ಭಗವಾನ್ ಬುದ್ಧರು, ಒಮ್ಮೆ ಒಂದು ಮರದ ಕೆಳಗೆ ಕುಳಿತು, ತಮ್ಮ ಶಿಷ್ಯರೊಡನೆ ಸಮಾಲೋಚನೆ ನೆಡೆಸುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಅವರ ಹತ್ತಿರ ಬಂದು ಅವರ ಮುಖಕ್ಕೆ ಉಗುಳಿದ. ಬುದ್ಧ ತಮ್ಮ ಹೆಗಲ ಮೇಲೆ ಹೊದ್ದಿದ್ದ ವಸ್ತ್ರದಿಂದ ಅದನ್ನು ಒರೆಸಿಕೊಳ್ಳುತ್ತಾ, ನೀನು, ಇನ್ನೇನು ಹೇಳಲಿದೆ? ಎಂದು ಆತನಿಗೆ ಕೇಳಿದರು. ಆಗ ಆ ವ್ಯಕ್ತಿ ಸ್ವಲ್ಪ ಗಲಿಬಿಲಿಗೊಂಡ. ತಮ್ಮ ಮುಖಕ್ಕೆ ಉಗುಳಿದವನನ್ನು , ಮುಂದೇನು ಹೇಳು, ಎಂದು ಕೇಳುತ್ತಾರೆಂದು ಅವನು ನಿರೀಕ್ಷಿಸಿರಲಿಲ್ಲ. ಅವನಿಗೆ ಹಿಂದೆ ಎಂದೂ ಈ ರೀತಿಯ ಅನುಭವ ಆಗಿರಲಿಲ್ಲ. ಈ ಮೊದಲು ಅವನು ಎಷ್ಟೋ ಜನರಿಗೆ ಅವಮಾನ ಮಾಡಿದ್ದ. ಆದರೆ ಅವರೆಲ್ಲರೂ ಕೋಪಗೊಂಡು ಅವನ ವಿರುದ್ಧ ತಿರುಗಿ ಬಿದ್ದು, ತಿರುಗೇಟೂ ನೀಡಿದ್ದರು. ಕೆಲವು ದುರ್ಬಲರು, ಏನೂ ಮಾಡದೇ ಸುಮ್ಮನೆ ಸಹಿಸಿಕೊಂಡಿದ್ದರು.
ಆದರೆ ಬುದ್ಧ, ಕೋಪವನ್ನೂ ಮಾಡಿಕೊಳ್ಳಲ್ಲಿಲ್ಲ, ಅವಮಾನಿತರಾದಂತೆಯೂ ತೋರಿಸಿಕೊಳ್ಳಲಿಲ್ಲ, ಹೇಡಿಯಂತೆ ಸುಮ್ಮನೆ ಕೂಡ ಇರದೇ, ಮುಂದೇನು, ಎಂದು ಕೇಳಿದರು. ಇದರಿಂದ ಬುದ್ಧರ ಶಿಷ್ಯರು ಬಹಳವಾಗಿ ಕೋಪಗೊಂಡರು. ಬುದ್ಧರ ಅತ್ಯಂತ ನಿಕಟ ಶಿಷ್ಯ, ಆನಂದ, ನಿಮ್ಮದು ಅತಿಯಾಯಿತು, ಇದನ್ನು ನಾನು ಸಹಿಸುವುದಿಲ್ಲ, ನಿಮ್ಮ ಬೋಧನೆಯನ್ನು ನೀವೇ ಇಟ್ಟುಕೊಳ್ಳಿ. ನಾವೆಲ್ಲರೂ ಸೇರಿ, ಈ ವ್ಯಕ್ತಿ ಈಗ ಏನು ಮಾಡಿದ್ದಾನೊ, ಅದನ್ನು ಅವನು ಮತ್ತೆ ಇನ್ಯಾರಿಗೂ ಮಾಡದಂತೆ ಪಾಠ ಕಲಿಸುತ್ತೇವೆ, ಇಲ್ಲವಾದರೆ ಎಲ್ಲರಿಗೂ ಇದೇ ರೀತಿ ಮಾಡಲು ಪ್ರಾರಂಭಿಸುತ್ತಾರೆ ಎಂದನು.
