ಸಾಪೇಕ್ಷತಾ ಸಿದ್ಧಾಂತ ಎಂದ ಕೂಡಲೇ ಭೌತಶಾಸ್ತ್ರದಲ್ಲಿ ಎರಡು ಬಗೆಯ ಸಿದ್ಧಾಂತಗಳನ್ನು ಹೇಳಲಾಗುತ್ತದೆ
1. ಗೆಲಿಲಿಯೋನ ಸಾಪೇಕ್ಷತೆ
2. ಐನ್ ಸ್ಟೈನಿನ ಸಾಪೇಕ್ಷತೆ
ಇದರಲ್ಲಿ ಗೆಲಿಲೀಯ ಸಾಪೇಕ್ಷತೆಯು ಪ್ರಾಥಮಿಕವಾದದ್ದು; ಆದ್ದರಿಂದ ಇಲ್ಲಿ ಅದಕ್ಕೆ ಮಾತ್ರ ಕೆಲವು ಉದಾಹರಣೆಗಳನ್ನು ನೋಡುವ.
ನೀವು ಒಂದು ರೈಲಿನಲ್ಲಿ ಕುಳಿತಿದ್ದೀರಿ, ರೈಲು ಸ್ಟೇಷನ್ನಿನಲ್ಲಿ ನಿಂತಿದೆ; ನೀವು ಕಿಟಕಿಯಿಂದ ಹೊರಗೆ ಇರುವ ಪ್ಲಾಟ್ಫಾರ್ಮ್ ಅನ್ನು ನೋಡುತ್ತಾ ಅದರಲ್ಲಿನ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದ್ದೀರಿ. ಒಂದು ಅರೆಕ್ಷಣ ನಾವು ಚಲಿಸುವ ರೈಲಿನಲ್ಲಿ ಕುಳಿತಿದ್ದೇವೆ ಎಂಬ ವಿಷಯವೇ ನಿಮಗೆ ಮರೆತು ಹೋಗಿದೆ. ಇದ್ದಕಿದ್ದ ಹಾಗೇಯೇ ಸ್ಟೇಷನ್ನಿನ ಪ್ಲಾಟ್ಫಾರ್ಮ್, ಕಟ್ಟೆ, ಕಂಬ, ಕುರ್ಚಿಗಳು, ಕಡ್ಲೆಕಾಯಿ ಮಾಡುವವರು ಕಾಯುತ್ತಿರುವ ಜನರು, ಎಲ್ಲಾ ಸಕಲವೂ ನಿಮ್ಮಿಂದ ಹಿಂದಕ್ಕೆ - ದೂರ ಸರಿದಂತೆ ಭಾಸವಾಗತೊಡಗುತ್ತದೆ. ಆಗ ತಟ್ಟನೆ ನಿಮಗೆ ಅರಿವಾಗುತ್ತದೆ, ರೈಲು ಮುಂದೆ ಹೊರಟಿತು ಎಂಬುದು.....
ಅಷ್ಟೇ ಅಲ್ಲ, ರೈಲು ಹೊರಟ ಮೇಲೆ ನೀವು ಎಲ್ಲಿಯವರೆಗೆ ಕಿಟಕಿಯ ಹೊರಗಿಂದ ಸುತ್ತಮುತ್ತಲಿನ ವಸ್ತುಗಳ ಹಿಂಚಲನೆಯನ್ನು ಗಮನಿಸುತ್ತಾ ಇರುತ್ತೀರೋ, ಅಲ್ಲಿಯವರೆಗೂ ನಿಮ್ಮ ರೈಲಿನ ಮುಂಚಲನೆಯನ್ನು ಖಾತ್ರಿ ಮಾಡಿಕೊಳ್ಳುತ್ತಾ /ಅರ್ಥ ಮಾಡಿಕೊಳ್ಳುತ್ತಾ ಇರುತ್ತೀರಿ.
