Saturday, February 1, 2025

ಪ್ರನಾಳ ಶಿಶು ತಂತ್ರದ ಮೂಲಕ ಹೇಗೆ ಸಂತಾನೋತ್ಪತ್ತಿ ನಡೆಸುತ್ತಾರೆ?


ಪ್ರನಾಳ ಶಿಶು(Test Tube Baby) ತಂತ್ರ ತಿಳಿಯುವುದಕ್ಕೂ ಮೊದಲು ನೈಸರ್ಗಿಕ ಗರ್ಭಧಾರಣೆ ಪ್ರಕ್ರಿಯೆ ಮತ್ತು ಗರ್ಭಧಾರಣೆ ಪ್ರಕ್ರಿಯೆಯಲ್ಲಿ ಬರಬಹುದಾದ ದೋಷಗಳ ಬಗೆಗೆ ಸಂಕ್ಷಿಪ್ತ ವಿವರಣೆ ಕೊಟ್ಟು ಮುಂದುವರೆಯುತ್ತೇನೆ. ಸ್ತ್ರೀಯ ಮಾಸಿಕ ಧರ್ಮವನ್ನನುಸರಿಸಿ ಮುಟ್ಟಾದ 12–16ನೇ ದಿನಗಳ ಮಧ್ಯೆ ಸ್ತ್ರೀಯ ಎರಡು ಅಂಡಕೋಶಗಳೊಳಗೊಂದರಿಂದ(Overies) ಒಂದು ಅಂಡಾಣು ಬಿಡುಗಡೆಯಾಗುತ್ತದೆ. ಗರ್ಭಾಶಯದ ಎರಡು ಕೈಗಳಂತಿರುವ ಫ್ಯಾಲೋಪಿಯನ್ನ ನಳಿಕೆಗಳಲ್ಲೊಂದು ಹೀರುಕೊಳವೆಯಂತೆ ಅಂಡಾಣುವನ್ನು ಹಿಡಿದು ಗರ್ಭಾಶಯದ ಒಳಭಾಗದೆಡೆಗೆ ತಳ್ಳುತ್ತವೆ. ಅದೇ ಸಂದರ್ಭದಲ್ಲಿ ಸಂಭೋಗದಿಂದ ಸ್ತ್ರೀಯ ಯೋನಿಯಲ್ಲಿ ವೀರ್ಯ ಸ್ಖಲನವಾದಾಗ, ಪುರುಷ ವೀರ್ಯದಲ್ಲಿರುವ ಕೋಟ್ಯಾಂತರ ಶುಕ್ರಾಣುಗಳು ಶಾಖಾನ್ವೇಷಿ ಕ್ಷಿಪಣಿಗಳ (Heatseeking missile) ತರದಲ್ಲಿ ಗರ್ಭಾಶಯದ ಆಂತರ್ಯಕ್ಕೆ ಈಜಲಾರಂಭಿಸುತ್ತವೆ. ಅಂಡಾಣು ಇರಬಹುದಾದ ನಳಿಕೆಯಲ್ಲಿ ಅಂಡಾಣುವನ್ನು ಮುಂದೆ ಸರಿಸುವ ಕೆಲಸ ಸಾಗುತ್ತಿರುತ್ತದೆಯಾದ್ದರಿಂದ ಅಲ್ಲಿ ಗರ್ಭಾಶಯದ ಆಂತರ್ಯಕ್ಕಿಂತ ಸ್ವಲ್ಪ ಹೆಚ್ಚು ಶಾಖೋತ್ಪತ್ತಿಯಿರುತ್ತದೆ. ಹೀಗಾಗಿ ಕಣ್ಗಳಿಲ್ಲದಿದ್ದರೂ ಶುಕ್ರಾಣುಗಳು ತಮ್ಮ ಶಾಖಾನ್ವೇಷಕ ಶಕ್ತಿಯಿಂದ ಅಂಡಾಣು ಇರುವ ನಳಿಕೆ ಹಾಗೂ ಕೊನೆಯಲ್ಲಿ ಅಂಡಾಣುವಿನ ಬಳಿಗೆ ಸಾರಿಹೋಗುತ್ತವೆ. ಸ್ಖಲಿತ ವೀರ್ಯದಲ್ಲಿದ್ದ ಕೋಟ್ಯಾಂತರ ಶುಕ್ರಾಣುಗಳ ಪೈಕಿ ಕೇವಲ ಕೆಲವು ಸಾವಿರ ಶುಕ್ರಾಣುಗಳು ಮಾತ್ರ ಅಂಡಾಣುವಿನವರೆಗೆ ತಲುಪುತ್ತವೆ. ನಂತರ ಎಲ್ಲಾ ದಿಕ್ಕುಗಳಿಂದ ಅಂಡಾಣುವನ್ನು ಮುತ್ತಿಗೆ ಹಾಕಿ ಕವಚವನ್ನು ಭೇದಿಸಿ ಒಳಹೋಗಲು ಪ್ರಯತ್ನ ಪಡುತ್ತವೆ. ಸಾವಿರಾರು ಶುಕ್ರಾಣುಗಳ ಪೈಕಿ ಒಂದು ಆ ಪ್ರಯತ್ನದಲ್ಲಿ ಯಶಗೊಂಡು ಅಂಡಾಣು ಫಲಿತವಾಗಿ ಕೋಶ ವಿಭಜನೆ ಪ್ರಕ್ರಿಯೆ ಆರಂಭವಾಗಿ ಕೋಶವು ಒಂದರಿಂದ ಎರಡು, ಎರಡರಿಂದ ನಾಲ್ಕು, ನಾಲ್ಕರಿಂದ ಎಂಟು ಈ ರೀತಿಯಲ್ಲಿ ವಿಭಜನೆಯಾಗುತ್ತಾ ಸುಮಾರು128–256 ಕೋಶಿಕೆಗಳನ್ನು ತಲುಪಿದಾಗ, ಕವಚವನ್ನು ಒಡೆದುಕೊಂಡು ಹೊರಬಂದು ಗರ್ಭಾಶಯದ ಮೃದು ಪದರದ ಮೇಲೆ ಕೂತು ಬೇರುಬಿಟ್ಟು ಮುಂದಿನ ಒಂಭತ್ತು ತಿಂಗಳು ಅಲ್ಲಿಯೇ ಬೆಳೆಯುತ್ತಾ ಸಕಲ ಅಂಗಾಂಗಳನ್ನು ರೂಪಿಸಿಕೊಂಡು ಪ್ರಸವವಾದಾಗ ಪುಟ್ಟ ಮಗುವಾಗಿ ಹೊರಬರುತ್ತದೆ.

