Showing posts with label Devasthana. Show all posts
Showing posts with label Devasthana. Show all posts

Wednesday, September 30, 2026

ಹೆಣ್ಣು ಋತುವಾದಾಗ ಏಕೆ ದೇವಸ್ಥಾನಗಳಿಗೆ ಹೋಗಬಾರದು? ಮತ್ತು ಏಕೆ ದೇವರ ಪೂಜೆ ಮಾಡಬಾರದು?

 ಈ ಪ್ರಶ್ನೆಯನ್ನು ಎಷ್ಟು ಬಾರಿ ಎಷ್ಟು ಜನರು ಕೇಳುತ್ತಾರೆ. ಆದರೆ ಉತ್ತರ ಕೊಡುವವರು ಮಾತ್ರ ಇದರಲ್ಲಿ Science ಅಂತ ಮತ್ತೊಂದು ಮಗದೊಂದು ಕಾರಣ ಹೇಳುತ್ತಾ ಇರುತ್ತಾರೆ. ನನಗೆ ತಿಳಿದ ಕಾರಣ ಹೇಳುತ್ತೇನೆ!

ಮುಟ್ಟಿನ ಸಮಯದಲ್ಲಿ ಸ್ತ್ರೀ ಅಶುದ್ಧಳು!

ಈಗ ನನ್ನನ್ನು, ಹಿಂದೂ ಧರ್ಮವನ್ನು ನೀವು ಸ್ತ್ರೀ ವಿರೋಧಿ ಅಂತ ಅಂದುಕೊಳ್ಳಬಹುದು. ಆದರೆ ನಿಯಮಗಳು ಕೇವಲ ಸ್ತ್ರೀಯರಿಗೆ ಮಾತ್ರವಲ್ಲ ಪುರುಷರಿಗೂ ಇವೆ!

ದೇವಕಾರ್ಯ, ಪಿತೃಕಾರ್ಯ ಮಾಡುವಾಗ ಪುರುಷರೂ ಕೂಡ ಹಲವು ಶುದ್ಧತಾ ನಿಯಮಗಳನ್ನು ಪಾಲಿಸಬೇಕು. ಶಾಸ್ತ್ರಾನುಸಾರ ದೇಹದಿಂದ ಯಾವ ವಸ್ತು ಹೊರ ಬಂದರೂ ಅದನ್ನು ಅಶುದ್ಧ ಅಂತಲೇ ಹೇಳಲಾಗುತ್ತದೆ. ಅಂದರೆ ಉಗುಳು, ವೀರ್ಯ, ರಕ್ತ, ಮೂತ್ರ, ಮಲ ಇತ್ಯಾದಿ. ಇಷ್ಟೇ ಅಲ್ಲ ಪೂಜೆಗೆ ಕುಳಿತಾಗ ಕೆಮ್ಮಿದರೂ, ಸೀನಿದರೂ, ಆಕಳಿಸಿದರೂ, ಹೂಸು ಬಿಟ್ಟರೂ ಅದನ್ನು ಅಪವಿತ್ರ ಅಂತಲೇ ಕರೆಯುತ್ತಾರೆ! ಆ ತಕ್ಷಣ ಎದ್ದು ಸ್ನಾನ ಮಾಡಿ ಪುನಃ ಆಚಮನ ಮಾಡಬೇಕು.

