Showing posts with label ದಿನಕ್ಕೊಂದು ಕಥೆ. Show all posts
Showing posts with label ದಿನಕ್ಕೊಂದು ಕಥೆ. Show all posts

Saturday, November 30, 2024

ಯಾವಾಗಲೂ ಒಳ್ಳೆಯದನ್ನೇ ಯೋಚಿಸಿ

 ದಡ್ಡ ಶಿಖಾಮಣಿಯೊಬ್ಬ ಬಸ್ಸಿಗೆ ಕಾಸಿಲ್ಲದೇ ಕಾಲುದಾರಿಯಲ್ಲಿ ನಡೆದುಕೊಂಡು ಹೊರಟಿದ್ದ, ಅವನು ದೂರದ ಸಂಬಂಧಿಕರ ಮನೆಗೆ ತೆರಳುತ್ತಿದ್ದ. ಅವರ ಊರಿನಿಂದ ನೆಂಟರ ಊರಿಗೆ ಸಾಕಷ್ಟು ದೂರವಿತ್ತು, ಕೈಯಲ್ಲಿ ಕಾಸಿಲ್ಲದ ಕಾರಣ ನಡೆದೇ ಹೋಗುವುದೆಂದು ನಿರ್ಧರಿಸಿದ್ದ. ದಾರಿ ಮಧ್ಯೆ ದೊಡ್ಡದೊಂದು ಕಾಡಿತ್ತು. ಆ ಕಾಡಿನ ಕಾಲುದಾರಿಯಲ್ಲಿ ಅದಾಗಲೇ ಅರ್ಧ ಸವೆಸಿ ಬಂದುಬಿಟ್ಟಿದ್ದ. ಸಾಕಷ್ಟು ಬಿಸಿಲಿದ್ದ ಕಾರಣ ಆಯಾಸವೆನಿಸಿ ಒಂದರೆಕ್ಷಣ ವಿಶ್ರಮಿಸೋಣವೆಂದುಕೊಂಡು ಕಾಡಿನೊಳಗಿದ್ದ ಒಂದು ಮರದ ಕೆಳಗೆ ಕುಳಿತುಕೊಂಡ. ನೆರಳು ಮತ್ತು ತಂಪಾದ ಗಾಳಿಯು ಅವನ ಆಯಾಸವನ್ನು ಕಡಿಮೆ ಮಾಡಿತ್ತು.

ಅವನು ಮರದ ಬಗ್ಗೆ ತಿಳಿಯದೇ ಅದರ ಕೆಳಗೆ ಕುಳಿತುಬಿಟ್ಟಿದ್ದ. ಅದು ಕೇಳಿದ್ದು, ಬಯಸಿದ್ದು ಕೊಡುವ ಮರವಾಗಿತ್ತು. ಹಾಗಾಗಿ ಅವನು ಬಯಸಿದ್ದೆಲ್ಲವೂ ಸಿಗುವುದಿತ್ತು. ಅದ್ಯಾವುದರ ಪರಿವೆಯೇ ಇಲ್ಲದ ಹೆಡ್ಡನು ಮರದ ಕೆಳಗೆ ಕುಳಿತು "ಅಬ್ಬಾ.. ಎಷ್ಟೊಂದು ತಂಪಿದೆ. ಕುಡಿಯಲು ತಣ್ಣನೆಯ ನೀರಿದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಎಂದುಕೊಂಡನು. ತಕ್ಷಣಕ್ಕೆ ಅವನೆದುರಿಗೆ ತಂಪಾದ ನೀರು ಲಭ್ಯವಾಯಿತು. ನೀರನ್ನು ಕಂಡೊಡನೆ ಗಟಗಟನೆ ಕುಡಿದ ಹೆಡ್ಡನು "ಸ್ವಲ್ಪ ಹೊತ್ತು ನಿದ್ರೆ ಬರುವಂತಿದ್ದರೆ ಚೆನ್ನಿತ್ತು" ಎಂದುಕೊಳ್ಳುವಷ್ಟರಲ್ಲಿ ಅವನನ್ನು ನಿದ್ರಾದೇವಿ ಆವರಿಸಿದಳು. ಮಲಗಿಕೊಂಡೇ "ಅಲ್ಲಿಂದಾ ನಡೆದು ಕಾಲು ನೋವುತ್ತಿವೆ. ಯಾರಾದರೂ ಆಳು ಕಾಲೊತ್ತುವಂತಿದ್ದರೆ ಮಜವಾಗಿರುತ್ತಿತ್ತು" ಎಂದುಕೊಂಡ. ತಕ್ಷಣವೇ ಆಳೊಬ್ಬ ಅವನ ಕಾಲನ್ನು ಮೃದುವಾಗಿ ಒತ್ತುತ್ತಿರುವುದು ಅವನ ಗಮನಕ್ಕೆ ಬಂತು. ಸ್ವಲ್ಪ ನಿದ್ರೆಯ ನಂತರ ಎಚ್ಚೆತ್ತ ಹೆಡ್ಡನು "ಆಯಾಸವೇನೋ ಪರಿಹಾರವಾಯ್ತು. ತಿನ್ನಲು ಒಂದಿಷ್ಟು ರುಚಿಯಾದ ಆಹಾರ ಸಿಕ್ಕರೆ ಒಳ್ಳೆಯದಿತ್ತು" ಎಂದುಕೊಳ್ಳುವಾಗಲೇ ಅವನೆದುರಿಗೆ ವಿವಿಧ ಭಕ್ಷ್ಯಭೋಜ್ಯಗಳು ಪ್ರತ್ಯಕ್ಷವಾದವು.