ಸುಮಾರು15–20% ದಂಪತಿಗಳಿಗೆ ನೈಸರ್ಗಿಕ ಗರ್ಭಧಾರಣೆ ಆಗದಿರುವ ಸಾದ್ಯತೆಗಳಿರುತ್ತವೆ. ಯಾವ ದಂಪತಿಗಳು ಏನೊಂದೂ ರೀತಿಯ ಗರ್ಭನಿರೋಧಕಗಳನ್ನು ಬಳಸದೇ 1–1.5 ವರ್ಷಗಳಷ್ಟು ಕಾಲ ಸಫಲ ದಾಂಪತ್ಯ ಜೀವನ ನಡೆಸಿಯೂ ಗರ್ಭಧಾರಣೆ ಆಗದಿದ್ದ ಪಕ್ಷದಲ್ಲಿ ವೈದ್ಯಕೀಯ ಸಹಾಯ ಪಡೆಯುವ ಅವಶ್ಯಕತೆ ಬರುತ್ತದೆ.

ನೈಸರ್ಗಿಕ ಗರ್ಭಧಾರಣೆಯಾಗದಿರುವುದಕ್ಕೆ 4–6 ಕಾರಣಗಳು ಮುಖ್ಯವಾಗಿರುತ್ತವೆ. ಅವೆಂದರೆ:

1. ಶರೀರ ರಚನಾದೋಷಗಳು(ಕೆಲವನ್ನು ಶಸ್ತ್ರಕ್ರಿಯೆಯಿಂದ ಸರಿಪಡಿಸಬಹುದು)

2. ಹಾರ್ಮೋನುಗಳ ವೈಪರೀತ್ಯ(ಕೆಲವೊಮ್ಮೆ ಔಷಧೋಪಚಾರದಿಂದ ಸರಿ ಹೋಗಬಹುದು)

3. ಫ್ಯಾಲೋಪಿಯನ್ ನಳಿಕೆಗಳು ಮುಚ್ಚಿ ಹೋಗಿರಬಹುದು

4. ಶುಕ್ರಾಣುಗಳ ಸಂಖ್ಯೆ, ಕ್ಷಮತೆ ಮತ್ತು ವಿಕೃತರೂಪ

5. ಶುಕ್ರಾಣುಗಳ ತಯಾರಿಕೆ ಮತ್ತು ಸ್ಖಲನ ದೋಷಗಳು

6. ಅಂಡಾಶಯದಲ್ಲಿ ಸಮಸ್ಯೆಗಳು ಅಥವಾ ಅಕಾಲಿಕ ರಜೋನಿವೃತ್ತಿ

ಕೆಲವು ದಂಪತಿಗಳಲ್ಲಿ ಯಾವುದಾದರೂ ಒಂದು ಅಥವಾ ಎರಡರಿಂದ ಮೂರು ದೋಷಗಳು ಒಟ್ಟಿಗೇ ಇರಬಹುದು.

ವೈದ್ಯಕೀಯ ಉಪಚಾರ ಹಾಗೂ ಶಸ್ತ್ರಕ್ರಿಯೆಯ ಸಹಾಯದಿಂದ ಸುಮಾರು 50% ಸಂತಾನಹೀನ ದಂಪತಿಗಳಿಗೆ, ಉಪಚಾರ ಆರಂಭಿಸಿದ ವರ್ಷದೊಳಗೆ ಗರ್ಭಧಾರಣೆ ಅಥವಾ ಸಂತಾನಪ್ರಾಪ್ತಿಯಾಗುತ್ತದೆ. ಉಳಿದ 50% ದಂಪತಿಗಳಿಗೆ 1978ಕ್ಕಿಂತ ಮೊದಲು ದತ್ತು ತೆಗೆದುಕೊಳ್ಳುವುದೊಂದೇ ಮಾರ್ಗ ಉಳಿದಿತ್ತು. 1978ರಲ್ಲಿ ಮೊದಲ ಬಾರಿಗೆ ಸ್ತ್ರೀಯ ದೇಹದ ಹೊರಗೆ ಅಂಡಾಣು(Oocyte) ಮತ್ತು ಶುಕ್ರಾಣುಗಳ(Sperms) ಮಿಲನವನ್ನು ವಿಶೇಷ ಪ್ರಯೋಗಾಲಯದಲ್ಲಿ ಗಾಜಿನ ತಟ್ಟೆಯೊಂದರಲ್ಲಿ ಸಾಧಿಸಿ, ಆ ಮೂಲಕ ಫಲಿತವಾದ ಯುಗ್ಮಜ(zygote)ವನ್ನು ವಿಶೇಷವಾಗಿ ಸಿದ್ಧಪಡಿಸಿದ ದ್ರಾವಕದಲ್ಲಿ ಮೂರು ದಿನ ಬೆಳೆಸಿ ಅದು ಸುಮಾರು 8 ಕೋಶಗಳ (ಮೂರನೆಯ ದಿನ) ಭ್ರೂಣ(Embryo)ವಾದಾಗ ಒಂದು ವಿಶೇಷ ನಳಿಕೆಯ ಸಹಾಯದಿಂದ ಭ್ರೂಣವನ್ನು ಸ್ತ್ರೀಯ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ರೀತಿ ಫ್ಯಾಲೋಪಿಯನ್ ನಳಿಕೆಯಲ್ಲಿ(Fallopian Tube) ನಡೆಯುವ ಪ್ರಕ್ರಿಯೆಯನ್ನೇ ಪ್ರಯೋಗಾಲಯದಲ್ಲಿ ಮಾಡುವ ಸಂಪೂರ್ಣ ತಂತ್ರವನ್ನು ಪ್ರನಾಳ ಶಿಶು ತಂತ್ರಜ್ಞಾನ ಎಂದು ಕರೆಯಲಾಗುತ್ತದೆ.

