವೇ ಸಮಾಜವು ನೀಡುವ ಶಿಕ್ಷೆಯೆಂದರೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು, ಭವಿಷ್ಯದಲ್ಲೆಂದೂ ಅಂತಹ ತಪ್ಪು ಮಾಡದೆ ಸಭ್ಯ ನಾಗರಿಕರಾಗಿ ಬದುಕೆಂಬ ಪ್ರೇರಣೆ ನೀಡುವ ಹಾಗ
ಪರಿವರ್ತನೆ ಮಾಡುವ ಉಜ್ವಲ ಶಿಕ್ಷ ಣವೇ ಆಗಿದೆ. ಇಂತಹ ವ್ಯಕ್ತಿತ್ವ ಪರಿವರ್ತನೆಯ ಬಗ್ಗೆ ಅಭಿಮಾನ ಪಡಬೇಕಾಗಿದೆ.

ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆ, ಸಂಗ್ರಹ: ವೀರೇಶ್ ಅರಸಿಕೆರೆ.‌