ಬುದ್ಧ, ನೀವು ಸುಮ್ಮನಿರಿ, ಆತ ನನ್ನನ್ನು ಅವಮಾನಿಸಿಲ್ಲ. ಆದರೆ ನೀವುಗಳು ನನ್ನನ್ನು ಅವಮಾನಿಸುತ್ತಿದ್ದೀರಿ, ಆತ ಇನ್ನೂ ಹೊಸಬ, ಅಪರಿಚಿತ, ಆತ ನನ್ನ ಬಗ್ಗೆ ಬೇರೊಬ್ಬರಿಂದ ಏನನ್ನೊ ಕೇಳಿ, ಒಂದು ಕಲ್ಪನೆ, ಅಭಿಪ್ರಾಯವನ್ನು ಹೊಂದಿರಬಹುದು. ಆತ ನನ್ನ ಮೇಲೇನೂ ಉಗಳಲಿಲ್ಲ, ನನ್ನ ಬಗ್ಗೆ, ಅವನು ಬೇರೆಯವರಿಂದ ಕೇಳಲ್ಪಟ್ಟ ಅಭಿಪ್ರಾಯದ ಮೇಲೆ ಉಗುಳಿದ್ದಾನೆ. ಏಕೆಂದರೆ ಅವನಿಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ. ಹೀಗಿರುವಾಗ ಅವನು ನನ್ನ ಮೇಲೆ ಉಗುಳಲು ಹೇಗೆ ಸಾಧ್ಯ? ಆತ ನನ್ನ ಬಗ್ಗೆ ಯಾರಿಂದಲೊ, ನಾನೊಬ್ಬ ನಾಸ್ತಿಕ, ಅಪಾಯಕಾರಿ ವ್ಯಕ್ತಿ, ಜನರನ್ನು ದಾರಿ ತಪ್ಪಿಸುತ್ತಾನೆ, ಒಬ್ಬ ಕ್ರಾಂತಿಕಾರಿ, ಭ್ರಷ್ಟ, ಎಂದೆಲ್ಲಾ ಕೇಳಿ, ನನ್ನ ಬಗ್ಗೆ ತಪ್ಪು ಕಲ್ಪನೆ, ತಪ್ಪು ಅಭಿಪ್ರಾಯ ಹೊಂದಿದ್ದಾನೆ. ಹಾಗಾಗಿ ಆತ, ತನ್ನ ಕಲ್ಪನೆ, ಅಭಿಪ್ರಾಯದ ಮೇಲೆ ಉಗುಳಿಕೊಂಡಿದ್ದಾನೆ, ಅಷ್ಟೇ" ಎಂದರು.
ಸರಿಯಾಗಿ ಯೋಚಿಸಿದರೆ, ಆತ ತನ್ನ ಮನಸ್ಸಿನ ಮೇಲೆ ತಾನೇ ಉಗುಳಿಕೊಂಡಿದ್ದಾನೆ, ನಾನು ಅದರ ಭಾಗವಲ್ಲ. ಎಂದರು ಬುದ್ದ. ನಾನು ಅವನನ್ನು ಅರ್ಥ ಮಾಡಿಕೊಳ್ಳಬಲ್ಲೆ, ಆತ ಮತ್ತೇನನ್ನೋ ಹೇಳಲು ಇಚ್ಚಿಸುತ್ತಿರಬೇಕು, ಅದಕ್ಕಾಗಿಯೇ ನಾನು ಮುಂದೇನು ಎಂದು ಕೇಳಿದ್ದು ಎಂದರು. ಇವರು ಶಿಷ್ಯರಿಗೆ ಹೇಳುತ್ತಿದ್ದ ಮಾತನ್ನು ಕೇಳಿ, ಆ ವ್ಯಕ್ತಿ ಇನ್ನಷ್ಟು ದಿಗ್ಭ್ರಮೆಗೊಂಡ, ಬುದ್ಧ ತಮ್ಮ ಶಿಷ್ಯಂದಿರಿಗೆ ಹೇಳಿದರು, ನಾನು ಈಗ ನಿಮ್ಮಿಂದಲೇ ಹೆಚ್ಚು ಅವಮಾನಿತನಾಗಿದ್ದೇನೆ, ಏಕೆಂದರೆ ನೀವು ನನ್ನನ್ನು ಅರಿತಿದ್ದೂ, ನನ್ನೊಡನೆ ಎಷ್ಟೋ ವರ್ಷಗಳಿಂದ ಇದ್ದೂ, ಕೂಡಾ ಈ ರೀತಿಯಾಗಿ ಪ್ರತಿಕ್ರಿಯಿಸುತ್ತೀದ್ದೀರಿ, ಎಂದರು.