ಮೊದಲಿಗೆ ನೈಸರ್ಗಿಕ ಮಾಸಿಕ ಧರ್ಮದಲ್ಲಿ ಬೆಳೆಯುತ್ತಿದ್ದ ಅಂಡಾಣುವೊಂದನ್ನೇ ಉಪಯೋಗಿಸಲಾಗುತ್ತಿತ್ತು. ಸ್ತ್ರೀಯ ದೇಹದಿಂದ ತಿಂಗಳೊಂದರಲ್ಲಿ ಸಾಮಾನ್ಯವಾಗಿ ಒಂದು ಅತಿ ವಿರಳವಾಗಿ ಸುಮಾರು 1/1000 ಸ್ತ್ರೀಯರಲ್ಲೊಬ್ಬರಿಗೆ 2 ಅಂಡಾಣುಗಳು ಬಿಡುಗಡೆಯಾಗುತ್ತದೆ. ಇದರಿಂದ ಯಶಸ್ಸಿನ ಪ್ರಮಾಣ ಸೀಮಿತವಾಗಿರುತ್ತಿತ್ತು.

ಈ ದಿನಗಳಲ್ಲಿ ಸ್ತ್ರೀಗೆ ಹಾರ್ಮೋನುಗಳ ಚುಚ್ಚುಮದ್ದುಗಳನ್ನು ಕೊಟ್ಟು 8–12 ಅಂಡಾಣುಗಳು ಒಟ್ಟಿಗೆ ಬೆಳೆಯುವಂತೆ ಮಾಡಿ, ಅಲ್ಟ್ರಾ ಸೌಂಡ್ ಉಪಯೋಗಿಸಿ ಒಂದು ಚಿಕ್ಕ ಶಸ್ತ್ರಕ್ರಿಯೆಯ ಮೂಲಕ ಅಂಡಾಶಯಗಳಿಂದ ಬಿಡುಗಡೆಯಾಗುವ ಮುನ್ನವೇ ಅಂಡಾಣುಗಳನ್ನು ಒಳಗೊಂಡ ಅಂಡಾಶಯದ ನೀರನ್ನು ಹೊರತೆಗೆಯಲಾಗುತ್ತದೆ. ನಂತರ ಪ್ರಯೋಗಾಲಯದಲ್ಲಿ ಸೂಕ್ಷ್ಮ ದರ್ಶಕದಡಿ ಈ ನೀರಿನಿಂದ ಅಂಡಾಣುಗಳನ್ನು ಬೇರೆ ಮಾಡಿ ವಿಶೇಷ ದ್ರಾವಕದಲ್ಲಿ ಕಾಪಿಡಲಾಗುತ್ತದೆ. ಆಮೇಲೆ ಸ್ತ್ರೀಯ ಪತಿಯಿಂದ (ಹಸ್ತ ಮೈಥುನ) ಪಡೆದ ವೀರ್ಯವನ್ನು ಸಂಸ್ಕರಿಸಿ ಅದರಲ್ಲಿನ ಉತ್ತಮ ಕ್ಷಮತೆಯುಳ್ಳ ಶುಕ್ರಾಣುಗಳನ್ನಷ್ಟೇ ಬೇರೆ ಮಾಡಿ ಸುಮಾರು ಒಂದು ಅಂಡಾಣುವಿಗೆ 5,000-10,000 ಶುಕ್ರಾಣುಗಳ ಪ್ರಮಾಣದಲ್ಲಿ ಅಂಡಾಣುವಿನ ಜೊತೆ ಬಿಡಲಾಗುತ್ತದೆ. ನಂತರ ಫಲಿತವಾದ ಯುಗ್ಮಜಗಳನ್ನು ಆವಾಗಾವಾಗ ಪರಿಶೀಲಿಸುತ್ತಾ ಅವುಗಳ ಬೆಳವಣಿಗೆಯನ್ನು ಗುರುತು ಹಾಕಿಕೊಳ್ಳುತ್ತಾ ಬರುತ್ತಾರೆ. ಭ್ರೂಣಗಳಲ್ಲಿ ಸರಿ ಪ್ರಮಾಣದಲ್ಲಿ ಬೆಳೆಯುತ್ತಿರುವ 2–3 ಭ್ರೂಣಗಳನ್ನು ಒಂದು ವಿಶೇಷ ನಳಿಕೆ (Embryo Transfer Catheter) ಮೂಲಕ ಸ್ತ್ರೀಯ ಗರ್ಭಾಶಯಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಹಾಗೆ ವರ್ಗಾಯಿಸಲಾದ 2–3ರ ಪೈಕಿ ಒಂದಾದರೂ ಗರ್ಭಾಶಯದಲ್ಲಿ ನಾಟುಕೊಂಡು 9 ತಿಂಗಳು ಸರಿಯಾಗಿ ಬೆಳೆದು ಮಗುವಿನ ಜನನವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಈ ತಂತ್ರಜ್ಞಾನದಿಂದ ಸುಮಾರು 30–50% (ವೈದ್ಯಕೀಯೋಪಚಾರದಿಂದ ಗರ್ಭಧಾರಣೆಯಾಗದೇ ಉಳಿದಿದ್ದ 50% ದಂಪತಿಗಳ ಪೈಕಿ) ದಂಪತಿಗಳಿಗೆ ಸಂತಾನಭಾಗ್ಯ ದೊರಕುತ್ತದೆ.