ತನಗೆ ರುಚಿಯೆನಿಸಿದ್ದೆಲ್ಲವನ್ನೂ ಗಬಗಬನೆ ತಿಂದ ಹೆಡ್ಡನು "ಏನಾಶ್ಚರ್ಯ.. ನಾನು ಮನದಲ್ಲಿ ಅಂದುಕೊಂಡಿದ್ದೆಲ್ಲವೂ ನಿಜವಾಗುತ್ತಿದೆ. ಇಲ್ಲಿ ಯಾರಾದರೂ ದೈವಿಕ ಶಕ್ತಿಯುಳ್ಳವರು ಕುಳಿತು ನನ್ನ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಾರೆಯೇ?, ಇಲ್ಲಾ.. ಯಾವುದಾದರೂ ದೆವ್ವ ಪಿಶಾಚಿಗಳು ನನ್ನನ್ನು ಹೀಗೆ ಆಟವಾಡಿಸುತ್ತಿರಬಹುದೇ?” ಎಂದು ಯೋಚಿಸತೊಡಗಿದನು. ಇಂಥಹ ಆಲೋಚನೆಯಿಂದ ಸ್ವಲ್ಪ ವಿಚಲಿತನಾದಂತೆ ಕಂಡ ಹೆಡ್ಡನು ಅಂಜಿಕೆಯಿಂದ ಮೇಲೆದ್ದು “ಅಯ್ಯೋ.. ಈ ಕಾಡಿನಲ್ಲಿ ಕ್ರೂರ ಹುಲಿಯೊಂದಿದೆ ಎಂದು ನಮ್ಮಜ್ಜಿ ಹೇಳುತ್ತಿದ್ದಳು. ಒಂದೊಮ್ಮೆ ಆ ಹುಲಿಯೇನಾದರೂ ಪ್ರತ್ಯಕ್ಷವಾದರೇ?” ಎಂದು ಯೋಚಿಸುತ್ತಿರುವಾಗಲೇ ಅವನೆದುರಿಗೆ ದೊಡ್ಡದಾದೊಂದು ಹುಲಿ ಪ್ರತ್ಯಕ್ಷವಾಯಿತು. ಅದನ್ನು ಕಂಡು ಭಯಬಿದ್ದ ಹೆಡ್ಡನು "ಈ ಹುಲಿ ಏನಾದರೂ ನನ್ನನ್ನು ಹೊತ್ತೊಯ್ದು ಕೊಂದು ತಿಂದುಬಿಟ್ಟರೇ” ಎಂದು ಯೋಚಿಸಿದ. ತಕ್ಷಣವೇ ಹುಲಿಯು ಅವನನ್ನು ಹೊತ್ತೊಯ್ದು ಕೊಂದು ತಿಂದುಬಿಟ್ಟಿತು.

