Monday, May 5, 2025

ಕನ್ನಡ ಚಿತ್ರ ರಂಗದ ಮೊದಲ ಸಿನಿಮಾ ಯಾವುದು?

 ಲೆಕ್ಕಾಚಾರದಲ್ಲಿ ಭಾರತೀಯ ಚಿತ್ರರಂಗ ಅದಾಗಲೇ ಶತಮಾನ ಪೂರೈಸಿದೆ ಎನ್ನುವುದೂ ವಾಸ್ತವ.

ನಮ್ಮ ದೇಶದ ಮೊದಲ ಮಾತಿನ ಸಿನಿಮಾ ಆಲಂ ಅರಾ ತೆರೆಗೆ ಬರುವ ಮುಂಚಿನ (1931)ದಶಕಗಳಲ್ಲಿ 1338ಮೂಕಿ ಚಿತ್ರಗಳು ನಿರ್ಮಾಣಗೊಂಡಿದ್ದವು ಎಂದೂ ಹೇಳಲಾಗಿದೆ. ಇವುಗಳ ಪೈಕಿ ಕೇವಲ 29 ಸಿನಿಮಾಗಳ ವಿವರಣೆ /ಪ್ರಿಂಟ್ /ದಾಖಲೆಗಳು ಲಭ್ಯವಿದೆ . ಉಳಿದ ಸಿನಿಮಾಗಳ ಪ್ರಿಂಟ್ಗಳು ಇರಲಿ, ಮಾಹಿತಿಗಳು ಸಿಗದು. ಇದು ಮಾತ್ರವಲ್ಲ ಮೊದಲ ಟಾಕೀ ಚಿತ್ರ ಆಲಂ ಅರಾ ಪ್ರಿಂಟ್ ಕೂಡಾ ಸಂಪೂರ್ಣ ಲಭ್ಯವಿಲ್ಲ. ಆ ಕಾಲದಲ್ಲಿ 1279 ಚಿತ್ರಗಳು ಸೆನ್ಸಾರ್ ಆಗಿವೆ ಎನ್ನುವ ಮತ್ತೊಂದು ಮಾಹಿತಿಯೂ ಇದೆ. ಇವುಗಳಲ್ಲಿ ನಮ್ಮ ನಾಡಿನಲ್ಲಿ ತಯಾರಾದ ಸಿನಿಮಾಗಳು ಇದ್ದಿರಬಹುದು.ದಾದಾ ಸಾಹೇಬ್ ಫಾಲ್ಕೆ ನಿರ್ಮಿಸಿ ನಿರ್ದೇಶಿಸಿದ ರಾಜಾ ಹರಿಶ್ಚಂದ್ರ ಮೇ 1913ರಲ್ಲಿ ತೆರೆಗೆ ಬಂದ ಮೊದಲ ಸಿನಿಮಾ. ಈ ಚಿತ್ರದ ಯಶಸ್ಸು ಕಂಡು ಅದೇ ವರ್ಷದಲ್ಲಿ ದೇಶದಲ್ಲಿ 27 ಚಿತ್ರಗಳು ಪ್ರದರ್ಶನಗೊಂಡಿದ್ದವು ಎಂಬ ವಿವರಣೆಯು ಕಾಣಸಿಗುತ್ತದೆ. ಇದಿಷ್ಟು ಭಾರತೀಯ ಚಿತ್ರರಂಗದ ಇತಿಹಾಸ. ಇದರಲ್ಲಿ ಇನ್ನಷ್ಟು ಆಸಕ್ತಿದಾಯಕ ಅಂಶಗಳು ಅಡಗಿವೆ.ಅದು ಬೇರೆಯೇ ಅಧ್ಯಾಯ.

ಈಗ ಕನ್ನಡದ ಮೊದಲ ಸಿನಿಮಾ ವಿಷಯಕ್ಕೆ ಬರೋಣ. ಕನ್ನಡದ ಮೊದಲ ವಾಕ್ತ್ಚಿತ್ರ 1934ರ ಸತಿ ಸುಲೋಚನಾ.ಆದರೆ ಅದಕ್ಕೂ ಮುನ್ನ ಕರ್ನಾಟಕದಲ್ಲಿ ನಿರ್ಮಾಣಗೊಂಡ ಮೂಕಿ ಚಿತ್ರಗಳ ಸಂಖ್ಯೆ ನಗಣ್ಯವೇನಲ್ಲ. ಇಲ್ಲಿಯೂ ತಯಾರಾದ ಮೂಕಿ ಚಿತ್ರಗಳು 55 ಎನ್ನುವ ಅಂದಾಜಿದೆ.ಆ ಸಾಲಿನಲ್ಲಿ 1929ರಲ್ಲಿ ಬೆಂಗಳೂರಿನಲ್ಲಿಯೇ ನಿರ್ಮಾಣಗೊಂಡ ವಸಂತ ಸೇನಾ ಚಿತ್ರ ಮೊದಲನೆಯದು ಎಂಬುದು ಸಾಮಾನ್ಯವಾಗಿ ಕಾಣುವ ಉತ್ತರ. . ಆದರೆ ಅದಕ್ಕೂ ಮೊದಲೇ ಮಾತಿಲ್ಲದ ಸಿನಿಮಾಗಳು ನಿರ್ಮಾಣಗೊಂಡ ದಾಖಲೆಗಳು ಇದೆ.