ಕೆಲವು ದಂಪತಿಗಳಲ್ಲಿ ಶುಕ್ರಾಣುಗಳ ಸಂಖ್ಯೆ, ಮುನ್ನುಗ್ಗುವ (ಈಜುವ) ಕ್ಷಮತೆ ಅತೀ ಕಡಿಮೆ ಇದ್ದು ಇದರೊಟ್ಟಿಗೆ ರೂಪವಿಕಾರಗಳು ಅತೀ ಹೆಚ್ಚಿರಬಹುದು. ಇನ್ನೂ ಕೆಲವು ಪುರುಷರ ವೀರ್ಯದಲ್ಲಿ ಶುಕ್ರಾಣುಗಳೇ ಇರುವುದಿಲ್ಲ. ಆದರೆ ವೃಷಣದಲ್ಲಿ(Testicles) ವೀರ್ಯೋತ್ಪತ್ತಿ ಸರಿಯಾಗಿರುತ್ತದೆ. ಈ ರೀತಿಯ ಸಂದರ್ಭಗಳಲ್ಲಿ ಮೇಲೆ ತಿಳಿಸಲ್ಪಟ್ಟ ಪ್ರನಾಳ ಶಿಶು ತಂತ್ರ ಪರಿಣಾಮಕಾರಿಯಾಗುವುದಿಲ್ಲ. ಏಕೆಂದರೆ, ಅಲ್ಲಿ ಶುಕ್ರಾಣುಗಳು ಸ್ವಕ್ಷಮತೆಯಿಂದಲೇ ಅಂಡಾಣುವನ್ನು ಫಲಿಸಬೇಕು. ಇಂತಹ ಸಂದರ್ಭಗಳಲ್ಲಿ ಅತೀಸೂಕ್ಷ ಗಾಜಿನ ಸೂಜಿಯೊಂದರ ಸಹಾಯದಿಂದ ಸೂಕ್ಷದರ್ಶಕದಡಿಯಲ್ಲಿ ಲಭ್ಯವಿರುವ ಶುಕ್ರಾಣುಗಳಲ್ಲಿಯೇ ಉತ್ತಮವಾಗಿರುವ ಶುಕ್ರಾಣುವೊಂದನ್ನು ಆಯ್ದು ಅದೇ ಗಾಜಿನ ಸೂಜಿಯ ಸಹಾಯದಿಂದ ಒಂದು ಅಂಡಾಣುವಿನೊಳಗೆ ಒಂದು ಶುಕ್ರಾಣುವಿನಂತೆ ಚುಚ್ಚಿ ಸೇರಿಸಲಾಗುತ್ತದೆ. ಈ ಪ್ರಕ್ರಿಯೆಯು ಪ್ರನಾಳ ಶಿಶು ತಂತ್ರದ ಒಂದು ಒಳತಂತ್ರವಷ್ಟೇ. ಇದನ್ನು Intra cytoplasmic Sperm Injection (ICSI) ಎಂದು ಕರೆಯಲಾಗುತ್ತದೆ. ಈ ಪ್ರಕ್ರಿಯೆಯ ನೆರವು ಸುಮಾರು 20–30% ಸಂತಾನವಿಹೀನ ದಂಪತಿಗಳಿಗೆ ಬೇಕಾಗಬಹುದು.

ಇತ್ತೀಚೆಗೆ, ರೂಪವಿಕಾರಗಳುಳ್ಳ ಶುಕ್ರಾಣುಗಳನ್ನು ಅಭ್ಯಸಿಸಿ ಕೆಲವು ಸುರೂಪಿ ಶುಕ್ರಾಣುಗಳನ್ನು ಆಯಲು ಡಿಜಿಟಲ್ ಇಮೇಜಿಂಗ್ ಉಪಯೋಗಿಸುತ್ತೇವೆ. ಡಿಜಿಟಲ್ ಕ್ಯಾಮೆರಾವನ್ನು ಸೂಕ್ಷದರ್ಶಕಕ್ಕೆ ಅಳವಡಿಸಿ ಶುಕ್ರಾಣುಗಳ ನೈಜ ಚಿತ್ರ ಮಾನಿಟರ್ಮೇಲೆ ಬರುತ್ತಿರುವಾಗ ಕೇವಲ ಮಾನಿಟರ್ಮೇಲೆ ಅದನ್ನು ದೊಡ್ಡದಾಗಿಸಿ (Digital Zoom) ಇನ್ನೂ ಹೆಚ್ಚಿನ ರೆಸೊಲ್ಯೂಷನ್ನಲ್ಲಿ ನೋಡಿ ಒಬ್ಬರಲ್ಲದೇ ಇಬ್ಬರು ವಿಶೇಷಜ್ಞರು ಒಪ್ಪಿದ ಶುಕ್ರಾಣುವನ್ನು ICSI ಪ್ರಕ್ರಿಯೆಯಲ್ಲಿ ಉಪಯೋಗಿಸುವುದು. ಇದಕ್ಕೆ Intra cytoplasmic Mirphologically selected Sperm Injection (IMSI) ಅಥವಾ Motile Sperm Organelle Morphology Examination (MSOME) ಎಂದು ಹೆಸರು