ನೀತಿ :-- ಯಾವಾಗಲೂ ಒಳ್ಳೆಯದನ್ನೇ ಯೋಚಿಸಬೇಕು. ಕೆಟ್ಟದ್ದನ್ನು ಯೋಚಿಸಿದರೆ ಕೆಟ್ಟದ್ದೇ ಆಗುತ್ತ

ಮಣ್ಣಿನ ಉಂಡೆಯಲ್ಲಿ ವಜ್ರ

 ಒಬ್ಬ ಮನುಷ್ಯ ಸಮುದ್ರ ತೀರಕ್ಕೆ ಹೋಗಿ ತೆರೆಗಳೊಂದಿಗೆ ಆಟವಾಡಿ ಸ್ನಾನ ಮಾಡಿದ. ಮಧ್ಯಾಹ್ನ ಊಟ ಮಾಡಿ ವಿಶ್ರಾಂತಿಗಾಗಿ ಸ್ಥಳ ಹುಡು ಕಾಡಿದ. ಹತ್ತಿರದಲ್ಲೆಲ್ಲೂ ಮರಗಳಿರಲಿಲ್ಲ. ಮುಂದೆ ಕೆಲವು ದೊಡ್ಡ ದೊಡ್ಡ ಬಂಡೆಗಳಿದ್ದವು. ಅವುಗಳ ಹಿಂದೆ ಬೆಟ್ಟದ ಪ್ರದೇಶ. ಮರಗಳ ಕೆಳಗೆ ಮಲಗಿ ವಿಶ್ರಾಂತಿ ಪಡೆಯುವುದು ಅವನ ಉದ್ದೇಶದಿಂದ ಬೆಟ್ಟದ ಕಡೆಗೆ ನಡೆದ.

ಅವನಿಗೆ ಮರಗಳ ಹಿಂದೆ ಒಂದು ಗುಹೆ ಕಾಣಿಸಿತು. ಕುತೂಹಲದಿಂದ ಅಲ್ಲಿಗೆ ಹೋದ. ಅದೊಂದು ದೊಡ್ಡ ಗುಹೆ. ಸಾಕಷ್ಟು ಸ್ವಚ್ಛವಾಗಿದೆ. ಯಾರೋ ಅಲ್ಲಿ ಇದ್ದು, ಹೋದ ಲಕ್ಷಣಗಳಿವೆ. ಯಾರೋ ಗರಿಯ ಚಾಪೆಯನ್ನು ಹಾಸಿ ಬಿಟ್ಟು ಹೋಗಿದ್ದಾರೆ. ಇವನು ಚಾಪೆಯ ಮೇಲೆ ಮಲಗಿ ನಿದ್ರೆಹೋದ. ಗುಹೆ ತಂಪಾಗಿತ್ತು. ಚೆನ್ನಾಗಿ ಗಾಳಿ ಬರುತ್ತಿತ್ತು. ಒಂದೆರಡು ತಾಸು ನಿದ್ರೆ ಮುಗಿಸಿ ಎದ್ದ. ಮೈ ಮುರಿದು ಹೊರಡಲು ಸಿದ್ಧನಾದ. ಹೊರಡುವ ಮುನ್ನ ಗುಹೆಯ ಮೂಲೆಯಲ್ಲಿದ್ದ ಒಂದು ಬಟ್ಟೆಯ ಚೀಲವನ್ನು ಗಮನಿಸಿದ, ಅದನ್ನೆತ್ತಿಕೊಂಡು ನೋಡಿದ. ಅದರಲ್ಲಿ ನೂರಾರು ಮಣ್ಣಿನ ಉಂಡೆಗಳು. ಪ್ರತಿ ಯೊಂದೂ ಸುಮಾರು ಟೆನ್ನೀಸ್ ಚೆಂಡಿನಷ್ಟು ದೊಡ್ಡದಾಗಿತ್ತು. ಬಹುಶಃ ಈ ಗುಹೆ ಯಲ್ಲಿ ಯಾರೋ ಕೆಲವರು ಮಕ್ಕಳನ್ನು ಕರೆದುಕೊಂಡು ಬಂದು ಉಳಿದಿರಬಹುದು. ಆಗ ಮಕ್ಕಳು ಈ ಮಣ್ಣಿನ ಉಂಡೆಗಳನ್ನು ಮಾಡಿ ಇಟ್ಟಿರ ಬಹುದೆಂದು ಊಹಿಸಿದ.