ಅವರ ಮಾತನ್ನು ಕೇಳಿ ಆ ವ್ಯಕ್ತಿ, ಈಗ ಇನ್ನೂ ತಬ್ಬಿಬ್ಬಾಗಿ, ಅಲ್ಲಿ ನಿಲ್ಲದೇ ಮನೆಗೆ ಹಿಂತಿರುಗಿದ. ಇಡೀ ರಾತ್ರಿ ಅವನಿಗೆ ನಿದ್ದೆ ಹತ್ತಲಿಲ್ಲ. ಯಾರಿಗಾದರೂ ಅಷ್ಟೇ, ಒಮ್ಮೆ ಬುದ್ಧರನ್ನು ನೋಡಿದರೆ, ಅವರೊಡನೆ ಕಳೆದ ಅನುಭವ ನೆನೆಸಿಕೊಂಡರೆ, ಪದೇ ಪದೇ ಅದೇ ಕಾಡುತ್ತಲೇ ಇರುತ್ತದೆ. ಏನಾಗುತ್ತಿದೆ ಎಂದು ಅವನಿಗೆ ಹೇಳಿಕೊಳ್ಳಲಾಗಲಿಲ್ಲ. ಅವನ ಇಡೀ ಮೈ ನಡುಗುತ್ತಿತ್ತು, ಬೆವರುತ್ತಿತ್ತು. ಇಂತಹ ವ್ಯಕ್ತಿಯನ್ನು ತಾನೆಂದೂ ನೋಡಿಯೇ ಇರಲಿಲ್ಲವಲ್ಲಾ, ತಾನೇನು ಮಾಡಿಬಿಟ್ಟೆ ಎಂದು ಕೊಂಡು, ಅವನ ಮನಸ್ಸು ಬುದ್ಧರನ್ನೇ ಆವರಿಸಿಕೊಂಡು ಬಿಟ್ಟಿತ್ತು. ಅವನ ಹಿಂದಿನ ಎಲ್ಲಾ ನೆನಪನ್ನು ಛಿದ್ರ ಗೊಳಿಸಿ ಬಿಟ್ಟಿತ್ತು. ರಾತ್ರಿ ಇಡೀ ನಿದ್ರೆ ಇಲ್ಲದೇ ಅವರದೇ ಯೋಚನೆಯಲ್ಲಿ ಕಾಲ ಕಳೆದ. ಬೆಳಗಾಗುತ್ತಿದ್ದಂತೆ, ಪುನಹ ಅದೇ ಸ್ಥಳಕ್ಕೆ ಬಂದು ಏನೂ ಮಾತನಾಡದೇ, ಬುದ್ಧರ ಪಾದಕ್ಕೆರಗಿದ.
ಬುದ್ಧರು ನಗುತ್ತಾ, ಮತ್ತೆ, ಮುಂದೇನು! ಎಂದು ಕೇಳಿದರು.
ಬುದ್ಧ ಆನಂದನನ್ನು ನೋಡಿ, ನೋಡು, ಈ ವ್ಯಕ್ತಿ ಪುನಹ ಬಂದಿದ್ದಾನೆ, ಮತ್ತೇನೂ ಹೇಳಲು ಯತ್ನಿಸುತ್ತಿದ್ದಾನೆ. ಈತ ನಿಜವಾಗಿಯೂ ಭಾವುಕ ವ್ಯಕ್ತಿಯೇ ಆಗಿದ್ದಾನೆ, ಎಂದರು. ಆತ ಬುದ್ಧರನ್ನು ನೋಡಿ, ನಿನ್ನೆಯ ದಿನ ನಾನು ಮಾಡಿದ ಮಹಾ ಅಪರಾಧಕ್ಕಾಗಿ, ತಾವು ನನ್ನನ್ನು ಕ್ಷಮಿಸಲು ಸಾಧ್ಯವೇ? ಎಂದನು. ನಿನ್ನೆ ನೀನು, ಯಾರಿಗೆ ಆ ರೀತಿ ಮಾಡಿದೆಯೋ, ಆ ವ್ಯಕ್ತಿ ನಾನಲ್ಲ. ಹಾಗೆಯೇ, ನಿನ್ನೆ ಉಗುಳಿದ ವ್ಯಕ್ತಿ ಇಲ್ಲಿಲ್ಲ. ನಾನು ಆತನಂತೇ ಕಾಣುತ್ತೇನೆ, ಆದರೆ ಆ ವ್ಯಕ್ತಿ ನಾನಲ್ಲ. ಹಾಗಾಗಿ ನಾನು ಕ್ಷಮಿಸಲಾಗುವುದಿಲ್ಲ. ಏಕೆಂದರೆ ನಿನ್ನ ವಿರುದ್ಧ ನನ್ನಲ್ಲಿ ಯಾವ ಹಗೆತನವೂ ಇಲ್ಲವಲ್ಲ. ಈಗ ನೀನು ಕೂಡ ಹೊಸಬನಾಗಿದ್ದೀಯ, ನಿನ್ನೆ ಬಂದ ವ್ಯಕ್ತಿ ನೀನಲ್ಲ ಎಂಬುದನ್ನು ನಾನು ಕೂಡ ಕಾಣಬಲ್ಲೆ . ಆದುದರಿಂದ ಅದರ ಬಗ್ಗೆ ಮರೆತು ಬಿಡೋಣ. ಉಗುಳಿದ ವ್ಯಕ್ತಿ ಮತ್ತು ಉಗುಳಿಸಿಕೊಂಡ ವ್ಯಕ್ತಿ ಇಬ್ಬರೂ ಇಲ್ಲಿಲ್ಲ. ಇಲ್ಲಿಗೆ ಸಾಕು, ಹತ್ತಿರ ಬಾ ಬೇರೆ ಯಾವುದಾದರೂ ವಿಚಾರವನ್ನು ಮಾತನಾಡೋಣ ಎಂದರು.
ಅಶ್ರು ತುಂಬಿದ ಕಣ್ಣುಗಳಿಂದ ಬುದ್ಧರನ್ನೇ ನೋಡುತ್ತಾ ಆತ ಮತ್ತೊಮ್ಮೆ ಅವರ ಪಾದಕ್ಕೆಗಿದ. ನನ್ನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಲು ಸಾಧ್ಯವೇ, ಎಂದು ಕೇಳಿದ. ಇದು ಬುದ್ಧರು ತಮ್ಮ ಬಳಿ ಎಂತಹಾ ಕಟುಕ ಮನಸ್ಸಿನವರು ಬಂದರೂ, ಅವರ ಮನಸ್ಸನ್ನು ಪರಿವರ್ತನೆ, ಮಾಡುವ ರೀತಿಯಾಗಿತ್ತು. ಬುದ್ಧರ ಮುಖ್ಯ ಉದ್ದೇಶ, ತಾನು ಏಕಾಂಗಿಯಾದರೂ ಸರಿಯೇ, ಸರಿಯಾದ ಮಾರ್ಗದಲ್ಲಿ ಧ್ಯೆರ್ಯದಿಂದ ನಡೆಯುವುದು. ಇತರರು ತಮಗೆ ತೊಂದರೆ ಕೊಟ್ಟರೂ, ನಾನು ಅವರಿಗೆ ತೊಂದರೆ ಕೊಡುವುದಿಲ್ಲ, ಇತರರು ಕೊಲೆ ಮಾಡುತ್ತಾರೆಂದು ನಾನು ಕೊಲೆ ಮಾಡುವುದಿಲ್ಲ, ಇತರರು ಶ್ರೇಷ್ಠ ಜೀವನ ಮಾರ್ಗವನ್ನು ಆಯ್ದುಕೊಳ್ಳದಿದ್ದರೂ, ನಾನು ಶ್ರೇಷ್ಠ ಮಾರ್ಗವನ್ನೇ ಆಯ್ದುಕೊಳ್ಳುತ್ತೇನೆ,ವಎಂಬ ದೃಢ ನಿರ್ಧಾರವಾಗಿತ್ತು. ಇದು, ಬುದ್ಧರು ತಮ್ಮ ಜೀವನಪರ್ಯಂತ ಬಾಳಿ ಬದುಕಿದ ರೀತಿ.
ನೀತಿ :-- ಅವರನ್ನು ನೆನೆಸಿಕೊಂಡು, ನಾವು ಸ್ವಲ್ಪವಾದರೂ ಅವರ ಮಾರ್ಗದಲ್ಲಿ ನೆಡೆಯಲು ಪ್ರಯತ್ನಿಸಿದರೆ, ಖಂಡಿತವಾಗಿಯೂ ನಮ್ಮಲ್ಲಿ ಶಾಂತಿ, ನೆಮ್ಮದಿ, ಸಹನೆ , ತಾಳ್ಮೆ ನೆಲೆಸುವುದರಲ್ಲಿ ಸಂದೇಹವಿಲ್ಲ.
🖊️ಸಂಗ್ರಹ🖋️