ಪ್ರಾಚೀನ ಕಾಲದಲ್ಲಿ ನೋಡಲು ಹಾಗೂ ಬುದ್ಧಿಯಲ್ಲಿ ವಿಚಿತ್ರವಾದ “ಕಾಗಸುರ” ಇದ್ದನು. ಇವನಿಗೆ ಶಾಪದ ಹೊರತು ಮತ್ತೊಂದು ಜೀವನವೇ ಇರಲಿಲ್ಲ. ಅತ್ಯಂತ ಬುದ್ಧಿವಂತನಾದರೂ ತನ್ನ ಅಹಂಕಾರ ಮತ್ತು ಮೋಸದ ಕಾರಣದಿಂದ ಕಾಗಾಸುರ ದೇವತೆಗಳಿಗೆ ತೊಂದರೆ ಕೊಡುತ್ತಿದ್ದ. ಒಂದು ದಿನ ತನಗೆ ಒಪ್ಪುವಂತಹ ಯಾರನ್ನು ವಾಹನ ಮಾಡಿಕೊಳ್ಳಲಿ ಎಂದು ಶನಿದೇವ ಹುಡುಕುತ್ತಿದ್ದಾಗ, ಆನೆ, ಕುದುರೆ, ಸಿಂಹ, ಗರುಡ, ಹುಲಿ, ಇನ್ನು ಹಲವು ಪ್ರಾಣಿಗಳು ಶನಿದೇವನ ಮುಂದೆ ನಿಂತು ತಾನು ಯೋಗ್ಯ ನಾನು ಎಂದು ಹೇಳುತ್ತಿದ್ದವು. ಆದರೆ ಭಯಾನಕವಾದ ಶನಿಯ ದೃಷ್ಟಿಯನ್ನು ಅವು ಸಹಿಸಲು ಆಗದೆ ಎಲ್ಲವೂ ಓಡಿ ಹೋದವು. ಆಗ ಮುಂದೆ ಬಂದ ಕಾಕಾಸುರ ನಾನು ನಿನ್ನ ದೃಷ್ಟಿಯನ್ನು ಸಹಿಸಲು ಸಮರ್ಥನಾಗಿರುವೆ ಮತ್ತು ಬಹಳ ವೇಗದಲ್ಲಿ ಎಲ್ಲೆಂದರಲ್ಲಿ ಹಾರಬಲ್ಲೆ ನನ್ನ ಮೇಲೆ ನೀನು ಕುಳಿತು ಎಷ್ಟು ದೂರ ಬೇಕಾದರೂ ಸಂಚರಿಸು ಎಂದಿತು.
ಕರುಣೆಯಿಂದ ಕಾಗೆಯನ್ನು ನೋಡಿದ ಶನಿಯು ಅದನ್ನು ತನ್ನ ವಾಹನ ಮಾಡಿ ಕೊಳ್ಳಲು ಒಪ್ಪಿದನು. ಅಂದರೆ ಆಗಲೇ ಕಾಗೆಗೂ ಸಹ ಶನಿಯ ದೃಷ್ಟಿ ತಾಗಿ ಅದರ ಅಹಂಕಾರ ಕರಗಿತು. ಹಾಗೆ ತಾನು ಹಿಂದೆ ಮಾಡಿದ ಪಾಪ, ಶಾಪಗಳನ್ನೆಲ್ಲ ಅರಿತುಕೊಂಡೆ ಶನಿದೇವನಿಗೆ ಶರಣಾದನು. ಕಾಗೆಗಿದ್ದ ಪಾಪ ಮತ್ತು ಪಾಪಗಳನ್ನು ಶನಿದೇವ ಮುಕ್ತ ಮಾಡಿ ಅದನ್ನು ತನ್ನ ವಾಹನವನ್ನಾಗಿ ಮಾಡಿಕೊಂಡು ಎಲ್ಲಾ ಕಡೆ ಸಂಚಾರ ಮಾಡತೊಡಗಿದನು.