ಆದರೆ ಪ್ರತಿಬಾರಿ ಸೀನಿದಾಗ ಸ್ನಾನ ಮಾಡಿ ಬಂದು ಮತ್ತೆ ಸೀನಿದರೆ? ಮತ್ತೆ ಸ್ನಾನ ಮತ್ತೆ ಅದೇ ಕಥೆಯೇ? ಹೀಗಾದರೆ ಪೂಜೆ ಮುಗಿಯುವುದಿಲ್ಲ. ಅದಕ್ಕೆ ಪರ್ಯಾಯ ವ್ಯವಸ್ಥೆ ಎನ್ನುವಂತೆ ಒಂದು ಸರಳ ಉಪಾಯ ಹೇಳಿದ್ದಾರೆ. ನಮ್ಮ ಬಲಗಿವಿಯಲ್ಲಿ ಗಂಗೆಯ ಸ್ಥಾನ ಇರುತ್ತದಂತೆ. ಹಾಗಾಗಿ ಪೂಜೆ ಮಾಡುವಾಗ ಕೆಮ್ಮು, ಸೀನು ಇತ್ಯಾದಿ ಬಂದರೆ ನಮ್ಮ ಬಲಗೈ ಇಂದ ಬಲ ಕಿವಿ ಮುಟ್ಟಿ ಅಚ್ಯುತ ಅನಂತ ಗೋವಿಂದ (ನಾಮ ತ್ರಯ) ಎಂದು ಹೇಳಿದರೆ ಗಂಗಾ ಸ್ನಾನದ ಫಲ ಲಭಿಸುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆದರೆ ಈ ಉಪಾಯ ಮಲ ಮೂತ್ರ ವಿಸರ್ಜನೆಗೆ ಅನ್ವಯಿಸುವುದಿಲ್ಲ. ಆಗ ಸ್ನಾನ ಮಾಡಿ ಪುನಃ ಆಚಮನ ಮಾಡಲೇಬೇಕು.

ಇನ್ನು ನೀವು ಸ್ನಾನ ಮಾಡಿ ತಯಾರಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದೀರಿ ಅಂತ ಅಂದುಕೊಳ್ಳಿ. ಆಗ ಏನೋ ಆಗಿ ನಿಮ್ಮ ಮೈಯಿಂದ ರಕ್ತ ಸ್ರವಿಸಿದರೆ, ಆ ಸ್ರಾವ ನಿಂತ ಮೇಲೆ ಪುನಃ ಸ್ನಾನ ಮಾಡಿ ನಂತರ ಹೋಗಬೇಕು. ಇದೇ ನಿಯಮ ಇರುವುದು. ಹಾಗಾಗಿ ರಕ್ತ, ಮಲ, ಮೂತ್ರ, ವೀರ್ಯ ಇತ್ಯಾದಿ ಸ್ರವಿಸುವ ಸ್ಥಿತಿ ಇದ್ದಾಗ ಪುರುಷ ಮತ್ತು ಮಹಿಳೆಯರು ಇಬ್ಬರೂ ವೈದಿಕ ಕರ್ಮಕಾಂಡಗಳಿಗೆ ಅನರ್ಹರು!

ಹಾಗಾಗಿ ಮಾಸಿಕ ಧರ್ಮದ ಸಮಯದಲ್ಲಿ ರಕ್ತಸ್ರಾವ ಇರುವಷ್ಟು ದಿನ ವೈದಿಕ ದೇವತಾರಾಧನೆ ವರ್ಜ್ಯ! ಅಂದರೆ ದೇವರು ಈ ಸಮಯದಲ್ಲಿ ಮಹಿಳೆಯ ಹತ್ತಿರ ಬರುವುದಿಲ್ಲವೇ? ಖಂಡಿತ ಹಾಗಲ್ಲ! ಮಹಾಭಾರತದ ಪ್ರಕಾರ ದ್ರೌಪದಿ ವಸ್ತ್ರಾಪಹರಣ ಸಮಯದಲ್ಲಿ ಆಕೆ ಮಾಸಿಕ ಧರ್ಮದಲ್ಲಿ ಇದ್ದಳು. ಆದರೂ ಆಕೆ ಕೃಷ್ಣನನ್ನು ಕರೆಯಲಿಲ್ಲವೇ? ಕೃಷ್ಣ ಅವಳ ಮಾನ ಉಳಿಸಲಿಲ್ಲವೇ? ಮತ್ತೇಕೆ ಈ ನಿಯಮಗಳು ಅಂತೀರಾ? ನಿಯಮಗಳು ಭಗವನ್ನಾಮ ಸ್ಮರಣೆಗೆ ಅಲ್ಲ ಕರ್ಮ ಸಂಸ್ಕಾರಗಳಿಗೆ ಮಾತ್ರ! ಸರ್ವತ್ರ ವ್ಯಾಪ್ತವಾಗಿರುವ ಶಕ್ತಿಯನ್ನು ಒಂದು ಸ್ಥಾನದಲ್ಲಿ ಆವಾಹಿಸಿದಾಗ ನಿಯಮ ಪಾಲನೆ ಅವಶ್ಯ! ಎಲ್ಲೆಡೆ ಇರುವ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿದಾಗ ಅಲ್ಲಿ ನಿಯಮಗಳ ಪಾಲನೆ ಮಾಡಲಾಗುತ್ತದೆ. ಹಸಿ ಬಟ್ಟೆ, ಮೈಯಿಂದ ಕರೆಂಟ್ ಬೋರ್ಡನ್ನು ಮುಟ್ಟುವುದಿಲ್ಲ.