ಚೀಲವನ್ನು ಹೆಗಲಿಗೇರಿಸಿ ಮತ್ತೆ ಸಮುದ್ರದೆಡೆಗೆ ಹೊರಟ. ತೀರದಲ್ಲಿ ನೀರಿನ ಅಲೆಗಳ ಪಕ್ಕದಲ್ಲೇ ನಡೆಯುತ್ತಿದ್ದ. ಆಗ ಚೀಲದ ಭಾರವನ್ನು ಕಡಿಮೆ ಮಾಡ ಬೇಕೆನ್ನಿಸಿತು ಆತನಿಗೆ. ಒಂದು ಉಂಡೆಯನ್ನು ತೆಗೆದು ಶಕ್ತಿ ಪ್ರಯೋಗಿಸಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ನೀರಿನಲ್ಲಿ ಎಸೆದು ಬಿಟ್ಟ. ನಂತರ ಸ್ವಲ್ಪ ದೂರ ನಡೆದು ಮತ್ತೊಂದು ಉಂಡೆಯನ್ನು ಎಸೆದ ಅವನಿಗೆ ಅದೊಂದು ಬಗೆಯ ಆಟವೇ ಆಯಿತು. ಕೆಲ ಸಮಯದ ನಂತರ ಆತ ಹತ್ತಿರದ ಕಲ್ಲುಬಂಡೆ ಯೊಂದನ್ನು ಏರಿ ನಿಂತ. ಅಲ್ಲಿಂದಲೂ ಒಂದೆರಡು ಉಂಡೆಗಳನ್ನು ನೀರಿಗೆಸೆದ. ಇನ್ನು ಮೂರ್ನಾಲ್ಕು ಉಂಡೆಗಳು ಉಳಿದಿದ್ದವು. ಮತ್ತೊಂದನ್ನು ತೆಗೆದು ಎಸೆಯುವುದಕ್ಕೆ ಹೋದಾಗ ಕಾಲು ಜಾರಿತು. ಕೈಯಲ್ಲಿಯ ಉಂಡೆ ಬಂಡೆಯ ಮೇಲೆ ಬಿದ್ದು ಒಡೆಯಿತು. ಒಳಗಿನಿಂದ ಫಳ್ಳೆಂದು ಬೆಳಕು ಮಿಂಚಿತು. ಏನದು ಎಂದು ಬಗ್ಗಿನೋಡಿ ತೆಗೆದುಕೊಂಡ. ಅದೊಂದು ಹೊಳೆಹೊಳೆಯುವ ವಜ್ರ! ಅವನಿಗೆ ಆಶ್ಚರ್ಯ! ಉಳಿದೆರಡು ಉಂಡೆಗಳನ್ನು ಒಡೆದು ನೋಡಿದ. ಅವುಗಳಲ್ಲಿಯೂ ಒಂದೊಂದು ವಜ್ರ .ಅವುಗಳನ್ನು ಕಂಡು ಅವನಿಗೆ ಸಂತೋಷವಾಗಲಿಲ್ಲ. ಬದಲಿಗೆ ಅಳು ಬಂತು. ಕೆಳಗೆ ಕುಳಿತು ಬಿಕ್ಕಳಿಸಿ ಅತ್ತ. ಅವನ ಚೀಲದಲ್ಲಿ ನೂರಾರು ಮಣ್ಣಿನ ಉಂಡೆಗಳಲ್ಲಿ ವಜ್ರಗಳು ಕುಳಿತಿದ್ದವು. ಅವುಗಳ ಬೆಲೆ ಅರಿಯದೇ ಅವುಗಳನ್ನು ಕೇವಲ ಮಣ್ಣಿನ ಉಂಡೆಗಳೆಂದು ಬಗೆದು ನೀರಿಗೆ ಎಸೆದು ಬಿಟ್ಟಿದ್ದ! ಅವುಗಳ ಬೆಲೆ ಮೊದಲೇ ತಿಳಿದಿದ್ದರೆ ಆತ ಭಾರೀ ಶ್ರೀಮಂತನಾಗಿ ಬಿಡುತ್ತಿದ್ದ.

