Monday, December 30, 2024

ನಮ್ಮಮ್ಮ ಶಾರದೆ ಉಮಾಮಹೇಶ್ವರಿ

 



ನಮ್ಮಮ್ಮ ಶಾರದೆ ಉಮಾಮಹೇಶ್ವರಿ

ನಿಮ್ಮೊಳಗಿಹನ್ಯಾರಮ್ಮ
ಕಮ್ಮಗೋಲನವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ ಅಮ್ಮಯ್ಯ
ಮೋರೆ ಕಪ್ಪಿನಭಾವ ಮೊರದಗಲದ ಕಿವಿ
ಕೋರೆದಾಡೆಯನ್ಯಾರಮ್ಮ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೇ ಅಮ್ಮಯ್ಯ
ಉಟ್ಟ ದಟ್ಟಿಯು ಬಿಗಿದುಟ್ಟ ಚಲ್ಲಣವು
ಧಿಟ್ಟ ತಾನಿವನ್ಯಾರಮ್ಮ
ಪಟ್ಟದರಾಣಿ ಪಾರ್ವತಿಯ ಕುಮಾರ
ಹೊಟ್ಟೆಯ ಗಣನಾಥನೆ ಅಮ್ಮಯ್ಯ
ರಾಶಿವಿದ್ಯೆಯ ಬಲ್ಲ ರಮಣಿಹಂಬಲನೊಲ್ಲ
ಬಾಷಿಗನಿವನ್ಯಾರಮ್ಮ
ಲೇಸಾಗಿ ಸುಜನರ ಸಲಹುವ ನೆಲೆಯಾದಿ
ಕೇಶವನ ದಾಸ ಕಾಣೇ ಅಮ್ಮಯ್ಯ