ಇದು ವೈದಿಕ ನಿಯಮ. ಆದರೆ ನಮ್ಮ ಹಿಂದೂ ಸಂಸ್ಕೃತಿಯ ವಿಶೇಷತೆ ಗೊತ್ತೇ? ಎಲ್ಲಾ ಕಡೆಯೂ ಎಲ್ಲ ನಿಯಮಗಳು ಒಂದೇ ತರಹ ಇರುವುದಿಲ್ಲ! ಕೆಲವು ತಂತ್ರ ಶಾಸ್ತ್ರಗಳ ನಿಯಮಗಳು ಬೇರೆಯೇ ಇರುತ್ತವೆ! ಕೆಲವು ತಂತ್ರಗಳ ಪ್ರಕಾರ ಸ್ತ್ರೀಯ ಮಾಸಿಕ ರಕ್ತವು ಶುದ್ಧ! ಅದನ್ನು ಸಾಧನೆಗೆ ಬಳಸುತ್ತಾರಂತೆ! ವಾಮಾಚಾರ ಮಾರ್ಗದಲ್ಲಿ ಈ ಮಾಸಿಕ ರಕ್ತವನ್ನು "ರಾಜಸ" ಅಂತ ಕರೆಯುತ್ತಾರೆ. ಇದನ್ನು ಕೆಲವು ಪ್ರಯೋಗಗಳಿಗೆ ಬಳಸುತ್ತಾರೆ! ಇದು ಗೌಪ್ಯ ವಿಚಾರ.

ಹೀಗಾಗಿ ಇಲ್ಲಿ ಸ್ತ್ರೀ ಪುರುಷ ಅಂತ ಬೇಧವಿಲ್ಲ. ಮಾಸಿಕ ರಕ್ತಸ್ರಾವದ ಸಮಯದಲ್ಲಿ ಸ್ತ್ರೀ ಪೂಜಾ ಕಾರ್ಯಗಳಿಗೆ ಅಶುದ್ಧಳು. ಅಂತೆಯೇ ಅತಿಸಾರ ಬೇಧಿ ಆಗುವಾಗ ಪುರುಷ ಕೂಡ ಅಶುದ್ಧನೆ! ಏಕೆಂದರೆ ಸ್ತ್ರೀಯಲ್ಲಿ ರಕ್ತ ಸ್ರಾವ ೩- ೫ ದಿನಗಳ ವರೆಗೂ ಇರುತ್ತದೆ. ಅಂತೆಯೇ ಅತಿಸಾರ ಬೇಧಿ ಇರುವಾಗ ದಿನದಲ್ಲಿ ಹಲವಾರು ಬಾರಿ ಮಲ ವಿಸರ್ಜನೆಗೆ ಹೋಗಬೇಕಾಗುತ್ತದೆ. ಹಾಗಾಗಿ ಎಷ್ಟು ಸ್ನಾನ ಮಾಡಿದರೂ ಮತ್ತೆ ಸ್ನಾನ ಮಾಡುವ ಸ್ಥಿತಿ ಒದಗುತ್ತದೆ. ಹಾಗಾಗಿ ಆ ಸಮಯ ಕಳೆದ ನಂತರ ಒಮ್ಮೆಗೆ ಸ್ನಾನ ಮಾಡಿ ಶುದ್ಧರಾಗಿ ದೇವತಾ ಕಾರ್ಯ ಮಾಡಬೇಕು. ಆದರೆ ನಾಮ ಸ್ಮರಣೆಗೆ, ಭಗವದ್ ಚಿಂತನೆಗೆ ಯಾವ ಅಡ್ಡಿ ಆತಂಕವೂ ಇಲ್ಲ.