ಮೇಲೆ ತಿಳಿಸಿದಂತೆ ಸಾಮಾನ್ಯವಾಗಿ 2–3 ದಿನ ದೇಹದ ಹೊರಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ಈಗೀಗ ದ್ರಾವಕದಲ್ಲಿ ಪ್ರೋಟೀನ್, ವಿಟಾಮಿನ್, ಉತ್ಪ್ರೇಷಕಗಳನ್ನು ಬಳಸಿ 5–6 ದಿನಗಳವರೆಗೂ ಪ್ರಯೋಗಾಲಯದಲ್ಲಿ ಬೆಳೆಸುತ್ತೇವೆ. ಹೀಗೆ ಹೆಚ್ಚುವರಿಯಾಗಿ ಬೆಳೆಸಿದರೆ 128–250 ಕೋಶಗಳುಳ್ಳ ಭ್ರೂಣ ತಯಾರಾಗುವುದನ್ನು ನೋಡಬಹುದು. ಇದನ್ನು ಬ್ಲಾಸ್ಟೋಸಿಸ್ಟ್(Blastocyst) ಕೃಷಿ(culture) ಎಂದು ಕರೆಯಲಾಗುವುದು. ಇಂತಹ ಸಂದರ್ಭಗಳಲ್ಲಿ 2–3 ನೇ ದಿನಕ್ಕೆ ಬದಲಾಗಿ 5–6ನೇ ದಿನದಂದು ಬ್ಲಾಸ್ಟೋಸಿಸ್ಟ್ ನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುವುದು. ಬ್ಲಾಸ್ಟೋಸಿಸ್ಟ್ ನ್ನು ವರ್ಗಾಯಿಸಿದಾಗ ಗರ್ಭಧಾರಣೆಯಾಗುವ ಸಾಧ್ಯತೆ 50–60%ರಷ್ಟಿರುತ್ತದೆ.

ಕೆಲವೊಮ್ಮೆ (ಸಾಮಾನ್ಯವಾಗಿ ಪುನರಾವರ್ತಿತ ಪ್ರಕರಣಗಳಲ್ಲಿ) ಬ್ಲ್ಯಾಸ್ಟೋಸಿಸ್ಟ್ ಕೃಷಿಯನ್ನು ಸಫಲವಾಗಿ ಮಾಡಿ ಗರ್ಭಕ್ಕೆ ವರ್ಗಾವಣೆ ಮಾಡಿದ್ದರೂ ಕೃತಕ ಗರ್ಭದಾರಣೆ ಯಶಸ್ವಿಯಾಗದಿದ್ದ ಪಕ್ಷದಲ್ಲಿ ಒಂದು ಅನುಮಾನ ಉಳಿಯುತ್ತದೆ. ಬಹುಶಃ ಭ್ರೂಣವು ಕವಚವನ್ನು ಹರಿದುಕೊಂಡು ಹೊರಬಂದಿರಲಾರದೇನೋ ಎಂದು. ಅಂತಹ ದಂಪತಿಗಳು ಮತ್ತೊಮ್ಮೆ ಪ್ರಯತ್ನಕ್ಕೆ ಕೈ ಹಾಕಿದಾಗ ಲೇಸರ್ ನ ಶಾಖ ಬಳಸಿ ಸೂಕ್ಷ್ಮದರ್ಶಕದಡಿ ಕವಚದ ಅಲ್ಪ ಭಾಗವನ್ನು ಕತ್ತರಿಸಲಾಗುತ್ತದೆ. (ಸುಟ್ಟು ಆವಿಯಾಗಿಸಲಾಗುತ್ತದೆ) ಈ ಪ್ರಕ್ರಿಯೆಗೆ ಲೇಸರ್ ಸಹಕೃತ ಹ್ಯಾಚಿಂಗ್(Laser Assisted Hatching) ಎಂದು ಕರೆಯಲಾಗುತ್ತದೆ.