ಈಗ ಇದೇ ರೈಲು ಒಂದು ಉದ್ದನೆಯ ಕತ್ತಲು ಕವಿದ ಸುರಂಗದ ಒಳಗೆ ಕ್ರಾಸಿಂಗಿಗಾಗಿ ಕಾಯುತ್ತಾ ನಿಂತುಕೊಂಡಿತ್ತು ಎಂದೂ, ಕೆಲವು ಸಮಯವಾದ ಮೇಲೆ ಹೊರಟಿತು ಎಂದೂ ಅಂದುಕೊಳ್ಳಿ. ಕಿಟಕಿಯ ಹೊರಗೆ ಅಗಾಧ ಕತ್ತಲೆ, ರೈಲು ಬೇರೆ ಅತ್ಯಾಧುನಿಕವಾದದ್ದು; ಇಂಜಿನಿನ ಸದ್ದಾಗಲೀ ಗಾಡಿಯ ಗಡಗಡ ಕಂಪನವಾಗಲೀ ಯಾರಿಗೂ ಗೊತ್ತಾಗುವಂತಿಲ್ಲ ಎಂದೂ, ಸುರಂಗದ ಗೋಡೆಗಳಿಂದ ಗಾಡಿಯ ಸದ್ದು ಕೇಳದಂತೆ ನಿಮ್ಮ ರೈಲಿನ ಕಿಟಕಿಯ ಗಾಜನ್ನು ಶಬ್ದ ನಿರೋಧಕ ಮಾಡಲಾಗಿದೆ ಎಂದೂ ಕಲ್ಪಿಸಿಕೊಳ್ಳಿ. ಈಗ ನಿಮಗೆ ರೈಲು ಯಾವಾಗ ಹೊರಟಿತು ಎಂಬುದು ಯಾವ ಕಾರಣಕ್ಕೂ ಗೊತ್ತಾಗುವುದಿಲ್ಲ. ಏಕೆಂದರೆ ನಿಮ್ಮ ಚಲನೆಯನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಒಂದು ಹಿನ್ನೆಲೆ ಅಲ್ಲಿ ಗೈರು ಹಾಜರಾಗಿದೆ. ಹೊರಗೆ ನಿಮ್ಮ ದಿಕ್ಕಿಗೆ ವಿರುದ್ಧವಾಗಿ ಚಲಿಸುವ ಯಾವುದೇ ದೀಪವಾಗಲಿ ಬೆಟ್ಟ-ಗುಡ್ಡ ಮರ ಇತ್ಯಾದಿಗಳಾಗಲೀ ನಿಮ್ಮ ಪರಾಮರ್ಶೆಗೆ ನಿಲುಕುತ್ತಿಲ್ಲ. ಹಾಗಾಗಿ ನಾವೆಲ್ಲ ಈ ಕತ್ತಲೆಯ ಸುರಂಗದಲ್ಲಿ ನಿಂತಿದ್ದೇವೆ ಎಂದೂ, ಇಲ್ಲಿ ನಾವು ಶಾಶ್ವತವಾಗಿ ಬಂದಿಗಳಾಗಿದ್ದೇವೆ ಎಂದೂ ತಿಳಿಯುತ್ತೀರಿ. ರೈಲು ಸುರಂಗದ ಬಾಯಿಂದ ಹಠಾತ್ತನೆ ಹೊರಗೆ ಬಂದ ಮೇಲೆ ಇದ್ದಕ್ಕಿದ್ದ ಹಾಗೆಯೇ ನಿಮಗೆ ಕಿಟಕಿಯಿಂದ ತೋರುವ ಸುರಂಗದ ಹೊರಗಿನ ವಸ್ತುಗಳು ನಿಮ್ಮಿಂದ ಹಿಂದಕ್ಕೆ ಹೋಗುವಾಗ ನಿಮಗೆ ತಿಳಿಯುತ್ತದೆ, ನಾವು ಇಲ್ಲಿಯವರೆಗೂ ಚಲಿಸುತ್ತಲೇ ಇದ್ದೆವು, ಈಗಷ್ಟೇ ಸುರಂಗದಿಂದ ಹೊರಬಂದೆವು ಎಂಬುದು.
ಅಂದರೆ ನಮ್ಮ ಸದ್ಯದ ಚಲನೆಯ ಸ್ಥಿತಿಯನ್ನು ಅರಿಯಲು ಬೇರೊಂದು ಹಿನ್ನೆಲೆಯ ಅಗತ್ಯ ನಮಗಿದೆ. ಈ ಹಿನ್ನೆಲೆಯ ಅಸ್ತಿತ್ವ ಇಲ್ಲದೆ ಹೋದಲ್ಲಿ ನಾವು ಚಲಿಸುತ್ತಿದ್ದೇವೆಯೇ ಇಲ್ಲವೇ ಎಂಬುದನ್ನು ನಿಷ್ಕರ್ಷೆ ಮಾಡುವುದು ಅಸಂಭವ. ಇದುವೇ ಸಾಪೇಕ್ಷ / ಪರಸ್ಪರ ಚಲನೆಯ ಮೊದಲ ತತ್ವ.