ನೀತಿ :-- ಜೀವನದಲ್ಲಿ ನಮಗೆ ಬೇಕೋ, ಬೇಡವೋ ನೂರಾರು ಘಟನೆಗಳು ನಡೆಯುತ್ತವೆ. ನೂರಾರು ಜನರ ಸಂಪರ್ಕ ಬರುತ್ತದೆ. ಅವು ಪ್ರತಿಯೊಂದೂ ಮಣ್ಣಿನ ಉಂಡೆಗಳಿದ್ದಂತೆ. ಅವುಗಳನ್ನು ಹತ್ತಿರದಿಂದ ಗಮನಿಸಿದ್ದರೆ, ಪ್ರೀತಿಯಿಂದ ತಟ್ಟದಿದ್ದರೆ ಒಳಗಿನ ವಜ್ರ ಕಾಣಲಿಕ್ಕಿಲ್ಲ. ಅವನ್ನು ನಾವು ಮರೆತು ಬಿಡುತ್ತೇವೆ. ಒಳಗಿನ ವಜ್ರವನ್ನು ಕಾಣುವ ಅವಕಾಶದಿಂದ ವಂಚಿತರಾಗುತ್ತೇವೆ. ನಮ್ಮ ಸಂಪರ್ಕಕ್ಕೆ ಬಂದ ಪ್ರತಿ ವ್ಯಕ್ತಿಯೂ ಒಂದು ವಜ್ರವೆಂಬಂತೆ ಭಾವಿಸಿ ನಡೆದರೆ ಬರಿ ತಪ್ಪುಗಳನ್ನೇ ಕಾಣುವುದು ತಪ್ಪಿ ಎಲ್ಲರಲ್ಲೂ ಒಳ್ಳೆಯದನ್ನು ಕಾಣುವ ಮನೋಭಾವ ಬೆಳೆಯುತ್ತದೆ ಅಲ್ಲವೇ?

ಬದುಕನ್ನು ಧೈರ್ಯದಿಂದ ಎದುರಿಸಿ

 ದಟ್ಟವಾದ ಕಾಡು, ಅಲ್ಲೊಂದು ಸರೋವರ, ಬದಿಯಲ್ಲಿ ಸಾವಿರಾರು ಮೊಲಗಳು, ಅವುಗಳಿಗೆ ಅಲ್ಲಿ ಬೇಕಾದಷ್ಟು ಆಹಾರ ಸಿಗುತ್ತಿತ್ತು. ಅವುಗಳ ಪರಿ­ವಾರ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇತ್ತು. ಮೊಲಗಳು ಮೊದಲೇ ತುಂಬ ಪುಕ್ಕಲು ಸ್ವಭಾವದ ಪ್ರಾಣಿಗಳು. ಒಂದು ಚೂರು ಸದ್ದಾ­ದರೂ ಹೆದರಿ ಓಡು­ವಂಥ ಜೀವಿಗಳು.

ಒಂದು ಬಾರಿ ಮೊಲಗಳೆಲ್ಲ ಸಭೆ ಸೇರಿದ್ದಾಗ ಹಿರಿಯ ಮೊಲ­ವೊಂದು ಗಂಭೀರವಾಗಿ "ಬಂಧು­ಗಳೇ, ನಾವೆಲ್ಲ ಈ ಅರಣ್ಯದಲ್ಲಿ ಚೆನ್ನಾಗಿದ್ದೇವೆ ಎಂಬುದು ಒಂದು ಭಾವನೆ. ಆದರೆ, ನಿಜವಾಗಿ ನೋಡಿದರೆ ನಾವು ಇರುವಷ್ಟು ಆತಂಕದಲ್ಲಿ ಬೇರೆ ಯಾವ ಪ್ರಾಣಿಯೂ ಕಾಡಿನಲ್ಲಿ ಇರು­ವುದು ಸಾಧ್ಯವಿಲ್ಲ. ನಮ್ಮ ಸ್ವಭಾವವೇ ಪುಕ್ಕಲು. ನಾವು ಪಕ್ಕಾ ಸಸ್ಯಾಹಾರಿಗಳು, ಯಾರಿಗೂ ತೊಂದರೆ ಕೊಡುವವರಲ್ಲ. ಆದರೆ, ಎಲ್ಲರೂ ನಮ್ಮ ಮೇಲೆ ಯಾಕೆ ಇಷ್ಟು ದ್ವೇಷ ಸಾಧಿಸುತ್ತಾರೋ ತಿಳಿ­ಯದು" ಎಂದು ಮಾತನಾಡಿತು.