ಇನ್ನೊಂದು ಕಥೆ ಪ್ರಕಾರ:- ದೇವಲೋಕದಲ್ಲಿ ಕಾಕಾಸುರ ಎಂಬ ಭಯಂಕರ ರಾಕ್ಷಸನಿದ್ದ. ರಾಕ್ಷಸನಾದ ಇವನು ಲೋಕದ ಎಲ್ಲರಿಗೂ ತೊಂದರೆ ಕೊಡುತ್ತಿದ್ದನು. ಒಮ್ಮೆ ಕಾಕಾಸುರ ಮಹಾಲಕ್ಷ್ಮಿ ಸ್ನಾನ ಮಾಡುವುದನ್ನು ಒಂದು ಕಣ್ಣಿನಿಂದ ಕದ್ದು ನೋಡಿದ. ನೋಡಿದ ಲಕ್ಷ್ಮಿ ಹೆದರಿ ಕೂಗಿಕೊಂಡಳು. ಆ ಸಮಯದಲ್ಲಿ ಲೋಕ ಪರ್ಯಟನೆ ಮಾಡುತ್ತಿದ್ದ ನಾರಾಯಣನಿಗೆ ಲಕ್ಷ್ಮಿಯ ಕೂಗು ಕೇಳಿ ಓಡಿಬಂದು ಏನಾಯ್ತು ಎಂದು ಕೇಳಿದಾಗ ಲಕ್ಷ್ಮಿ ಕಾಕಾಸುರ ನೋಡಿದ್ದನ್ನು ಹೇಳಿದಳು. ನಾರಾಯಣಗೆ ಕೋಪ ಬಂದಿತು. ಕಾಕಾಸುನನ್ನು ಬೆನ್ನಟ್ಟಿ ಹೋದನು. ಕಾಕಾ ಸುರ ರಕ್ಷಣೆಗಾಗಿ ಶಿವನ ಬಳಿ ಓಡಿ ಬಂದು, ಪರಮೇಶ್ವರ ನನ್ನನ್ನು ಕಾಪಾಡು ಇನ್ನು ಮುಂದೆ ಇಂಥ ತಪ್ಪು ಮಾಡುವುದಿಲ್ಲ ಎಂದು ಬೇಡಿದ. ಶಿವ ಹೇಳಿದ ನನ್ನ ಸಹೋದರಿ, ನಾರಾಯಣನ ಪತ್ನಿ ಲಕ್ಷ್ಮಿಗೆ ಅವಮಾನ ಮಾಡಿರುವ ಇದು ನನ್ನಿಂದ ಸಾಧ್ಯವಿಲ್ಲ ನಾನು ಇದನ್ನು ಒಪ್ಪುವುದಿಲ್ಲ. ಅಲ್ಲದೆ ನಾರಾಯಣನ ಕೋಪದಿಂದ ನಿನ್ನನ್ನು ಯಾರೂ ರಕ್ಷಣೆ ಮಾಡಲು ಸಾಧ್ಯವಿಲ್ಲ. ಹಾಗೆ ರಕ್ಷಣೆ ಮಾಡುವವನು ಶನಿದೇವ ಮಾತ್ರ ಕಾಪಾಡಬಹುದುಎಂದನು. ಈ ಕೂಡಲೇ ನೀನು ಶನಿಯ ಬಳಿ ಹೋಗಿ ಅವನಿಗೆ ಶರಣಾಗು ಎಂದನು. ಕೂಡಲೇ ಕಾಕಾಸುರ ಶನಿಯ ಬಳಿ ಹೋಗಿ ಅವನ ಪಾದಕ್ಕೆ ಬಿದ್ದು ನನ್ನನ್ನು ಕಾಪಾಡು ಎಂದು ಬೇಡಿದ.
ಅದೇ ಸಮಯಕ್ಕೆ ನಾರಾಯಣನು ಅಲ್ಲಿಗೆ ಬಂದು, ಶನೇಶ್ವರ ಕಾಕಾಸುರನನ್ನು ನನಗೆ ಕೊಡು ಎಂದ ಕೇಳಿದ. ಶನಿ ಹೇಳಿದ ನಾರಾಯಣ, ನೀನು ಏಕೆ ಅಷ್ಟು
ಕೋಪಗೊಂಡಿರುವೆ, ನೀನು ಮತ್ತು ಶಂಕರ ಕೋಪ ಮಾಡಿಕೊಂಡರೆ ಜಗತ್ತು ಹೇಗೆ ಉಳಿಯಲು ಸಾಧ್ಯ ಕೋಪ ಬಿಡು ಎಂದು ಹೇಳಿದ ಶನಿಯು, ಕಾಕಾ ಸುರನಿಗೆ ನೀನು ನಿನ್ನ ಕಾಕ ದೃಷ್ಟಿಯಿಂದ ಮಾತೆ ಲಕ್ಷ್ಮಿಯನ್ನು ನೋಡಿ ತಪ್ಪು ಮಾಡಿದ್ದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೇ ಬೇಕು. ನಿನ್ನ ಆ ಕಣ್ಣನ್ನು ಕಿತ್ತು ವಿಷ್ಣುವಿನ ಪಾದದ ಕೆಳಗೆ ಇಡು ಎಂದನು. ಕಾಕಾಸುರ ತನ್ನ ಒಂದು ಕಣ್ಣನ್ನು ಕಿತ್ತು ನಾರಾಯಣನ ಪಾದದ ಮೇಲಿಡುತ್ತಾನೆ. ಆದರೂ ಸಮಾಧಾನ ವಾಗದ ನಾರಾಯಣ, ಏ ಕಾಕಾ ಸುರ ನೀನು ಕಣ್ಣು ಕೊಟ್ಟ ಮಾತ್ರಕ್ಕೆ ಹಾಗೆ ಬಿಟ್ಟೆನೆಂದು ತಿಳಿಯಬೇಡ. ಈಗ ಮಾತ್ರ ಸುಮ್ಮನಿರುವೆ ನಿನ್ನನ್ನು ಒಂದಲ್ಲ ಒಂದು ದಿನ ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಹೋದನು.