ಇನ್ನಷ್ಟು ಮುಂದೆ ಹೋಗುವ....
ಸುರಂಗವನ್ನು ದಾಟಿದ ನಿಮ್ಮ ರೈಲೀಗ ಗಂಟೆಗೆ 60 ಕಿಮೀ ವೇಗದಲ್ಲಿ ಸಾಗುತ್ತಿದೆ..... ರಾತ್ರಿಯ ಗಾಢಾಂಧಕಾರ, ಕಿಟಕಿಯಲ್ಲಿ ಕಂಡುಬರುವ ದೂರದಲ್ಲಿರುವ ಊರಿನ ದೀಪಗಳು ಹಿಂದಕ್ಕೆ ಸಾಗುತ್ತಾ ನಿಮ್ಮ ವೇಗದ ಅಂದಾಜನ್ನು ನಿಮಗೆ ಮೂಡಿಸುತ್ತಿವೆ.
ನಿಮ್ಮ ರೈಲನ್ನು ಈಗ, ಹಳಿಗಳ ಪಕ್ಕದಲ್ಲಿ ನಿಂತಿರುವ ಒಬ್ಬ ವ್ಯಕ್ತಿ ನೋಡುತ್ತಾ ಇದ್ದಾನೆ. ಅವನಿಗೆ ಕಿಟಕಿಯ ಪಕ್ಕ ಕೂತಿರುವ ನೀವಾಗಲಿ, ರೈಲಿನ ಒಳಗಿರುವ ಜನಗಳಾಗಲಿ, ರೈಲಿನ ಜೋರು ವೇಗದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಬರಿಯ ಬೆಳಕಿನ ಒಂದು ಗಾಳಿ ಬೀಸಿ ಹೋದಂತೆ ಮಾತ್ರ ಅವನಿಗೆ ಕಾಣುತ್ತದೆ. ಅಂದರೆ 60 ಕಿಮೀ ವೇಗದ ರೈಲಿನ ಒಳಭಾಗವು, ನಿಂತಿರುವ ಯಾರಿಗೂ ಕಾಣಲು ಸಾಧ್ಯವಿಲ್ಲ. ಅದೇ, ಮೆಲ್ಲನೆ ಹೋಗುತ್ತಿರುವ ರೈಲಿನ ಒಳ ವಿವರಗಳೆಲ್ಲ ಯಾರಿಗಾದರೂ ಕಾಣುತ್ತವೆ. ಇದು ಎಲ್ಲರ ಅನುಭವ ಅಲ್ಲವೇ?
ಈಗ ನಿಮ್ಮ ಪಕ್ಕದ ಹಳಿಯ ಮೇಲೆ ಮತ್ತೊಂದು ರೈಲು ಶರಾವತಿ ಎಕ್ಸ್ ಪ್ರೆಸ್, ಹಿಂದಿನಿಂದ ವೇಗವಾಗಿ ನಿಮ್ಮೆಡೆಗೆ ಸಾಗಿ ಬರುತ್ತಿದೆ. ಅದರ ವೇಗ ಗಂಟೆಗೆ 80 ಕಿಮೀ. ಹಳಿಯ ಪಕ್ಕ ನಿಂತ ವ್ಯಕ್ತಿಗೆ ಈ ರೈಲು ಕೂಡಾ ಅಷ್ಟೇ, ಅದರ ಒಳಭಾಗ ಕೇವಲ ಒಂದು ಬೆಳಕಿನ ಬೀಸು ಹಾದು ಹೋದಂತೆ ಕಾಣಿಸುತ್ತದೆ. ಅದರ ಒಳಗೆ ಯಾರ್ಯಾರು ಕೂತು, ಏನೇನು ಮಾಡುತ್ತಿದ್ದಾರೆ ಗೊತ್ತಾಗುವುದಿಲ್ಲ, ಏಕೆಂದರೆ ಅದರ ವೇಗ ಅವನ ಪ್ರಕಾರ 80 ಕಿಮೀ/ಗಂಟೆ.
