Showing posts with label Mahisasura Mardini. Show all posts
Showing posts with label Mahisasura Mardini. Show all posts

Thursday, August 28, 2025

"ಮಹಿಷಾಸುರ ಮರ್ದಿನಿ"

 

"ಮಹಿಷಾಸುರ ಮರ್ದಿನಿ"ಡಾ. ರಾಜ್ ಕುಮಾರ್ ಅವರ ನಟನಾ ಬದುಕಿನಲ್ಲಿ ಒಂದು ಮಹತ್ವದ ಚಿತ್ರ. 1959ರಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ನಾಡಿನ ದಸರಾ ಹಬ್ಬದ ಸಡಗರ. ಚಾಮುಂಡೇಶ್ವರಿ ದೇವಿಯ ಮಹಿಮೆ ತಿಳಿಸುತ್ತ ವೀಕ್ಷಕರಿಗೆ ಸಿನಿಮಾ ಬಿಡುಗಡೆಯ ಸುದ್ಧಿ ತಿಳಿಸುವ ಪ್ರಚಾರ ಮೇಲಿನ ಚಿತ್ರದಲ್ಲಿದೆ. ವಿಕ್ರಂ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸಿದ ಈ ಚಿತ್ರವನ್ನು ಅದರ ಒಡೆಯ ಬಿ. ಎಸ್. ರಂಗಾ ಅವರೇ ನಿರ್ದೇಶನ ಮಾಡಿದ್ದಾರೆ. ರಾಜ್ ಕುಮಾರ್ ಉದಯ ಕುಮಾರ್, ಸಾಹುಕಾರ್ ಜಾನಕಿ, ಕುಚಲ ಕುಮಾರಿ, ಅಶ್ವಥ್, ನರಸಿಂಹ ರಾಜು, ಸಂಧ್ಯಾ, ಸೂರ್ಯಕಲಾ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಜಿ. ಕೆ. ವೆಂಕಟೇಶ್ ಅವರ ಸಂಗೀತ ಸಂಯೋಜನೆ ಯಲ್ಲಿ ರಾಜ್ ಕುಮಾರ್ ಅವರು" ತುಂಬಿತು ಮನವಾ.. ತಂದಿತು ಸುಖವ.. ಗೀತೆಯನ್ನು ಹಾಡಿದ್ದು ಮತ್ತೊಂದು ವಿಶೇಷ ಮತ್ತು ಮೈಲಿಗಲ್ಲು.

ಮಹಿಷಾಸುರ ಮರ್ದಿನಿ ಮದರಾಸಿನ ವಿಕ್ರಂ ಸ್ಟುಡಿಯೋದಲ್ಲಿ ಚಿತ್ರೀಕರಣ ಆದ ಮೊದಲ ಸಿನಿಮಾ. ಹೀಗೊಂದು ಹೆಗ್ಗಳಿಕೆ ಕೂಡಾ ಈ ಚಿತ್ರಕ್ಕಿದೆ.ಮುಂದೆ ಈ ಚಿತ್ರ ಎಂಟು ಭಾಷೆಗಳಲ್ಲಿ ಡಬ್ ಆಗಿ ದಾಖಲೆ ಬರೆಯಿತು.ಹಿಂದಿ ಭಾಷೆಯಲ್ಲಿ "ದುರ್ಗಾ ಮಾತಾ"ಎಂಬ ಟೈಟಲ್ನೊಂದಿಗೆ 1960 ರಲ್ಲಿ ತೆರೆಗೆ ಬಂದಿತ್ತು.ಈ ಚಿತ್ರದ ಪೋಸ್ಟರ್ ವಿನ್ಯಾಸ ಮಾಡುವ ಸಮಯದಲ್ಲಿ ಮದರಾಸಿನ ಆ ಕಚೇರಿಗೆ ಚಿತ್ರ ತಂಡದ ಜೊತೆ ರಾಜ್ ಅವರೂ ಅಲ್ಲಿಗೆ ಆಗಮಿಸಿದ್ದರಂತೆ.

ಈ ಚಿತ್ರದ ಕುರಿತು ಹೇಳುವಾಗ ಸಿನಿರಂಗಕ್ಕೆ ಬಿ. ಎಸ್. ರಂಗಾ (1917–2010) ಅವರ ಕೊಡುಗೆಗಳನ್ನು ಹೇಳಲೇ ಬೇಕು. ಆ ಕಾಲದಲ್ಲಿ ಮುಂಬೈನಲ್ಲಿ ಹಲವು ವರ್ಷ ಛಾಯಾಗ್ರಾಹಕರಾಗಿ ದುಡಿದು ಸಿನಿಮಾ ನಿರ್ಮಾಣದ ಅನುಭವ ಪಡೆದ ರಂಗಾ 20 ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ನಂತರ 1950 ರ ಸಮಯದಲ್ಲಿ ಬೆಂಗಳೂರಿನಲ್ಲಿ ವಿಕ್ರಂ ಸ್ಟುಡಿಯೋ ಅಂಡ್ ಲ್ಯಾಬ್ ಸಂಸ್ಥೆ ಸ್ಥಾಪನೆ ಮಾಡಿದ್ದರು. ಆಗ ಕನ್ನಡ ಸಿನಿಮಾ ತಯಾರಿಕೆ ಕಷ್ಟ ಎನ್ನುವ ದಿನಗಳು. ಆದರೆ ಅವರ ಪ್ರಯತ್ನಕ್ಕೆ ಸೂಕ್ತ ಬೆಂಬಲ ದೊರೆಯದೆ ಸ್ಟುಡಿಯೋ ಮದರಾಸಿನತ್ತ ಮುಖ ಮಾಡಬೇಕಾಯಿತು.

ರಂಗಾ ಅವರು ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣ, ನಿರ್ದೇಶನ ಮಾಡಿದ್ದು,ಅವುಗಳಲ್ಲಿ ಭಕ್ತ ಮಾರ್ಕoಡೆಯ, ಅಮರಶಿಲ್ಪಿ ಜಕಣಾಚಾರಿ, ಭಾಗ್ಯವಂತ, ಪಾರ್ವತಿ ಕಲ್ಯಾಣ,ಮಹಾಸತಿ ಅನಸೂಯ, ಭಕ್ತ ಮಾರ್ಕoಡೆಯ, ಹಾಸ್ಯರತ್ನ ರಾಮಕೃಷ್ಣ,ದಶಾವತಾರ, ಚಂದ್ರಹಾಸ ಇತ್ಯಾದಿ ಕನ್ನಡ ಚಿತ್ರಗಳು.

1978 ರಲ್ಲಿಮತ್ತೆ ಬೆಂಗಳೂರು ನಗರದಲ್ಲಿ ಲಾಲ್ ಬಾಗ್ ರಸ್ತೆಯಲ್ಲಿ ವಸಂತ್ ಕಲರ್ ಲ್ಯಾಬೋರೇಟರಿ ಎಂಬ ಸ್ಟುಡಿಯೋ ಸ್ಥಾಪನೆ ಮಾಡಿ ತಮ್ಮ ಪುತ್ರ ವಸಂತ್ ಅವರನ್ನು ಇದೇ ಉದ್ಯಮಕ್ಕೆ ಕರೆತಂದರು. ಇದೇ ಸ್ಟುಡಿಯೋ ಸದ್ಯ ವಿಷನ್ ಸಿನಿಮಾ ಟೆಕ್ನೊಲಜಿಸ್ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.