ಅಲ್ಲದೆ, ಮಾಂಸಾಹಾರಿಗಳಾದ ಪ್ರಾಣಿ­ಗಳು ನಮಗೋಸ್ಕರ ಕಾಯುತ್ತಿರುತ್ತವೆ. ಸಿಕ್ಕಸಿಕ್ಕಲ್ಲಿ ನಮ್ಮವರನ್ನು ಹೊಡೆದು ತಿನ್ನು­ತ್ತವೆ. ಇನ್ನೊಂದೆಡೆಗೆ ಬೇಟೆ­ಗಾ­ರರೂ ನಮ್ಮನ್ನೇ ಹುಡುಕಿಕೊಂಡು ಬರುತ್ತಾರೆ. ಅಲ್ಲಲ್ಲಿ ಬಲೆ ಹಾಕಿ ನಮ್ಮನ್ನು ಹಿಡಿಯುತ್ತಾರೆ. ಸಿಕ್ಕವರನ್ನು ಹಿಡಿದುಕೊಂಡು ಹೋಗಿ ಕೆಲವರನ್ನು ಕೊಂದು ಮಾಂಸ ಮಾರುತ್ತಾರೆ. ಇನ್ನೂ ಕೆಲವರನ್ನು ಹಿಡಿದುಕೊಂಡು ಹೋಗಿ ಪಂಜರದಲ್ಲಿಟ್ಟು ಸಾಕುತ್ತಾರೆ. ಪಾಪ! ಆ ಮೊಲಗಳಿಗೆ ಜೀವನಪರ್ಯಂತ ಜೈಲು ವಾಸ. ನಾವು ಏನು ಮಾಡಬೇಕು ಎಂಬುದು ತಿಳಿಯ­ದಾಗಿದೆ ಎಂದಿತ್ತು ಇನ್ನೊಂದು ಮೊಲ.

ಒಂದೆಡೆಗೆ ನಮ್ಮನ್ನು ಬೇಟೆಯಾಡುವ ಕಾಡುಪ್ರಾಣಿ­ಗಳು, ಮತ್ತೊಂದೆ­ಡೆಗೆ ಬೇಟೆಗಾರರು. ಇಬ್ಬರಿಂದಲೂ ಹೇಗೆ ಪಾರಾಗಬೇ­ಕೆಂಬುದನ್ನು ನಾವು ಯೋಚಿಸಬೇಕ­ಲ್ಲವೇ? ಹಿರಿಯ ಮೊಲದ ಮಾತು­ಗಳನ್ನು ಶ್ರದ್ಧೆಯಿಂದ ಎಲ್ಲ ಮೊಲ­ಗಳು ಕೇಳಿದವು. ಅವುಗಳ ಕಣ್ಣ ಮುಂದೆ ತಮ್ಮ ಅತ್ಯಂತ ಅನಿಶ್ಚಿತವಾದ ಬದುಕು ತೇಲಿಬಂತು. ಪ್ರತಿಕ್ಷಣವೂ ಸಾವಿಗೆ ಹೆದರಿ ಓಡಬೇಕಾದ ಪರಿಸ್ಥಿತಿ ತಮ್ಮದು ಎಂದು ಚಿಂತಿಸಿ ಕಂಗಾಲಾದವು.

ಆಗ ಮತ್ತೊಂದು ಮೊಲ ಎದ್ದು ನಿಂತಿತು. ಅದು ಕಣ್ಣೀರು ಸುರಿಸುತ್ತಲೇ, "ಹೌದು, ಹಿರಿಯರು ಹೇಳಿ­ದಂತೆ ನಮ್ಮ ಬದುಕಿಗೆ ಯಾವ ಅರ್ಥವೂ ಇಲ್ಲ. ಹೀಗೆ ಕ್ಷಣಕ್ಷಣವೂ ಸಾಯು­ವುದಕ್ಕಿಂತ ಒಮ್ಮೆಯೇ ಸತ್ತು ಹೋಗುವುದು ವಾಸಿ. ನನ್ನ ಮಾತು ಕೇಳುವು­ದಾದರೆ ನಾವೆಲ್ಲ ಒಂದೇ ಬಾರಿ ಕೊಳದಲ್ಲಿ ಮುಳುಗಿ ಸತ್ತು ಹೋಗುವುದು ಸರಿಯಾದ ದಾರಿ" ಎಂದಿತು. ಅಲ್ಲಿ ಸೇರಿದ ಎಲ್ಲ ಮೊಲಗಳಿಗೆ ಈ ವಿಚಾರ ಅತ್ಯಂತ ಸರಿ ಎನ್ನಿಸಿತು. ಹಾಗಾದರೆ ತಡವೇಕೆ? ಇಂದೇ, ಈಗಲೇ ಹೋಗಿ ಕೊಳದಲ್ಲಿ ಹಾರಿಕೊಳ್ಳೋಣ ಎಂದು ಸಾವಿರಾರು ಮೊಲಗಳು ಕೊಳದ ಕಡೆಗೆ ನಡೆದವು.