1921ರಲ್ಲಿ ಎ. ವಿ. ವರದಾಚಾರ್ಯರು ರತ್ನಾವಳಿ ಥೀಯೇಟರ್ ಕಂಪನಿ ಎಂಬ ಸಂಸ್ಥೆ ಹುಟ್ಟು ಹಾಕಿ ಮೈಸೂರು ಅರಮನೆಯಲ್ಲಿ ನಿರುಪಮಾ ಎಂಬ ನಾಟಕ ಪ್ರದರ್ಶನ ಮಾಡುತಿದ್ದರು ಮತ್ತು ತಾವೇ ಆ ನಾಟಕದಲ್ಲಿ ಅಭಿನಯಿಸುತ್ತಿದ್ದರು.ಈ ನಾಟಕವನ್ನೇ ಚಿತ್ರೀಕರಣ ಮಾಡಿಸಿ ಅರಮನೆಗೆ ಬರುವ ವಿದೇಶಿ ಅತಿಥಿಗಳಿಗೆ ಪ್ರದರ್ಶಿಸುತ್ತಿದ್ದರು. ನಿರುಪಮಾ ನಾಟಕ ಆಂಗ್ಲ ನಾಟಕದ ಅನುವಾದವಾಗಿತ್ತು.ಅಂದಿನ ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ ಈ ಪ್ರಯತ್ನದ ಹಿಂದೆ ಇದ್ದರು.

ಮತ್ತೊಂದು ಪ್ರಯತ್ನ,

1925 ರಲ್ಲಿ ತಯಾರಾದ ಮಹಾತ್ಮ ಕಬೀರ್.ಗುಬ್ಬಿ ವೀರಣ್ಣನವರ ನಾಟಕ ಸಂಸ್ಥೆಯ ಮೂಲಕ ಪ್ರದರ್ಶನವಾಗುತಿದ್ದ ಮಹಾತ್ಮ ಕಬೀರ್ ನಾಟಕವನ್ನು ಮದರಾಸಿನ ರಂಗಯ್ಯ ನಾಯ್ದು ಆ ನಾಟಕವನ್ನೇ ಚಿತ್ರೀಕರಣ ಮಾಡಿ ಸಿನಿಮಾ ರೂಪಕ್ಕೆ ತಂದರು. ನಾಟಕದ ಕಲಾವಿದರೆ ಸಿನಿಮಾದಲ್ಲಿ ಕಾಣಿಸಿಕೊಂಡರು.ಇವು ಅಂದಿನ ಸಿನಿಮಾಗಳ ಆರಂಭಿಕ ಹಂತ. ವಸಂತಸೇನಾ ಹೊರ ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡಲಾದ ಸಿನಿಮಾ.

ಈ ಸಿನಿಮಾಗಳಲ್ಲದೆ ಹರಿಮಾಯಾ,ಕಳ್ಳರ ಕಳ್ಳ,ರಾಜ ಲಕ್ಷ್ಮಿ, ಕನ್ನಿಕಾ ಪರಮೇಶ್ವರಿ

ಹಿಸ್ ಲವ್ ಅಫೇರ್, ಡೊವಿಂಗೋ, ಭೂತರಾಜ್ಯ, ಕೆಲ ಮೂಕಿ ಕಾಲದ ಚಿತ್ರಗಳು. ಮತ್ತೊಂದು ವಿಶೇಷ ಎಂದರೆ ಸಾಹಿತಿ ದೇವುಡು ನರಸಿಂಹ ಶಾಸ್ತ್ರೀ ಯವರು ಗುಬ್ಬಿ ವೀರಣ್ಣನವರು ನಿರ್ಮಿಸಿದ ಮಾತಿಲ್ಲದ ಚಿತ್ರಗಳಿಗೆ ಕತೆಗಳನ್ನು ನೀಡಿದ್ದರು.