ದೇವರ ತೀರ್ಥ (ದೇವರಿಗೆ ಅಭಿಷೇಕ ಮಾಡಿದ ನೀರು) ಮನೆಯಲ್ಲಿ ಮತ್ತು ದೇವಸ್ಥಾನಗಳಲ್ಲಿ ಏಕೆ ತೆಗೆದುಕೊಳ್ಳಬೇಕು ,ಉಪಯೋಗ ಏನು?

 ನೋಡಿ ಸ್ವಾಮಿ ಪ್ರಶ್ನೆ ಕೇಳಿ ಕೇಳಿನೆ ನಾನು ಸನಾತನ ಧರ್ಮಾಚರಣೆಗೆ ಕೊಳ್ಳಿ ಇಡ್ತೀವೇನೋ ಅನ್ನಿಸ್ತಿದೆ. ನಿಮಗೆ ಹೀಗೆ ಇಂತಹ ಜಾಲತಾಣಗಳಲ್ಲಿ ಕೇಳುವ ಪ್ರಶ್ನೆ ಇದಲ್ಲ. ನೀವು ಆಸ್ತಿಕರಾಗಿದ್ದು ದೇವರ ಪೂಜೆಯಿಂದ ದೇವಸ್ಥಾನಗಳಿಗೆ ಹೋಗುತ್ತಿರುವುದರಿಂದ, ಪ್ರಾರ್ಥನೆಗೈಯ್ಯುವುದರಿಂದ ಸಂತುಷ್ಟರಾಗುತ್ತಿದ್ದರೆ ಅದರಿಂದ ಒಳ್ಳೆಯದಾಗುತ್ತದೆ ಅನ್ನುವ ಭಾವನೆ ಇದ್ದರೆ, ನೀವು ಇಂಥ ವಿಷಯಗಳ ಬಗೆಗೆ ನಿರ್ಧಾರ ತೆಗೆದುಕೊಳ್ಳಲು ನಿಮಗಾಗುತ್ತದೆ. ಒಂದು ವೇಳೆ ಆಗುವುದಿಲ್ಲ ಅಂತಾದರೆ ಒಬ್ಬ ಒಳ್ಳೆ ಸನಾತನ ಜ್ಞಾನವಿರುವ ಪಂಡಿತರನ್ನು (ದೇವಸ್ಥಾನದಲ್ಲಿ ತೀರ್ಥ ಕೊಡುವ ಬ್ರಾಹ್ಮಣನಲ್ಲ ಅಥವಾ ಪೂಜೆ ಮಾಡುವವರು ಅಲ್ಲ) ಸಂಪರ್ಕಿಸಿ ನಿಮ್ಮ ಸಂಶಯಗಳನ್ನೆಲ್ಲ ನಿವಾರಿಸಿಕೊಳ್ಳಬಹುದು. ಉದಾಹರಣೆಗೆ ಬನ್ನಂಜೆ ಗೋವಿಂದಾಚಾರ್ಯರಂಥವರು (ಅವರಿಲ್ಲ ಈಗ), ಶತಾವಧಾನಿ ಗಣೇಶ್ ಅವರಂಥವರು, ಶ್ರೀ ಪಾವಗಡ ಪ್ರಕಾಶವರಂಥವರು ನಿಮ್ಮ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಾರು. ಇಲ್ಲಿ ಕೇಳಿದರೆ ಅಷ್ಟೊಂದು ಸಮಂಜಸವಾದ ಆಧ್ಯಾತ್ಮಿಕ ಉತ್ತರ ಸಿಗಲಿಕ್ಕಿಲ್ಲ.

