Showing posts with label ದಿನಕ್ಕೊಂದು ಕಥೆ. Show all posts
Showing posts with label ದಿನಕ್ಕೊಂದು ಕಥೆ. Show all posts

Monday, December 2, 2024

ಜಗತ್ತಿನ ರಹಸ್ಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ವ್ಯಕ್ತಿಯನ್ನಲ್ಲ

 ಮೇಡಂ ಕ್ಯೂರಿಗೆ ನೊಬೆಲ್ ಪಾರಿತೋಷಕ ಸಿಕ್ಕಿತು. ಒಂದಲ್ಲ, ಎರಡಲ್ಲ. ಅವಳ ಮನೆಗೆ ಐದು ನೊಬೆಲ್ ಪಾರಿತೋಷಕ ಸಿಕ್ಕಿತು. ಆಕೆಗೆ ಎರಡು, ಗಂಡನಿಗೆ ಒಂದು, ಮಗಳಿಗೆ ಒಂದು, ಅಳಿಯನಿಗೆ ಒಂದು.

ಆಕೆಗೆ ನೊಬೆಲ್ ಪಾರಿತೋಷಕ ಸಿಕ್ಕಾಗ ದೇಶವೇ ಆಶ್ಚರ್ಯಪಟ್ಟಿತು, ಕೊಂಡಾಡಿತು. ಆ ಸಂದರ್ಭದಲ್ಲಿ ಆಕೆ ತೋಟದ ಮನೆಯಲ್ಲಿದ್ದಳು. ಮೇಡಂ ಕ್ಯೂರಿಯನ್ನು ಸಂದರ್ಶಿಸುವುದಕ್ಕೆ ಮಾಧ್ಯಮದವರು ತೋಟದ ಮನೆಗೆ ಬಂದರು. ಅಲ್ಲಿಯೇ ಕೈತೋಟದಲ್ಲಿ ಕೆಲಸ ಮಾಡುತ್ತಿದ್ದವಳನ್ನು ಇವರು ಕೇಳಿದರು. ನಾವು ಮೇಡಂ ಕ್ಯೂರಿಯನ್ನು ಸಂದರ್ಶಿಸುವುದಕ್ಕೆ ಬಂದಿದ್ದೇವೆ. ಅವರಿಗೆ ಸ್ವಲ್ಪ ತಿಳಿಸಿ ಅಂದರು. ಅದಕ್ಕೆ ಆಕೆ, "ಅವರು ಈಗ ಸಧ್ಯಕ್ಕೆ ನಿಮಗೆ ಸಿಗುವುದಿಲ್ಲ, ಒಂದು ವೇಳೆ ಅವರೇ ಬೇಕು ಅಂದರೆ ಬಹಳ ಹೊತ್ತಿನವರೆಗೆ ಕಾಯಬೇಕಾಗುತ್ತದೆ" ಎಂದಳು.

ಮಾಧ್ಯಮದವರಿಗೆ ಆಕೆಯೇ ಮೇಡಂ ಕ್ಯೂರಿ ಎಂಬುದು ಗೊತ್ತಾಗಲಿಲ್ಲ. ಆಕೆಯ ಮನೆಯ ಕೆಲಸದವಳು ಅಂತ ತಿಳಿದಿದ್ದರು. ಏಕೆಂದರೆ ಅವಳ ಬಟ್ಟೆ ಹಾಗೆ ಇದ್ದವು. ಕೊನೆಗೆ ಮಾಧ್ಯಮದವರಿಗೆ "ನಿಮಗೋಸ್ಕರ ಮೇಡಂ ಕ್ಯೂರಿಯವರು ಒಂದು ಸಂದೇಶ ಇಟ್ಟಿದ್ದಾರೆ ಅದನ್ನು ತಗೆದುಕೊಳ್ಳಿ" ಎಂದು ಕೊಟ್ಟಳು.

ಅದರಲ್ಲಿ "Take more interest in objects to knowing the secrets of world, not in the person" ಅಂದರೆ, "ನೀವು ಜಗತ್ತಿನ ರಹಸ್ಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ, ವ್ಯಕ್ತಿಯನ್ನಲ್ಲ" ಎಂದು ಬರೆದಿತ್ತು.

ನೀತಿ :-- ನಮಗೇನಾದರೂ ನೊಬೆಲ್ ಪ್ರಶಸ್ತಿ ಸಿಗುತ್ತದೆ ಅಂದರೆ ಸಾಕು, ಕನಸು ಕಾಣುವುದಕ್ಕೆ ಶುರುವಾಗುತ್ತದೆ, ಹುಚ್ಚು ಹಿಡಿಯುತ್ತದೆ. ಆದರೆ ವಿಜ್ಞಾನಿಗಳ ಮನಸ್ಸು, ಎಂಥದ್ದು? ಬದುಕು ಕಟ್ಟಿಕೊಳ್ಳಲು ಮನಸ್ಸು ಗಟ್ಟಿಯಾಗಬೇಕು.

Saturday, November 30, 2024

ದಾನ ಹೇಗಿರಬೇಕು?

 ಎರಡೂವರೆ ಸಾವಿರ ವರ್ಷಗಳ ಹಿಂದಿನ ಕತೆ. ಭಗವಾನ್ ಬುದ್ಧರು ಅನೇಕ ದಿನಗಳ ವಿಹಾರದ ಬಳಿಕ ಮಗಧ ದೇಶದ ರಾಜಧಾನಿಯತ್ತ ಹೊರಟರು. ಆಗ ಗ್ರಾಮೀಣ ಪ್ರದೇಶದ ಜನರು ಓಡೋಡಿ ಬಂದು ಬಗೆಬಗೆಯ ಕಾಣಿಕೆಗಳನ್ನು ತಂದರು. ಸಾಮ್ರಾಟ್ ಬಿಂಬಸಾರನಾದರೋ ಅತ್ಯಮೂಲ್ಯ ಉಡುಗೊರೆಗಳನ್ನು ತಂದೊಪ್ಪಿಸಿದ. ಆಗ ಭಗವಾನ್ ಬುದ್ಧರು ದಾನ ಸ್ವೀಕಾರ ಮಾಡಲೆಂದು ಬಲಗೈಯನ್ನೆತ್ತುತ್ತಿದ್ದರು.

ಸಾವಿರಾರು ಮಂದಿಯ ಜನಸಂದಣಿಯ ನಡುವೆ ನುಗ್ಗಿ, ಒಬ್ಬ ಮುದುಕಿ ತನ್ನ ಕಾಣಿಕೆಯನ್ನು ಕೊಡಲೆಂದು ಬಂದವಳೇ ಕೈ ಮುಗಿದು "ಹೇ ಮಹಾಪ್ರಭು, ನಾನು ಬಡವಿ. ನಿಮಗೊಪ್ಪಿಸಲು ಅರ್ಹವಾದ ವಸ್ತು ನನ್ನ ಬಳಿ ಇಲ್ಲ. ನನಗೆ ಮರದಿಂದ ಬಿದ್ದ ಒಂದು ಮಾವಿನ ಹಣ್ಣು ಸಿಕ್ಕಿತು. ಅದನ್ನೇ ನಿಮಗೆ ಅರ್ಪಿಸುತ್ತಿದ್ದೇನೆ" ಎಂದು ಅರ್ಧ ತಿಂದ ಮಾವಿನ ಹಣ್ಣನ್ನು ಮುಂದಕ್ಕೆ ಚಾಚಿದಳು. ಅರ್ಧ ಮಾವಿನ ಹಣ್ಣನ್ನು ಕಂಡು ಬುದ್ಧರು "ಅಮ್ಮ, ಇದರ ಉಳಿದರ್ಧ ಎಲ್ಲಿ ಹೋಯ್ತು?" ಎಂದು ಪ್ರಶ್ನಿಸಿದಾಗ ಮುದುಕಿ "ನಾನು ಮಾವಿನ ಹಣ್ಣು ತಿನ್ನುತ್ತಿರುವಾಗಲೇ ನೀವು ತೆರಳುವ ಸಮಾಚಾರ ಸಿಕ್ಕಿತು. ನನ್ನ ಬಳಿ ಬೇರೇನೂ ಇಲ್ಲದ್ದರಿಂದ ಇದನ್ನೇ ಅರ್ಪಿಸಲೆಂದು ಬಂದೆ" ಎಂದು ಉತ್ತರಿಸಿದಳು.

ಈ ಮಾತನ್ನು ಕೇಳಿದ ಬುದ್ಧರು ತಮ್ಮ ಆಸನದಿಂದ ಇಳಿದು ಬಂದು, ಹಣ್ಣು ಸ್ವೀಕಾರ ಮಾಡಿದರು. ಆಗ ಬಿಂಬಸಾರ "ಹೇ ಭಗವಾನ್, ನೀವು ಬಹುಮೂಲ್ಯ ಕಾಣಿಕೆಗಳನ್ನು ಕೇವಲ ಕೈಯಾಡಿಸಿ ಸ್ವೀಕಾರ ಮಾಡಿದಿರಿ. ಆದರೆ ಮುದುಕಿಯ ಅರ್ಧ ಎಂಜಲು ಹಣ್ಣನ್ನು ಸ್ವೀಕರಿಸಲು ಕೆಳಗಿಳಿದು ಬಂದಿರಿ. ಇದೇಕೆ ಹೀಗೆ?" ಎಂದು ಕೇಳಿದ. ಮುಗುಳ್ನಗುತ್ತಾ ಬುದ್ಧ "ನೀವುಗಳೆಲ್ಲ ಕೊಟ್ಟದ್ದು ನಿಮ್ಮ ಸಂಪತ್ತಿನ ಒಂದು ಸಣ್ಣ ಅಂಶ ಮಾತ್ರ! ಅದಲ್ಲದೆ ಅಹಂಕಾರದಿಂದ ದಾನ ನೀಡುತ್ತೀರಿ. ಆದರೆ ಈ ಅಜ್ಜಿ ತನ್ನ ಬಳಿ ಇದ್ದುದೆಲ್ಲವನ್ನೂ ಪ್ರೀತಿ ಪೂರ್ವಕವಾಗಿ ಒಪ್ಪಿಸಿದ್ದಾರೆ. ಇಂತಹ ನಿರ್ಮಲ ಅಂತಃಕರಣದ ಪ್ರೀತಿ ಮುಖ್ಯ. ಕಾಣಿಕೆಯ ವೌಲ್ಯವಲ್ಲ" ಎಂದರು. ಈ ಮಾತನ್ನು ಕೇಳಿ ಬಿಂಬಸಾರ ತಲೆದೂಗಿ ಬಾಗಿದ.

ನೀತಿ :-- ಕೊಡುವ ವಸ್ತುವಿಗಿಂತಲೂ, ಅದರ ಹಿನ್ನೆಲೆಯಲ್ಲಿರುವ ಭಾವನೆಗಳು ಮುಖ್ಯ. ಶುದ್ಧ ಅಂತಃಕರಣದಿಂದ ಪ್ರೀತಿ, ಸ್ನೇಹ, ಭಕ್ತಿ ಭಾವದಿಂದ ಅರ್ಪಿಸಿದ ಸಣ್ಣ ವಸ್ತುವೂ ಮಹತ್ವದ್ದಾಗಬಲ್ಲುದು. ವಸ್ತುವಲ್ಲ ಮನಸ್ಸು ಮುಖ್ಯ.