ಈಗ ಅದೇ ಶರಾವತಿ ಎಕ್ಸ್ ಪ್ರೆಸ್ಸು ನಿಮ್ಮ ರೈಲಿನ ಪಕ್ಕ ಹಾದು ಹೋಗುವಾಗ ಅದು ನಿಮಗೆ ಹೇಗೆ ಕಾಣುತ್ತದೆ? ಅದರ ವೇಗ 80 ಕಿಮೀ ಇದ್ದರೂ ಸಹ ನೀವು ಅದರ ಒಳಗಿರುವ ಜನರ, ವಸ್ತುಗಳ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ನೋಡಬಲ್ಲಿರಿ. ಏಕೆಂದರೆ ಅದು ನಿಧಾನವಾಗಿ ಹೋಗುತ್ತಿರುವ ಹಾಗೆ ನಿಮಗೆ ಕಾಣುತ್ತದೆ. ಏಕೆಂದರೆ ನೀವು ನಿಂತಿಲ್ಲ….ನಾವು 60 ಕಿಮೀ ವೇಗದಲ್ಲಿ ಹೋಗುತ್ತಿದ್ದೇವೆ ಎಂಬುದನ್ನು ಮರೆತು, ಪಕ್ಕದ ರೈಲನ್ನು ಮಾತ್ರ ನೋಡುತ್ತಾ ಅದರ ವೇಗವನ್ನು ನೀವು ಅಳತೆ ಮಾಡಿದರೆ ನಿಮಗೆ ಅದರ ವೇಗ ಬರೀ 20 ಕಿಮೀ/ಗಂಟೆ ಎಂದು ಕಂಡುಬರುತ್ತದೆ. ಅದು ನಿಮಗೆ ಪ್ರಚಂಡ ವೇಗದ ರೈಲಿನಂತೆ ತೋರುತ್ತಿಲ್ಲ.
ಅಂದರೆ, ಅದರ ನಿಜವಾದ ವೇಗ 80 ಆಗಿದ್ದರೂ ಕೂಡ ನಿಮಗೆ ತೋರಿ ಬಂದ ಸಾಪೇಕ್ಷ ವೇಗ ಬರೀ 20. ಅದರ ಹಾಗೂ ನಿಮ್ಮ ವೇಗದ ವ್ಯತ್ಯಾಸಕ್ಕೆ ಸಮವಿದು.
ಅಂದರೆ, ಕಿಮೀ/ಗಂಟೆ
ಇದು ಪರಸ್ಪರ ಚಲನೆಯಲ್ಲಿ ಇರುವ ಯಾವುದೇ ಎರಡು ವಸ್ತುಗಳ ವಿಷಯದಲ್ಲಿಯೂ ಸತ್ಯವಾದುದು. ನಮಗೆ ತೋರುವ ವೇಗವು ಅದರ ನೈಜ ವೇಗಕ್ಕಿಂತ ಭಿನ್ನವಾಗಿರುವ ಸಾಧ್ಯತೆ ಯಾವಾಗಲೂ ಇರುತ್ತದೆ.
ಅಕಸ್ಮಾತ್ ನಮ್ಮ ರೈಲಿನ ವೇಗ 50 ಕಿಮೀ/ಗಂಟೆ ಆಗಿದ್ದಿದ್ದರೆ ಶರಾವತಿ ನಮಗೆ 30 ಕಿಮೀ ವೇಗದ ರೈಲಾಗಿ ತೋರುತ್ತಿತ್ತು.....ನಮ್ಮ ಚಲನೆಯ ಸ್ಥಿತಿಯನ್ನು ಆಧರಿಸಿ ನಮಗೆ ಮತ್ತೊಬ್ಬರ ಚಲನೆ ಕಂಡುಬರುತ್ತದೆ. ಕೊಂಚ ಸಾರ್ವತ್ರಿಕವಾಗಿ ಹೇಳಬೇಕು ಎಂದರೆ, ಯಾವ ಸ್ಥಾನದಲ್ಲಿ ನಿಂತು ನಾವು ವಿಶ್ವವನ್ನು ಗಮನಿಸುತ್ತೇವೆಯೋ ಅದರ ಆಧಾರದ ಮೇಲೆ ನಮಗೆ ವಿಶ್ವವು ಕಂಡುಬರುತ್ತದೆ.