ನಿಜವಾಗಿ ನಾವು ನಮ್ಮ ಆಚರಣೆಗಳನ್ನು ವಿಜ್ಞಾನದೊಡನೆ ಸಮೀಕರಿಸಲು ಪ್ರಯತ್ನಿಸುತ್ತೇವೆ. ಹಿಂದಿನಕಾಲದಲ್ಲಿ ಆಚರಣೆ ದೇವರಿಗೋಸ್ಕರ ಎಂದು ತಿಳಿದವರು ಹೇಳುತ್ತಿದ್ದಾರೆ ಹಾಗೂ ಮಾಡುವವರು ಅನುಮೋದಿಸುತ್ತಿದ್ದರು. ಯಾಕೆಂದರೆ ವಿಜ್ಞಾದ ಮೊರೆಹೊಕ್ಕರೆ ನಾವು, ಅಲ್ಲಿ ತಿಳಿಸಿದ ವಿಷಯಕ್ಕೆ ವಿರುದ್ಧವಾಗಿ ಮಾತಾಡಲು ಪ್ರಾರಂಭಿಸುತ್ತೇವೆ. ಉದಾಹರಣೆಗೆ ಚಾತುರ್ಮಾಸ ದಲ್ಲಿ ಒಂದೊಂದು ತಿಂಗಳು ಒಂದೊಂದು ಆಹಾರ ತ್ಯಜಿಸಬೇಕು, ದೇವರಿಗೋಸ್ಕರ ಅಂತ ಶಾಸ್ತ್ರ ಹೇಳಿದ್ದು, ಆದರೆ ವಿಜ್ಞಾನ ಹೇಳುತ್ತದೆ ಆದಿನಗಳ ವಾತಾವರಣಕ್ಕೆ ಆಯಾ ಖಾದ್ಯಗಳು ಒಳ್ಳೆಯದಲ್ಲ ಅಂತ. ದೇವರಿಗೋಸ್ಕರ ಅಂತ ನಂಬುವವರು ಸುಮ್ಮನೆ ಆಚರಿಸುತ್ತಾರೆ, ಆದರೆ ವಿಜ್ಞಾನದ ಪ್ರಕಾರ ಹೋಗುವವರು, ಜ್ವರ ಬರುತ್ತದೆ ಬರಲಿ, ಮಾತ್ರೆ ಇಲ್ಲವೇ? ವೈದ್ಯರಿಲ್ಲವೇ ಅಂತ ವಾದಿಸುತ್ತಾರೆ. ಗ್ರಹಣಗಳ ವಿಚಾರದಲ್ಲೂ ಹೀಗೆ ನಡೆಯುತ್ತದೆ.

ಆದ್ದರಿಂದ ತೀರ್ಥದ ವಿಷಯದಲ್ಲೂ ವೈಜ್ಞಾನಿಕವಾಗಿ ಆಲೋಚಿಸಿದಾಗ, ವಿಶೇಷ ಶಿಲೆಯ (ದೇವಾ ಮೂರ್ತಿ) ಮೇಲಿಂದ ಬಿದ್ದ, ತುಳಸಿ, ಬಿಲ್ವಪತ್ರೆ, ಅರಿಷಣ ಹಾಗೂ ಚಂದನದಂಥವುಗಳಿಂದ ಕೂಡಿ, ವಿಶೇಷ ತಾಮ್ರಪಾತ್ರೆಯಲ್ಲಿ ಇದ್ದು ನಂತರ ನಮ್ಮ ಕೈಗೆ ಬರುವ ಆ ಜಲ ವಿಶೇಷವಾಗಿದ್ದಿರುತ್ತದೆ, ಅದು ಆರೋಗ್ಯಕ್ಕೆ ಒಳ್ಳೆಯದೆಂಬ ಭಾವನೆ.

ಅದೆಲ್ಲ ಬಿಟ್ಟು ಜನ್ಮಾಂತರದಿಂದ ಈ ತೀರ್ಥದ ಸೇವನೆ ಆಧ್ಯಾತ್ಮಿಕವಾಗಿ ಮಹತ್ವದ್ದು, ಅದರಿಂದ ದೇವರ ಸಾಕ್ಷಾತ್ಕಾರವಾಗುತ್ತದೆ ಎಂದು ತೆಗೆದುಕೊಂಡರೆ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಏನಂತೀರಿ?