*ಪೆರುವಿನ ತನ್ನ ಉಗಮ ಸ್ಥಾನದಿಂದ ಕೇವಲ 300 ಕಿಲೋಮೀಟರ್ ಪಶ್ಚಿಮಕ್ಕೆ ಬಂದರೆ ಅನಾಯಾಸವಾಗಿ ಫೆಸಿಫಿಕ್ ಸಾಗರವನ್ನು ಸೇರಬಹುದು. ಆದರೆ ಅದು ಅಮೆಜಾನ್‌ನಂತಹ ಗಂಡುಬೀರಿಗೆ ಸಾಧ್ಯವೇ ಇಲ್ಲ!! ಆಕೆ ಈಶಾನ್ಯಕ್ಕೆ 6,400 ಕಿಲೋಮೀಟರುಗಳಷ್ಟು ನೆಲಸೀಳಿಕೊಂಡು ಅಟ್ಲಾಂಟಿಕ್ ಸಾಗರವನ್ನು ಸೇರುತ್ತಾಳೆ! ಹೀಗೆ ಸೇರುವ ಮಾರ್ಗದಲ್ಲಿ ಆಕೆಯೊಂದಿಗೆ ಸೇರಿಕೊಳ್ಳುವ ಉಪನದಿಗಳ ಸಂಖ್ಯೆಯೇ ಒಂದು ಸಾವಿರದ ನೂರು!! ಪ್ರಪಂಚದ ಅನೇಕ ದೇಶಗಳ ದೊಡ್ಡ ನದಿಗಳೇ ಈ ಉಪನದಿಗಳಷ್ಟೂ ದೊಡ್ಡದಾಗಿಲ್ಲ ಎಂದರೆ, ಅಮೆಜಾನ್ ನದಿಯ ವೈಶಾಲ್ಯತೆ ಅರ್ಥವಾದೀತು!!*
*ಇಡೀ ಭೂಮಿಯಲ್ಲಿ ಇರುವ ಐದನೇ ಒಂದರಷ್ಟು ಸಿಹಿ ನೀರು ಈ ಒಂದೇ ನದಿಯಲ್ಲಿ ಹರಿಯುತ್ತದೆ! ಹೆಚ್ಚೇಕೆ, ಅಮೆಜಾನ್ ನದಿಯ ಮೂಲಕ ಹರಿಯುವ ನೀರಿನ ಪ್ರಮಾಣವೇ ಪ್ರತೀ ಸೆಕೆಂಡ್‌ಗೆ ಎರಡು ಲಕ್ಷದ ಒಂಭತ್ತು ಸಾವಿರ ಕ್ಯೂಬಿಕ್ ಮೀಟರ್!! ಅನೇಕ ಕಡೆ ಈ ನದಿಯ ಅಗಲವೇ 190 ಕಿಲೋಮೀಟರ್‌ಗಳು!! ಸಾಗರ ಸೇರಿದ ಮೇಲೂ ಈ ನದಿ ಸುಮಾರು ನೂರು ಕಿಲೋಮೀಟರ್ ವರೆಗೂ ಸಮುದ್ರದ ಉಪ್ಪುನೀರಿನಲ್ಲಿ ಬೆರೆಯುವುದೇ ಇಲ್ಲ!*
*ವಿಚಿತ್ರವೆಂದರೆ, ಇಂದಿನವರೆಗೂ ಅಮೆಜಾನ್‌ಗೆ ಒಂದೇ ಒಂದು ಸೇತುವೆ ಕಟ್ಟಲಾಗಿಲ್ಲ! ಇವೆಲ್ಲಕ್ಕೆ ಕಿರೀಟವಿಟ್ಟಂತೆ, ಈ ನದಿಗೆ ಸಮನಾಂತರವಾಗಿ, ಸುಮಾರು ನಾಲ್ಕು ಕಿ.ಮೀ. ಆಳದ ಭೂಮಿಯೊಳಗೆ ಇದರ 4 ಪಟ್ಟು ದೊಡ್ಡದಾದ ನದಿ (2011ರ ಸಂಶೋಧನೆ) ಹರಿಯುತ್ತಿದ್ದು, ಅದನ್ನು 'ಹಂಜಾ಼ ನದಿ' ಎನ್ನುತ್ತಿದ್ದಾರೆ!*
*ತಾನು ಹರಿವ ಸ್ಥಳದಲ್ಲಿ 40ಸಾವಿರ ಜಾತಿಯ ಮರಗಿಡಗಳು!, 1,300 ಪ್ರಬೇಧದ ಪಕ್ಷಿಗಳು, 3000 ಜಾತಿಯ ಮೀನುಗಳು, 430 ಜಾತಿಯ ಸ್ತನಿಗಳು, ಎರಡೂವರೆ ಮಿಲಿಯನ್ ಜಾತಿಯ ಕೀಟಗಳಿಗೆ ಆಶ್ರಯ ನೀಡುತ್ತಾಳೆ!! ಭಯಾನಕ ಇಲೆಕ್ಟ್ರಿಕ್ ಈಲ್‌ಗಳು, ಕೆಂಪಿರುವೆ, ಟೊರಾಂಟುಲಾಗಳು, ಭೀಕರ ಪಯಾರಾ ಮೀನುಗಳು, ಅನಕೊಂಡಾಗಳು, ಖೇಮ್ಯಾನ್‌ಗಳು, ವಿಚಿತ್ರ ಕ್ಯಾಂಡಿರೂ ಮೀನುಗಳು!! ನೀರಿಗಳಿದ ಯಾವುದನ್ನೇ ಆಗಲಿ ನಿಮಿಷದೊಳಗೆ ಅಸ್ಥಿಪಂಜರ ಮಾಡಿಬಿಡುವ ರಕ್ತಪಿಪಾಸು ಫಿರಾನ್ಹಾ ಗುಂಪುಗಳು.. ಒಂದೇ ಎರಡೇ?! ಇವೆಲ್ಲಕ್ಕೆ ಕಲಶವಿಟ್ಟಂತೆ ಆಧುನಿಕ ಪ್ರಪಂಚದ ಗಂಧವೇ ಇಲ್ಲದೆ ಪ್ರಕೃತಿಯೊಳಗೆ ಲೀನವಾಗಿರುವ ಕಾಡುಜನರ ಆಲಯವಿದು! ಇಂತಹಾ ಸ್ವರ್ಗಸದೃಶ ಪ್ರಕೃತಿಗೆ ನಾವು ದೂರದಿಂದಲೇ ನಮಿಸೋಣ!*