ನಮಗೆ ಕಂಡ ವೇಗ ಅಥವಾ ಚರ-ಫಲಿತಾಂಶಗಳು ಬೇರೆಯವರಿಗೂ ಬರಬೇಕು ಎಂದೇನೂ ಇಲ್ಲ. ಅದು ಅವರವರ ಚಲನಾ ಸ್ಥಿತಿಯನ್ನು ಅವಲಂಬಿಸಿದೆ.
ಇಲ್ಲೊಂದು ವಿಚಿತ್ರವಾದ ಅಸಹಾಯಕತೆ ಇದೆ; ನೀ ವು ಪಕ್ಕದ ರೈಲಿನ ವೇಗವನ್ನು ಆಳೆಯಬಲ್ಲಿರೇ ಹೊರತು, ನಿಮ್ಮ ಸ್ವಂತ ವೇಗವನ್ನು ಅಲ್ಲ. ಏಕೆಂದರೆ, ಪಕ್ಕದ ರೈಲಿನ ವೇಗ 20 ಕಿಮೀ ಎಂದು ನಿಮಗೆ ತೋರಿದರೆ ಅದು ನಿಮ್ಮಿಬ್ಬರ ವೇಗದ ವ್ಯತ್ಯಾಸವೇ ಹೊರತು, ಅದರ ನಿಜವಾದ ವೇಗವಲ್ಲ!
ಈಗ ನಿಮ್ಮ ರೈಲು 100 ಕಿಮೀ, ಶರಾವತಿ 120 ಕಿಮೀ ವೇಗದಲ್ಲಿ ಹೋಗುತ್ತಿದ್ದರೂ ಕೂಡಾ ನಿಮಗೆ ಅದು 20 ಕಿಮೀ ಆಗಿಯೇ ತೋರಿ ಬರುತ್ತದೆ.
ಹಾಗಾಗಿ ನಮ್ಮ ಅಥವಾ ಬೇರೆ ವಸ್ತುಗಳ ನಿಜವಾದ ಚಲನೆಯನ್ನು ಅರ್ಥ ಮಾಡಿಕೊಳ್ಳಲು ನಮ್ಮ ಕೈಲಿ ಸಾಧ್ಯವೇ ಇಲ್ಲ. ಏಕೆಂದರೆ ಪ್ರಪಂಚದ ಎಲ್ಲದೂ ಸಹ ಈ ಬಗೆಯ ಸಾಪೇಕ್ಷವಾದ / ಪರಸ್ಪರ ಅವಲಂಬನೆಯ ಚಲನೆಯೇ ಆಗಿದೆ. ಹಿನ್ನೆಲೆಯಾಗಿ ಯಾವುದೇ ವಸ್ತು ಅಥವಾ ಸನ್ನಿವೇಶ ಇಲ್ಲದಿದ್ದಲ್ಲಿ, ನಮಗೆ ಚಲನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಪ್ರತಿಯೊಂದು ವಸ್ತುವಿನ ಚಲನೆ, ವಿಶ್ರಾಂತ ಸ್ಥಿತಿ ಎಲ್ಲವೂ ನಮ್ಮ ನಮ್ಮ ಜಾಗದ ಆಧಾರದ ಮೇಲೆ ನಾವು ಮಾಡಿಕೊಂಡ ಲೆಕ್ಕಾಚಾರಗಳು ಅಷ್ಟೇ.
ಅಲ್ಲಿಗೆ ಇಡೀ ವಿಶ್ವದಲ್ಲಿ ಪರಮ - ಸ್ಥಾವರ ಸ್ಥಿತಿಯಲ್ಲಿರುವ (ಶಾಶ್ವತವಾಗಿ ಎಲ್ಲಿಂದ ನೋಡಿದರೂ ನಿಂತಂತೆ ಕಾಣುವ) ಯಾವ ವಸ್ತುವೂ ಇಲ್ಲ. ಹಾಗೂ ನಾವು ಅಳೆದ ಒಂದು ವಸ್ತುವಿನ ವೇಗವು ಎಂದಿಗೂ ಪರಿಪೂರ್ಣವಲ್ಲ.