ಹೆಚ್ಚುವರಿ ಭ್ರೂಣಗಳನ್ನು (ಗರ್ಭಾಶಯಕ್ಕೆ ವರ್ಗಾವಣೆಯ ನಂತರ ಉಳಿದ) ಶೈತ್ಯಸಂರಕ್ಷಣೆ(Cryo Preservation) ಮಾಡಿಡಬಹುದು. ಈ ರೀತಿ ಒಮ್ಮೆ ತಯಾರಾದ ಭ್ರೂಣವನ್ನು ಅನಂತ ಕಾಲದವರೆಗೆ ದ್ರವೀಕೃತ ಸಾರಜನಕ (liquid nitrogen)ದಲ್ಲಿ ಕನಿಷ್ಠ ತಾಪಮಾನದಲ್ಲಿ ಶೇಖರಿಸಿಡಬಹುದು (ತಾಪಮಾನ-196 ಡಿಗ್ರಿ ಸೆಲ್ಸಷಿಯಸ್). ಬೇಕಾದಾಗ ಹೊರತೆಗೆದು ಗರ್ಭಾಶಯಕ್ಕೆ ವರ್ಗಾವಣೆ ಮಾಡಬಹುದು. ಹೀಗೆ ಶೀತ ಸಂರಕ್ಷಿತ ಭ್ರೂಣ ವರ್ಗಾವಣೆ ಸಂದರ್ಭಗಳಲ್ಲಿ ಹೆಚ್ಚುವರಿ ಚುಚ್ಚುಮದ್ದುಗಳಾಗಲಿ, ಶಸ್ತ್ರಕ್ರಿಯೆಯಿಂದ ಅಂಡಕೋಶದ ನೀರನ್ನು ತೆಗೆಯುವ ಅವಶ್ಯಕತೆಯಾಗಲಿ ಇರುವುದಿಲ್ಲ.

ಪ್ರನಾಳ ಶಿಶು ತಂತ್ರದ ಈ ಎಲ್ಲಾ ಅಥವಾ ಸಂಬಂಧಿತ ಒಳತಂತ್ರಗಳ ಒಟ್ಟಾರೆ ಉಪಯೋಗದಿಂದ ಕೇವಲ ವೈದ್ಯೋಪಚಾರದಿಂದ ಸಹಕೃತರಾಗದ ಸುಮಾರು70–80% ದಂಪತಿಗಳಿಗೆ 1–3 ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ

ಪ್ರನಾಳ ಶಿಶು ತಂತ್ರ ಒಂದು ತಂಡದಿಂದ ನಡೆಸಲ್ಪಡುವ ಕ್ರಿಯೆ ಇದರಲ್ಲಿ ಸ್ತ್ರೀರೋಗ ತಜ್ಞರು, ರೇಡಿಯಾಲಜಿಸ್ಟ್(ವಿಕಿರಣ ಶಾಸ್ತ್ರಜ್ಞರು), ಭ್ರೂಣ ಶಾಸ್ತ್ರಜ್ಞರು(Embryologist), ಪರಿಚಾರಿಕೆಯರು, ಪ್ರಯೋಗಾಲಯ ತಂತ್ರಜ್ಞರು, ಜೀವವೈದ್ಯಕೀಯ ಅಭಿಯಂತರರು(Bio-Medical Engineers) ಎಲ್ಲರ ಸಹಭಾಗಿತ್ವ ಇರುತ್ತದೆ. ಹಾಗೆಯೇ ಈ ಪ್ರಯೋಗಾಲಯದಲ್ಲಿ ಉಪಯೋಗಿಸುವ ವಿಶೇಷ ಉಪಕರಣಗಳು, ತಂತ್ರಾಂಶಗಳು, ದ್ರಾವಕಗಳು ಎಲ್ಲವೂ ದುಬಾರಿಯಾದ್ದರಿಂದ ಮತ್ತು ಭಾರತದಲ್ಲಿ ಜನಸಂಖ್ಯೆ ಸಮಸ್ಯೆಯ ಕಾರಣ ನೀಡಿ ಸರಕಾರವು ಪ್ರಕ್ರಿಯೆಯಲ್ಲಿ ಉಪಯೋಗಕ್ಕೆ ಬರುವ ಔಷಧಗಳು, ದ್ರಾವಕಗಳು, ಉಪಕರಣಗಳು ಇವುಗಳ ಮೇಲೆ ಯಾವುದೇ ರೀತಿಯ ತೆರಿಗೆ ವಿನಾಯತಿ ಕೊಡದೇ ಇರುವುದರಿಂದ ಪ್ರಯತ್ನವೊಂದಕ್ಕೆ ಸುಮಾರು 80,000–1,25,000 ದವರೆಗೂ ಖರ್ಚು ಬರುತ್ತದೆ.