ಆಗ ಒಂದು ಘಟನೆ ನಡೆಯಿತು. ಸಾವಿರಾರು ಮೊಲಗಳು ಕೊಳದ ಹತ್ತಿರ ಬಂದಾಗ ದಂಡೆಯಲ್ಲಿ ಕುಳಿತಿದ್ದ ಸಾವಿ­ರಾರು ಕಪ್ಪೆಗಳು ಗಾಬರಿಯಾಗಿ ನೀರಿಗೆ ಹಾರಿದವು. ಇದನ್ನು ಕಂಡ ಒಂದು ತರುಣ ಮೊಲ, "ಎಲ್ಲರೂ ನಿಲ್ಲಿ, ಯಾರೂ ನೀರಿಗೆ ಹಾರಬೇಕಿಲ್ಲ. ನಾವು ಬರುವುದನ್ನು ಕಂಡು ಗಾಬರಿ­ಯಾಗಿ ಹಾರಿದ ಕಪ್ಪೆಗಳನ್ನು ಕಂಡಿರಾ? ಅಂದರೆ ನಮ್ಮಂತಹ ಪುಕ್ಕಲು ಪ್ರಾಣಿ­ಗಳಿಗೂ ಹೆದರುವ ಪ್ರಾಣಿಗಳಿವೆಯಲ್ಲ! ನಮ್ಮ ಬದುಕು ಅವುಗಳಿಗಿಂತ ಎಷ್ಟೋ ವಾಸಿ. ಕಪ್ಪೆಗಳೇ ಬದುಕುವುದಕ್ಕೆ ಉತ್ಸಾಹ ತೋರುವಾಗ ನಾವೇಕೆ ಬದುಕಿನಿಂದ ಮುಖ ತಿರುಗಿಸಬೇಕು?" ಎಂದಿತು. ಮೊಲಗಳಿಗೆ ಈ ಮಾತು ಸರಿ ಎನ್ನಿಸಿತು. ಅವುಗಳ ಮುಖದಲ್ಲಿ ಸಂತೋಷ ತೇಲಾಡಿತು. ಅವು ಮತ್ತೆ ಕುಪ್ಪಳಿಸುತ್ತ ಕಾಡಿಗೆ ನಡೆದವು.

ನೀತಿ :-- ನಮಗೂ ಅನೇಕ ಬಾರಿ ಹೀಗೆಯೇ ಎನ್ನಿಸಿ, ನಿರಾಸೆ ಮೂಡುತ್ತದೆ. ಬದುಕು ವ್ಯರ್ಥವೆನ್ನಿ­ಸುತ್ತದೆ. ಆಗ ಸುತ್ತಲೂ ಕಣ್ತೆರದು ನೋಡಿದರೆ ನಮಗಿಂತ ಹೆಚ್ಚು ಕಷ್ಟದಲ್ಲಿ­ರುವವರು ನಗುನಗುತ್ತ ಬದುಕುವುದು ಕಾಣುತ್ತದೆ. ಅವರೇ ಸಂತೋಷವಾ­ಗಿರುವಾಗ ನಮಗೇಕೆ ಕೊರಗು ಎಂಬ ಧೈರ್ಯ ಮೂಡುತ್ತದೆ. ಕಾರಿನಲ್ಲಿ ಹೋಗುವವರನ್ನು ನೋಡಿ ಸಂಕಟಪಡು­ವುದಕ್ಕಿಂತ ಕಾಲಿನಲ್ಲಿ ಚಪ್ಪಲಿ ಕೂಡ ಇಲ್ಲದವರನ್ನು ನೋಡಿ ಸಮಾಧಾನ ಪಡುವುದು ಒಳ್ಳೆಯದು.