ಇಲ್ಲಿ ಮತ್ತೊಂದು ಸೋಜಿಗವಿದೆ....ಶರಾವತಿ ಎಕ್ಸ್ ಪ್ರೆಸ್ಸಿನ ವೇಗಕ್ಕೆ ನಿಮ್ಮ ಡ್ರೈವರೂ ಕೂಡಾ ನಿಮ್ಮ ರೈಲಿನ ವೇಗ ಹೆಚ್ಚಿಸುತ್ತಾ, ಕ್ರಮೇಣ ತಾನೂ 80 ಕಿಮೀ ವೇಗಕ್ಕೆ ಬಂದ ಎಂದಿಟ್ಟುಕೊಳ್ಳಿ, ಈಗ ನಿಮಗೆ ಶರಾವತಿ ರೈಲು ನಿಂತ ಹಾಗೆಯೂ, ನಿಮ್ಮ ಕಿಟಕಿಯ ಎದುರು ಬಂದ, ಅದರ ಕಿಟಕಿಯಲ್ಲಿ ಕುಳಿತ ವ್ಯಕ್ತಿಯ ಜೊತೆ ನೀವು ನಿಮ್ಮ ಪಕ್ಕದಲ್ಲಿ ಕುಳಿತವನ ಜೊತೆ ಮಾತಾಡಿದಷ್ಟು ಸಲೀಸಾಗಿ ವ್ಯವಹರಿಸಬಹುದು. ನಿಮ್ಮ ರೈಲಿನ ಬಾಗಿಲಿಗೂ, ಅದಕ್ಕೂ ನಡುವೆ ಒಂದು ಹಲಗೆಯನ್ನಿಟ್ಟು ನೀವು, ನಿಮ್ಮ ರೈಲಿನ ಒಂದು ಬೋಗಿಯಿಂದ ಮತ್ತೊಂದಕ್ಕೆ ಸಲೀಸಾಗಿ ಹೋದ ಹಾಗೆ ಅಲ್ಲಿಂದಿಲ್ಲಿಗೆ ಓಡಾಡಬಹುದು!
ಅಲ್ಲಿಗೆ......ಎರಡು ವಸ್ತುಗಳು ಪರಸ್ಪರ ನಿಂತ ಹಾಗೆ ತೋರುತ್ತಿವೆ ಎಂದರೆ, ಅವುಗಳ ವೇಗ ಒಂದೇ ಆಗಿರುತ್ತದೆ.
ಅಂದರೆ, ನಿಮ್ಮ ರೈಲಿನ ಬೋಗಿಯೂ, ನಿಮ್ಮದಕ್ಕೆ ಅಂಟಿಕೊಂಡ ಮುಂದಿನ ಬೋಗಿಯೂ ಒಂದೇ ವೇಗದಲ್ಲಿ (60) ಇರುವುದರ ಕಾರಣ, ಅದು ನಿಮ್ಮನ್ನು ಬಿಟ್ಟು ದೂರ ಸರಿದಂತೆ ತೋರುವುದಿಲ್ಲ, ಇಡೀ ರೈಲು ಒಂದೇ ಸ್ಥಾವರ ವ್ಯವಸ್ಥೆಯ ಹಾಗೆ, ಮನೆಯ ಹಾಗೆ ಕಂಡುಬರುತ್ತದೆ. ಮನೆಯ ಒಳಗೆ ನಾವು ಸಲೀಸಾಗಿ ಓಡಾಡಿದ ಹಾಗೆ ಇಲ್ಲೂ ಓಡಾಡುತ್ತೇವೆ. ಏಕೆಂದರೆ ಮನೆಯ ಬೆಡ್ ರೂಮು, ನಡುಮನೆ, ಆಡುಗೆಮನೆ ಎಲ್ಲವೂ ಭೂಮಿಯ ಮೇಲಿದ್ದು, ಭೂಮಿಯ ಜೊತೆ ಒಂದೇ ವೇಗದಲ್ಲಿ ತಿರುಗುತ್ತಿವೆ!
ಅಂದರೆ, ನಾವು ನಿಂತ ಜಾಗದ ವೇಗವನ್ನು ಯಾವ ಹಿನ್ನೆಲೆಯೂ ಇಲ್ಲದ ಪರಿಸ್ಥಿತಿಯಲ್ಲಿ ಅಳೆಯಲಿಕ್ಕೆ ಯಾವ ಮಾರ್ಗವೂ ಇಲ್ಲ.