ಅಂದಿನಿಂದ ಕಾಗನಿಗೆ ಒಂದು ಕಣ್ಣು ಮಾತ್ರ ಉಳಿಯಿತು. ಆದ್ದರಿಂದ “ಒಕ್ಕಣ್ಣಿನ” ಕಾಗೆ ಎಂದು ಹೆಸರು ಬಂದಿತು. ಮತ್ತು ನಾರಾಯಣ ಹೇಳಿದ ಮಾತಿಗೆ ಹೆದರಿದ ಕಾಕಾಸುರ ಇನ್ನು ಮುಂದೆ ನಾರಾಯಣಗೆ ಏನನ್ನು ಹೇಳುವುದಿಲ್ಲ. ಅವನ ಕೋಪದಿಂದ ನಾನು ಪಾರಾಗಲು ನಿನ್ನ ವಾಹನವಾಗಿರುವೆ ಎಂದನು. ಇದನ್ನು ಒಪ್ಪಿದ ಶನಿದೇವ ಕಾಕಾಸುರನನ್ನು “ಕಾಗೆ ರೂಪ”ದ ಪಕ್ಷಿಯಾಗಿ ಮಾಡಿ ತನ್ನ ವಾಹನ ಮಾಡಿಕೊಂಡನು. ಅಂದಿನಿಂದ ಶನೇಶ್ಚರ ನಾ ಎಲ್ಲಾ ದೇವಾಲಯಗಳಲ್ಲೂ ‘ಕಾಗೆ’ ಇರುವುದನ್ನು ನೋಡುತ್ತೇವೆ.
ಎಷ್ಟೇ ಬುದ್ಧಿವಂತಿಕೆ ಇದ್ದರೂ ಅಹಂಕಾರ ಪತನಕ್ಕೆ ದಾರಿಯಾಗುತ್ತದೆ. ಹಾಗೆಯೇ ಕಾಕಾ ಸುರ ನಿಗಿದ್ದ ಅಪಾರ ಬುದ್ಧಿವಂತಿಕೆಯು ಅವನ ಅಹಂಕಾರದಿಂದ ನಾಶ ವಾಯಿತು. ಶನಿಯ ದೃಷ್ಟಿ ಹಾಗೂ ಕೃಪೆಯಿಂದ ಕಾಗೆ ಮುಕ್ತನಾದನು. ಶನಿದೇವ ಶಿಕ್ಷಕನಂತಿದ್ದರೂ, ಕೊಡುವ ಶಿಕ್ಷೆಯಿಂದ ಶುದ್ಧೀಕರಣ ಆಗುತ್ತದೆ. ಶನಿಯ ದೃಷ್ಟಿ ಭಯಂಕರವಾದರೂ ಅದು ಒಳಿತು ಮಾಡುತ್ತದೆ. ಸತ್ಯ- ನಿಷ್ಠೆ- ಸೇವಾ ಭಾವನೆ ಮತ್ತು ತ್ಯಾಗ, ಇವು ಇದ್ದವರಿಗೆ ಶನಿ ಹಾನಿಕಾರಕನಲ್ಲ. ಕಾಗೆಯು ಬಹುಮಾನ್ಯ ವಾದ ಶನಿಯ ವಾಹನವಾಗಿ ಬುದ್ಧಿವಂತಿಕೆ ತಾಳ್ಮೆ ಮತ್ತು ಶ್ರದ್ಧೆಗೆ ಪ್ರತೀಕವಾಗಿದೆ.
||ಸಂಗ್ರಹ||