ಅದೆಲ್ಲಾ ಬಿಡಿ, ಭೂಮಿ ತಿರುಗುತ್ತಿರುವುದು ಯಾರಿಗಾದರೂ ಅನುಭವಕ್ಕೆ ಬರುತ್ತದೆಯೇ? ಸುರಂಗದ ಒಳಗಿನ ರೈಲಿನ ಯಾತ್ರಿಕರಂತೆ ಶಾಶ್ವತವಾಗಿ ನಿಂತಿದ್ದೇವೆ ಎಂದು ಭ್ರಮಿಸಿರುವ ನಮಗೆ, ನಮ್ಮ ಇಡೀ ಸೌರಮಂಡಲವೇ ಏಕೆ, ನಮ್ಮ ಆಕಾಶ ಗಂಗೆಯೇ ಅನೂಹ್ಯ ವೇಗದಲ್ಲಿ ಧಾವಿಸುತ್ತಿದೆ ಎಂಬುದು ತಿಳಿದಿದೆಯೇ?
ಇದು ಎಂತಹ ಪ್ರಬಲವಾದ ಭ್ರಮೆ ಎಂದರೆ, ಭೂಮಿ ಪ್ರತೀ ಸೆಕೆಂಡಿಗೆ 460 ಮೀ ವೇಗದಲ್ಲಿ ಗಿರಿ ಗಿರಿ ಸುತ್ತುತ್ತಿರುವುದು ನಮಗೆ ಗೊತ್ತೇ ಆಗುವುದಿಲ್ಲ, ಏಕೆಂದರೆ ತಿರುಗುತ್ತಿರುವ ಭೂಮಿಯ ಚಲನೆಯನ್ನು ಅರ್ಥ ಮಾಡಿಕೊಳ್ಳಲು ಸೂಕ್ತವಾದ ಹಿನ್ನೆಲೆ ನಮ್ಮಲ್ಲಿ ಇಲ್ಲ. ಭೂಮಿಯನ್ನು ರೈಲು, ಕಿಟಕಿಯನ್ನು ಆಕಾಶ ಎಂದುಕೊಂಡರೆ, ಹಗಲಿನಲ್ಲಿ ನೀಲಿ ಆಕಾಶ ನಮಗೆ ಕಿಟಕಿಯ ಹೊರಗಿನ ಯಾವುದನ್ನೂ ಕಾಣದಂತೆ ಮರೆ ಮಾಡುತ್ತದೆ, ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಚಲನೆ ಮಾತ್ರವೆ ನಮಗೆ ಏಕೈಕ ಆಧಾರ. ಇಲ್ಲಿ ಸೂರ್ಯ ನಮ್ಮ ರೈಲು ಮುಂದಕ್ಕೆ ಹೋಗುವಾಗ ಹಿಂದಕ್ಕೆ ಸಾಗುವ ಸ್ಟೇಷನ್ನಿನ ಹಾಗೆ. (ಅಂದರೆ ಭೂಮಿಯ ನಿಜವಾದ ತಿರುಗು ಚಲನೆಯ ದಿಕ್ಕು ಪಶ್ಚಿಮದಿಂದ ಪೂರ್ವಕ್ಕೆ)
ರಾತ್ರಿ ಹೊತ್ತು ಇಡೀ ನಕ್ಷತ್ರ ರಾಶಿಗಳು ನಿಧಾನವಾಗಿ ಕ್ಷಿತಿಜದಲ್ಲಿ ಉದಯವಾಗುತ್ತಾ, ಅಸ್ತವಾಗುತ್ತಾ ಇರುವುದನ್ನು ನೋಡಿ ಭೂಚಲನೆಯನ್ನು ಅರ್ಥ ಮಾಡಿಕೊಳ್ಳಬಹುದು.
ಆದರೆ ಹಿಂದೆಲ್ಲಾ ಇದನ್ನು ಅರ್ಥ ಮಾಡಿಕೊಳ್ಳದ ನಾವು, ಸಾಪೇಕ್ಷವಾಗಿ ನಮ್ಮಿಂದ ಹಿಂದಕ್ಕೆ ಸಾಗುವ ಸೂರ್ಯ ಚಂದ್ರಾದಿ ಆಕಾಶಕಾಯಗಳ ಚಲನೆಯನ್ನು ನೋಡಿ, ಅವೆಲ್ಲ ನಮ್ಮ ಸುತ್ತ ಪ್ರದಕ್ಷಿಣೆ ಹಾಕುತ್ತಿವೆ ಎಂದು ತಿಳಿದಿದ್ದೆವು.